ಸುಂಟಿಕೊಪ್ಪ: ಹೋಬಳಿ ವ್ಯಾಪ್ತಿಯಲ್ಲಿ ಕಾಡಾನೆಗಳ ದಾಂಧಲೆ ಮುಂದುವರಿದಿದ್ದು, ಫಸಲುಭರಿತ ಬೆಳೆಗಳನ್ನು ತಿಂದು– ತುಳಿದು ನಷ್ಟ ಮಾಡುತ್ತಿವೆ.
ಸಮೀಪದ ಏಳನೇ ಹೊಸಕೋಟೆ ಗ್ರಾಮ ಪಂಚಾಯತಿ ವ್ಯಾಪ್ತಿಯ ತೊಂಡೂರು- ಉಪ್ಪುತೋಡು ನಡುವಿನ ಜೈ ಜವಾನ್ ಜೈ ಕಿಸಾನ್ ಮಾಜಿ ಸೈನಿಕರ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಜಿ.ಶಿವನ್ ಎಂಬುವವರ ತೋಟಕ್ಕೆ ದಾಳಿ ಮಾಡಿದ ಕಾಡಾನೆ ತೆಂಗಿನ ಮರವನ್ನು ಬಗ್ಗಿಸಿದೆ. ಮನೆಯ ಅನತಿ ದೂರದಲ್ಲಿರುವ ಈ ಮರವನ್ನು ಖಾಲಿ ಮಾಡುವವರೆಗೂ ಪ್ರತಿನಿತ್ಯ ಬಂದು ಹೋಗಿರುವ ಕಾಡಾನೆ, ಕಾಫಿ ಗಿಡಗಳನ್ನು ಸಹ ತುಳಿದು ಹಾಕಿದೆ.
ಸಮೀಪದ ಕಾನ್‌ಬೈಲ್ ಬೈಚನಹಳ್ಳಿಯ ನೆಟ್ಲಿ 'ಬಿ' ತೋಟದಲ್ಲಿ ಹಗಲು ವೇಳೆಯಲ್ಲಿ ಕಾಫಿ ಗಿಡದ ನಡುವೆ ಕಾಡಾನೆಯೊಂದು ನಿಂತಿದ್ದನ್ನು ಕಾರ್ಮಿಕರೊಬ್ಬರು ನೋಡಿದ್ದಾರೆ. ನಂತರ ಆನೆ ಅಲ್ಲಿಂದ ಹೋಗಿದೆ.
ಸಮೀಪದ ಕೆಳಪನ್ಯ ತೋಟದಲ್ಲೂ ಎರಡು ಕಾಡಾನೆಗಳು ಕಾಣಿಸಿಕೊಂಡಿದ್ದು, ವಿಷಯ ತಿಳಿದ ತೋಟದ ಮಾಲೀಕರು ನೀಡಿದ ಸೂಚನೆಯಂತೆ ಕಾರ್ಮಿಕರು ಅಲ್ಲಿಂದ ಮನೆಗೆ ಮರಳಿದ್ದಾರೆ. ಸುಂಟಿಕೊಪ್ಪ ಹೋಬಳಿ ವ್ಯಾಪ್ತಿಯಲ್ಲಿ ಕಾಡಾನೆಗಳ ಸಂಚಾರ ಮತ್ತು ದಾಂಧಲೆ ಮಿತಿಮೀರಿದ್ದು, ಅರಣ್ಯ ಇಲಾಖೆ ಶಾಶ್ವತ ಪರಿಹಾರ ನೀಡುವಂತೆ ಗ್ರಾಮಸ್ಥರು ಮನವಿ ಮಾಡಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.