
ಗೋಣಿಕೊಪ್ಪಲು ಕಾವೇರಿ ಕಾಲೇಜಿನ ಕನ್ನಡ ವಿಭಾಗ ಹಾಗೂ ಕಾಲೇಜಿನ ಐಕ್ಯೂಎಸಿ ಘಟಕ, ವಿಶ್ವವಿದ್ಯಾನಿಲಯ ಮಂಗಳೂರು ವಿಭಾಗ ಶಿಕ್ಷಕರ ಸಂಘದ ಆಶ್ರಯದಲ್ಲಿ ರಾಣಿ ಅಬ್ಬಕ್ಕ ಅವರ 500 ನೇ ಜನ್ಮ ದಿನಾಚರಣೆ
ಗೋಣಿಕೊಪ್ಪಲು: ಹೆಣ್ಣು ಮಕ್ಕಳ ಮನದಲ್ಲಿ ಧೈರ್ಯ ತುಂಬಲು ಪ್ರೇರಣದಾಯಿಯಾದ ರಾಣಿ ಅಬ್ಬಕ್ಕ ಅವರ ಸಾಹಸ ಕಥೆಗಳನ್ನು ಇಂದಿನ ಪೀಳಿಗೆಗೆ ತಿಳಿಸಿಕೊಡುವ ಅಗತ್ಯ ಇದೆ ಎಂದು ಕೊಡಗು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಅಶೋಕ್ ಸಂಗಪ್ಪ ಆಲೂರು ಅಭಿಪ್ರಾಯ ವ್ಯಕ್ತಪಡಿಸಿದರು.
ಸ್ಥಳೀಯ ಕಾವೇರಿ ಕಾಲೇಜಿನ ಕನ್ನಡ ವಿಭಾಗ ಹಾಗೂ ಕಾಲೇಜಿನ ಐಕ್ಯೂಎಸಿ ಘಟಕ, ವಿಶ್ವವಿದ್ಯಾನಿಲಯ ಮಂಗಳೂರು ವಿಭಾಗ ಶಿಕ್ಷಕರ ಸಂಘದ ಸಂಯುಕ್ತ ಆಶ್ರಯದಲ್ಲಿ ರಾಣಿ ಅಬ್ಬಕ್ಕ ಅವರ 500 ನೇ ಜನ್ಮ ದಿನಾಚರಣೆ ಅಂಗವಾಗಿ ಆಯೋಜಿಸಲಾಗಿದ್ದ ರಾಣಿ ಅಬ್ಬಕ್ಕ ಉಪನ್ಯಾಸ ಸರಣಿಯ 87 ನೇ ಕಾರ್ಯಕ್ರಮವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.
ಪುರುಷರಿಗಿಂತ ಮಹಿಳೆಯರು ಶಕ್ತರು. ಮಹಿಳೆಯರು ಮಾಡುವ ಬಹುತೇಕ ಕೆಲಸಗಳನ್ನು ಪುರುಷರಿಂದ ನಿಭಾಯಿಸಲು ಸಾಧ್ಯವಿಲ್ಲ. ಅಂತಹ, ಮಹಾನ್ ವ್ಯಕ್ತಿತ್ವ ಮಹಿಳೆಯರಿಗಿದೆ. ಇಂತಹ ಮೇರು ಗುಣಗಳಿರುವುದರಿಂದಲೇ ರಾಣಿ ಅಬ್ಬಕ್ಕ ಪೋರ್ಚುಗೀಸರನ್ನು ಈ ನೆಲದಿಂದ ಓಡಿಸಲು ಸತತ ಹೋರಾಟ ನಡೆಸಿದರು ಎಂದು ಹೇಳಿದರು.
ಉಲ್ಲಾಳದ ರಾಣಿಯಾಗಿ ಮೆರೆಯಬೇಕಾದ ಅಬ್ಬಕ್ಕ ದೇಶವನ್ನು ವಶಪಡಿಸಿಕೊಂಡ ಪೋರ್ಚುಗೀಸರ ವಿರುದ್ಧ ನಡೆಸಿದ ಹೋರಾಟದ ಹಾದಿಯಲ್ಲಿಯೇ ಜೀವನ ಸವೆಸಿದರು. ದೇಶದ ನೆಲ, ಜಲ, ಪ್ರಕೃತಿಗಾಗಿ ತನ್ನನ್ನು ಅರ್ಪಿಸಿಕೊಂಡ ಮಹಾನ್ ತ್ಯಾಗಿ ಅಬ್ಬಕ್ಕ. ಅವಳ ವೀರತ್ವದ ಕಥೆಗಳು ಇಂದಿನ ಪೀಳಿಗೆಗೆ ಮಾದರಿಯಾಗಿರಬೇಕು ಎಂದು ಅಭಿಪ್ರಾಯಪಟ್ಟರು.
ಸಿನಿಮಾ ನಟರನ್ನು, ಕ್ರಿಕೆಟ್ ಆಟಗಾರರನ್ನು ಜೀವನದ ಮಾದರಿಯಾಗಿಟ್ಟುಕೊಳ್ಳುವುದರ ಬದಲು ದೇಶಕ್ಕಾಗಿ ಹೋರಾಡಿದ ಮಹಾನಿಯರು, ಅನ್ನದಾತ ರೈತರು ಹಾಗೂ ವಿಜ್ಞಾನಿಗಳನ್ನು ಆದರ್ಶವಾಗಿಸಿಕೊಳ್ಳಬೇಕು ಎಂದು ಹೇಳಿದರು.
ಮಂಗಳೂರು ಕೆನರಾ ಎಂಜಿನಿಯರಿಂಗ್ ಕಾಲೇಜು ಡೀನ್ ಪ್ರೊ.ಉದಯ ಕುಮಾರ್ ಶೆಣೈ ಮಾತನಾಡಿ, ರಾಣಿ ಅಬ್ಬಕ್ಕ ದೇವಿ ಪೋರ್ಚುಗೀಸರ ವಿರುದ್ಧ ನಡೆಸಿದ ಹೋರಾಟ ಸ್ವಾತಂತ್ರ್ಯ ಚಳುವಳಿಗೆ ಮುನ್ನುಡಿ ಬರೆಯಿತು ಎಂದರು.
ಶಿಕ್ಷಕರ ಸಂಘ ಮಂಗಳೂರು ವಿಭಾಗದ ಜಂಟಿ ಕಾರ್ಯದರ್ಶಿ ಪ್ರೊ.ಎಂ.ಕೆ.ಮಾಧವ ಮಾತನಾಡಿ, ನಮ್ಮ ದೇಶ ಹಾಗೂ ನಮ್ಮ ಸಂಸ್ಕೃತಿಯ ಉಳಿವಿಗಾಗಿ ಹೋರಾಟ ಮಾಡಿದ ಚೇತನಗಳ ಬಗ್ಗೆ ಯುವ ಪೀಳಿಗೆ ತಿಳಿಸುವ ಪ್ರಯತ್ನದ ಭಾಗವಾಗಿ ರಾಣಿ ಅಬ್ಬಕ್ಕ ಅವರ ಬಗ್ಗೆ ಉಪನ್ಯಾಸ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದರು.
ಉಪ ಪ್ರಾಂಶುಪಾಲರಾದ ಪ್ರೊ.ಎಂ.ಎಸ್.ಭಾರತಿ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕರ ಸಂಘ ಮಂಗಳೂರು ವಿಭಾಗ ಜಂಟಿ ಕಾರ್ಯದರ್ಶಿ ಜಯಲಕ್ಷ್ಮಿ ಆರ್.ಶೆಟ್ಟಿ, ಕಾರ್ಯಕ್ರಮ ಸಂಯೋಜಕಿ ಪ್ರೊ.ಸಿ.ಎಂ.ರೇವತಿ, ಪ್ರೊ.ಆರ್.ತಿಪ್ಪೇಸ್ವಾಮಿ, ಉಪನ್ಯಾಸಕ ಎಚ್.ಎಸ್.ಸಂತೋಷ್, ಟಿ.ಸಿ.ಚಂದ್ರ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.