ADVERTISEMENT

ಪ್ರತಿಭಾ ಪ್ರದರ್ಶನಕ್ಕೆ ಮೀಸಲಾದ ‘ಮಕ್ಕಳ ಸಾಹಿತ್ಯ ಸಂಭ್ರಮ’ದ 2ನೇ ದಿನ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2024, 8:41 IST
Last Updated 6 ಮಾರ್ಚ್ 2024, 8:41 IST
ಸೋಮವಾರಪೇಟೆ ಚನ್ನಬಸಪ್ಪ ಸಭಾಂಗಣದಲ್ಲಿ ನಡೆಯುತ್ತಿರುವ ಮಕ್ಕಳ ಸಾಹಿತ್ಯ ಸಂಭ್ರಮದ ಕಾರ್ಯಕ್ರಮದಲ್ಲಿ ಕಥೆ ರಚನೆಯ ಬಗ್ಗೆ ಶಿಕ್ಷಕ ಕಾಜೂರು ಸತೀಶ್ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದರು
ಸೋಮವಾರಪೇಟೆ ಚನ್ನಬಸಪ್ಪ ಸಭಾಂಗಣದಲ್ಲಿ ನಡೆಯುತ್ತಿರುವ ಮಕ್ಕಳ ಸಾಹಿತ್ಯ ಸಂಭ್ರಮದ ಕಾರ್ಯಕ್ರಮದಲ್ಲಿ ಕಥೆ ರಚನೆಯ ಬಗ್ಗೆ ಶಿಕ್ಷಕ ಕಾಜೂರು ಸತೀಶ್ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದರು   

ಸೋಮವಾರಪೇಟೆ: ಚಿತ್ರ ನೋಡಿ ಕಥೆ ಬರೆದವರು ಕೆಲವರು, ಪ್ರಾಸ ಪದ ಬಳಸಿ, ಚಿತ್ರ ಬಳಸಿ ಕವಿತೆ ಬರೆದವರು ಮತ್ತೆ ಕೆಲವರು, ಸಮಾಜದ ಆಗುಹೋಗುಗಳ ಬಗ್ಗೆ ಸ್ಥಳದಲ್ಲಿಯೇ ನಾಟಕ ರಚಿಸಿದವರು ಮತ್ತೂ ಹಲವರು.

ಹೀಗೆ ಹಲವು ಮುಖಗಳ ಪ್ರತಿಭಾ ದರ್ಶನ ಮಕ್ಕಳಿಂದಾಯಿತು. ನೋಡುಗರೂ ವಿಸ್ಮಿತಗೊಂಡರು.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹಾಗೂ ಭಾರತ ಜ್ಞಾನ ವಿಜ್ಞಾನ ಸಮಿತಿ ವತಿಯಿಂದ ಚನ್ನಬಸಪ್ಪ ಸಭಾಂಗಣದಲ್ಲಿ ಆಯೋಜಿಸಿರುವ ‘ಮಕ್ಕಳ ಸಾಹಿತ್ಯ ಸಂಭ್ರಮ’ 2ನೇ ದಿನವಾದ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಮಕ್ಕಳು ಹಾಡಿ, ನಾಟಕವಾಡಿ, ಕವನ ರಚಿಸಿ ಸಂಭ್ರಮಿಸಿದರು.

ADVERTISEMENT

ಒಟ್ಟು ನೂರು ಮಕ್ಕಳು ನಾಲ್ಕು ವಿಭಾಗಗಳಲ್ಲಿ ತಮಗೆ ನೀಡಿದ ಟಾಸ್ಕ್‌ಗಳನ್ನು ಅಂಜಿಕೆ, ಭಯವಿಲ್ಲದೆ ನಿರ್ವಹಿಸಿದರು. ನಾಟಕದ ವಿಭಾಗದಲ್ಲಿ ಒಂದು ಕುರಿ ಹಳ್ಳಕ್ಕೆ ಬಿದ್ದರೆ ಎಲ್ಲಾ ಬಿದ್ದಂತೆ, ಬಾಲ್ಯವಿವಾಹ, ನಾಯಿಯ ರೋದನೆ ಎಂಬ ಶೀರ್ಷಿಕೆಯಡಿ ತಾವೇ ರಚಿಸಿ ಅಭಿನಯಿಸಿದರು.

ಕಥೆ ವಿಭಾಗದ ಮಕ್ಕಳು ಚಿತ್ರ ನೋಡಿ ಕಥೆ ಬರೆಯುವುದು, ಕಥೆಗೊಂದು ಸಾಲು, ಪದ ಆಧರಿಸಿ ಕತೆ ರಚಿಸುವ, ಮಕ್ಕಳ ಬದುಕಿನ ಘಟನೆ ಆಧಾರಿತ ಕಥಾ ರಚನೆ, ಕಡ್ಡಿಗೊಂಬೆ ಮೂಲಕ ಕಥೆ ಕಟ್ಟುವ ಬಗ್ಗೆ ಶಿಕ್ಷಕ ಕಾಜೂರು ಸತೀಶ್ ಮಾರ್ಗದರ್ಶನದಲ್ಲಿ ಮಾಹಿತಿ ಪಡೆದು ಸ್ವತಃ ಹಲವು ಕಥೆಗಳನ್ನು ರಚಿಸುವ ಮೂಲಕ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು.

ಕವಿತೆ ವಿಭಾಗದಲ್ಲಿ ಪ್ರಾಸ ಪದ ಬಳಸಿ ಕವಿತೆ, ಚಿತ್ರ ಬಳಸಿ ಕವಿತೆ, ಸಾಲಿಗೆ ಸಾಲು ಕವಿತೆ, ನಮ್ಮನೆ ಹಾಡು ಹೀಗೆ ಅನೇಕ ಮಾದರಿಯಲ್ಲಿ ಕವನ ಕಟ್ಟಿದರು. ಇವರಿಗೆ ಸಂಪನ್ಮೂಲ ವ್ಯಕ್ತಿ ಶರ್ಮಿಳಾ ರಮೇಶ್ ಮಾರ್ಗದರ್ಶನ ಮಾಡುವ ಮೂಲಕ ಹಲವು ಕವನಗಳು ಹೊರತರುವಲ್ಲಿ ಯಶಸ್ವಿಯಾದರು.

ಸಮಾಜದ ಆಗುಹೋಗುಗಳ ಬಗ್ಗೆ ಸ್ಥಳದಲ್ಲಿಯೇ ನಾಟಕವನ್ನು ವಿದ್ಯಾರ್ಥಿಗಳು ರಚಿಸಿದರು. ತಮ್ಮ ಕುಟುಂಬದೊಳಗಿನ ವಿಷಯಗಳನ್ನೇ ಪ್ರಮುಖ ವಿಷಯವನ್ನಾಗಿರಿಸಿಕೊಂಡು ನಾಟಕವನ್ನು ರಚಿಸಿ, ಸ್ವಯಂ ಪ್ರದರ್ಶನ ಮಾಡಿದರು. ಇವರಿಗೆ ಸಂಪನ್ಮೂಲ ವ್ಯಕ್ತಿ ಗೀತಾಂಜಲಿ ಮಹೇಶ್ ಮತ್ತು ಶಿಕ್ಷಕಿ ಆಶಾ ಮಾರ್ಗದರ್ಶನ ಮಾಡಿದರು.

ಸಾಹಿತಿಯಾದ ನ.ಲ.ವಿಜಯ ಅವರು ತಮ್ಮ ವೆಲ್ಡಿಂಗ್ ಶಾಪ್‌ಗೆ ಬಂದ ಶಿಬಿರಾರ್ಥಿಗಳಿಗೆ ಸ್ವಯಂ ಉದ್ಯೋಗದ ಮಾಹಿತಿ ನೀಡಿದರು. ತಂತ್ರಜ್ಞಾನ ಉಪಯೋಗಿಸಿಕೊಂಡು ದುಡಿದು ಹಣ ಸಂಪಾದಿಸುವ ಬಗ್ಗೆ ಮಕ್ಕಳಿಗೆ ತಿಳಿಸಿಕೊಟ್ಟರು. ಅಂಧ ದಂಪತಿಗಳಾದ ರೂಪಾ ಪರಮೇಶ್ ಮತ್ತು ವಕೀಲರಾದ ಬಿ.ಜೆ ದೀಪಕ್ ಅವರ ಸಂದರ್ಶನ ಮಾಡಿ ಮಾಹಿತಿ ಪಡೆದರು. ಪುಸ್ತಕ ಓದು ವಿಭಾಗದ ಮಕ್ಕಳು ವಿವಿಧ ಪುಸ್ತಕಗಳನ್ನು ಓದಿ ಅದರ ಕುರಿತ ಚಿಕ್ಕ ಪುಸ್ತಕ ರಚನೆ ಮಾಡಿದರು.

ಬುಧವಾರ ಚನ್ನಬಸಪ್ಪ ಸಭಾಂಗಣದಲ್ಲಿ ನಡೆಯುವ ಸಮಾರೋಪ ಸಮಾರಂಭದಲ್ಲಿ ಮಕ್ಕಳ ಸಾಹಿತ್ಯ ಸಂಭ್ರಮದಲ್ಲಿ ಭಾಗವಹಿಸಿ ತಾವು ಕಲಿತ ಎಲ್ಲ ವಿಷಯಗಳನ್ನು ಅತಿಥಿಗಳು ಮತ್ತು ಪೋಷಕರ ಮುಂದೆ ಪ್ರತಿಭಾ ಪ್ರದರ್ಶನ ನಡೆಯಲಿದೆ.

ಕಾರ್ಯಕ್ರಮ ಜಿಲ್ಲಾ ಸಂಯೋಜಕಿ ಸುಮನಾ ಮ್ಯಾಥ್ಯೂ, ಸಹ ಸಂಪನ್ಮೂಲ ವ್ಯಕ್ತಿಗಳಾದ ಎಲ್.ಎಂ.ಪ್ರೇಮ, ಟಿ.ಎಸ್.ವೆಂಕಟೇಶ್, ಭಾರತಿ, ಅಜಿತ್ ಕುಮಾರ್, ಪುಷ್ಪಲತಾ, ಬಸವರಾಜು ಬಡಿಗೇರಿ, ಪದ್ಮಾವತಿ, ರಂಗಸ್ವಾಮಿ, ಲೀಲಾವತಿ, ಜಯಮ್ಮ, ಇಂದಿರಾ, ಕೃಷ್ಣಪ್ಪ, ರತೀಶ್, ಗಣೇಶ್ ಮತ್ತಿತರು ಕಾರ್ಯನಿರ್ವಹಿಸಿದರು.

ಸೋಮವಾರಪೇಟೆ ಚನ್ನಬಸಪ್ಪ ಸಭಾಂಗಣದಲ್ಲಿ ನಡೆಯುತ್ತಿರುವ ಮಕ್ಕಳ ಸಾಹಿತ್ಯ ಸಂಭ್ರಮದಲ್ಲಿ ವಿದ್ಯಾರ್ಥಿಗಳು ರಚಿಸಿದ ಕವನವನ್ನು ವಾಚಿಸಿದರು
ಸೋಮವಾರಪೇಟೆ ಚನ್ನಬಸಪ್ಪ ಸಭಾಂಗಣದಲ್ಲಿ ನಡೆಯುತ್ತಿರುವ ಮಕ್ಕಳ ಸಾಹಿತ್ಯ ಸಂಭ್ರಮದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಕವನ ರಚನೆ ಮಾಡುತ್ತಿರುವುದು.
ಸೋಮವಾರಪೇಟೆ ಚನ್ನಬಸಪ್ಪ ಸಭಾಂಗಣದಲ್ಲಿ ನಡೆಯುತ್ತಿರುವ ಮಕ್ಕಳ ಸಾಹಿತ್ಯ ಸಂಭ್ರಮದ ಕಾರ್ಯಕ್ರಮದಲ್ಲಿ ಮಕ್ಕಳು ನಾಟಕ ರಚನೆ ಮಾಡಲು ಸಂಪನ್ಮೂಲ ವ್ಯಕ್ತಿಗಳು ಮಾರ್ಗದರ್ಶನ ನೀಡಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.