ADVERTISEMENT

ಸಂಗೀತ ಕಾರಂಜಿಯವರೆಗೂ ಬಂದಿದ್ದ ಕಾಡಾನೆ

ಮುಂದುವರಿದಿದೆ ವನ್ಯಜೀವಿ– ಮಾನವ ಸಂಘರ್ಷ; ಕುಶಾಲನಗರದಲ್ಲಿ ಎಚ್ಚರಿಕೆ ಗಂಟೆ

ಕೆ.ಎಸ್.ಗಿರೀಶ್
Published 28 ನವೆಂಬರ್ 2022, 11:49 IST
Last Updated 28 ನವೆಂಬರ್ 2022, 11:49 IST
ಜುಲೈ 23ರಂದು ಹಾರಂಗಿ‌ ಉದ್ಯಾನಕ್ಕೆ ನುಗ್ಗಿದ್ದ ಕಾಡಾನೆ
ಜುಲೈ 23ರಂದು ಹಾರಂಗಿ‌ ಉದ್ಯಾನಕ್ಕೆ ನುಗ್ಗಿದ್ದ ಕಾಡಾನೆ   

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಕಾಡಾನೆ– ಮಾನವ ಸಂಘರ್ಷ ಮಿತಿ ಮೀರಿದ್ದು, ಕುಶಾಲನಗರದಲ್ಲಿ ಎಚ್ಚರಿಕೆ ಗಂಟೆ ಮೊಳಗಿದೆ. ಜುಲೈ ತಿಂಗಳ 23ರಂದು ಸಂಜೆ ಕಾಡಾನೆಯೊಂದು ಹಾರಂಗಿ ಜಲಾಶಯದ ಉದ್ಯಾನಕ್ಕೆ ನುಗ್ಗಿತು. ಉದ್ಯಾನದಲ್ಲಿ ಸಂಗೀತ ಕಾರಂಜಿಯ ಸೊಬಗನ್ನು ಸವಿಯು ತ್ತಿದ್ದವರು ಚೆಲ್ಲಾಪಿಲ್ಲಿಯಾಗಿ ಓಡಿದರು. ಇದೊಂದು ಎಚ್ಚರಿಕೆಯ ಗಂಟೆಯಾ ಗಿದ್ದು, ಮುನ್ನಚ್ಚರಿಕೆ ವಹಿಸದೇ ಹೋದರೆ ಮುಂದೆ ಅಪಾಯ ಕಟ್ಟಿಟ್ಟ ಬುತ್ತಿ ಎನಿಸಿದೆ.

ಹಾರಂಗಿ ಅಣೆಕಟ್ಟೆಗೆ ಹೊಂದಿ ಕೊಂಡಂತೆ ಇರುವ ಹತ್ತೂರು ಮೀಸಲು ಅರಣ್ಯ ಪ್ರದೇಶದಿಂದ ಬಂದ ಕಾಡಾನೆಗಳೂ ಆಗಾಗ್ಗೆ ಉದ್ಯಾನ ದೊಳಗೆ ಬಂದು ಅಡ್ಡಾಡುತ್ತಿವೆ. ಇದು ಪ್ರವಾಸಿಗರಲ್ಲಿ ಆತಂಕ ಮೂಡಿಸಿದೆ.

ಕುಶಾಲನಗರ ತಾಲ್ಲೂಕಿನಲ್ಲಿ ಕಾಡಾನೆಗಳಿಂದ ಹಲವು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ವಿದ್ಯುತ್ ಆಘಾತಕ್ಕೆ ಒಳಗಾಗಿ ಹಲವು ಕಾಡಾನೆ ಗಳೂ ಬಲಿಯಾಗಿವೆ. ಜೀವಹಾನಿ ನಿರಂತರ ವಾಗಿ ಮುಂದುವರಿದ್ದು, ತಕ್ಷ ಣವೇ ಇದಕ್ಕೆಲ್ಲ ತಡೆ ಹಾಕಬೇಕಾದ ಅನಿವಾರ್ಯತೆ ಇದೆ.

ADVERTISEMENT

ಆನೆಕಾಡು, ಮೀನುಕೊಲ್ಲಿ, ಹೆತ್ತೂರು, ಯಡವನಾಡು, ಬಾಣಾವಾರ ಅರಣ್ಯ ಪ್ರದೇಶಗಳಿಂದ ಕಾಡಾನೆಗಳು ನಾಡಿಗೆ ಬರುತ್ತಲೇ ಇವೆ. ಇದರಿಂದ ಬಾಣಾವಾರ ಸುತ್ತಮುತ್ತಲ ಪ್ರದೇಶಗಳು ಸೀಗೆಹೊಸೂರು, ಕೂಡಿಗೆ, ಮರೂರು, ಸಿದ್ಧಲಿಂಗಪುರ, ನಂಜರಾಯಪಟ್ಟಣ, ವಿರೂಪಾಕ್ಷಪುರ, ರಂಗಸಮುದ್ರ ಸೇರಿದಂತೆ ಹಲವು ಭಾಗಗಳ ರೈತಾಪಿ ಜನರಿಗೆ ನಿದ್ದೆ ಇಲ್ಲದಂತಾಗಿದೆ. ಇವರು ಬೆಳೆದ ಬೆಳೆ ಮಾತ್ರವಲ್ಲ ಪ್ರಾಣವೂ ಅಪಾಯದಲ್ಲಿ ಸಿಲುಕಿದೆ.

ನಂಜರಾಯಪಟ್ಟಣ, ವಿರೂಪಾಕ್ಷ ಪುರ, ರಂಗಸಮುದ್ರ ವ್ಯಾಪ್ತಿಯಲ್ಲಿನ ಕಾಫಿ, ಮೆಣಸುಗಳು ಕಾಡಾನೆಗಳಿಂದ ನಾಶವಾದರೆ, ಕೂಡಿಗೆ, ಮರೂರು ವ್ಯಾಪ್ತಿಯ ಬಾಳೆ, ತೆಂಗು, ಅಡಿಕೆಗಳು ಹಾಳಾಗುತ್ತಿವೆ. ಸಿದ್ದಲಿಂಗಪುರ, ಅಳುವಾರದ ಮುಸುಕಿನ ಜೋಳ, ಸುವರ್ಣಗೆಡ್ಡೆ ಬೆಳೆಗಳು ಹಾಗೂ ಕೂಡಿಗೆ ವ್ಯಾಪ್ತಿಯ ಭತ್ತ ಆನೆಗಳಿಗೆ ಆಹಾರವಾಗುತ್ತಿವೆ.

ಆನೆಗಳ ದಾಳಿ ತಡೆಯಲು ಅರಣ್ಯ ಇಲಾಖೆ ರೂಪಿಸಿದ ಎಲ್ಲ ಯೋಜನೆಗಳೂ ನಿಷ್ಪಲವಾಗಿವೆ. ಕಂದಕ ತೋಡಿ ಪಕ್ಕದಲ್ಲೇ ಮಣ್ಣು ಬಿಟ್ಟಿದ್ದರಿಂದ ಬುದ್ದಿವಂತ ಕಾಡಾನೆಗಳು ಸುಲಭವಾಗಿ ಸೊಂಡಿಲಿನಿಂದ ಮಣ್ಣನ್ನು ಕಂದಕಕ್ಕೆ ತಳ್ಳಿ ಆರಾಮವಾಗಿ ದಾಟಿ ಬರುತ್ತಿದೆ. ಕೆಲವೆಡೆ ಹೆಚ್ಚು ಮಳೆ ಬಿದ್ದು ಕಂದಕಕ್ಕೆ ಮಣ್ಣು ಸೇರಿದೆ. ಇದರಿಂದ ಸುಲಭವಾಗಿ ಕಂದಕಕ್ಕೆ ಇಳಿದು ಹತ್ತುವ ಕಾಡಾನೆಗಳು ನಿರಂತರವಾಗಿ ಬರುತ್ತಿವೆ.

ಸೌರಬೇಲಿಯೂ ನಿರ್ವಹಣೆ ಕೊರತೆಯಿಂದ ನಿಷ್ಫಲವಾಗಿವೆ. ಮೋಡ ಮುಸುಕಿದ ವಾತಾವರಣ, ನಿರಂತರ ಮಳೆಯ ಕಾರಣಕ್ಕೆ ಬೇಲಿ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಕೆಲವೆಡೆ ತಾಂತ್ರಿಕ ದೋಷದಿಂದ ಈ ತಂತಿಗಳೂ ರೋಗಗ್ರಸ್ತವಾಗಿವೆ. ಹೀಗಾಗಿ, ಅರಣ್ಯ ಇಲಾಖೆ ಈ ಭಾಗದಲ್ಲಿ ಕೈಗೊಂಡ ಯಾವುದೇ ಯೋಜನೆಗಳಿಂದಲೂ ಕಾಡಾನೆಗಳು ಹಳ್ಳಿಗಳತ್ತ ದಾಳಿ ನಡೆಸುವುದನ್ನು ತಡೆಯುವಲ್ಲಿ ವಿಫಲವಾಗಿವೆ.

ಆನೆ ತಡೆಗೆ ಸರ್ವಪ್ರಯತ್ನ; ಶಿವರಾಂ

ಕುಶಾಲನಗರ ಭಾಗದಲ್ಲಿ ಕಾಡಾನೆಗಳು ನಾಡಿಗೆ ಬರದಂತೆ ತಡೆಯಲು ಅರಣ್ಯ ಇಲಾಖೆ ಎಲ್ಲ ಪ್ರಯತ್ನ ನಡೆಸಿದೆ ಎಂದು ವಲಯ ಅರಣ್ಯಾಧಿಕಾರಿ ಶಿವರಾಂ ‘ಪ್ರಜಾವಾಣಿ’ಗೆ ತಿಳಿಸಿದರು.

'ಆನೆಕಾಡಿನಿಂದ ಹಾರಂಗಿಯ ತೋಟಗಾರಿಕೆ ಫಾರಂವರೆಗೆ 6 ಕಿ.ಮಿ ರೈಲ್ವೆ ಬ್ಯಾರಿಕೇಡ್ ನಿರ್ಮಾಣ, ಮೆಟ್ನಳ್ಳದಿಂದ ಚಕ್ಲಿಹೊಳೆಯವರೆಗೆ 7 ಕಿ.ಮೀ ಸೋಲಾರ್‌ ಬೇಲಿ, ಹತ್ತೂರು ನಲ್ಲೂರು ಭಾಗದಲ್ಲಿ 3 ಕಿ.ಮೀ ಸೋಲಾರ್ ತೂಗುಬೇಲಿ ನಿರ್ಮಿಸಲಾಗುತ್ತಿದೆ. ಮಾಲ್ದಾರೆ ಭಾಗದಲ್ಲಿರುವ ಸೋಲಾರ್ ಬೇಲಿಯನ್ನು ನಿರ್ವಹಣೆ ಮಾಡಲಾಗುತ್ತಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.