ADVERTISEMENT

ಮಡಿಕೇರಿ: ಬೆಣ್ಣೆ ಹಣ್ಣಿನ ವೈವಿಧ್ಯತೆಗೆ ಮನಸೋತ ಕೃಷಿಕರು

ಚೆಟ್ಟಳ್ಳಿಯ ಕೇಂದ್ರೀಯ ತೋಟಗಾರಿಕಾ ಪ್ರಾಯೋಗಿಕ ಕೇಂದ್ರದಲ್ಲಿ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 24 ಜೂನ್ 2025, 4:50 IST
Last Updated 24 ಜೂನ್ 2025, 4:50 IST
ಕಾರ್ಯಕ್ರಮದಲ್ಲಿ ಮಾಹಿತಿ ಪತ್ರ ಬಿಡುಗಡೆ ಮಾಡಲಾಯಿತು
ಕಾರ್ಯಕ್ರಮದಲ್ಲಿ ಮಾಹಿತಿ ಪತ್ರ ಬಿಡುಗಡೆ ಮಾಡಲಾಯಿತು   

ಮಡಿಕೇರಿ: ಒಂದೇ ಸೂರಿನಡಿ ವಿದೇಶಿ ಹಣ್ಣುಗಳು, ದೇಶಿಯವಾದ 78 ವಿವಿಧ ಹಣ್ಣುಗಳು, ಬೆಣ್ಣೆಹಣ್ಣಿನಿಂದ ಮಾಡಿದ ವಿವಿಧ ಬಗೆಯ ಖಾದ್ಯಗಳು ನೋಡುಗರನ್ನು ಸೂಜಿಗಲ್ಲಿನಂತೆ ಸೆಳೆದವು.

ಚೆಟ್ಟಳ್ಳಿಯ ಕೇಂದ್ರೀಯ ತೋಟಗಾರಿಕಾ ಪ್ರಾಯೋಗಿಕ ಕೇಂದ್ರದಲ್ಲಿ ನಡೆದ ಬೆಣ್ಣೆ ಹಣ್ಣಿನ (ಬಟರ್ ಫ್ರೂಟ್) ವೈವಿಧ್ಯತೆಯ ಮೇಳ, ಕ್ಷೇತ್ರೋತ್ಸವ ಮತ್ತು ಪಾಲುದಾರರ ಸಭೆಯಲ್ಲಿ ಈ ದೃಶ್ಯಗಳು ಕಂಡು ಬಂದವು.

ವಿದೇಶಿ ಹಣ್ಣಿನ ತಳಿಗಳಾದ ಫೀರೈಟೆ, ಪಿಂಕ್ ಕರ್ಟನ್, ಕ್ಯಾರ್ಮೆನ್ ಹ್ಯಾಸ್, ಡಿಗಾನಿಯಾ, ದೇಶೀಯ 78 ವಿಧದ ಹಣ್ಣುಗಳು ಹಾಗು ಕೇಂದ್ರದ ಸಂಶೋಧಿತ ತಳಿಗಳಾದ ಅರ್ಕಾ ಸುಪ್ರೀಮ್, ಅರ್ಕಾ ಕೂರ್ಗ್ ರವಿ ಹಾಗು ಟಿಕೆಡಿ ಅಲ್ಲಿದ್ದವು. ಜೊತೆಗೆ, ಬೆಣ್ಣೆ ಹಣ್ಣಿನ ಸೂಫ್ಲೆ, ಕೇಕ್, ಇಡ್ಲಿ, ಕಾಫಿ, ಸ್ಯಾಂಡ್ವಿಚ್, ಚಟ್ನಿ, ಬ್ರೆಡ್ ಸ್ಪೆಡ್, ಸ್ಟಾಟರ್ ಹೀಗೆ ಹಲವು ಬಗೆಯ ಖಾದ್ಯಗಳೂ ಬಾಯಲ್ಲಿ ನೀರೂರಿಸಿದವು.

ADVERTISEMENT

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಪೊನ್ನಂಪೇಟೆಯ ಸಿಇಟಿ ಕಾಲೇಜಿನ ನಿರ್ದೇಶಕ ಕುಪ್ಪಂಡ ಎ.ಚಿಣ್ಣಪ್ಪ, ‘ಇಂತಹ ವೈವಿದ್ಯತಾ ಮೇಳಗಳು ಕೃಷಿಕರಿಗೆ ಪ್ರಯೋಜನಕಾರಿಯಾಗಲಿದೆ’ ಎಂದರು.

ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯ ಮಾಜಿ ನಿರ್ದೇಶಕ ಎಂ.ಆರ್.ದಿನೇಶ್ ಮಾತನಾಡಿ, ‘ವಿವಿಧ ಬೆಳೆಗಳನ್ನು ಬೆಳೆಯುವ ಮೂಲಕ ಆದಾಯದ ಮೂಲಗಳನ್ನು ಕಂಡುಕೊಳ್ಳಬೇಕು’ ಎಂದರು.

ನಿರ್ದೇಶಕ ಡಾ.ಪ್ರಕಾಶ್ ಪಾಟೀಲ ಮಾತನಾಡಿ, ‘ಆದಾಯದ ಮೂಲವಾಗಿ ಒಂದೇ ಬೆಳೆಯನ್ನು ಅವಲಂಬಿಸುವ ಬದಲು ವಿವಿಧ ಬೆಳೆಗಳನ್ನು ಬೆಳೆಯುವ ಮೂಲಕ ಹೆಚ್ಚಿನ ಆದಾಯದ ಮೂಲಗಳನ್ನು ಕಂಡುಕೊಳ್ಳಬಹುದು. ಕೊಡಗಿನ ವಾತಾವರಣವೂ ಬೆಣ್ಣೆಹಣ್ಣಿನ ಬೇಸಾಯಕ್ಕೆ ಉತ್ತಮವಾಗಿದೆ’ ಎಂದು ಹೇಳಿದರು.

ಬೆಣ್ಣೆ ಹಣ್ಣಿನ‌ ಬೇಸಾಯ ಕ್ರಮದ ಬಗೆಗಿನ ಕೈಪಿಡಿಯನ್ನು ಬಿಡುಗಡೆಗೊಳಿಸಲಾಯಿತು. ಬೆಣ್ಣೆಹಣ್ಣಿ ವಿವಿಧ ತಳಿಗಳ ಪ್ರದರ್ಶನದಲ್ಲಿ ವೈನಾಡಿನ ಜೋಸೆಫ್ ಕುರುವಿಳಾ ಪ್ರಥಮ, ಅಭ್ಯತಂಮಗಲದ ಕೆ.ಸಿ.ಉಮೇಶ್ ದ್ವಿತೀಯ, ಮಾದಾಪುರದ ಅನಿಲ್ ಚಂಗಪ್ಪ ತೃತೀಯ ಬಹುಮಾನ‌ ಪಡೆದರು.

ಬೆಣ್ಣೆಹಣ್ಣಿನ ವಿವಿಧ ಖಾದ್ಯಗಳ ವಿಭಾಗದಲ್ಲಿ ಸೋಮವಾರಪೇಟೆಯ ಸಂಧ್ಯಾರಾಣಿ ಪ್ರಥಮ,‌ ಮಡಿಕೇರಿಯ ಅಕ್ಷತಾ ಮುರುಳಿಧರ್ ದ್ವಿತೀಯ, ಚೆಟ್ಟಳ್ಳಿಯ ಪುತ್ತರಿರ ಕನ್ನು ಕಾಳಯ್ಯ ತೃತೀಯ ಬಹುಮಾನ ಪಡೆದರು.

ಅರ್ಕಾ ಸುಪ್ರೀಮ್ ಹಾಗು ಅರ್ಕಾ ಕೂರ್ಗ್ ರವಿ ತಳಿಗಳ ಅಭಿವೃದ್ಧಿಗೆ ಕೇಂದ್ರದಿಂದ ಗೋಣಿಕೊಪ್ಪಲಿನ ರಶ್ಮಿ ಅವರಿಗೆ ಪರವಾನಗಿ ನೀಡಲಾಯಿತು.

ಚೆಟ್ಟಳ್ಳಿಯ ಕೇಂದ್ರೀಯ ತೋಟಗಾರಿಕಾ ಪ್ರಾಯೋಗಿಕ ಕೇಂದ್ರದಲ್ಲಿ ನಡೆದ ಬೆಣ್ಣೆ ಹಣ್ಣಿನ (ಬಟರ್ ಫ್ರೂಟ್) ವೈವಿಧ್ಯತೆಯ ಮೇಳ ಕ್ಷೇತ್ರೋತ್ಸವ ಮತ್ತು ಪಾಲುದಾರರ ಸಭೆಯನ್ನು ಪೊನ್ನಂಪೇಟೆಯ ಸಿಇಟಿ ಕಾಲೇಜಿನ ನಿರ್ದೇಶಕ ಕುಪ್ಪಂಡ ಎ.ಚಿಣ್ಣಪ್ಪ ಉದ್ಘಾಟಿಸಿದರು

ಬೆಣ್ಣೆಹಣ್ಣು ಕೊಯ್ಲಿನ ನಂತರದ ನಿರ್ವಹಣೆ ಮತ್ತು ಮೌಲ್ಯವರ್ಧನೆ ಬಗ್ಗೆ ಬೆಂಗಳೂರಿನ ಐಸಿಎಅರ್, ಐಐಎಚ್‌ಅರ್‌ನ ಹಿರಿಯ ವಿಜ್ಞಾನಿ ಡಾ.ಪಿ.ಪ್ರೀತಿ ಹಾಗೂ ಬೆಣ್ಣೆ ಹಣ್ಣು ಕೃಷಿಯಲ್ಲಿನ ಸಮಸ್ಯೆಗಳು ಮತ್ತು ಪರಿಹಾರಗಳು ಕುರಿತು ಚೆಟ್ಟಳ್ಳಿಯ ಐಸಿಎಆರ್-ಐ ಐಎಚ್‌ಆರ್‌ನ ಹಣ್ಣು ವಿಜ್ಞಾನದ ಹಿರಿಯ ವಿಜ್ಞಾನಿ ಡಾ.ಬಿ.ಎಂ.ಮುರಳೀಧರ ಇವರು ಮಾಹಿತಿ ನೀಡಿದರು. ನಂತರ, ರೈತ -ವಿಜ್ಞಾನಿಗಳ ಸಂವಾದ, ಕ್ಷೇತ್ರ ಭೇಟಿ‌ ಕಾರ್ಯಕ್ರಮಗಳು ನಡೆದವು.

ಗಮನ ಸೆಳೆದ ವೈವಿಧ್ಯಮಯವಾದ ಖಾದ್ಯಗಳು

ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯ ಹಣ್ಣು ವಿಭಾಗದ‌ ಮುಖ್ಯಸ್ಥ ಡಾ.ಎಂ ಶಂಕರ್, ಕೇಂದ್ರದ ಮುಖ್ಯಸ್ಥ ಡಾ. ಮುರುಳೀಧರ್, ಕಾಫಿ ಮಂಡಳಿಯ ಮಾಜಿ ಉಪಾದ್ಯಕ್ಷ ಹಾಗೂ ಪ್ರಗತಿಪರ ರೈತ ನಡಿಕೇರಿಯಂಡ ಬೋಸ್ ಮಂದಣ್ಣ‌, ವಿವಿಧ ಇಲಾಖಾ ಆಧಿಕಾರಿಗಳು, ಗೋಣಿಕೊಪ್ಪಲುವಿನ ಕೃಷಿ ವಿಜ್ಞಾನ ‌ಕೇಂದ್ರ, ಚೆಟ್ಟಳ್ಳಿಯ ಕಾಫಿ ಸಂಶೋಧನಾ‌‌ ಕೇಂದ್ರ, ಮೈಸೂರಿನ ಜೆಎಸ್‌ಎಸ್ ಕೃಷಿ ವಿಜ್ಞಾನ ‌ಕೇಂದ್ರ‌, ಅಪ್ಪಂಗಳದ ಭಾರತೀಯ ಸಾಂಬಾರ ಮಂಡಳಿಯ ಅಧಿಕಾರಿಗಳು ಭಾಗವಹಿಸಿದರು.

ಗಮನ ಸೆಳೆದ ವೈವಿಧ್ಯಮಯವಾದ ಹಣ್ಣುಗಳ ಪ್ರದರ್ಶನ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.