ಮಡಿಕೇರಿ: ‘ವಿಶೇಷಚೇತನರನ್ನು ಕೀಳರಿಮೆಯಿಂದ ನೋಡಬಾರದು. ಜೊತೆಗೆ, ಕಡೆಗಣಿಸಬಾರದು. ಇವರಿಗೆ ಶ್ರೀಸಾಮಾನ್ಯರಂತೆ ಬದುಕುವ ಹಕ್ಕಿದೆ ಎಂಬುದನ್ನು ಅರ್ಥಮಾಡಿಕೊಂಡು ವಿವಿಧ ಕ್ಷೇತ್ರಗಳಲ್ಲಿ ವಿಶೇಷಚೇತನರಿಗೆ ವಿಶೇಷ ಆದ್ಯತೆ ನೀಡುವುದರ ಜೊತೆಗೆ ಪ್ರೋತ್ಸಾಹಿಸಬೇಕು’ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶುಭ ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಯುವ ಜನ ಸೇವಾ ಕ್ರೀಡಾ ಇಲಾಖೆ ಹಾಗೂ ಸ್ವಾಮಿವಿವೇಕಾನಂದ ಯುವ ಸಂಘ, ಕೊಡಗು ಶಾಖೆ ಮತ್ತು ವಿಕಲಚೇತನರ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ವಯಂ ಸೇವಾ ಸಂಸ್ಥೆಗಳು, ವಿಶೇಷ ಮಕ್ಕಳ ಶಾಲೆಗಳ ಸಂಯುಕ್ತ ಆಶ್ರಯದಲ್ಲಿ ‘ಸಮಗ್ರ ಮತ್ತು ಸುಸ್ಥಿರ ಭವಿಷ್ಯಕ್ಕಾಗಿ ವಿಕಲಚೇತನ ವ್ಯಕ್ತಿಗಳಲ್ಲಿ ನಾಯಕತ್ವಕ್ಕೆ ಉತ್ತೇಜನ’ ಎಂಬ ಘೋಷವಾಕ್ಯದೊಂದಿಗೆ ನಗರದ ಓಂಕಾರ ಸದನದಲ್ಲಿ ಮಂಗಳವಾರದ ನಡೆದ ‘ವಿಶ್ವ ವಿಶೇಷಚೇತನರ ದಿನಾಚರಣೆ’ಯಲ್ಲಿ ಅವರು ಮಾತನಾಡಿದರು.
‘ವಿಶೇಷಚೇತನರೂ ಸಹ ವಿಕಲತೆ ಇದೆ ಎಂದು ಕೊರಗದೆ ಸಾಧನೆಯತ್ತ ಮುನ್ನಡೆಯಬೇಕು. ಕೆಲವರು ಹುಟ್ಟಿನಿಂದಲೇ ವಿಶೇಷಚೇತನರಾಗುತ್ತಾರೆ. ಆದರೂ, ಧೃತಿಗೆಡದೆ ಆರೋಗ್ಯ, ಶಿಕ್ಷಣದತ್ತ ಗಮನಹರಿಸಿ ಹೆಚ್ಚಿನ ಸಾಧನೆ ಮಾಡಲು ಪ್ರಯತ್ನಿಸಬೇಕು’ ಎಂದು ಅವರು ಹೇಳಿದರು.
ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ನಂಜುಂಡಯ್ಯ ಮಾತನಾಡಿ, ‘ವಿಕಲಚೇತನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಜಿಲ್ಲೆಯಾದ್ಯಂತ 30ಕ್ಕೂ ಹೆಚ್ಚು ಆರೋಗ್ಯ ಶಿಬಿರಗಳನ್ನು ಏರ್ಪಡಿಸಲಾಗಿದೆ. ಮುಂದೆಯೂ ಸಹ ಆರೋಗ್ಯ ಶಿಬಿರ ನಡೆಯಲಿದ್ದು, ವಿಶೇಷಚೇತನರು ಪ್ರಮಾಣಪತ್ರ ಪಡೆದು ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಮುಂದಾಗಬೇಕು’ ಎಂದರು.
ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಅಧಿಕಾರಿ ಕೆ.ಜಿ.ವಿಮಲಾ ಮಾತನಾಡಿ, ‘ವಿಶೇಷಚೇತನರನ್ನು ಸಮಾಜದ ಮುಖ್ಯವಾಹಿನಿಗೆ ತರುವಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು, ಸಮಾನ ಅವಕಾಶ ಹಾಗೂ ಸೌಲಭ್ಯ ಕಲ್ಪಿಸಲಾಗುತ್ತಿದೆ’ ಎಂದರು.
ವಿಶೇಷಚೇತನರ ಸಂಘದ ಅಧ್ಯಕ್ಷರಾದ ಜೆ.ಎ.ಮಹೇಶ್ವರ ಮಾತನಾಡಿ, ‘ವಿಕಲಚೇತನರ ನೋವಿಗೆ ಎಲ್ಲರೂ ಸ್ಪಂದಿಸಬೇಕು’ ಎಂದು ಕೋರಿದರು.
ಸ್ವಾಮಿ ವಿವೇಕಾನಂದ ಯೂತ್ ಮೂವ್‍ಮೆಂಟ್‍ನ ನಿರ್ದೇಶಕಿ ಎಸ್.ಆರ್.ದೀಪಾಶ್ರೀ, ಮುಖಂಡರಾದ ಗಿರೀಶ್, ಗೀತಾ, ಶಿವರಾಜ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.