ADVERTISEMENT

ಸಿದ್ದಾಪುರ | ಕಾಡಾನೆ ದಾಳಿ: ಜೀವ ಉಳಿಸುತ್ತಿದ್ದ ಕಾರ್ಮಿಕ ಸಾವು!

ಕಾಡಾನೆ ಮಾಹಿತಿ ನೀಡುತ್ತಿದ್ದ ಖಾಸಗಿ ಟ್ರಾಕರ್ ಮೇಲೆ ಒಂಟಿ ಸಲಗ ದಾಳಿ

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2025, 3:03 IST
Last Updated 11 ನವೆಂಬರ್ 2025, 3:03 IST
ರೋಧನದೊಂದಿಗೆ ಹನುಮಂತ ಪತ್ನಿ ಅರಣ್ಯ ಇಲಾಖೆಯಿಂದ ಚೆಕ್ ಪಡೆದರು
ರೋಧನದೊಂದಿಗೆ ಹನುಮಂತ ಪತ್ನಿ ಅರಣ್ಯ ಇಲಾಖೆಯಿಂದ ಚೆಕ್ ಪಡೆದರು   

ಸಿದ್ದಾಪುರ: ಕಾಡಾನೆಗಳ ಚಲನವಲನಗಳ ಮಾಹಿತಿ ನೀಡಿ ಕಾರ್ಮಿಕರ ಜೀವ ಉಳಿಸುತ್ತಿದ್ದ ಖಾಸಗಿ ಕಾಫಿ ತೋಟದ ಕಾಡಾನೆ ಟ್ರಾಕರ್ ಹನುಮಂತ (57) ಸೋಮವಾರ ಒಂಟಿ ಸಲಗವೊಂದರ ದಾಳಿಗೆ ಸಿಲುಕಿ ಮೃತಪಟ್ಟಿದ್ದಾರೆ. ಇವರೊಂದಿಗೆ ಇದ್ದ ಮತ್ತೊಬ್ಬ ವ್ಯಕ್ತಿ ಪಾರಾಗಿದ್ದಾರೆ.

ಇವರು ಇಲ್ಲಿನ ಪಾಲಿಬೆಟ್ಟ ಸಮೀಪದ ಖಾಸಗಿ ತೋಟವೊಂದರಲ್ಲಿ ಕಾಡಾನೆ ಟ್ರಾಕರ್‌ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಕಾಡಾನೆಗಳ ಚಲನವಲನಗಳ ಮೇಲೆ ನಿಗಾ ಇರಿಸಿ, ಅವುಗಳ ಮಾಹಿತಿಯನ್ನು ನೀಡಿ ಇತರ ಕಾರ್ಮಿಕರ ಜೀವ ಉಳಿಸಲು ನೆರವಾಗುತ್ತಿದ್ದರು.

ಎಮ್ಮೆಗುಂಡಿ ಎಸ್ಟೇಟ್‌ನಲ್ಲಿ ತಮ್ಮ ಕಾರ್ಯದಲ್ಲಿ ನಿರತರಾಗಿದ್ದ ವೇಳೆ ಒಂಟಿಸಲಗವೊಂದು ದಾಳಿ ನಡೆಸಿದೆ. ಕಾಡಾನೆಯು ಹೊಟ್ಟೆ ಹಾಗೂ ಎದೆಯ ಭಾಗಕ್ಕೆ ದಂತದಿಂದ ತಿವಿದಿದ್ದು, ಹನುಮಂತ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇವರೊಂದಿಗೆ ಇದ್ದ ಉಮೇಶ್ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ.

ADVERTISEMENT

ಮೃತಪಟ್ಟ ಹನುಮಂತ ಅವರು ಮೂಲತಃ ಹಾಸನ ಸಮೀಪದ ರಾಮನಾಥಪುರ ನಿವಾಸಿ. ಕಳೆದ ಸುಮಾರು 30 ವರ್ಷಗಳಿಂದ ಖಾಸಗಿ ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದು, ತೋಟದ ಲೈನ್ ಮನೆಯಲ್ಲಿ ವಾಸ ಮಾಡಿಕೊಂಡಿದ್ದರು. ಇವರಿಗೆ ಪತ್ನಿ ಹಾಗೂ ಇಬ್ಬರು ಮಕ್ಕಳಿದ್ದಾರೆ. ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಸ್ಥಳಕ್ಕೆ ವಿರಾಜಪೇಟೆ ತಾಲ್ಲೂಕು ಉಪ ಅರಣ್ಯ ಸಂರಕ್ಷಣಾಧಿಕಾರಿ ಜಗನ್ನಾಥ್ ಮಾರ್ಗದರ್ಶನದಲ್ಲಿ ಎ.ಸಿ.ಎಫ್. ಗೋಪಾಲ, ತಿತಿಮತಿ ವಲಯ ಅರಣ್ಯ ಅಧಿಕಾರಿ ಗಂಗಾಧರ, ಉಪವಲಯ ಅರಣ್ಯ ಅಧಿಕಾರಿ ಶಶಿ, ಸಿದ್ದಾಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಹನುಮಂತ ಅವರ ಮೃತದೇಹವನ್ನು ಸಿದ್ದಾಪುರದ ಸಮುದಾಯ ಆರೋಗ್ಯ ಕೇಂದ್ರದದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಬಳಿಕ ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಯಿತು. ಅರಣ್ಯ ಇಲಾಖೆ ವತಿಯಿಂದ ತುರ್ತು ಪರಿಹಾರವಾಗಿ ₹ 5 ಲಕ್ಷ ಚೆಕ್ ಅವನ್ನು ಕುಟುಂಬದವರಿಗೆ ನೀಡಲಾಯಿತು.

ಹನುಮಂತ
ಇಬ್ಬರು ಕಾಡಾನೆ ಟ್ರಾಕರ್ ಮೇಲೆ ಕಾಡಾನೆ ದಾಳಿ | ಒಬ್ಬರ ಸಾವು, ಮತ್ತೊಬ್ಬರು ಪಾರು ನಡೆದಿದೆ |ಕಾಡಿಗಟ್ಟುವ ಕಾರ್ಯಾಚರಣೆ

ಮುಂಚಿತವಾಗಿ ಸಂದೇಶ ಕಳಹಿಸಲಾಗಿತ್ತು

ಘಟನೆ ನಡೆದ ಭಾಗದಲ್ಲಿ ಕಾಡಾನೆಗಳು ಸಂಚರಿಸುತ್ತಿವೆ ಎಂಬ ಮಾಹಿತಿಯನ್ನು ಅರಣ್ಯ ಇಲಾಖೆಯು ತನ್ನ ಪೂರ್ವ ಎಚ್ಚರಿಕೆ ವ್ಯವಸ್ಥೆಯ ಮೂಲಕ ನೀಡಿತ್ತು. ಎಲ್ಲರ ಮೊಬೈಲ್‌ಗಳಿಗೂ ಕಾಡಾನೆಗಳ ಚಲನವಲನಗಳ ಬಗ್ಗೆ ಸಂದೇಶ ರವಾನಿಸಿತ್ತು ಎಂದು ಡಿಸಿಎಫ್ ಜಗನ್ನಾಥ್ ‘ಪ್ರಜಾವಾಣಿ’ಗೆ ತಿಳಿಸಿದರು. ಕಾಫಿ ತೋಟದಲ್ಲಿ ಕಾಡಾನೆ ಹಿಂಡು ಬೀಡುಬಿಟ್ಟಿದ್ದು ಅವುಗಳನ್ನು ಕಾಡಿಗೆ ಕಳುಹಿಸಲು ಕಾರ್ಯಾಚರಣೆ ನಡೆಸಲಾಯಿತು. ಪಾಲಿಬೆಟ್ಟ ಮೇಕೂರು ಹೊಸ್ಕೇರಿ ಭಾಗದಲ್ಲಿರುವ ಕಾಡಾನೆಗಳನ್ನು ಕಾಡಿಗಟ್ಟುವ ಕಾರ್ಯಾಚರಣೆಯನ್ನು ಮುಂದುರೆಸುವುದಾಗಿ ಹೇಳಿದ್ದಾರೆ.

ಸ್ಥಳೀಯರ ಆಕ್ರೋಶ

‘ಮೇಕೂರು ಹೊಸ್ಕೇರಿ ಪಾಲಿಬೆಟ್ಟ ಭಾಗದಲ್ಲಿ ಕಾಡಾನೆ ಹಾವಳಿ ಮಿತಿಮೀರಿದ್ದು ಕಾರ್ಮಿಕರ ಹಾಗೂ ಸ್ಥಳೀಯರ ಜೀವಕ್ಕೆ ರಕ್ಷಣೆ ಇಲ್ಲದಾಗಿದೆ. ಕೃಷಿ ಫಸಲು ನಾಶವಾಗುತ್ತಿದೆ. ಕಾಡಾನೆ ಹಾವಳಿ ತಡೆಗೆ ಸರ್ಕಾರ ಶಾಶ್ವತ ಯೋಜನೆ ರೂಪಿಸಬೇಕು’ ಎಂದು ಬಿಜೆಪಿ ಮುಖಂಡ ಕುಟ್ಟಂಡ ಅಜಿತ್ ಕರುಂಬಯ್ಯ ಒತ್ತಾಯಿಸಿದರು. ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಮೂಕೊಂಡ ವಿಜು ಸುಬ್ರಮಣಿ ಮಾತನಾಡಿ ‘ಕಾಡಾನೆ– ಮಾನವ ಸಂಘರ್ಷ ತಾರಕಕ್ಕೇರಿದ್ದು ಅರಣ್ಯ ಸಚಿವರು ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಶಾಶ್ವತ ಯೋಜನೆ ರೂಪಿಸುವಲ್ಲಿ ವಿಫಲರಾಗಿದ್ದಾರೆ’ ಎಂದು ಆರೋಪಿಸಿದರು. ಕಾಡಾನೆ ದಾಳಿಯಿಂದ ಕಾರ್ಮಿಕರು ಜೀವ ಕಳೆದುಕೊಳ್ಳುತ್ತಿದ್ದು ಕಾರ್ಮಿಕರ ಜೀವಕ್ಕೆ ರಕ್ಷಣೆ ಇಲ್ಲದಂತಾಗಿದೆ. ಕಾಫಿ ತೋಟದಲ್ಲಿ ಭಯದಿಂದ ಕೆಲಸ ಮಾಡಬೇಕಾಗಿದ್ದು ಸರ್ಕಾರ ಶಾಶ್ವತ ಯೋಜನೆ ರೂಪಿಸಬೇಕೆಂದು ಕಾರ್ಮಿಕರ ಮುಖಂಡ ಪಿ.ಆರ್ ಭರತ್ ಎಚ್.ಬಿ ರಮೇಶ್ ಸೋಮಪ್ಪ ಹಾಗೂ ಮಹದೇವ್ ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.