ADVERTISEMENT

ಕುಶಾಲನಗರ: ದುಬಾರೆ ಸಾಕಾನೆ ಶಿಬಿರದ ಕುಶ ಆನೆ ಬಂಧ ಮುಕ್ತ

ಆನೆಗೆ ರೇಡಿಯೊ ಕಾಲರ್ ಅಳವಡಿಸಿ ಬಂಡೀಪುರ ಅರಣ್ಯಕ್ಕೆ ರವಾನೆ

​ಪ್ರಜಾವಾಣಿ ವಾರ್ತೆ
Published 4 ಜೂನ್ 2021, 15:17 IST
Last Updated 4 ಜೂನ್ 2021, 15:17 IST
ದುಬಾರೆ ಸಾಕಾನೆ ಶಿಬಿರದಲ್ಲಿ ಕುಶ ಆನೆಯನ್ನು ಸಾಕಾನೆಗಳ ಸಹಾಯದಿಂದ ಲಾರಿಗೆ ಹತ್ತಿಸುತ್ತಿರುವುದು
ದುಬಾರೆ ಸಾಕಾನೆ ಶಿಬಿರದಲ್ಲಿ ಕುಶ ಆನೆಯನ್ನು ಸಾಕಾನೆಗಳ ಸಹಾಯದಿಂದ ಲಾರಿಗೆ ಹತ್ತಿಸುತ್ತಿರುವುದು   

ಕುಶಾಲನಗರ: ದುಬಾರೆ ಸಾಕಾನೆ ಶಿಬಿರದ ‘ಕುಶ’ ಆನೆಯು ಸರ್ಕಾರದ ಆದೇಶದಂತೆ ಕೊನೆಗೂ ಅರಣ್ಯಕ್ಕೆ ಕಳುಹಿಸಲಾಗಿದೆ. ಗುರುವಾರ ಸಂಜೆ ಚಾಮರಾಜನಗರ ಜಿಲ್ಲೆಯ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಮೂಲೆಹೊಳೆ ವನ್ಯಜೀವಿ ವಲಯದ ಅರಣ್ಯ ಪ್ರದೇಶಕ್ಕೆ ಕಳುಹಿಸಿಕೊಡಲಾಗಿದೆ. ಅಲ್ಲಿ ‘ಕುಶ’ನಿಗೆ ರೇಡಿಯೊ ಕಾಲರ್ ಅಳವಡಿಸಿ ಬಂಧಮುಕ್ತಗೊಳಿಸಲಾಗಿದೆ.

ಶಿಬಿರದಲ್ಲಿ ಕಾಲಿಗೆ ಸರಪಳಿ ಹಾಕಿ ಬಂಧಿಸಲಾಗಿದ್ದ ‘ಕುಶ’ ಆನೆಯನ್ನು ಬಂಧಮುಕ್ತಗೊಳಿಸುವಂತೆ ಸರ್ಕಾರದ ಆದೇಶಿಸಿತ್ತು.
ಈ ಸಂದರ್ಭದಲ್ಲಿ ಕುಶಾಲನಗರ ವಲಯ ಅರಣ್ಯಾಧಿಕಾರಿ ಅನನ್ಯ ಕುಮಾರ್, ದುಬಾರೆ ಉಪ ವಲಯ ಅರಣ್ಯಾಧಿಕಾರಿ ಕೆ.ಪಿ.ರಂಜನ್, ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಪಶು ವೈದ್ಯಾಧಿಕಾರಿ ಡಾ.ವಾಸಿಮ್ ಮಿರ್ಜಾ, ದುಬಾರೆ ಮಾವುತರಾದ ಡೋಬಿ, ಚಿಣ್ಣಪ್ಪ, ನಾಗೇಶ್, ನವೀನ್, ಶರತ್ ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು.

‘ಕುಶ’ನ ಮೂಕ ವೇದನೆ:ದುಬಾರೆ ಮೀಸಲು ಅರಣ್ಯ ಪ್ರದೇಶದಲ್ಲಿ ಸಂಗಾತಿಯೊಂದಿಗಿದ್ದ ‘ಕುಶ’ನಿಗೆ ಮತ್ತೆ ಸಂಗಾತಿ ಸೇರುವ ಅವಕಾಶದಿಂದ ವಂಚಿತಗೊಂಡಿದೆ. ಅನೇಕ ವರ್ಷಗಳಿಂದ ಜೊತೆಗಿದ್ದ ಸಂಗಡಿಗರು ಹಾಗೂ ಸಂಗಾತಿಯನ್ನು ಬಿಟ್ಟು ಲಾರಿ ಹತ್ತುವಾಗ ‘ಕುಶ’ನ ಕಣ್ಣಲ್ಲಿ ನೀರು ಬಂತು.

ADVERTISEMENT

ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ಮತ್ತು ಮುಖ್ಯ ವನ್ಯಜೀವಿ ಪರಿಪಾಲಕರ ಆದೇಶದಂತೆ ‘ಕುಶ’ನಿಗೆ ರೇಡಿಯೊ ಕಾಲರ್‌ ಅಳವಡಿಸಿ ಬಂಡಿಪುರದ ಹುಲಿ ಸಂರಕ್ಷಿತ ಪ್ರದೇಶದ ಮೂಲೆಹೊಳೆ ವನ್ಯಜೀವಿ ವಲಯದ ಅರಣ್ಯ ಪ್ರದೇಶದಲ್ಲಿ ಬಿಡಲಾಗಿದೆ ಎಂದು ವಲಯ ಅರಣ್ಯಾಧಿಕಾರಿ ಅನನ್ಯಕುಮಾರ್ ತಿಳಿಸಿದರು.

‘ಕುಶನನ್ನು ಕಾಡಿಗೆ ಬಿಡಲು ಕೊರೊನಾ ಸೋಂಕು ಅಡ್ಡಿಯಾಗಿತ್ತು. ಇದೀಗ ಹಿರಿಯ ಅಧಿಕಾರಿಗಳ ಆದೇಶದಂತೆ ಬಂಡಿಪುರಕ್ಕೆ ಲಾರಿಯಲ್ಲಿ ಸಾಗಿಸಿ ಬಿಡುಗಡೆಗೊಳಿಸಲಾಗಿದೆ. ಲಾರಿ ಹತ್ತುವಾಗ ಕಿರಿಕಿರಿ ಮಾಡಲಿಲ್ಲ’ ಎಂದು ದುಬಾರೆ ಡಿಆರ್‌ಎಫ್‌ಒ ಕೆ.ಪಿ.ರಂಜನ್‌ ಪ್ರತಿಕ್ರಿಯಿಸಿದರು.

ಸಂಗಾತಿಯಿಂದ ದೂರ: ಕಳೆದ ಒಂದು ವರ್ಷದ ಹಿಂದೆ ದುಬಾರೆ ಸಾಕಾನೆ ಶಿಬಿರದಿಂದ ಮದವೇರಿದ ‘ಕುಶ’ ಕಾಡಿಗೆ ಓಡಿ ಹೋಗಿತ್ತು. ಮೂರು ವಾರ ಕಳೆದರೂ ಆನೆ‌ ಶಿಬಿರಕ್ಕೆ ಮರಳಿರಲಿಲ್ಲ. ಕಾಡಿನಲ್ಲಿ ಸಿಕ್ಕಿದ ಸಂಗಾತಿಯೊಂದಿಗೆ ಸಂತೋಷವಾಗಿ ಇತ್ತು. ಕುಶನನ್ನು ಸೆರೆಹಿಡಿಯಲು ಅರಣ್ಯ ಇಲಾಖೆ ಸತತ ಪ್ರಯತ್ನ ನಡೆಸಿದರೂ ಸಾಧ್ಯವಾಗಿರಲಿಲ್ಲ. ಒಂದು ವರ್ಷದ ಬಳಿಕ ‘ಕುಶ’ ಆನೆಯನ್ನು ಮೀನುಕೊಲ್ಲಿ ಮೀಸಲು ಅರಣ್ಯ ಪ್ರದೇಶದಲ್ಲಿ ಸಂಗಾತಿಯಿಂದ ಬೇರ್ಪಡಿಸಿ, ಸೆರೆ ಹಿಡಿಯಲಾಗಿತ್ತು. ಒಂದು ವರ್ಷ ಕಾಡಾನೆಗಳ ಸಹವಾಸ ಮಾಡಿ ಪುಂಡಾಟಿಕೆ ಸ್ವಾಭಾವವನ್ನು ಬೆಳೆಸಿಕೊಂಡಿತ್ತು. ಜೊತೆಗೆ ಚಲನವಲನ ಭಿನ್ನವಾಗಿತ್ತು. ಅಲ್ಲದೆ ಸಂಗಾತಿಯಿಂದ ದೂರವಾದ ವೇದನೆಯನ್ನೂ ಅನುಭವಿಸುತ್ತಿತ್ತು.

ಈ ಹಿನ್ನೆಲೆಯಲ್ಲಿ ‘ಕುಶ’ನ ಕಾಲಿಗೆ ಸರಪಳಿ ಹಾಕಿ ಕ್ರಾಲ್ (ದೌಡ್ಡಿ) ನಲ್ಲಿ ಬಂಧಿಸಲಾಗಿತ್ತು. ನುರಿತ ಮಾವುತರಿಂದ ಮತ್ತೆ ಪಳಗಿಸಲು ಅರಣ್ಯ ಇಲಾಖೆಯವರು ಕ್ರಮ ಕೈಗೊಂಡಿದ್ದರು.

ಸಂಗಾತಿ ಹಾಗೂ ಕಾಡಾನೆಗಳೊಂದಿಗೆ ಓಡಾಡಿಕೊಂಡಿದ್ದ ಆನೆಯನ್ನು ಬಲವಂತವಾಗಿ ಸೆರೆಹಿಡಿದು ಕ್ರಾಲ್‌ನಲ್ಲಿ ಬಂಧಿಸಿ ಹಿಂಸಿಸಲಾಗುತ್ತಿದೆ ಎಂದು ಪ್ರಾಣಿಪ್ರಿಯರು ಸಾಮಾಜಿಕ ಜಾಲತಾಣದಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದರು.

ಸಂಸದೆ ಹಾಗೂ ಪರಿಸರವಾದಿ ಮನೇಕಾ ಗಾಂಧಿ ಅವರೂ ಆನೆ ಬಂಧಮುಕ್ತಗೊಳಿಸುವಂತೆ ಆಗ್ರಹಿಸಿದ್ದರು. ಪೀಪಲ್ಸ್ ಫಾರ್ ಅನಿಮಲ್ ಸಂಸ್ಥೆ ಮುಖಸ್ಥರಾದ ಸವಿತಾ ನಾಗಭೂಷಣ್ ಹಾಗೂ ಹಿರಿಯ ಪಶುವೈದ್ಯಾಧಿಕಾರಿ ಡಾ.ಅಮರ್ ದೀಪ್ ಸಿಂಗ್ ನೇತೃತ್ವದ ತಂಡ ದುಬಾರೆಗೆ ಭೇಟಿ ನೀಡಿ ಕುಶ ಆನೆ ಯೋಗಕ್ಷೇಮ ಹಾಗೂ ಅಲ್ಲಿನ ಪರಿಸ್ಥಿತಿಯನ್ನು ಪರಿಶೀಲನೆ ನಡೆಸಿ ವರದಿ ಸಲ್ಲಿಸಿದ್ದರು. ಅದಾದ ಮೇಲೆ ಕುಶನನ್ನು ಮರಳಿ ಕಾಡಿಗೆ ಬಿಡಲು ಅರಣ್ಯ ಸಚಿವ ಅರವಿಂದ ಲಿಂಬಾವಳಿ ಆದೇಶಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.