
ಶನಿವಾರಸಂತೆ: ಇಂದಿನ ಆಧುನಿಕತೆಯ ಭರಾಟೆಯಲ್ಲಿ ಗುಡುಗಳಲೆ ಜಾನುವಾರು ಜಾತ್ರೆಯ ವೈಭವ ಮರೆಯಾಗುತ್ತಿದೆ ಎಂದು ಮುದ್ದಿನಕಟ್ಟೆ ಮಠದ ಅಭಿನವ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಇಲ್ಲಿಗೆ ಸಮೀಪದ ಹಂಡ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಡುಗಳಲೆಯ 82ನೇ ವರ್ಷದ ಶ್ರೀ ಜಯದೇವ ಜಾನುವಾರುಗಳ ಜಾತ್ರೆಯ ಉದ್ಘಾಟನೆ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
‘ಜಾತ್ರೆಗಳು ಸಮುದಾಯ, ಆಚರಣೆ, ಪರಂಪರೆಯನ್ನು ಸಮ್ಮಿಲನಗೊಳಿಸುವ ವೇದಿಕೆ’ ಎಂದು ಪ್ರತಿಪಾದಿಸಿದ ಅವರು, ಜಾತ್ರೆಯನ್ನು ಉಳಿಸಿಕೊಂಡು ಹೋಗಬೇಕು ಎಂದರು.
ಕಲ್ಲಳ್ಳಿ ಮಠದ ರುದ್ರಮುನಿ ಸ್ವಾಮೀಜಿ ಮಾತನಾಡಿ, ‘ಜಾತ್ರೆಯು ಮನರಂಜನೆಗೆ ಮಾತ್ರವೇ ಸೀಮಿತವಾಗಿಲ್ಲ. ರೈತರ ಉಪಯೋಗಕ್ಕಾಗಿ ಸ್ಥಾಪಿಸಿದ್ದ ಜಾನುವಾರುಗಳ ಜಾತ್ರೆಯನ್ನು ಉಳಿಸಿಕೊಳ್ಳಲು ರೈತರು ಜಾನುವಾರುಗಳ ಸಾಕಾಣಿಕೆಯನ್ನು ಮಾಡುವುದರ ಮೂಲಕ ಈ ಜಾತ್ರೆಯ ಹಿಂದಿನ ವೈಭವವನ್ನು ಮತ್ತೆ ಮರುಕಳುಹಿಸುವಂತೆ ಮಾಡಬೇಕು’ ಎಂದು ಹೇಳಿದರು.
ಶನಿವಾರಸಂತೆ ಪೊಲೀಸ್ ಠಾಣಾಧಿಕಾರಿ ಚಂದ್ರು ಜಾತ್ರೆಯನ್ನು ಉದ್ಘಾಟಿಸಿ ಮಾತನಾಡಿ, ‘ಜಾತ್ರೋತ್ಸವಗಳು ಸಾರ್ವಜನಿಕವಾಗಿ ನಡೆಯುವುದರಿಂದ ಇಂತಹ ಉತ್ಸವಗಳು ಸಾಂಗವಾಗಿ ನಡೆಯಬೇಕಾಗುತ್ತದೆ. ಜಾತ್ರೆ ಯಶಸ್ವಿಗೊಳ್ಳಬೇಕಾದರೆ ಪೊಲೀಸ್ ರಕ್ಷಣೆಯೂ ಬೇಕಾಗುತ್ತದೆ. ಸಾರ್ವಜನಿಕರು, ಪೊಲೀಸರಿಗೆ ಸಹಕಾರ ನೀಡಿದರೆ ಜಾತ್ರೋತ್ಸವವು ಯಶಸ್ವಿಗೊಳ್ಳುತ್ತದೆ. ಈ ನಿಟ್ಟಿನಲ್ಲಿ ಸಾರ್ವಜನಿಕರು ಪೊಲೀಸರಿಗೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಹಿರಿಯ ಮುಖಂಡ ಎಸ್.ಕೆ.ವೀರಪ್ಪ ಹಿಂದಿನ ಜಾತ್ರೆಯ ವೈಭವದ ಬಗ್ಗೆ ಮಾತನಾಡಿದರು.
ಜಾತ್ರಾ ಸಮಿತಿ ಅಧ್ಯಕ್ಷೆ ಚೈತ್ರಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಸಮಾರಂಭದಲ್ಲಿ ಹಂಡ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಧಾ ಈರೇಶ್, ದುಂಡಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಭವಾನಿ ಗುರು, ಮುಖಂಡರಾದ ಮಾಜಿ ತಾಲ್ಲೂಕು ಪಂಚಾಯಿತಿ ಸದಸ್ಯ ಕುಶಾಲಪ್ಪ, ಕೆ.ಬಿ.ಹಾಲಪ್ಪ, ಡಿ.ಬಿ.ಧರ್ಮಪ್ಪ, ಹಂಡ್ಲಿ ಕೃಷಿ ಪತ್ತಿನ ಸಂಘದ ಅಧ್ಯಕ್ಷ ಚಿದಾನಂದ್, ಮುಖಂಡರಾದ ಎಸ್.ಎಂ.ಉಮಾಶಂಕರ್, ಜಾತ್ರಾ ಸಮೀತಿ ಕಾರ್ಯದರ್ಶಿ ಎಚ್.ಎಂ.ವಿನಯ್, ಎಚ್.ಎನ್.ಸಂದೀಪ್ ಭಾಗವಹಿಸಿದ್ದರು.
ಗುಡುಗಳಲೆ ಜಂಕ್ಸನ್‍ನಲ್ಲಿರುವ ಬಸವೇಶ್ವರ ದೇವಸ್ಥಾನದಿಂದ ಹೊರಟ ಅಡ್ಡಪಲ್ಲಕ್ಕಿ ಮೆರವಣಿಯು ವಾದ್ಯಗೋಷ್ಠಿ, ವೀರಗಾಸೆ ಕುಣಿತದೊಂದಿಗೆ ಜಾತ್ರಾ ಮೈದಾನವನ್ನು ತಲುಪಿತು.
ಜಾತ್ರೋತ್ಸವಗಳು ಧಾರ್ಮಿಕ ಆಧ್ಯಾತ್ಮಿಕ ಚಿಂತನೆಗೂ ಮತ್ತು ಜನರು ಸುಖ ದುಖಃಗಳನ್ನು ವಿನಿಮಯ ಮಾಡಿಕೊಳ್ಳುವ ವೇದಿಕೆಯಾಗುತ್ತದೆರುದ್ರಮುನಿ ಸ್ವಾಮೀಜಿ ಕಲ್ಲಳ್ಳಿ ಮಠ
‘ಜಾನುವಾರು ಸಾಕಾಣಿಕೆ ಕುಂಠಿತ’
ರೈತರು ಜಾನುವಾರುಗಳನ್ನು ಖರೀದಿಸಲು ಮತ್ತು ಮಾರಾಟ ಮಾಡುವ ಸಲುವಾಗಿ ಈ ಭಾಗದಲ್ಲಿ 82 ವರ್ಷಗಳ ಹಿಂದೆ ಹಿರಿಯರು ಜಾನುವಾರುಗಳ ಜಾತ್ರೆಯನ್ನು ಆರಂಭಿಸಿದರು. ಜೊತೆಗೆ ಜನರಿಗೆ ಮನರಂಜನೆಯನ್ನು ಒದಗಿಸಿಕೊಡಲು ಜಾತ್ರೆಯನ್ನು ವೈಭವದಿಂದ ನಡೆಸಲಾಗುತ್ತಿತ್ತು. ಆದರೆ ಈಗಿನ ವೈಜ್ಞಾನಿಕ ಮತ್ತು ಆಧುನಿಕ ಭರಾಟೆಯಲ್ಲಿ ರೈತರು ವ್ಯವಸಾಯಕ್ಕೆ ಯಂತ್ರೋಪಕರಣಗಳ ಮೊರೆ ಹೋಗುತ್ತಿರುವುದರಿಂದ ಜಾನುವಾರುಗಳ ಸಾಕಾಣಿಕೆ ಕಡಿಮೆಯಾಗುತ್ತಿದೆ. ಇದರಿಂದ ಈ ಜಾತ್ರೆಯ ಹಿಂದಿನ ವೈಭವ ಮರೆಯಾಗುತ್ತಿರುವುದು ಬೇಸರದ ವಿಷಯವಾಗಿದೆ. ಬದಲಾಗುತ್ತಿರುವ ಕಾಲಘಟ್ಟದಲ್ಲಿ ಬಾಂಧವ್ಯಗಳನ್ನು ಬೆಸೆಯುವ ಸಮುದಾಯದ ಸಮ್ಮಿಲನಗಳ ಕೊರತೆಯಿಂದಾಗಿ ಆಚರಣೆ ಪರಂಪರೆ ಜಾತ್ರೋತ್ಸವಗಳು ಕಡಿಮೆಯಾಗುತ್ತಿರುವ ನಿಟ್ಟಿನಲ್ಲಿ ಇಂದಿನ ಯುವ ಪೀಳಿಗೆಯವರು ಆಚರಣೆ ಪರಂಪರೆಯನ್ನು ರೂಢಿಸಿಕೊಂಡು ಜಾತ್ರೋತ್ಸವಗಳನ್ನು ಉಳಿಸಿಕೊಳ್ಳಬೇಕು ಎಂದು ಸಿದ್ದಲಿಂಗಶಿವಾಚಾರ್ಯ ಸ್ವಾಮೀಜಿ ಸಲಹೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.