ನಾಪೋಕ್ಲು: ನಿರ್ಲಕ್ಷ್ಯಿತ ಅಳಿವಿನಂಚಿನ ಸಮುದಾಯಗಳ ರಕ್ಷಣೆ ನಾಗರಿಕ ಸಮಾಜದ ಹೊಣೆಯಾಗಬೇಕು ಎಂದು ಕೊಡವ ಭಾಷಿಕ ಸಮುದಾಯಗಳ ಕೂಟದ ಅಧ್ಯಕ್ಷ ಮೇಚಿರ ಸುಭಾಷ್ ನಾಣಯ್ಯ ಅಭಿಪ್ರಾಯಪಟ್ಟರು.
ಹಾಕತ್ತೂರಿನಲ್ಲಿ ನಡೆದ ಕೊಡಗು ಮೂಲ ನಿವಾಸಿ ಅರಮನೆಪಾಲೆ ಸಮಾಜದ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕೊಡಗಿನ ಹಲವು ಸಮುದಾಯಗಳು ಅಳಿವಿನಂಚಿನಲ್ಲಿ, ಅವುಗಳಲ್ಲಿ ‘ಅರಮನೆಪಾಲೆ’ ಸಮುದಾಯವೂ ಒಂದು. ಕೊಡವ ಸಂಸ್ಕೃತಿಯ ಮೂಲ ಬೇರುಗಳನ್ನು ಹೊಂದಿರುವ ಈ ಸಮುದಾಯವನ್ನು ಸರ್ಕಾರ ಇಲ್ಲಿಯವರೆಗೆ ಗುರುತಿಸದೆ ಇರುವುದು ವಿಪರ್ಯಾಸ. ನಿರ್ಲಕ್ಷ್ಯಕ್ಕೆ ಒಳಗಾಗುವ ಸಮುದಾಯಗಳ ರಕ್ಷಣೆಗೆ ಕೊಡವ ಭಾಷಿಕ ಸಮುದಾಯಗಳ ಕೂಟ ಎಲ್ಲಾ ರೀತಿಯ ಸಲಹೆ, ಸಹಕಾರ ನೀಡಲು ಮತ್ತು ಅಗತ್ಯ ಕ್ರಮ ಕೈಗೊಳ್ಳಲು ಸದಾ ಸಿದ್ಧವಿದೆ ಎಂದರು.ಅರಮನೆಪಾಲೆ ಸಮುದಾಯದ ಸಾಂಸ್ಕೃತಿಕ ಆಚರಣೆಗಳು ಅಳಿದರೆ ಒಂದು ಮೂಲ ಸಂಸ್ಕೃತಿಯೇ ಇಲ್ಲದಾಗುವ ಅಪಾಯವಿದೆ ಎಂದರು.
ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ ನ ಮಡಿಕೇರಿ ತಾಲ್ಲೂಕು ಘಟಕದ ಅಧ್ಯಕ್ಷ ಪಿ.ಕೆ.ಮಂದಣ್ಣ , ಪ್ರಾಸ್ತಾವಿಕವಾಗಿ ಮಾತನಾಡಿ, ಪುರಾತನ ಅರಮನೆಪಾಲೆ ಸಮುದಾಯ ವಿನಾಶದ ಹಾದಿಯಲ್ಲಿದೆ. ಬ್ರಿಟಿಷರ ಅವೈಜ್ಞಾನಿಕ ನೀತಿಗಳನ್ನೇ ಸ್ವತಂತ್ರ ಭಾರತದ ಸರ್ಕಾರಗಳೂ ಅನುಸರಿಸುತ್ತಿವೆ ಎಂದರು.
ಸಮಾಜದ ಪ್ರಧಾನ ಸಂಚಾಲಕ ಅರಮನೆಪಾಲೆರ ಮಂಜುನಾಥ್ ಜಿ. ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಅರಮನೆಪಾಲೆರ ದೇವಯ್ಯ ಕಕ್ಕಬ್ಬೆ, ಮಾಜಿ ಸೈನಿಕ ಅರಮನೆಪಾಲೆರ ಸುಭಾಷ್ ಬಾಳುಗೋಡು, ಅರಮನೆಪಾಲೆರ ಶಿವಪ್ಪ ಕಂಡಿಮಕ್ಕಿ, ಅರಮನೆಪಾಲೆ ಸಮಾಜದ ಕಾರ್ಯದರ್ಶಿ ಅರಮನೆಪಾಲೆರ ದೇವಯ್ಯ ಹಾಕತ್ತೂರು, ವಿವಿಧ ಗ್ರಾಮ ಸಮಿತಿ, ಸಮಾಜದ ಕ್ರೀಡಾ ಸಮಿತಿ, ಮರಣ ಧನ ಸಹಾಯ ನಿಧಿ ಸಮಿತಿ, ಕ್ರಿಕೆಟ್ ಟೂರ್ನಿ ಸಮಿತಿಯ ಪದಾಧಿಕಾರಿಗಳು ಹಾಗೂ ಸಮಾಜದ ಸದಸ್ಯರು ಉಪಸ್ಥಿತರಿದ್ದರು.
ರಘು ತಂಡ ಪ್ರದರ್ಶಿಸಿದ ಹಾಕತ್ತೂರು ಅರಮನೆಪಾಲೆ ಜನಪದ ಪುತ್ತರಿ ಆಚರಣೆ, ಕೋರಕಳಿ ಪ್ರಮುಖ ಆಕರ್ಷಣೆಯಾಗಿತ್ತು. ಡಿಂಪಲ್ ಪೇರೂರು, ಯಶಸ್ವಿನಿ ಹಾಗೂ ವರ್ಷಾ ಅವರ ನೃತ್ಯ ವೀಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.
ಡಳಿತ ಮಂಡಳಿ: ಸಮುದಾಯದ ನೂತನ ಆಡಳಿತ ಮಂಡಳಿಯನ್ನು ರಚಿಸಲಾಗಿದ್ದು ಅಧ್ಯಕ್ಷರಾಗಿ ದೇವಯ್ಯ ಕಕ್ಕಬ್ಬೆ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಸುಜು ದೇವಯ್ಯ ಬಾಳುಗೋಡು, ಕಾರ್ಯದರ್ಶಿಯಾಗಿ ಅ ದೇವಯ್ಯ ಹಾಕತ್ತೂರು, ಖಜಾಂಚಿಯಾಗಿ ಸುಭಾಷ್ ಬಾಳುಗೋಡು ನೇಮಕಗೊಂಡರು. ನಿರ್ದೇಶಕರಾಗಿ ದಿನೇಶ್ ಬಿಳಿಗೇರಿ, ಲೀನಾಶಿವಪ್ಪ ಕಂಡಿಮಕ್ಕಿ, ದಮಯಂತಿ ಬಿಳಿಗೇರಿ, ಭಾರತಿ ಚೆಯ್ಯಂಡಾಣೆ, ಸರಿತಾ ನಾಗಬಾಣೆ, ಯತೀಶ್ ಬಿದ್ದಪ್ಪ ಬಾಳುಗೋಡು, ಮಧು ಕುಂಜಿಲ, ಕಕ್ಕಬ್ಬೆ, ಗಣೇಶ್ ಚೆಯ್ಯಂಡಾಣೆ, ವಿಶ್ವನಾಥ್ ಪೇರೂರು, ಶಿವಪ್ಪ ಚೇಲಾವರ, ಮಹೇಶ್ ಮಾದಾಪುರ ಅವರನ್ನು ಆಯ್ಕೆ ಮಾಡಲಾಯಿತು.
ಕೊಡವ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿರುವ ಅರಮನೆಪಾಲೆ ಸಮುದಾಯಕ್ಕೆ ಕೊಡಗಿನಲ್ಲಿ ಜಾತಿಯಾಗಿ ಮಾನ್ಯತೆಯೇ ಇಲ್ಲ. ಕೇವಲ ಓಟು ಬ್ಯಾಂಕ್ ರಾಜಕಾರಣಕ್ಕಾಗಿ ಇವರನ್ನು ಒತ್ತಾಯ ಪೂರ್ವಕ ಯಾವುದೋ ಜಾತಿಗೆ ಸೇರಿಸಲಾಗುತ್ತಿದೆ. ಕೊಡವ ಸಂಸ್ಕೃತಿ ಆಚಾರ ವಿಚಾರ ಪದ್ಧತಿ ಪರಂಪರೆಯ ಆಚರಣೆಗೆ ಸಮುದಾಯ ಭಯ ಪಡುವಂತಾಗಿದೆ. ಇದು ನಾಗರಿಕ ಸಮಾಜದ ದುಸ್ಥಿತಿ ಎಂದು ಪಿ.ಕೆ.ಮಂದಣ್ಣ ವಿಷಾದ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.