ಮಡಿಕೇರಿ: ನಕಲಿ ಚಿನ್ನವನ್ನು ಅಡಮಾನ ಇರಿಸಿ ಸಾಲ ಪಡೆದುಕೊಂಡು ವಂಚಿಸುವ ವ್ಯವಸ್ಥಿತ ಜಾಲವನ್ನು ಭೇದಿಸಿರುವ ಕೊಡಗು ಜಿಲ್ಲಾ ಪೊಲೀಸರು ಒಟ್ಟು 12 ಆರೋಪಿಗಳನ್ನು ಹೆಡೆಮುರಿ ಕಟ್ಟುವಲ್ಲಿ ಸಫಲರಾಗಿದ್ದಾರೆ. ಇವರು ಜಿಲ್ಲೆಯ ವಿವಿಧ ಬ್ಯಾಂಕ್ ಶಾಖೆ ಹಾಗೂ ಹಣಕಾಸು ಸಂಸ್ಥೆಗಳಲ್ಲಿ ಒಟ್ಟು 625 ಗ್ರಾಂ ತೂಕದ ನಕಲಿ ಚಿನ್ನಾಭರಣವನ್ನು ಅಡಮಾನ ಇರಿಸಿ ₹ 34.95 ಲಕ್ಷ ಸಾಲ ಪಡೆದಿದ್ದರು. ಆದರೆ, ಹಂಜ್ಹಾ ಎಂಬ ಆರೋಪಿ ಇನ್ನೂ ಸಿಕ್ಕಿಲ್ಲ.
ಮಡಿಕೇರಿ ನಗರ, ವಿರಾಜಪೇಟೆ ನಗರ, ಗ್ರಾಮಾಂತರ ಮತ್ತು ಭಾಗಮಂಡಲ ಪೊಲೀಸ್ ಠಾಣೆಗಳಲ್ಲಿ ಒಟ್ಟು 8 ಪ‍್ರಕರಣಗಳು ಆರೋಪಿಗಳ ವಿರುದ್ಧ ದಾಖಲಾಗಿತ್ತು.
‘ಪ್ರಮುಖ ಆರೋಪಿ ಪ್ರದೀಪ್ ವಿರುದ್ಧ ಇದೇ ವರ್ಷ 3 ಪ್ರಕರಣಗಳು ಸೇರಿ ಒಟ್ಟು 15 ಪ್ರಕರಣಗಳು ದಾಖಲಾಗಿದ್ದವು. ನಿಶಾದ್ ಎಂಬಾತನ ಮೇಲೆ 1 ದರೋಡೆ ಪ್ರಕರಣ ಸೇರಿದಂತೆ ಒಟ್ಟು 4 ಪ್ರಕರಣಗಳು ದಾಖಲಾಗಿದ್ದವು. ಇವರು ಜಾಮೀನಿನ ಮೇಲೆ ಹೊರ ಬಂದು ಮತ್ತೆ ಮತ್ತೆ ಇಂತಹ ಅಪರಾಧ ಕೃತ್ಯಗಳನ್ನು ಎಸಗುತ್ತಿದ್ದರು’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಇಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಪ್ರಕರಣದ ರೂವಾರಿ ಕೇರಳದಲ್ಲಿ
‘ಈ ಪ್ರಕರಣದ ಪ್ರಮುಖ ರೂವಾರಿ ಕೇರಳದ ಮೊಹಮ್ಮದ್ ಕುಂಞ (48). ಈತ ಆಭರಣ ತಯಾರಕನಾಗಿದ್ದು, ಪ್ರದೀಪ್ (60) ಎಂಬಾತನಿಗೆ ಹಣ ನೀಡಿ ನುರಿತ ಚಿನ್ನ ಪರೀಕ್ಷಕರಿಗೂ ಗೊತ್ತಾಗದ ಹಾಗೆ ಸುಮಾರು ಒಂದೂವರೆ ಗ್ರಾಂನಷ್ಟು ಚಿನ್ನದ ಕೋಟಿಂಗ್ ಅನ್ನು ಬಳೆಗಳ ಮೇಲೆ ಹಾಕಿ ನಕಲಿ ಬಳೆಗಳನ್ನು ತಯಾರಿಸಿದ್ದ. ಮಧ್ಯವರ್ತಿ ನಿಶಾದ್ ಎಂಬಾತ ಈ ನಕಲಿ ಚಿನ್ನ ಪಡೆದು ನವಾಜ್ ಎಂಬಾತನಿಗೆ ನೀಡಿದ್ದ. ಹೀಗೆ, ಈ ಜಾಲ ಕೊಡಗಿಗೂ ವಿಸ್ತರಿಸಿತ್ತು’ ಎಂದು ಅವರು ಮಾಹಿತಿ ನೀಡಿದರು.
ಬಂಧಿತರು ಇವರು
ಕುಂಜಿಲ ಗ್ರಾಮದ ಕೆ.ಎ.ಮೊಹಮ್ಮದ್ ರಿಜ್ವಾನ್ (35), ಅಬ್ದುಲ್ ನಾಸೀರ್ (50), ಪಡಿಯಾನಿ ಎಮ್ಮೆಮಾಡು ಗ್ರಾಮದ ಪಿ.ಎಚ್.ರಿಯಾಜ್ (39), ಬಿ.ಎ.ಮೂಸಾ (37), ಎಂ.ಎಂ.ಮಹಮ್ಮದ್ ಹನೀಫ್ (42), ಖತೀಜಾ (32), ಭಾಗಮಂಡಲದ ಅಯ್ಯಂಗೇರಿಯ ರಫೀಕ್ (38), ಫಾರಾನ್ (33), ಕೇರಳದ ಮಲಪುರಂ ಜಿಲ್ಲೆಯ ಕೆ.ಪಿ.ನವಾಸ್ (47), ಎರ್ನಾಕುಲಂ ಜಿಲ್ಲೆಯ ಕೆ.ಎ.ನಿಶಾದ್ (43), ಸಿ.ಎಂ.ಮೊಹಮ್ಮದ್ ಕುಂಞ (48), ಪಿ.ಜೆ.ಪ್ರದೀಪ್ (60) ಬಂಧಿತರು.
‘ಇವರಿಂದ 223 ಗ್ರಾಂ ತೂಕದ ಚಿನ್ನ ಲೇಪಿತ 28 ಬಳೆಗಳು, ನಗದು ₹ 2 ಲಕ್ಷ, ಬ್ಯಾಂಕ್ ಖಾತೆಗಳಲ್ಲಿ ₹ 2.08 ಲಕ್ಷ, ವಿಮೆ ಮೇಲೆ ಹೂಡಿಕೆ ₹ 1.08 ಲಕ್ಷ, ₹ 1.40 ಲಕ್ಷ ಮೌಲ್ಯದ ಒಂದು ಐಫೋನ್‌ನ್ನು ವಶಪಡಿಸಿಕೊಳ್ಳಲಾಗಿದೆ’ ಎಂದು ಅವರು ಹೇಳಿದರು.
ಪ್ರಕರಣ ಗೊತ್ತಾಗಿದ್ದು ಹೀಗೆ
ಕುಂಜಿಲ ಗ್ರಾಮದ ಕೆ.ಎ.ಮೊಹಮ್ಮದ್ ರಿಜ್ವಾನ್ (35) ಎಂಬಾತ ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಮಡಿಕೇರಿ ಮುಖ್ಯ ಶಾಖೆಯಲ್ಲಿ ಈಚೆಗೆ 8 ಚಿನ್ನದ ಬಳೆಗಳನ್ನು ಅಡಮಾನ ಮಾಡಿ ಸಾಲ ಪಡೆದುಕೊಳ್ಳುವ ಸಂದರ್ಭದಲ್ಲಿ ಪರಿಶೀಲಿಸಿದಾಗ ಬಳೆಗಳು ನಕಲಿ ಎಂಬುದು ಗೊತ್ತಾಗಿದೆ. ನಂತರ ಈತ ಈ ಹಿಂದೆ ಅಡಮಾನವಿಟ್ಟಿರುವ ಆಭರಣಗಳನ್ನು ಮತ್ತೊಮ್ಮೆ ಪರಿಶೀಲಿಸಿದಾಗ ಎಲ್ಲವೂ ನಕಲಿ ಎಂಬುದು ತಿಳಿದು ಬಂದಿದೆ. ಕೂಡಲೇ ಆತನನ್ನು ಬಂಧಿಸಲಾಯಿತು. ಈ ಮೂಲಕ ಇಂತಹ ಒಂದು ಜಾಲ ಕೊಡಗಿನಲ್ಲಿದೆ ಎಂಬುದು ಗೊತ್ತಾಯಿತು. ಕಾರ್ಯಾಚರಣೆ ತಂಡ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಅವರ ಮಾರ್ಗದರ್ಶನದಲ್ಲಿ ಡಿವೈಎಸ್‌ಪಿಗಳಾದ ಮಹೇಶ್‌ಕುಮಾರ್ ರವಿ ಸಿಪಿಐಗಳಾದ ಪಿ.ಕೆ.ರಾಜು ಪಿ.ಅನೂಪ್‌ಮಾದಪ್ಪ ಇನ್‌ಸ್ಪೆಕ್ಟರ್‌ಗಳಾದ ಮೇದಪ್ಪ ಪಿಎಸ್‌ಐಗಳಾದ ಲೋಕೇಶ್ ಶೋಭಾ ಲಾಮಣಿ ಮತ್ತು ತಾಂತ್ರಿಕ ಸಿಬ್ಬಂದಿ ಕಾರ್ಯಾಚರಣೆ ತಂಡದಲ್ಲಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.