ADVERTISEMENT

ನೆರೆ ಸಂತ್ರಸ್ತರಿಗೆ ಪರಿಹಾರ, ಸೂರಿನ ಭರವಸೆ

ಪ್ರವಾಹ ಪೀಡಿತ ಪ್ರದೇಶಗಳಿಗೆ ಸುರೇಶ್ ಕುಮಾರ್ ಭೇಟಿ, ಅಳಲು ತೋಡಿಕೊಂಡ ಮಹಿಳೆಯರು

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2019, 9:16 IST
Last Updated 22 ಆಗಸ್ಟ್ 2019, 9:16 IST
ಕುಶಾಲನಗರ ಪಟ್ಟಣದ ದಂಡಿನಪೇಟೆಯ ಪ್ರವಾಹ ಪೀಡಿತ ಪ್ರದೇಶಕ್ಕೆ ಸುರೇಶ್ ಕುಮಾರ್ ಭೇಟಿ ನೀಡಿ ಪರಿಶೀಲಿಸಿದರು
ಕುಶಾಲನಗರ ಪಟ್ಟಣದ ದಂಡಿನಪೇಟೆಯ ಪ್ರವಾಹ ಪೀಡಿತ ಪ್ರದೇಶಕ್ಕೆ ಸುರೇಶ್ ಕುಮಾರ್ ಭೇಟಿ ನೀಡಿ ಪರಿಶೀಲಿಸಿದರು   

ಕುಶಾಲನಗರ: ಪಟ್ಟಣ ಹಾಗೂ ತಾಲ್ಲೂಕಿನ ಪ್ರವಾಹಪೀಡಿತ ಪ್ರದೇಶಗಳಿಗೆ ಸಚಿವ ಸುರೇಶ್ ಕುಮಾರ್ ಬುಧವಾರ ಭೇಟಿ ನೀಡಿ ಪರಿಶೀಲಿಸಿದರು.

ಕಾವೇರಿ ನದಿ ದಂಡೆ ಮೇಲಿರುವ ದಂಡಿನಪೇಟೆ ಬಡಾವಣೆಗೆ ಭೇಟಿ ನೀಡಿ ಹಾನಿಯಾಗಿರುವ ಮನೆಗಳನ್ನು ವೀಕ್ಷಿಸಿದರು.

‘ನಮ್ಮ ಮನೆ ನೀರಿನಲ್ಲಿ ಸಂಪೂರ್ಣವಾಗಿ ಮುಳುಗಡೆಯಾಗಿತ್ತು. ಒಂದು ವಾರದ ಬಳಿಕ ಕುಸಿಯಿತು. ಮನೆಯಲ್ಲಿದ್ದ ಸಾಮಗ್ರಿಗಳು, ದಾಖಲೆಗಳೆಲ್ಲಾ ನೀರುಪಾಲಾಗಿವೆ. ನಾವು ಎಲ್ಲವನ್ನೂ ಕಳೆದುಕೊಂಡು ಬೀದಿಪಾಲಾಗಿದ್ದೇವೆ. ಇಂತಹ ಪರಿಸ್ಥಿತಿಯಲ್ಲಿ ಸರ್ಕಾರವು ಕೇವಲ ₹10 ಸಾವಿರ ನೀಡಿದರೆ ಏನು ಪ್ರಯೋಜನ’ ಎಂದು ಸಂತ್ರಸ್ತರಾದ ದಿಲ್ ನಾಜ್, ಮಮ್ತಾಜ್ ಪ್ರಶ್ನಿಸಿದರು.

ADVERTISEMENT

ಇದಕ್ಕೆ ಸ್ಪಂದಿಸಿದ ಸುರೇಶ್‌ ಕುಮಾರ್‌, ‘ನಿಮ್ಮ ನೆರವಿಗೆ ಸರ್ಕಾರ ಬರಲಿದೆ. ಧೈರ್ಯ ಕಳೆದುಕೊಳ್ಳಬೇಡಿ’ ಎಂದರು.

ಇವರಿಗೆ ಅಗತ್ಯ ಪರಿಹಾರ ನೀಡುವಂತೆ ಜಿಲ್ಲಾಧಿಕಾರಿ ಅನೀಸ್ ಜಾಯ್ ಜಾಯ್ ಕಣ್ಮಣಿ ಅವರಿಗೆ ಸಚಿವರು ಸೂಚಿಸಿದರು.

ಸಾಯಿ ಬಡಾವಣೆಯಲ್ಲಿ ಜಲಾವೃತವಾಗಿದ್ದ ಸಾಯಿ ಮಂದಿರ ಹಾಗೂ ಮನೆಗಳನ್ನು ಪರಿಶೀಲಿಸಿದರು.

ಕಾರು ತಡೆದ ಮಹಿಳೆಯರು: ಸುರೇಶ್ ಕುಮಾರ್ ಅವರು ಕೆಲವೇ ಬಡಾವಣೆಗಳಿಗೆ ಭೇಟಿ ನೀಡಿ ನೆಲ್ಯಹುದಿಕೇರಿ ಕಡೆಗೆ ತೆರಳಲು ಮುಂದಾದರು. ಈ ವೇಳೆ ಸಾಯಿ ಬಡಾವಣೆ ಬಳಿ ಸಚಿವರ ಕಾರನ್ನು ಮುಳ್ಳುಸೋಗೆ ಗ್ರಾ.ಪಂ ಅಧ್ಯಕ್ಷೆ ಭವ್ಯಾ ಹಾಗೂ ಮಹಿಳೆಯರು ಅಡ್ಡಗಟ್ಟಿದರು.

‘ಸ್ವಾಮಿ, ಮುಳ್ಳುಸೋಗೆ ವ್ಯಾಪ್ತಿಯಲ್ಲೂ ಅಪಾರ ಪ್ರಮಾಣದ ಹಾನಿಯಾಗಿದೆ. ದಯವಿಟ್ಟು ಅಲ್ಲಿಗೂ ಬಂದು ಪರಿಶೀಲನೆ ನಡೆಸಬೇಕು’ ಎಂದು ಮನವಿ ಮಾಡಿದರು.

ಮಹಿಳೆಯರ ಸಮಸ್ಯೆ ಆಲಿಸಿದ ಸಚಿವರು, ‘ಈಗಾಗಲೇ ಕೆಲ ಬಡಾವಣೆಗಳಿಗೆ ಖುದ್ದು ಭೇಟಿ ನೀಡಿ ಪ್ರವಾಹದ ಭೀಕರತೆಯನ್ನು ಅರ್ಥ ಮಾಡಿಕೊಂಡಿದ್ದೇನೆ. ಸರ್ಕಾರ ಸಂತ್ರಸ್ತರ ನೆರವಿಗೆ ಸದಾ ಸಿದ್ಧವಿದ್ದು, ಯಾರೂ ಆತಂಕಪಡುವ ಅಗತ್ಯ ಇಲ್ಲ’ ಎಂದರು.

ಜಿ.ಪಂ ಸದಸ್ಯೆ ಕೆ.ಆರ್.ಮಂಜುಳಾ, ಪ.ಪಂ ಸದಸ್ಯ ಡಿ.ಕೆ.ತಿಮ್ಮಪ್ಪ, ಎಸ್ಪಿ ಡಾ.ಸುಮನ್ ಡಿ.ಪನ್ನೇಕರ್, ಜಿ.ಪಂ ಸಿಇಒ ಲಕ್ಷ್ಮಿಪ್ರಿಯಾ, ಅಪಾರ ಜಿಲ್ಲಾಧಿಕಾರಿ ಡಾ.ಸ್ನೇಹಾ, ಉಪ ವಿಭಾಗಾಧಿಕಾರಿ ಜವರೇಗೌಡ, ತಹಶೀಲ್ದಾರ್ ಗೋವಿಂದರಾಜು, ಕಂದಾಯ ಅಧಿಕಾರಿ ಮಧುಸೂದನ್, ಪಟ್ಟಣ ಪಂಚಾಯಿತಿ ಅಧಿಕಾರಿ ಸತೀಶ್ ಕುಮಾರ್, ಎಂಜಿನಿಯರ್ ಶ್ರೀದೇವಿ, ಡಿವೈಎಸ್ಪಿ ಮುರಳೀಧರ್, ಪಿಎಸ್ಐ ಜಗದೀಶ್ ಹಾಗೂ ಪಿ.ಪಿ.ಸೋಮೇಗೌಡ ಇದ್ದರು.

ಕೊಡಗಿನೊಂದಿಗೆ ಭಾವನಾತ್ಮಕ ಸಂಬಂಧ

‘ಕೊಡಗು ಜಿಲ್ಲೆಯಲ್ಲಿ ಕಳೆದ ವರ್ಷ ಪ್ರಾಕೃತಿಕ ವಿಕೋಪ ಸಂಭವಿಸಿದಾಗ ನಾನು ಭೇಟಿ ನೀಡಿದ್ದೆ. ಮೇಕೆತೋಡು ಬಳಿ ಶವಗಳ ಪತ್ತೆ ಕಾರ್ಯದಲ್ಲೂ ಭಾಗಿಯಾಗಿದ್ದೆ. ಹಾಗಾಗಿ ಕಳೆದ ವರ್ಷದಿಂದಲೂ ಕೊಡಗಿನ ಬಗ್ಗೆ ಭಾವನಾತ್ಮಕ ಸಂಬಂಧ ಇದೆ. ಕೊಡಗಿನ ಹಾನಿ ಬಗ್ಗೆ ಸಂಪೂರ್ಣ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿ, ಪರಿಹಾರ ಒದಗಿಸಲಾಗುವುದು’ ಎಂದು ಸುರೇಶ್‌ ಕುಮಾರ್‌ ಹೇಳಿದರು.

ಭಾರತೀಶ್ ಅಸಮಾಧಾನ

ಪ್ರವಾಹಪೀಡಿತ ಪ್ರದೇಶಗಳಿಗೆ ಭೇಟಿ ನೀಡುವ ಬಗ್ಗೆ ಜಿಲ್ಲೆಯ ಬಿಜೆಪಿ ನಾಯಕರು ಹಾಗೂ ಮುಖಂಡರಿಗೆ ಮಾಹಿತಿ ನೀಡಿಲ್ಲ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಬಿ.ಭಾರತೀಶ್ ಅವರು ಸುರೇಶ್‌ ಕುಮಾರ್‌ ಎದುರೇ ಅಸಮಾಧಾನ ವ್ಯಕ್ತಪಡಿಸಿದರು. ನಂತರ ಸಚಿವರಿಗೆ ಹಾರ ಹಾಕಿ ಸ್ವಾಗತಿಸಿದರು.

ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ವಿ.ಕೆ.ಲೋಕೇಶ್, ಮಡಿಕೇರಿ ಕ್ಷೇತ್ರ ಅಧ್ಯಕ್ಷ ಎಂ.ಎನ್.ಕುಮಾರಪ್ಪ, ತಾಲ್ಲೂಕು ಯುವ ಮೋರ್ಚಾ ಅಧ್ಯಕ್ಷ ಎಂ.ಡಿ.ಕೃಷ್ಣಪ್ಪ, ನಗರ ಘಟಕದ ಅಧ್ಯಕ್ಷ ಕೆ.ಜಿ.ಮನು, ಕಾರ್ಯದರ್ಶಿ ಶಿವಾಜಿ ರಾವ್, ಪ.ಪಂ ಸದಸ್ಯ ಡಿ.ಕೆ.ತಿಮ್ಮಪ್ಪ, ಕೂಡು ಮಂಗಳೂರು ಗ್ರಾ.ಪಂ ಸದಸ್ಯ ಭಾಸ್ಕರ್ ನಾಯಕ್, ಮುಖಂಡರಾದ ಬೋಸ್ ಮೊಣ್ಣಪ್ಪ, ಸೋಮಣ್ಣ, ಎಂ.ವಿ.ನಾರಾಯಣ್, ಪಿ.ಪಿ.ಸತ್ಯನಾರಾಯಣ್, ಎಚ್.ಎನ್.ರಾಮಚಂದ್ರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.