ADVERTISEMENT

ಶವ ಸುಟ್ಟರೂ ಕೊಡಗಿನ ಪೊಲೀಸರು ಬಿಡಲಿಲ್ಲ!

ತೆಲಂಗಾಣ, ಕೇರಳ, ಉತ್ತರಭಾರತ ಸೇರಿದಂತೆ ದೇಶದ ನಾನಾ ಭಾಗಗಳಲ್ಲಿ ಕಾರ್ಯಾಚರಣೆ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2024, 16:04 IST
Last Updated 26 ಅಕ್ಟೋಬರ್ 2024, 16:04 IST
ಸುಂಟಿಕೊಪ್ಪದ ಸಮೀಪದ ಸುಟ್ಟ ಸ್ಥಿತಿಯಲ್ಲಿ ಶವ ಸಿಕ್ಕ ಜಾಗದಲ್ಲಿ ಸುಳಿವಿಗಾಗಿ ಪೊಲೀಸರು ಹುಡುಕಾಟ ನಡೆಸಿದರು
ಸುಂಟಿಕೊಪ್ಪದ ಸಮೀಪದ ಸುಟ್ಟ ಸ್ಥಿತಿಯಲ್ಲಿ ಶವ ಸಿಕ್ಕ ಜಾಗದಲ್ಲಿ ಸುಳಿವಿಗಾಗಿ ಪೊಲೀಸರು ಹುಡುಕಾಟ ನಡೆಸಿದರು   

ಮಡಿಕೇರಿ: ಪತ್ತೆಯಾಗಿದ್ದು ಸುಟ್ಟು ಹೋದ ಸ್ಥಿತಿಯಲ್ಲಿದ್ದ ಮೃತದೇಹ, ತನಿಖೆಗೆ ರಚಿಸಿದ್ದು 22 ಮಂದಿ ಪೊಲೀಸ್‌ ತಂಡ, ದೇಶದ ಅನೇಕ ಭಾಗಗಳಲ್ಲಿ ಕಾರ್ಯಾಚರಣೆ, 14 ದಿನಗಳಲ್ಲಿ ಆರೋಪಿಗಳ ಬಂಧನ... ಹೀಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಅವರು ಜಿಲ್ಲೆಯಲ್ಲಿ ನಡೆದ ಅಪರೂಪದ ಅಪರಾಧ ಪ್ರಕರಣವೊಂದನ್ನು ಬಿಚ್ಚಿಟ್ಟರು.

ಅ.8ರಂದು ಸುಂಟಿಕೊಪ್ಪದ ಸಮೀಪ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ ಮೃತದೇಹ ಹೈದರಾಬಾದ್‌ ನಿವಾಸಿ ರಮೇಶ್‌ಕುಮಾರ್ (54) ಅವರದ್ದು. ಅವರನ್ನು ಕೊಂದ ಆರೋಪದ ಮೇರೆಗೆ ಅವರ 2ನೇ ಪತ್ನಿ ತೆಲಂಗಾಣದ ನಿಹಾರಿಕಾ (29) ಆಕೆಯ ಗೆಳೆಯರಾದ ಹರಿಯಾಣದ ಅಂಕೂರ್ ರಾಣಾ (30) ಹಾಗೂ ಬೆಂಗಳೂರಿನ ಪಶುವೈದ್ಯ ನಿಖಿಲ್ ಮೈರೆಡ್ಡಿ (28) ಅವರನ್ನು ಪೊಲೀಸರು ಬಂಧಿಸಿದ್ದಾರೆ.

‘ಶವ ಸುಟ್ಟ ಆಸುಪಾಸಿನ ಪ್ರದೇಶಗಳ ಸಿಸಿಟಿವಿ ದೃಶ್ಯಾವಳಿಗಳಲ್ಲಿ ಬೆಂಚ್ ಕಾರೊಂದು ಪತ್ತೆಯಾಯಿತು. ಅದು ಕೊಡಗಿಗೆ ಬಂದ ಹಾದಿಯ ಸುಮಾರು 500ಕ್ಕೂ ಅಧಿಕ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಾ ಹೋದಂತೆ ಆ ಕಾರು ರಮೇಶ್ ಅವರದ್ದು ಎಂಬುದು ಖಚಿತಗೊಂಡಿತು. ನಂತರ, ತನಿಖೆ ಕೈಗೊಂಡಾಗ ಆರೋಪಿಗಳ ಸುಳಿವೂ ಪತ್ತೆಯಾಯಿತು’ ಎಂದು ಎಸ್.ಪಿ.ರಾಮರಾಜನ್ ಹೇಳಿದರು.

ADVERTISEMENT

‘ಈ ಮೊದಲೇ ಇಬ್ಬರನ್ನು ವಿವಾಹವಾಗಿದ್ದ ಆರೋಪಿ ನಿಹಾರಿಕಾಗೆ ರಮೇಶ್‌ 3ನೇ ಪತಿ. ಮೊದಲ ಪತಿಗೆ ವಿಚ್ಚೇದನ ನೀಡಿ ಹರಿಯಾಣದಲ್ಲಿ ವ್ಯಕ್ತಿಯೊಬ್ಬರನ್ನು 2ನೇ ವಿವಾಹವಾಗಿ ವಂಚಿಸಿದ್ದಳು. ಈ ಪ್ರಕರಣದಲ್ಲಿ ಅಲ್ಲಿ ಜೈಲುವಾಸ ಅನುಭವಿಸಿ  ಬಳಿಕ ಹೈದರಾಬಾದ್‌ನಲ್ಲಿ ರಮೇಶ್‌ಕುಮಾರ್ ಅವರನ್ನು 3ನೇ ವಿವಾಹವಾದಳು. ನಂತರ, ಬೆಂಗಳೂರಿಗೆ ಬಂದು ಪ್ರತಿಷ್ಠಿತ ಕಂಪನಿಯೊಂದರಲ್ಲಿ ಸೇರಿ, ರಾಮಮೂರ್ತಿನಗರದ ಪಶು ವೈದ್ಯ ಡಾ.ನಿಖಿಲ್ ಜೊತೆ ಸ್ನೇಹ ಗಳಿಸಿದಳು. ಈ ಮಧ್ಯೆ ತನ್ನ ಆಸ್ತಿ ಮಾರಾಟದಿಂದ ಬರಬೇಕಿದ್ದ ₹ 8 ಕೋಟಿ ಹಣ ಕೊಡಲಿಲ್ಲ ಎಂಬ ಕಾರಣಕ್ಕೆ ತೆಲಂಗಾಣದಲ್ಲಿ ರಮೇಶ್‌ ಅವರನ್ನು ಇತರ ಆರೋಪಿಗಳೊಂದಿಗೆ ಕೊಂದು, ಸುಂಟಿಕೊಪ್ಪದ ಸಮೀಪ ಬೆಂಕಿ ಹಚ್ಚಿದಳು’ ಎಂದು ಅವರು ವಿವರಿಸಿದರು.

ಡಿವೈಎಸ್‌ಪಿ ಆರ್‌.ವಿ.ಗಂಗಾಧರಪ್ಪ ನೇತೃತ್ವದಲ್ಲಿ ಸಿಪಿಐಗಳಾದ ರಾಜೇಶ್, ಮುದ್ದುಮಾದೇವ, ಪಿಎಸ್‌ಐಗಳಾದ ಚಂದ್ರಶೇಖರ್, ಮೋಹನ್‌ರಾಜ್, ಭಾರತೀ, ಎಎಸ್‌ಐಗಳಾದ ತೀರ್ಥಕುಮಾರ್, ಸುರೇಶ್, ವೆಂಕಟೇಶ್, ಕಾನ್‌ಸ್ಟೆಬಲ್‌ಗಳಾದ ಉದಯಕುಮಾರ್, ಆಶಾ, ಸುದೀಶ್‌ಕುಮಾರ್, ರಮೇಶ್, ರಂಜಿತ್, ಬಾಬು, ಮಹೇಂದ್ರ, ಸಂದೇಶ್, ಜಗದೀಶ್, ಎಸ್.ಪ್ರವೀಣ, ನಿಶಾಂತ್, ರಾಜೇಶ್‌, ಬಿ.ಕೆ.ಪ್ರವೀಣ್ ಕಾರ್ಯಾಚರಣೆ ನಡೆಸಿದ್ದರು.

ಬುದ್ದಿವಂತೆ ಆರೋಪಿ ನಿಹಾರಿಕಾ!

‘ಆರೋ‍ಪಿ ನಿಹಾರಿಕಾ ಉತ್ತಮ ಅಂಕಗಳನ್ನು ಪಡೆದಿದ್ದ ಬುದ್ದಿವಂತ ಮಹಿಳೆಯಾಗಿದ್ದಾಳೆ. ವಿವಿಧ ಎಂಜಿನಿಯರಿಂಗ್ ಕೋರ್ಸ್‌ಗಳನ್ನು ಮಾಡಿ ಪ್ರತಿಷ್ಠಿತ ಕಂಪನಿಗಳಲ್ಲಿ ಹೆಚ್ಚಿನ ಸಂಬಳ ಪಡೆಯುವ ಕೆಲಸದಲ್ಲಿದ್ದಳು. ಬೆಂಗಳೂರಿನಲ್ಲಿ ತನ್ನ ನಾಯಿಮರಿಗೆ ಚಿಕಿತ್ಸೆ ನೀಡುವ ಸಂದರ್ಭದಲ್ಲಿ ಪಶುವೈದ್ಯ ನಿಖಿಲ್ ಪರಿಚಿತನಾಗಿ ಇಬ್ಬರೂ ಅಲ್ಲಿ ‘ಸಾಕುನಾಯಿಗಳ ಆರೈಕೆ ಕೇಂದ್ರ’ ನಡೆಸುತ್ತಿದ್ದರು’ ಎಂದು ಎಸ್.ಪಿ.ರಾಮರಾಜನ್ ತಿಳಿಸಿದರು.

‘ದೇಶದ ಯಾವುದೇ ಮೂಲೆಯಲ್ಲಿದ್ದರೂ ಕೊಡಗಿನ ಪೊಲೀಸರು ಬಿಡುವುದಿಲ್ಲ’

‘ಆರೋಪಿ ಅಂಕೂರ್‌ರಾಣಾ ಹರಿದ್ವಾರದಲ್ಲಿ ಅಡಗಿ ಕುಳಿತಿದ್ದ. ಇಲ್ಲಿನ ಪ್ರಕರಣದ ಸಂಪೂರ್ಣ ಮಾಹಿತಿಯನ್ನೂ ಕಲೆ ಹಾಕುತ್ತಿದ್ದ. ಆದರೆ ನಮ್ಮ ತಂಡ ಆತನನ್ನು ಯಶಸ್ವಿಯಾಗಿ ಬಂಧಿಸುವಲ್ಲಿ ಸಫಲವಾಯಿತು. ಇಲ್ಲಿ ಅಪರಾಧ ಕೃತ್ಯ ಎಸಗಿ ದೇಶದ ಯಾವುದೇ ಮೂಲೆಯಲ್ಲಿ ಅಡಗಿ ಕುಳಿತರೂ ಕೊಡಗಿನ ಪೊಲೀಸರು ಬಿಡುವುದಿಲ್ಲ’ ಎಂದು ಎಸ್.ಪಿ.ರಾಮರಾಜನ್ ಎಚ್ಚರಿಕೆ ನೀಡಿದರು.

ಕಾರ್ಯಾಚರಣೆ ತಂಡವನ್ನು ಶನಿವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಅವರು ಅಭಿನಂದಿಸಿದರು
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಹಾಗೂ ಕಾರ್ಯಾಚರಣೆ ನಡೆಸಿದ ತಂಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.