ADVERTISEMENT

ಸಿದ್ದಾಪುರ: ಮತದಾನ ಬಹಿಷ್ಕಾರದ ಎಚ್ಚರಿಕೆ

ಈ ರಸ್ತೆಯಲ್ಲಿ ಸಂಚರಿಸುವುದಾದರೂ ಹೇಗೆ? ಸ್ಥಳೀಯ ನಿವಾಸಿಗಳ ಆಕ್ರೋಶ

ರೆಜಿತ್ ಕುಮಾರ್
Published 20 ಡಿಸೆಂಬರ್ 2022, 0:30 IST
Last Updated 20 ಡಿಸೆಂಬರ್ 2022, 0:30 IST
ಕಣ್ಣಂಗಾಲ– ಗುಹ್ಯ ಸಂಪರ್ಕ ರಸ್ತೆ ಸಂಪೂರ್ಣ ಹದಗೆಟ್ಟಿದೆ
ಕಣ್ಣಂಗಾಲ– ಗುಹ್ಯ ಸಂಪರ್ಕ ರಸ್ತೆ ಸಂಪೂರ್ಣ ಹದಗೆಟ್ಟಿದೆ   

ಸಿದ್ದಾಪುರ: ಕಣ್ಣಂಗಾಲ– ಗುಹ್ಯ ಸಂಪರ್ಕ ರಸ್ತೆ ಬಹುತೇಕ ಹದಗೆಟ್ಟಿದ್ದು, ರಸ್ತೆ ದುರಸ್ತಿಗಾಗಿ ಗ್ರಾಮಸ್ಥರು ಚುನಾವಣೆ ಬಹಿಷ್ಕಾರದ ಎಚ್ಚರಿಕೆ ನೀಡಿದ್ದಾರೆ. ಜತೆಗೆ, ಇಂತಹ ರಸ್ತೆಯಲ್ಲಿ ಸಂಚರಿಸುವುದಾದರೂ ಹೇಗೆ ಎಂದು ಜನಪ್ರತಿನಿಧಿಗಳು, ಅಧಿಕಾರಿಗಳನ್ನು ಪ್ರಶ್ನಿಸುತ್ತಿದ್ದಾರೆ.

ರಸ್ತೆ ಎಷ್ಟರಮಟ್ಟಿಗೆ ಹಾಳಾಗಿದೆ ಎಂದರೆ, ಬಹುಶಃ ಇದಕ್ಕಿಂತಲೂ ಕಳಪೆ ರಸ್ತೆ ಮತ್ತೊಂದಿಲ್ಲ ಎನ್ನುವಂತಾಗಿದೆ. ಅತ್ಯಂತ ದುರ್ಗಮ ರಸ್ತೆಗಳ ಸಾಲಿನಲ್ಲಿ ಈ ರಸ್ತೆ ಮುಂಚೂಣಿಯಲ್ಲಿ ನಿಲ್ಲುತ್ತದೆ.

ಕಣ್ಣಂಗಾಲ, ಅಮ್ಮತ್ತಿ ಒಂಟಿಯಂಗಡಿ ಮೂಲಕ ಸಿದ್ದಾಪುರಕ್ಕೆ ಸುಲಭ ಮಾರ್ಗವಾಗಿರುವ ರಸ್ತೆಯು ಹಾಳಾಗಿದೆ. ವಾಹನ ಸಂಚಾರಕ್ಕೆ ತೀವ್ರತರವಾದ ತೊಂದರೆ ಎದುರಾಗಿದೆ. ಸಿದ್ದಾಪುರ ಪಟ್ಟಣ ಸಂಪರ್ಕಿಸುವ ದೇವರಮೊಟ್ಟೆ ಪೈಸಾರಿ ಬಳಿ ರಸ್ತೆಯಲ್ಲಿ ಡಾಂಬರು ಇಲ್ಲದೇ ಗುಂಡಿಗಳು ನಿರ್ಮಾಣವಾಗಿವೆ. ಕೊಮ್ಮೆತೋಡು ಸೇತುವೆ ಬಳಿಯ ರಸ್ತೆಗೆ ಡಾಂಬರು ಹಾಕಿ ವರ್ಷಗಳೇ ಕಳೆದಿದೆ.

ADVERTISEMENT

ಹಚ್ಚಿನಾಡು ಕೊಂಡಂಗೇರಿ, ಹಾಲುಗುಂದ ಗ್ರಾಮಗಳು ಸಿದ್ದಾಪುರ ಠಾಣಾ ವ್ಯಾಪ್ತಿಗೆ ಸೇರಿದ್ದು, ಅಗತ್ಯ ಕೆಲಸಗಳಿಗೆ ಜನರು ಕಣ್ಣಂಗಾಲ– ಗುಹ್ಯ ರಸ್ತೆಯನ್ನು ಉಪಯೋಗಿಸುತ್ತಿದ್ದರು. ಮೂರ್ನಾಡು, ಒಂಟಿಯಂಗಡಿಯ ಜನರಿಗೆ ಕೂಡ ಸಿದ್ದಾಪುರಕ್ಕೆ ತೆರಳಲು ಇದು ಸುಲಭ ರಸ್ತೆಯಾಗಿದೆ. ರಸ್ತೆ ದುರಸ್ತಿಯಾಗದಿರುವ ಕಾರಣ ಗ್ರಾಮಸ್ಥರು ಅಮ್ಮತ್ತಿ ಮೂಲಕ ಸಿದ್ದಾಪುರಕ್ಕೆ ತೆರಳಬೇಕಾಗಿದೆ. ಅಮ್ಮತ್ತಿ ರಸ್ತೆಯ ದುರಸ್ತಿ ಕಾರ್ಯ ನಡೆಯುತ್ತಿದ್ದು, ಸಂಚಾರಕ್ಕೆ ಅಡಚಣೆಯಾಗಿದೆ.

ರಸ್ತೆ ಹದಗೆಟ್ಟಿರುವುದರಿಂದ ಸ್ಥಳೀಯರಿಗೆ ಸಮಸ್ಯೆಯಾಗಿದೆ. ಮನೆಗಳಿಗೆ ತೆರಳಲು ಆಟೊ ರಿಕ್ಷಾ ಕೂಡ ಬರುತ್ತಿಲ್ಲ ಎಂದು ಸ್ಥಳೀಯರು ಅಳಲನ್ನು ತೋಡಿಕೊಂಡಿ ದ್ದಾರೆ. ದ್ವಿಚಕ್ರ ವಾಹನದಲ್ಲಿ ತೆರಳುವ ವೇಳೆ ಅಪಘಾತಗಳೂ ಸಂಭವಿಸಿವೆ.

ರಸ್ತೆ ದುರಸ್ತಿಗಾಗಿ ಹಲವು ವರ್ಷಗಳಿಂದ ಮನವಿ ಸಲ್ಲಿಸಿದರೂ ರಸ್ತೆ ಡಾಂಬರೀಕರಣ ಮಾಡದೇ ಇರುವುದರಿಂದ ಸ್ಥಳೀಯರು ವಿಧಾನಸಭಾ ಚುನಾವಣೆಯ ಮತದಾನ ಬಹಿಷ್ಕಾರ ಮಾಡಲು ನಿರ್ಧರಿಸಿದ್ದಾರೆ. ಈ ಬಗ್ಗೆ ಸಭೆ ನಡೆಸಿದ ಗ್ರಾಮಸ್ಥರು ಸಾಮೂಹಿಕ ಮತದಾನ ಬಹಿಷ್ಕಾರ ಮಾಡುವುದಾಗಿ ಹೇಳಿದ್ದಾರೆ.

ಸ್ಥಳೀಯ ನಿವಾಸಿ ಅಪ್ಪರಂಡ ಕಾರ್ಯಪ್ಪ ಪ್ರತಿಕ್ರಿಯಿಸಿ, ‘ಪ್ರತಿ ದಿನ ನೂರಾರು ಮಂದಿ ಇದೇ ರಸ್ತೆಯನ್ನು ಅವಲಂಬಿಸಿದ್ದಾರೆ. ವೃದ್ಧರು, ಶಾಲಾ ಮಕ್ಕಳಿಗೆ ಗುಂಡಿಮಯ ರಸ್ತೆಯಲ್ಲಿ ಸಂಚರಿಸುವುದಕ್ಕೆ ತೀವ್ರ ತೊಂದರೆಯಾಗಿದೆ. ಸಂಬಂಧಪಟ್ಟವರು ಶೀಘ್ರದಲ್ಲಿ ರಸ್ತೆ ದುರಸ್ತಿ ಮಾಡಬೇಕು’ ಎಂದು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.