ADVERTISEMENT

ಸೋಮವಾರಪೇಟೆಯಲ್ಲಿ ಕಾಡಾನೆ ದಾಳಿ: ಇಬ್ಬರಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 13 ಮೇ 2020, 14:27 IST
Last Updated 13 ಮೇ 2020, 14:27 IST
ಆನೆ ದಾಳಿಗೆ ಸಿಲುಕಿ ನಜುಗುಜ್ಜಾಗಿರುವ ದ್ವಿಚಕ್ರ ವಾಹನ
ಆನೆ ದಾಳಿಗೆ ಸಿಲುಕಿ ನಜುಗುಜ್ಜಾಗಿರುವ ದ್ವಿಚಕ್ರ ವಾಹನ   

ಸೋಮವಾರಪೇಟೆ: ಸಮೀಪದ ಯಡವನಾಡು ಮೀಸಲು ಅರಣ್ಯ ಕಾರೆಕೊಪ್ಪ ಗ್ರಾಮದ ಮುಖ್ಯ ರಸ್ತೆಯಲ್ಲಿ ಮಂಗಳವಾರ ರಾತ್ರಿ ಬೈಕ್ ಸವಾರರಿಬ್ಬರ ಮೇಲೆ ಒಂಟಿ ಸಲಗ ದಾಳಿ ನಡೆಸಿದೆ.

ಕೆಂಚಮ್ಮನ ಬಾಣೆಯ ನಿವಾಸಿಗಳಾದ ಕೃಷ್ಣ ಅವರ ಕಾಲು ಮುರಿದಿದ್ದು, ಕುಶಾಲ ಅವರ ತಲೆಗೆ ತೀವ್ರ ಪೆಟ್ಟಾಗಿದೆ.

ಕುಶಾಲನಗರದಿಂದ ದ್ವಿಚಕ್ರವಾಹನದಲ್ಲಿ ಮನೆಗೆ ತೆರಳುತ್ತಿದ್ದ ಸಂದರ್ಭ ರಾತ್ರಿ 9-15 ಸಮಯದಲ್ಲಿ ಮುಖ್ಯ ರಸ್ತೆಯಲ್ಲೇ ಕಾಡಾನೆ ದಾಳಿ ನಡೆಸಿ, ಸ್ಕೂಟಿಯನ್ನು ತುಳಿದು ಜಖಂಗೊಳಿಸಿದೆ.

ADVERTISEMENT

ಸ್ಥಳೀಯರ ಸಹಕಾರದಿಂದ ಗಾಯಾಳುಗಳನ್ನು ಮಡಿಕೇರಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದು, ಮೈಸೂರಿನಲ್ಲಿ ಹೆಚ್ಚಿನ ಚಿಕಿತ್ಸೆ ಕೊಡಿಸಲು ಅರಣ್ಯ ಇಲಾಖೆ ಅಧಿಕಾರಿಗಳು ಮುಂದಾಗಿದ್ದಾರೆ.

ಡಿ.ಆರ್.ಎಫ್.ಒ ಮನು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ನಿರಂತರ ಹಾವಳಿ: ಬೇಳೂರು, ಕಾರೇಕೊಪ್ಪ, ಕುಸುಬೂರು, ಕೆಂಚಮ್ಮನಬಾಣೆ, ಐಗೂರು, ಯಡವಾರೆ, ಕಾಜೂರು ಗ್ರಾಮ ವ್ಯಾಪ್ತಿಯಲ್ಲಿ ಕಾಡಾನೆಗಳ ಹಾವಳಿ ನಿರಂತರವಾಗಿವೆ.

ಯಡವನಾಡು ಮೀಸಲು ಅರಣ್ಯದಲ್ಲಿರುವ ಕಾಡಾನೆಗಳು ರಾತ್ರಿ ಸಮಯದಲ್ಲಿ ಗ್ರಾಮಗಳಿಗೆ ಲಗ್ಗೆಯಿಟ್ಟು ಕೃಷಿ ಫಸಲನ್ನು ತಿಂದು ಹಾನಿ ಪಡಿಸುತ್ತಿವೆ. ಸೋಮವಾರಪೇಟೆ, ಕುಶಾಲನಗರ ಮಾರ್ಗದ ರಾಜ್ಯ ಹೆದ್ದಾರಿಯನ್ನು ಕಾಡಾನೆಗಳು ದಾಟಿ, ಗ್ರಾಮಗಳನ್ನು ಪ್ರವೇಶಿಸಬೇಕು. ರಸ್ತೆ ದಾಟುವ ಸಂದರ್ಭದಲ್ಲಿ ಎದುರಿಗೆ ಸಿಕ್ಕ ವಾಹನಗಳ ಮೇಳೆ ದಾಳಿ ಮಾಡುತ್ತಿವೆ. ಕಾಡಾನೆ ಹಾವಳಿ ನಿಯಂತ್ರಣಕ್ಕೆ ಶಾಶ್ವತ ಪರಿಹಾರ ಕಲ್ಪಿಸಬೇಕೆಂಬ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.