ಕುಶಾಲನಗರ: ನಿರಂತರವಾಗಿ ಸುರಿಯುತ್ತಿರುವ ಪುಷ್ಯ ಮಳೆಗೆ ಕಾವೇರಿ ಹಾಗೂ ಹಾರಂಗಿ ನದಿಗಳು ಅಪಾಯಕಾರಿ ಮಟ್ಟದಲ್ಲಿ ಹರಿಯುತ್ತಿದ್ದು, ಮಂಗಳವಾರ ಪ್ರವಾಹ ಪರಿಸ್ಥಿತಿ ಉಂಟಾಗಿದೆ.
ಹಾರಂಗಿ ಜಲಾಶಯದಿಂದ 27,500 ಸಾವಿರ ಕ್ಯುಸೆಕ್ ನೀರನ್ನು ನದಿಗೆ ಹರಿಬಿಡುತ್ತಿರುವುದರಿಂದ ಪಟ್ಟಣದ ಸಾಯಿ ಬಡಾವಣೆ, ಇಂದಿರಾ, ಕುವೆಂಪು, ಬಸಪ್ಪ ಬಡಾವಣೆ ಸೇರಿದಂತೆ ಇನ್ನಿತರ ಬಡಾವಣೆಗಳು 2ನೇ ಬಾರಿಗೆ ಜಲಾವೃತಗೊಂಡಿವೆ.
ಈಗಾಗಲೇ ಸಾಯಿ ಬಡಾವಣೆಗೆ ನುಗ್ಗಿರುವ ನೀರು ಸಾಯಿ ದೇವಾಲಯ ಆವರಿಸಿಕೊಂಡಿದೆ. ಜೊತೆಗೆ, ರಾಜಕಾಲುವೆಗಳ ಮೂಲಕ ಬಡಾವಣೆಯ ಎಲ್ಲಾ ರಸ್ತೆಗಳಿಗೆ ನುಗ್ಗಿದೆ. ಇದರಿಂದ ಆತಂಕ ಗೊಂಡಿರುವ ನಿವಾಸಿಗಳು ತಮ್ಮ ಮನೆ ಸಾಮಗ್ರಿಗಳನ್ನು ಬೇರೆಡೆಗೆ ಸ್ಥಳಾಂತರಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಬಹುತೇಕ ಕುಟುಂಬಗಳ ಮನೆ ಖಾಲಿ ಮಾಡಿ ಸುರಕ್ಷಿತ ಪ್ರದೇಶಕ್ಕೆ ಹೋಗಿದ್ದಾರೆ. ಇದೇ ರೀತಿ ಮಳೆ ಮುಂದುಮರೆದರೆ ಕುಶಾಲನಗರದ ಬಹುತೇಕ ಬಡಾವಣೆಗಳು ಜಲಾವೃತಗೊಳುವ ಸಾಧ್ಯತೆ ಇದೆ.
ಮತ್ತೆ ಒಡೆದ ರೊಂಡೆಕೆರೆ
ತಾಲ್ಲೂಕಿನ ಗೊಂದಿಬಸವನಹಳ್ಳಿ ಗ್ರಾಮದ ರೊಂಡೆಕೆರೆಯ ಏರಿ ಮಂಗಳವಾರ 2ನೇ ಬಾರಿಗೆ ಒಡೆದು ಜಮೀನುಗಳಿಗೆ ನೀರು ನುಗ್ಗಿದ್ದು ಅಪಾರ ಪ್ರಮಾಣದಲ್ಲಿ ಹಾನಿ ಸಂಭವಿಸಿದೆ.
ಗ್ರಾಮದ ರೊಂಡೆಕೆರೆಯು ಹತ್ತಾರೂ ಎಕರೆ ವಿಸ್ತೀರ್ಣವಿದ್ದು, ಅಪಾರ ಪ್ರಮಾಣದ ನೀರು ಸಂಗ್ರಹಗೊಂಡಿತ್ತು. ಜುಲೈ 19ರಂದು ಕೆರೆಯ ಏರಿ ಒಡೆದು ಹೋಗಿತ್ತು. ಈ ಸಂದರ್ಭ ಮರಳು ಚೀಲಗಳಿಂದ ಏರಿಯನ್ನು ದುರಸ್ತಿ ಪಡಿಸಲಾಗಿತ್ತು. ಆದರೆ, ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಮಳೆಗೆ ಮತ್ತೆ ಒಡೆದು ಅಪಾರ ಪ್ರಮಾಣದ ನೀರು ಹರಿದು ಹೋಗಿದೆ.
ಕೆರೆಯ ನೀರು ತಗ್ಗು ಪ್ರದೇಶಗಳಿಗೆ ನುಗ್ಗಿದ ಪರಿಣಾಮ ಕಾರು ಮಾಲೀಕರು ಮತ್ತು ಚಾಲಕರ ಬಡಾವಣೆ ಸಂಪೂರ್ಣ ಜಲಾವೃತ್ತಗೊಂಡಿದೆ. ತಾವರೆಕೆರೆ ಬಹುತೇಕ ಭರ್ತಿಯಾಗಿದ್ದು, ಮಡಿಕೇರಿ ರಸ್ತೆ ಜಾಲಾವೃತಗೊಳ್ಳಲು ಇನ್ನು 3ರಿಂದ 4 ಅಡಿಗಳು ಬಾಕಿ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.