ADVERTISEMENT

ನಾಪೋಕ್ಲು: ಮಿತಿಮೀರಿದ ಕಾಡಾನೆಗಳ ಉಪಟಳ, ಬೆಳೆ ನಷ್ಟ

ನಾಪೋಕ್ಲು: ವಿಶೇಷ ಗ್ರಾಮಸಭೆ ನಡೆಸಿದ ಗ್ರಾಮಸ್ಥರು l ಅಧಿಕಾರಿಗಳಿಗೆ ಮನವಿ lಪ್ರತಿಭಟನೆ ಎಚ್ಚರಿಕೆ

ಸಿ.ಎಸ್.ಸುರೇಶ್
Published 26 ನವೆಂಬರ್ 2022, 9:09 IST
Last Updated 26 ನವೆಂಬರ್ 2022, 9:09 IST
ನಾಪೋಕ್ಲುವಿನಲ್ಲಿ ಕಾಡಾನೆ ದಾಳಿ ನಡೆಸಿ ತೆಂಗಿನಮರಗಳನ್ನು ನಾಶಪಡಿಸಿದೆ
ನಾಪೋಕ್ಲುವಿನಲ್ಲಿ ಕಾಡಾನೆ ದಾಳಿ ನಡೆಸಿ ತೆಂಗಿನಮರಗಳನ್ನು ನಾಶಪಡಿಸಿದೆ   

ನಾಪೋಕ್ಲು: ಹೋಬಳಿ ವ್ಯಾಪ್ತಿಯ ಹಲವು ಗ್ರಾಮಗಳಲ್ಲಿ ಕಾಡಾನೆಗಳ ಉಪಟಳ ಮಿತಿಮೀರಿದೆ. ಸಾಕಷ್ಟು ಬೆಳೆಗಾರರು ನಷ್ಟ ಅನುಭವಿಸಿದ್ದಾರೆ. ಸಮಸ್ಯೆ ನಿವಾರಣೆಗೆ ವಿಶೇಷ ಗ್ರಾಮಸಭೆಯನ್ನೂ ನಡೆಸಿ, ಅರಣ್ಯ ಅಧಿಕಾರಿಗಳಿಗೆ ಮನವಿಯನ್ನೂ ಸಲ್ಲಿಸಿದ್ದಾರೆ. ಆದರೂ, ಕಾಡಾನೆಗಳ ದಾಳಿ ನಿಂತಿಲ್ಲ.

ವಿಶೇಷವಾಗಿ ಭತ್ತ, ಬಾಳೆ, ಅಡಿಕೆ, ತೆಂಗು ಕಾಡಾನೆಗಳ ದಾಳಿಗೆ ತುತ್ತಾಗಿವೆ. ಚೆಯ್ಯಂಡಾಣೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮರಂದೋಡ, ಕೋಕೇರಿ, ಕೊಳಕೇರಿ, ಚೇಲಾವರ ಗ್ರಾಮಗಳ ಕೃಷಿಕರು ಆನೆಗಳ ಉಪಟಳದಿಂದ ಕಂಗೆಟ್ಟಿದ್ದರೆ ಇತ್ತ ಬಲ್ಲಮಾವಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪೇರೂರು, ಪುಲಿಕೋಟು, ನೆಲಜಿ ಗ್ರಾಮಗಳ ಬೆಳೆಗಾರರು ಕಾಡಾನೆಗಳು ಉಪಟಳದಿಂದ ಸಮಸ್ಯೆ ಅನುಭವಿಸುತ್ತಿದ್ದಾರೆ.

ಮರಂದೋಡ ಗ್ರಾಮದಲ್ಲಿ ಮಳೆಗಾಲದಲ್ಲಿ ಕಾಡಾನೆಗಳ ಹಿಂಡು ತೋಟ- ಗದ್ದೆಗಳಿಗೆ ದಾಳಿ ನಡೆಸಿದ್ದು, ಕಾಫಿ ತೋಟದಲ್ಲಿನ ಗಿಡಗಳನ್ನು ಬಾಳೆ, ತೆಂಗು, ಅಡಿಕೆ ಮತ್ತಿತರ ಕೃಷಿಯನ್ನು ನಾಶಪಡಿಸಿವೆ. ಭತ್ತದ ಗದ್ದೆಗಳಿಗೂ ದಾಳಿ ಮಾಡಿರುವ ಕಾಡಾನೆಗಳ ಹಿಂಡು ಬೆಳೆಯನ್ನು ನಾಶಪಡಿಸಿದ್ದು ಅಪಾರ ನಷ್ಟ ಉಂಟಾಗಿದೆ. ಕಾಡಾನೆಗಳು, ಕಾಡುಹಂದಿಗಳು ನಿರಂತರವಾಗಿ ದಾಳಿ ಮಾಡುತ್ತಿರುವುದರಿಂದ ಬೆಳೆಗಾರರು ಹೈರಣಾಗಿದ್ದಾರೆ.

ADVERTISEMENT

‘ಪಶುಗಳಿಗೆ ಆಹಾರವಾಗಿ ಸಂಗ್ರಹಿಸಿಟ್ಟಿದ್ದ ಹುಲ್ಲಿನ ಮೆದೆಗಳನ್ನು ಸಂಪೂರ್ಣ ನಾಶಪಡಿಸಿವೆ. ಸ್ಥಳೀಯ ಅರಣ್ಯ ಇಲಾಖೆಯ ಸಿಬ್ಬಂದಿ ಭೇಟಿ ಕೊಟ್ಟರೆ ಸಾಲದು. ಇಲಾಖೆಯ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಕೃಷಿಕರ ಸಮಸ್ಯೆಗಳಿಗೆ ಸೂಕ್ತ ಪರಿಹಾರ ನೀಡಬೇಕು’ ಎಂದು ಬೆಳೆಗಾರ ಪೂಣಚ್ಚ ಒತ್ತಾಯಿಸುತ್ತಾರೆ.

ಸಮೀಪದ ಬಲ್ಲಮಾವಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪೇರೂರು ಗ್ರಾಮದಲ್ಲಿ ಕಾಡಾನೆಗಳ ಹಾವಳಿಯಿಂದ ಬೇಸತ್ತ ಗ್ರಾಮಸ್ಥರ ವಿಶೇಷ ಗ್ರಾಮಸಭೆಯೂ ನಡೆದಿತ್ತು. ಆನೆ ತುಳಿತದಿಂದ ಆಗಿರುವ ಕಾಫಿ ಗಿಡ ಹಾಗೂ ಬೆಳೆನಷ್ಟ ಪರಿಹಾರವನ್ನು ಅರಣ್ಯ ಇಲಾಖೆಯಿಂದ ನೀಡುವ ಸಂದರ್ಭದಲ್ಲಿ ಈಗಿರುವ ಮೊಬಲಗನ್ನು ಹೆಚ್ಚಿಸುವಂತೆ ಸಭೆಯಲ್ಲಿ ಬೆಳೆಗಾರರು ಒತ್ತಾಯಿಸಿದ್ದರು. ಆನೆ-ಮಾನವ ಸಂಘರ್ಷದಿಂದಾಗಿ ಬೆಳೆಗಾರರು ಸಂಕಷ್ಟಕ್ಕೀಡಾಗಿದ್ದು ಮುಂದಿನ ದಿನಗಳಲ್ಲಿ ಸರ್ಕಾರದ ಜೊತೆ ವ್ಯವಹರಿಸಿ ಶಾಶ್ವತ ಪರಿಹಾರವನ್ನು ಒದಗಿಸಿಕೊಡುವುದಾಗಿ ಅರಣ್ಯ ಅಧಿಕಾರಿಗಳು ಭರವಸೆ ನೀಡಿದ್ದರು.

‘ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಇತ್ತೀಚಿನ ದಿನಗಳಲ್ಲಿ ಆನೆ-ಮಾನವ ಸಂಘರ್ಷ ಹೆಚ್ಚುತ್ತಿದೆ. ಇತರೆ ವನ್ಯ ಪ್ರಾಣಿಗಳಿಂದ ಬೆಳೆನಷ್ಟ, ಪ್ರಾಣಹಾನಿ ಉಂಟಾಗುತ್ತಿದೆ. ಪಂದೇಟ್ ಕಾಲೋನಿ ನಿವಾಸಿ ಯೊಬ್ಬರು ಆನೆ ತುಳಿತದಿಂದ ಮೃತಪಟ್ಟಿದ್ದಾರೆ. ಯಾವತ್ತೂ ಭಯದಿಂದ ಬದುಕುವಂತಾಗಿದೆ. ಪರಿಹಾರ ಮಾತ್ರ ಭರವಸೆಯಾಗಿ ಉಳಿದಿದೆ’ ಎಂದು ಪೇರೂರು ಗ್ರಾಮದ ಬೆಳೆಗಾರ ಅಪ್ಪಚ್ಚಿರ ನಂದಕುಮಾರ್ ಪ್ರತಿಕ್ರಿಯಿಸಿದರು. ಕರಡ-ಪಾಲಂಗಾಲ ಗ್ರಾಮ ವ್ಯಾಪ್ತಿಯಲ್ಲೂ ಕಾಡಾನೆಗಳ ಹಾವಳಿಯಿಂದ ಬೆಳೆ ನಷ್ಟ ಉಂಟಾಗುತ್ತಿದೆ. ಈ ವ್ಯಾಪ್ತಿಯಲ್ಲಿ ಒಂಟಿ ಆನೆಯೊಂದು ಅಡ್ಡಾಡುತ್ತಿದೆ. ಮನೆಯಂಗಳದಲ್ಲಿ ರಾಜಾರೋಷವಾಗಿ ಓಡಾಡುತ್ತಿದೆ. ಭಯದಿಂದಲೇ ಜೀವನ ಸಾಗುತ್ತಿದೆ ಎನ್ನುತ್ತಾರೆ ಪಾಲಂಗಾಲದ ನಾಗರಾಜ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.