ಮಡಿಕೇರಿ: ಇಲ್ಲಿನ ತಹಶೀಲ್ದಾರ್ ಕಚೇರಿಯಲ್ಲಿ ಎಫ್‌ಡಿಎ ಆಗಿ ಕಾರ್ಯನಿರ್ವಹಿಸುತ್ತಿದ್ದ ಪ್ರಜ್ವಲ್ (36) ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
‘ತಹಶೀಲ್ದಾರ್ ಪ್ರವೀಣ್ ಹಾಗೂ ಶಿರಸ್ತೇದಾರ್ ಗುರುರಾಜ್ ಅವರ ಕಿರುಕುಳದಿಂದ ಬೇಸತ್ತ ಪತಿ ಸೆ. 10ರಂದು ವಿಷ ಕುಡಿದಿದ್ದರು. ಅವರನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರು ಶನಿವಾರ ರಾತ್ರಿ ಮೃತಪಟ್ಟರು’ ಎಂದು ಪ‍್ರಜ್ವಲ್ ಅವರ ಪತ್ನಿ ಬಿ.ಜೆ.ಶ್ರುತಿ ದೂರು ನೀಡಿದ್ದು, ಇಲ್ಲಿನ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ’ ಎಂದು ಪೊಲೀಸರು ತಿಳಿಸಿದರು.
‘ಪ್ರಜ್ವಲ್ ನನ್ನ ಸಹಿ ಫೋರ್ಜರಿ ಮಾಡಿದ್ದಾರೆ’ ಎಂದು ತಹಶೀಲ್ದಾರ್ ಪ್ರವೀಣ್ ಕೂಡ ಪೊಲೀಸರಿಗೆ ದೂರು ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಜ್ವಲ್ ಅವರ ತಾಯಿ, ‘ನನ್ನ ಮಗನನ್ನು ಹಿರಿಯ ಅಧಿಕಾರಿಗಳು ಷಡ್ಯಂತ್ರ ಮಾಡಿ ಪ್ರಕರಣದಲ್ಲಿ ಸಿಲುಕಿಸಿದ್ದಾರೆ’ ಎಂದು ಆರೋಪಿಸಿದ್ದಾರೆ.
‘ಕಳೆದ 6 ತಿಂಗಳುಗಳಿಂದ ಕಚೇರಿಯಲ್ಲಿ ಒತ್ತಡ ಎಂದು ಪತಿ ಹೇಳುತ್ತಿದ್ದರು’ ಎಂದು ಶ್ರುತಿ ದೂರಿದ್ದಾರೆ.
ತಹಶೀಲ್ದಾರ್ ಪ್ರವೀಣ್ ಪ್ರತಿಕ್ರಿಯಿಸಿ, ‘ಸೆ. 10ರಂದು ಖಜಾನೆಯಿಂದ ಬಿಲ್‌ವೊಂದು ನನ್ನ ಸಹಿ ತಾಳೆಯಾಗುತ್ತಿಲ್ಲ ಎಂದು ವಾಪಸ್ ಬಂದಿತ್ತು. ಅದು ಬಂದ ಕೂಡಲೇ ಗಲಿಬಿಲಿಗೊಂಡ ಪ್ರಜ್ವಲ್ ಕಚೇರಿಯಿಂದ ನಾಪತ್ತೆಯಾಗಿದ್ದರು. ನಂತರ ವಿಷ ತೆಗೆದುಕೊಂಡಿರುವುದು ತಿಳಿಯಿತು. ನಮ್ಮ ಸಿಬ್ಬಂದಿಯೇ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಸಹಿಯನ್ನು ಫೋರ್ಜರಿ ಮಾಡಿರುವ ಸಂಬಂಧ ಸೆ. 11ರಂದು ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಲಾಗಿತ್ತು. ಬಿಲ್ ವಾಪಸ್ ಬಂದ ನಂತರ ಪ್ರಜ್ವಲ್ ಅವರನ್ನು ನಾವು ವಿಚಾರಣೆ ನಡೆಸಿಯೇ ಇಲ್ಲ. ಅವರ ಮೇಲೆ ಕೆಲಸದ ಒತ್ತಡವೂ ಇರಲಿಲ್ಲ. ಅವರ ಕುಟುಂಬದವರು ಮಾಡುತ್ತಿರುವ ಆರೋಪಗಳೆಲ್ಲವೂ ಸತ್ಯಕ್ಕೆ ದೂರವಾದವು’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.