
ನಾಪೋಕ್ಲು: ಸಮೀಪದ ಮರಂದೋಡ ಗ್ರಾಮದಲ್ಲಿ ಶುಕ್ರವಾರ ಹಗಲು ಹೊತ್ತಿನಲ್ಲಿ ಮುಖ್ಯರಸ್ತೆಯಲ್ಲಿ ಕಾಡಾನೆ ಓಡಾಡಿದ್ದು ಗ್ರಾಮಸ್ಥರು ಜೀವ ಭಯದಿಂದ ತತ್ತರಗೊಂಡಿದ್ದಾರೆ.
ಸಮೀಪದ ಕಕ್ಕಬ್ಬೆ ಗ್ರಾಮ ಪಂಚಾಯಿತಿಗೆ ಒಳಪಟ್ಟ ಮರಂದೋಡ ಗ್ರಾಮದ ನಿಡುಮಂಡ ಸೇತುವೆಯ ಬಳಿ ಕಾಡಾನೆ ಅಡ್ಡಾಡಿದೆ. ಈ ವ್ಯಾಪ್ತಿಯ ಗ್ರಾಮಗಳಲ್ಲಿ ನಿರಂತರ ಕಾಡಾನೆಗಳ ಹಾವಳಿ ಇದ್ದು, ಹಲವು ಸಂದರ್ಭಗಳಲ್ಲಿ ಕಾಫಿ ತೋಟ, ಗದ್ದೆಗಳಿಗೆ ರಾತ್ರಿ ವೇಳೆಯಲ್ಲಿ ಲಗ್ಗೆ ಇಟ್ಟಿದ್ದು ಗ್ರಾಮಸ್ಥರು ಸಮಸ್ಯೆ ಎದುರಿಸುತ್ತಿದ್ದಾರೆ. ಪದೇ ಪದೇ ಕಾಡುವ ಕಾಡಾನೆಗಳು ಕೃಷಿ ಉತ್ಪನ್ನಗಳಿಗೆ ಬಹಳಷ್ಟು ನಷ್ಟ ಮಾಡುತ್ತಿದ್ದು ಗ್ರಾಮಸ್ಥರು ಹೈರಾಣಾಗಿದ್ದಾರೆ. ಆದರೆ ಇದೀಗ ನಡು ಮಧ್ಯಾಹ್ನವೇ ಕಾಡಾನೆ ಓಡಾಡುತ್ತಿರುವ ದೃಶ್ಯ ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ದಾಖಲಾಗಿದೆ. ಕಾಫಿ ತೋಟಗಳಲ್ಲಿ ಕಾಫಿ ಕೊಯ್ಲಿನಲ್ಲಿ ತೊಡಗಿದ್ದ ಕಾರ್ಮಿಕರು ಹಾಗೂ ಗ್ರಾಮಸ್ಥರು ಜೀವ ಭಯದಿಂದ ಮನೆಗಳಿಗೆ ಓಡಿದ್ದಾರೆ.
ಕಾಡಾನೆಗಳ ಉಪಟಳ ಮಿತಿಮೀರಿದ್ದು ಕೂಡಲೇ ಅರಣ್ಯ ಇಲಾಖೆ ಅಧಿಕಾರಿಗಳು ಕಾಡಾನೆಗಳನ್ನು ಕಾಡಿಗಟ್ಟಬೇಕು ಎಂದು ಈ ಭಾಗದ ಗ್ರಾಮಸ್ಥರು ಕೋರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.