ಮಡಿಕೇರಿ: ಪ್ರಸ್ತುತ ನಡೆಯಲಿರುವ ರಾಜ್ಯ ಸರ್ಕಾರದ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಗಣತಿಯಲ್ಲಿ ಹಾಗೂ ಮುಂದಿನ ವರ್ಷ ಆರಂಭಗೊಳ್ಳಲಿರುವ ಕೇಂದ್ರ ಸರ್ಕಾರದ ಜಾತಿ ಗಣತಿಯಲ್ಲಿ ಜಾತಿಯ ಕಾಲಂನಲ್ಲಿ ‘ಗೌಡ’ ಎಂದು, ಉಪಜಾತಿ ಅರೆಭಾಷೆ ಗೌಡ ಮತ್ತು ಮಾತೃಭಾಷೆ ಅರೆಭಾಷೆ ಎಂದು ಎಲ್ಲಾ ಅರೆಭಾಷೆ ಗೌಡರು ನಮೂದಿಸುವಂತೆ ಕೊಡಗು ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷ ಆನಂದ ಕರಂದ್ಲಾಜೆ ಅವರು ಮನವಿ ಮಾಡಿದ್ದಾರೆ.
ಮೂಲತಃ ಅರೆಭಾಷೆ ಗೌಡರು ಒಕ್ಕಲಿಗ ಸಮುದಾಯದ ಭಾಗವಾಗಿದ್ದರೂ ಅರೆಭಾಷೆ ಗೌಡರ ಶೈಕ್ಷಣಿಕ, ಕಂದಾಯ ಸೇರಿದಂತೆ ಎಲ್ಲಾ ಮೂಲ ದಾಖಲೆಗಳಲ್ಲಿ ಗೌಡ ಎಂದೇ ನಮೂದಾಗಿರುತ್ತದೆ. ಈಗ ಬದಲಾಯಿಸಿ ಮಾಹಿತಿ ನೀಡಿದರೆ ಮುಂದಿನ ದಿನಗಳಲ್ಲಿ ತೊಂದರೆ ಅನುಭವಿಸುವ ಸಾಧ್ಯತೆ ದಟ್ಟವಾಗಿದೆ ಎಂದು ತಿಳಿಸಿದ್ದಾರೆ.
ಈ ಕಾರಣದಿಂದ ಬೆಂಗಳೂರು, ಮೈಸೂರು, ಮಡಿಕೇರಿ ಮತ್ತು ಪುತ್ತೂರಿನಲ್ಲಿ ಸಮುದಾಯದ ಸಭೆಗಳನ್ನು ನಡೆಸಿ, ಕೊಡಗಿನ ಎಲ್ಲಾ ಗೌಡ ಸಮಾಜಗಳೊಂದಿಗೆ ಸಾಧಕ ಬಾಧಕಗಳನ್ನು ಚರ್ಚಿಸಿ ಈ ನಿರ್ಣಯ ಕೈಗೊಳ್ಳಲಾಗಿದೆ. ಗಣತಿಯಲ್ಲಿ ತಮ್ಮ ಜಾತಿಗೆ ಇರುವ ಇನ್ನೊಂದು ಹೆಸರು ಎಂಬ ಕಾಲಂ ಸಹ ಇದ್ದು, ಅಲ್ಲಿ ಒಕ್ಕಲಿಗ ಎಂದು ನಮೂದಿಸಲು ಕೋರಿದ್ದಾರೆ.
ಹಾಗೆಯೇ, ಎಲ್ಲ ಮೂಲ ದಾಖಲೆಗಳನ್ನು ಒಕ್ಕಲಿಗ ಎಂದು ಹೊಂದಿರುವ ಅರೆಭಾಷೆ ಗೌಡ ಸಮುದಾಯದವರು ಇದ್ದಲ್ಲಿ ಅವರು ಜಾತಿ ಒಕ್ಕಲಿಗ, ಉಪಜಾತಿ ಅರೆಭಾಷೆ ಗೌಡ ಮತ್ತು ಮಾತೃಭಾಷೆ ಅರೆಭಾಷೆ ಎಂದು ನಮೂದಿಸಲು ಯಾವುದೇ ಅಭ್ಯಂತರ ಇರುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಉಪಜಾತಿಯಲ್ಲಿ ಅರೆ ಭಾಷೆಗೌಡ ಎಂಬುವುದನ್ನು ಪ್ರತ್ಯೇಕ ಕಾಲಂನಲ್ಲಿ ಸೇರಿಸಬೇಕೆಂದು ಕೊಡಗು ಗೌಡ ಸಮಾಜಗಳ ಒಕ್ಕೂಟ ಈಗಾಗಲೇ ಸರ್ಕಾರಕ್ಕೆ ಮನವಿ ಸಲ್ಲಿಸಿದೆ. ಅದು ತಕ್ಷಣಕ್ಕೆ ಕಾರ್ಯಗತವಾಗದೇ ಇದ್ದರೂ ಇತರೆ ಎನ್ನುವ ಕಾಲಂನಲ್ಲಿ ಅರೆ ಭಾಷೆಗೌಡ ಎಂದು ಬರೆಸಲು ಅವಕಾಶವಿದೆ. ಧರ್ಮದ ಕಾಲಂನಲ್ಲಿ ಹಿಂದೂ ಎಂದು ಬರೆಸಲು ಅರೆಭಾಷೆ ಗೌಡರಿಗೆ ಯಾವುದೇ ಸಮಸ್ಯೆ ಇಲ್ಲದಿರುವುದರಿಂದ, ಸಮುದಾಯ ಬಾಂಧವರು ಈ ಎಲ್ಲಾ ವಿವರಗಳನ್ನು ಗಮನದಲ್ಲಿರಿಸಿಕೊಂಡು ಕಡ್ಡಾಯವಾಗಿ ಎರಡೂ ಗಣತಿಯಲ್ಲಿ ಪಾಲ್ಗೊಂಡು ಸದೃಢ ರಾಷ್ಟ್ರನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ಅವರು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.