
ಮಡಿಕೇರಿ: ಮಾದಕವಸ್ತು ಜಾಲದ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಲು ನಿರ್ಧರಿಸಿದ ಜಿಲ್ಲಾ ಮಟ್ಟದ ಮಾದಕ ವಸ್ತು ದ್ರವ್ಯ ಸಮನ್ವಯ ಕೇಂದ್ರ ಸಭೆ ಹಲವು ಸಲಹೆಗಳು ಕೇಳಿ ಬಂದವು.
ವಿದ್ಯಾರ್ಥಿನಿಲಯಗಳು, ಹೋಂಸ್ಟೇಗಳಲ್ಲಿ ‘ರ‍್ಯಾಂಡಮ್’ ಆಗಿ ತಪಾಸಣೆ ಮಾಡುವುದು, ಚೆಕ್‌ಪೋಸ್ಟ್‌ಗಳಲ್ಲಿ ಕಟ್ಟುನಿಟ್ಟಿನ ತಪಾಸಣೆ ಮಾಡುವುದು ಸೇರಿದಂತೆ ಇನ್ನಷ್ಟು ಕಠಿಣ ಕ್ರಮಗಳನ್ನು ಕೈಗೊಳ್ಳಲು ಉನ್ನತ ಅಧಿಕಾರಿಗಳು ಸಲಹೆ ನೀಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಎನ್.ಬಿಂದುಮಣಿ ಮಾತನಾಡಿ, ‘ಮಾದಕವಸ್ತುಗಳು ಜಿಲ್ಲೆಯ ಒಳಗೆ ಬಾರದಂತೆ ತಡೆಯಲು ಗಡಿ ಭಾಗದಲ್ಲಿ ಹೆಚ್ಚಿನ ಎಚ್ಚರ ವಹಿಸಬೇಕು’ ಎಂದು ಹೇಳಿದರು.
ಅಂತರರಾಜ್ಯ ಗಡಿ ಪ್ರದೇಶದ ಚೆಕ್‍ಪೋಸ್ಟ್‌ಗಳಲ್ಲಿ ವಾಹನ ಮತ್ತು ಪ್ರಯಾಣಿಕರನ್ನು ತಪಾಸಣೆ ಮಾಡಬೇಕಿದೆ. ಮಾದಕ ವಸ್ತುಗಳ ಸೇವನೆ ಕಂಡುಬಂದಲ್ಲಿ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ತೆರಳಿ ಪರೀಕ್ಷೆ ಮಾಡಬೇಕು. ಅದಕ್ಕಾಗಿ ‘ಡ್ರಗ್ ಟೆಸ್ಟ್ ಕಿಟ್’ ಅನ್ನು ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ದಾಸ್ತಾನು ಮಾಡಿಕೊಂಡಿರಬೇಕು ಎಂದು ಆರೋಗ್ಯ ಮತ್ತು ಕುಟಂಬ ಕಲ್ಯಾಣ ಇಲಾಖೆ ಅಧಿಕಾರಿಗೆ ಸಲಹೆ ನೀಡಿದರು.
ಸಂಶಯ ಕಂಡುಬಂದಲ್ಲಿ ಶಾಲಾ-ಕಾಲೇಜು ಹಾಗೂ ವಿದ್ಯಾರ್ಥಿ ನಿಲಯಗಳಲ್ಲಿ ರ್‍ಯಾಂಡಮ್ ಆಗಿ ಪರೀಕ್ಷೆ ಮಾಡಬೇಕು. ಮಾದಕ ವಸ್ತುಗಳ ಬಳಕೆ ತಡೆಯಲು ಎಲ್ಲರೂ ಕೈಜೋಡಿಸಬೇಕು. ‘ಕೆಮಿಕಲ್’ ಹೆಸರಿನಲ್ಲಿ ಡ್ರಗ್ಸ್ ತಯಾರು ಮಾಡುವ ಬಗ್ಗೆ ಅಲ್ಲಲ್ಲಿ ಕೇಳಿ ಬರುತ್ತಿದೆ. ಆದ್ದರಿಂದ ಈ ಬಗ್ಗೆಯೂ ಹೆಚ್ಚಿನ ಎಚ್ಚರ ವಹಿಸಬೇಕು ಎಂದು ಅವರು ಹೇಳಿದರು.
‘ಜಿಲ್ಲೆಯಲ್ಲಿ ಮಾದಕ ವಸ್ತುಗಳಿಗೆ ಸಂಬಂಧಿಸಿದಂತೆ 58 ಪ್ರಕರಣಗಳು ದಾಖಲಾಗಿದ್ದು, ಸುಮಾರು ಎರಡೂವರೆ ಕೆ.ಜಿ. ಗಾಂಜಾ ವಶಪಡಿಸಿಕೊಳ್ಳಲಾಗಿದೆ’ ಎಂದು ಮಾಹಿತಿ ನೀಡಿದರು.
ಉಪ ವಿಭಾಗಾಧಿಕಾರಿ ಹಾಗೂ ಪ್ರವಾಸೋದ್ಯಮ ಇಲಾಖೆಯ ಪ್ರಭಾರ ಉಪ ನಿರ್ದೇಶಕ ನಿತಿನ್ ಚಕ್ಕಿ ಮಾತನಾಡಿ, ‘ಜಿಲ್ಲೆಯ ಹೋಂ ಸ್ಟೇಗಳಲ್ಲಿಯೂ ಸಹ ರ್‍ಯಾಂಡಮ್ ಆಗಿ ಪರೀಕ್ಷಿಸಬೇಕು’ ಎಂದು ಸಲಹೆ ನೀಡಿದರು.
ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸೆಂಥಿಲ್ ಕುಮಾರ್, ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಬಸವರಾಜು, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ವಿಜಯ್, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಚಂದ್ರಶೇಖರ್, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಶೇಖರ್, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಶಶಿಧರ, ಡಿವೈಎಸ್‍ಪಿ ಸೂರಜ್, ಐ.ಪಿ.ಮೇದಪ್ಪ, ಸರ್ಕಲ್ ಇನ್‌ಸ್ಪೆಕ್ಟರ್ ಪಿ.ರಾಜು, ಅಬಕಾರಿ ಉಪ ನಿರೀಕ್ಷಕ ಅಬ್ರಾಹಂ ಚೇತನ್ ಭಾಗವಹಿಸಿದ್ದರು.
ಅರಿವು ಮೂಡಿಸಿ ಪುನರ್ವಸತಿ ಕಲ್ಪಿಸಿ; ಡಿ.ಸಿ ಇತ್ತೀಚಿನ ದಿನಗಳಲ್ಲಿ ಮಾದಕ ವಸ್ತುಗಳ ಜಾಲ ಎಲ್ಲಡೆ ಕೇಳಿ ಬರುತ್ತಿದ್ದು ಮಾದಕ ವಸ್ತುಗಳಿಂದ ಉಂಟಾಗುವ ದುಷ್ಪರಿಣಾಮ ಕುರಿತು ಹೆಚ್ಚಿನ ಜಾಗೃತಿ ಮೂಡಿಸಲು ಶಾಲಾ-ಕಾಲೇಜು ವಿದ್ಯಾರ್ಥಿ ನಿಲಯಗಳು ಸೇರಿದಂತೆ ಎಲ್ಲೆಡೆ ಅರಿವು ಮೂಡಿಸಬೇಕು. ಈ ಬಗ್ಗೆ ಕಾರ್ಯಕ್ರಮ ಆಯೋಜಿಸಬೇಕು ಎಂದು ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಸೂಚಿಸಿದರು.
ನಗರದ ಜಿಲ್ಲಾಧಿಕಾರಿ ಅವರ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಮಾದಕ ವಸ್ತು ದ್ರವ್ಯ ಸಮನ್ವಯ ಕೇಂದ್ರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ‘ಮಾದಕ ವಸ್ತುಗಳಿಗೆ ತುತ್ತಾದವರಿಗೆ ಪುನರ್ ವಸತಿ ಕಲ್ಪಿಸಬೇಕು. ಆ ನಿಟ್ಟಿನಲ್ಲಿ ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಈ ಬಗ್ಗೆ ಪರಿಶೀಲಿಸುವಂತೆಯೂ ಅವರು ಹೇಳಿದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಶಾಲಾ ಶಿಕ್ಷಣ ಪದವಿ ಪೂರ್ವ ಶಿಕ್ಷಣ ಹಾಗೂ ಕಾಲೇಜು ಶಿಕ್ಷಣ ಸಮಾಜ ಕಲ್ಯಾಣ ಹಿಂದುಳಿದ ವರ್ಗಗಳ ಕಲ್ಯಾಣ ಸಮಗ್ರ ಗಿರಿಜನ ಕಲ್ಯಾಣ ಅಲ್ಪಸಂಖ್ಯಾತರ ಕಲ್ಯಾಣ ಕೃಷಿ ತೋಟಗಾರಿಕೆ ಪಶುಪಾಲನೆ ಯುವ ಸಬಲೀಕರಣ ಕಾರ್ಮಿಕ ಹೀಗೆ ವಿವಿಧ ಇಲಾಖೆಗಳು ಮಾದಕ ವಸ್ತುಗಳ ಬಳಕೆಯಿಂದ ಉಂಟಾಗುವ ಕೆಟ್ಟ ಪರಿಣಾಮ ಕುರಿತು ತಮ್ಮ ತಮ್ಮ ಇಲಾಖೆ ವ್ಯಾಪ್ತಿಯಲ್ಲಿ ಜಾಗೃತಿ ಮೂಡಿಸಲು ಶ್ರಮಿಸುವಂತೆ ಜಿಲ್ಲಾಧಿಕಾರಿ ಅವರು ನಿರ್ದೇಶನ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.