ADVERTISEMENT

ಮಡಿಕೇರಿ: ಧಾರಾಕಾರ ಮಳೆಯ ನಡುವೆ ಮತ್ತೆ ಕಂಪಿಸಿದ ಭೂಮಿ

​ಪ್ರಜಾವಾಣಿ ವಾರ್ತೆ
Published 10 ಜುಲೈ 2022, 8:29 IST
Last Updated 10 ಜುಲೈ 2022, 8:29 IST
ಮಡಿಕೇರಿ– ಮಂಗಳೂರು ರಸ್ತೆಯಲ್ಲಿ ಕರ್ತೋಜಿ ಸಮೀಪ ಶುಕ್ರವಾರ ಮಳೆಯಿಂದಾಗಿ ನಿರಂತರವಾಗಿ ರಸ್ತೆಗೆ ಮಣ್ಣು ಕುಸಿಯುತ್ತಿರುವುದು ಕಂಡು ಬಂತು
ಮಡಿಕೇರಿ– ಮಂಗಳೂರು ರಸ್ತೆಯಲ್ಲಿ ಕರ್ತೋಜಿ ಸಮೀಪ ಶುಕ್ರವಾರ ಮಳೆಯಿಂದಾಗಿ ನಿರಂತರವಾಗಿ ರಸ್ತೆಗೆ ಮಣ್ಣು ಕುಸಿಯುತ್ತಿರುವುದು ಕಂಡು ಬಂತು   

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯ ನಡುವೆ ಭಾನುವಾರ ಬೆಳಿಗ್ಗೆ ಮತ್ತೆ ಭೂಮಿ ಕಂಪಿಸಿದೆ.

ಬೆಳಿಗ್ಗೆ 6.22 ರಲ್ಲಿ ಭೂಮಿಯಿಂದ ಭಾರಿ ಪ್ರಮಾಣದ ಶಬ್ದ ಇಲ್ಲಿನ ಚೆಂಬು ಗ್ರಾಮದಲ್ಲಿ ಕೇಳಿದ್ದು, ಅದರ ಹಿಂದೆಯೆ ಭೂಮಿ ಕಂಪಿಸಿದೆ.

1.8 ತೀವ್ರತೆಯ ಭೂಕಂಪ ಸಂಭವಿಸಿದ್ದು, ಅದರ ಕೇಂದ್ರ ಬಿಂದು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲ್ಲೂಕಿನಲ್ಲಿ ಪತ್ತೆಯಾಗಿದೆ ಎಂದು ರಾಜ್ಯ ನೈಸರ್ಗಿಕ ವಿಪತ್ತು ಉಸ್ತುವಾರಿ ಕೇಂದ್ರ ತಿಳಿಸಿದೆ.

ADVERTISEMENT

ಜಿಲ್ಲೆಯಲ್ಲಿ ಶನಿವಾರ ರಾತ್ರಿ ಇಡೀ ಹಾಗೂ ಭಾನುವಾರ ಬೆಳಿಗ್ಗೆ ಭಾರಿ ಮಳೆ ಸುರಿದಿದೆ. ಇದರಿಂದ ಜಿಲ್ಲೆಯ ಕಿಂಡಿ ಅಣೆಕಟ್ಟು ತುಂಬಿ ನೀರು ಸಂಪಾಜೆಯ ಕೊ‌ಯನಾಡಿನ ಮನೆಗಳಿಗೆ ನುಗ್ಗಿದೆ. ನೀರಿನ ಹರಿವು ಕ್ಷಣ ಕ್ಷಣಕ್ಕೂ ಹೆಚ್ಚಾಗುತ್ತಿದ್ದು, ಮಂಗಳೂರು- ಮಡಿಕೇರಿ ರಸ್ತೆಗೂ ನುಗ್ಗುವ ಭೀತಿ ಎದುರಾಗಿದೆ. ಜಿಲ್ಲಾಡಳಿತದಿಂದ ಯಾರೊಬ್ಬರೂ ಬಂದಿಲ್ಲ. ಗ್ರಾಮಸ್ಥರ ನೆರವಿನಿಂದ‌ ಸುರಕ್ಷಿತ ಸ್ಥಳಕ್ಕೆ ತೆರಳುತ್ತಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ.

ಭಾಗಮಂಡಲ ತ್ರಿವೇಣಿ ಸಂಗಮ ಮತ್ತು ಭಾಗಮಂಡಲ - ನಾಪೋಕ್ಲು ರಸ್ತೆ ಸಂಪೂರ್ಣ ಜಲಾವೃತವಾಗಿವೆ. ಭಾಗಮಂಡಲ - ನಾಪೋಕ್ಲು ರಸ್ತೆಯಲ್ಲಿ ತಾತ್ಕಾಲಿಕವಾಗಿ ವಾಹನ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.

ಭಾಗಮಂಡಲ - ಮಡಿಕೇರಿ ರಸ್ತೆಯಲ್ಲಿ ಅರ್ಧ ಅಡಿಯಷ್ಟು ನೀರು ತುಂಬಿದೆ. ಕ್ಷಣಕ್ಷಣಕ್ಕೂ ನೀರಿನ ಹರಿವು ಹೆಚ್ಚುತ್ತಿದೆ. ಸಂಚಾರಕ್ಕೆ ಯಾಂತ್ರಿಕ ದೋಣಿಯ ವ್ಯವಸ್ಥೆ ಕಲ್ಪಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.