
ಸೋಮವಾರಪೇಟೆ: ಸಮೀಪದ ಬೇಳೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಬೇಳೂರು ಗ್ರಾಮ ಪಂಚಾಯಿತಿ, ಸಿಎಂಸಿಎ ಸಂಸ್ಥೆ ಬೆಂಗಳೂರು ಹಾಗೂ ನಾವು ಪ್ರತಿಷ್ಠಾನ ಕೊಡಗು ಇವರ ಸಂಯುಕ್ತ ಆಶ್ರಯದಲ್ಲಿ ಬಳಗುಂದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ ಗುರುವಾರ ಮಕ್ಕಳ ಗ್ರಾಮ ಸಭೆ ನಡೆಯಿತು. ವಿದ್ಯಾರ್ಥಿಗಳು ತಮ್ಮ ಸಮಸ್ಯೆಗಳನ್ನು ಹಂಚಿಕೊಂಡರು.
ಶಾಲಾ ಹಿಂಭಾಗದಲ್ಲಿ ಆನೆಕಂದಕ ನಿರ್ಮಿಸಲಾಗಿದೆ. ವಿದ್ಯಾರ್ಥಿಗಳು ಕಾಲು ಜಾರಿದರೆ ಕಂದಕದೊಳಗೆ ಬೀಳಬೇಕಾಗುತ್ತದೆ. ಈ ಬಗ್ಗೆ ಅರಣ್ಯ ಇಲಾಖೆಗೆ ಈ ಹಿಂದೆಯೇ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಇನ್ನಾದರೂ ಕಾಂಪೌಂಡ್ ನಿರ್ಮಿಸಿಕೊಡಿ ಎಂದು ವಿದ್ಯಾರ್ಥಿನಿ ಶೀಮಾ ಮನವಿ ಮಾಡಿದರು.
ಮೀಸಲು ಅರಣ್ಯ ಪಕ್ಕದಲ್ಲೇ ಬೇಳೂರು ಶಾಲೆಯಿದೆ. ಕಾಡಾನೆ ಭಯ, ಬೀದಿನಾಯಿಗಳ ಹಾವಳಿಯಿಂದ ಭಯದಿಂದಲೇ ಶಾಲೆಗೆ ಬರಬೇಕು. ಮಕ್ಕಳು ನಡೆದುಕೊಂಡು ಹೋಗುವ ರಸ್ತೆಯಲ್ಲಿ ಬೀದಿದೀಪ ಅಳವಡಿಸಬೇಕು. ಇದರಿಂದ ಗ್ರಾಮದ ನಿವಾಸಿಗಳಿಗೂ ಉಪಯೋಗವಾಗಲಿದೆ ಎಂದು ವಿದ್ಯಾರ್ಥಿನಿ ಪೂರ್ವಿ ಮನವಿ ಮಾಡಿದರು. ಈ ಬಗ್ಗೆ ಅರಣ್ಯ ಇಲಾಖೆಗೆ ಈ ಹಿಂದೆಯೇ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದು ವಿದ್ಯಾರ್ಥಿನಿ ಶೀಮಾ ದೂರಿದರು.
ಬೇಳೂರು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಿಟಕಿಗಳು ಹಾಳಾಗಿವೆ. ತರಗತಿಯಲ್ಲಿ ಕೂರಲು ಚಳಿಯಾಗುತ್ತದೆ. ರಾತ್ರಿ ವೇಳೆ ಹಾವು ಕೊಠಡಿ ಒಳಗೆ ಸೇರಿಕೊಳ್ಳುವ ಭಯವಿದೆ ಎಂದು ವಿದ್ಯಾರ್ಥಿಗಳು ಹೇಳಿದರು.
ಇದಕ್ಕೆ ಸ್ಪಂದಿಸಿದ ಪಿಡಿಒ ಮೋಹನ್, ಪಂಚಾಯಿತಿಯಿಂದ ರಸ್ತೆ ಬದಿ ಬೀದಿ ದೀಪ ಅಳವಡಿಸುತ್ತೇವೆ. ಶಾಲೆಯಲ್ಲಿ ತೆಗೆಸಿರುವ ಕೊಳವೆಬಾವಿಗೆ ಮೋಟರ್ ಅಳವಡಿಸಲಾಗುವುದು. ಇಂಗುಗುಂಡಿ ನಿರ್ಮಿಸಲು ಕ್ರಮ ತೆಗದುಕೊಳ್ಳುತ್ತೇವೆ. ಕಂದಕದ ಸಮೀಪ ಕಾಂಪೌಂಡ್ ನಿರ್ಮಿಸಲು ಅರಣ್ಯ ಇಲಾಖೆಗೆ ಪಂಚಾಯಿತಿಯಿಂದ ಮನವಿ ಮಾಡುತ್ತೇವೆ ಎಂದು ಭರವಸೆ ನೀಡಿದರು.
ಬಳಗುಂದ ಶಾಲೆಯ ಅವರಣದೊಳಗೆ ಕಿಡಿಗೇಡಿಗಳು ಸಮಸ್ಯೆ ಮಾಡುತ್ತಿದ್ದಾರೆ. ಶೌಚಾಲಯದ ಬೀಗ ಒಡೆದು ಹಾಕುತ್ತಿದ್ದಾರೆ. ಶಾಲಾ ಆವರಣದೊಳಗೆ ಮದ್ಯದ ಬಾಟಲ್ ಎಸೆಯುತ್ತಾರೆ ಎಂದು ವಿದ್ಯಾರ್ಥಿಗಳು ಅರೋಪಿಸಿದರು. ಶಾಲಾ ಆವರಣದಲ್ಲಿ ಸಿಸಿ ಟಿ.ವಿ ಕ್ಯಾಮೆರಾ ಅಳವಡಿಸುವ ಭರವಸೆಯನ್ನು ಪಿಡಿಒ ನೀಡಿದರು. ಸಮಸ್ಯೆಗಳ ಬಗ್ಗೆ ಈಗಾಗಲೇ ಪೊಲೀಸರಿಗೆ ದೂರು ನೀಡಲಾಗಿದೆ ಎಂದು ಮುಖ್ಯಶಿಕ್ಷಕಿ ಭಾಗ್ಯ ಹೇಳಿದರು.
ಆರೋಗ್ಯ ಕೇಂದ್ರದಲ್ಲಿ ವೈದ್ಯರು, ದಾದಿಯರು ಇಲ್ಲದೆ ಇರುವುದರಿಂದ ಸಮಸ್ಯೆಯಾಗಿದೆ. ಶಾಲೆಗೆ ಹೂ ತೋಟ ನಿರ್ಮಿಸಿಕೊಡಬೇಕು. ನೀರಿನ ಸೌಲಭ್ಯ ಒದಗಿಸಿಕೊಡಬೇಕು ಎಂದು ವಿದ್ಯಾರ್ಥಿಗಳು ಮನವಿ ಮಾಡಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕರಾದ ಸಾವಿತ್ರವ್ವ, ಮಕ್ಕಳ ಹಕ್ಕುಗಳು ಮತ್ತು ಇಲಾಖೆಯಿಂದ ಸಿಗುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಬೇಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪಾರ್ವತಮ್ಮ, ಸದಸ್ಯರಾದ ಸುಜಾತ, ಬೇಳೂರು ಶಾಲೆಯ ಮುಖ್ಯಶಿಕ್ಷಕಿ ನಿರ್ಮಲಾ, ನಾವು ಪ್ರತಿಷ್ಠಾನದ ಸುಮನ ಮ್ಯಾಥ್ಯು, ಗೌತಮ್ ಕಿರಗಂದೂರು, ಶಿಕ್ಷಕಿ ಪುಷ್ಪ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.