ADVERTISEMENT

ಮಡಿಕೇರಿ: ವೈವಿಧ್ಯಮಯ ತರಕಾರಿ, ಹಣ್ಣುಗಳ ಕಣಜ ಈ ಮಳಿಗೆ!

ಗಾಂಧಿ ಮೈದಾನದಲ್ಲಿವೆ 40ಕ್ಕೂ ಹೆಚ್ಚು ರೈತರ ಕೃಷಿ ಉತ್ಪನ್ನಗಳು

ಕೆ.ಎಸ್.ಗಿರೀಶ್
Published 7 ಫೆಬ್ರುವರಿ 2023, 1:59 IST
Last Updated 7 ಫೆಬ್ರುವರಿ 2023, 1:59 IST
ಮಡಿಕೇರಿಯಲ್ಲಿ ನಡೆಯುತ್ತಿರುವ ಫಲಪುಷ್ಪ ಪ್ರದರ್ಶನದಲ್ಲಿ ಗಾಂಧಿ ಮೈದಾನದಲ್ಲಿನ ತೋಟಗಾರಿಕಾ ಇಲಾಖೆಯ ಮಳಿಗೆಯಲ್ಲಿ ಪ‍್ರದರ್ಶನಕ್ಕಿರಿಸಿರುವ ವೈವಿಧ್ಯಮಯ ಬಾಳೆಗೊನೆಗಳು
ಮಡಿಕೇರಿಯಲ್ಲಿ ನಡೆಯುತ್ತಿರುವ ಫಲಪುಷ್ಪ ಪ್ರದರ್ಶನದಲ್ಲಿ ಗಾಂಧಿ ಮೈದಾನದಲ್ಲಿನ ತೋಟಗಾರಿಕಾ ಇಲಾಖೆಯ ಮಳಿಗೆಯಲ್ಲಿ ಪ‍್ರದರ್ಶನಕ್ಕಿರಿಸಿರುವ ವೈವಿಧ್ಯಮಯ ಬಾಳೆಗೊನೆಗಳು   

ಮಡಿಕೇರಿ: 80 ಕೆ.ಜಿ ತೂಗುವ ಬಾಳೆಗೊನೆ, 30 ಕೆ.ಜಿಯ ಬೂದುಗುಂಬಳ, ಬೃಹತ್ ಗಾತ್ರದ ತೆಂಗಿನಕಾಯಿ, ಅಪರೂಪದ ಕಾಡಂಜೂರ, ಚಿಪ್ಪಣಬೆ. ಹೀಗೆ ಸಾಲು ಸಾಲು ವೈವಿಧ್ಯಮಯ ತರಕಾರಿಗಳು, ಹಣ್ಣುಗಳು ನಗರದಲ್ಲಿ ಜಿಲ್ಲಾಡಳಿತ, ಜಿಲ್ಲಾ ತೋಟಗಾರಿಕೆ ಇಲಾಖೆಯಿಂದ ನಡೆಯುತ್ತಿರುವ ಫಲಪುಷ್ಪ ಪ್ರದರ್ಶನದಲ್ಲಿ ನೋಡುಗರ ಮನಸೂರೆಗೊಳ್ಳುತ್ತಿವೆ.

ಗಾಂಧಿ ಮೈದಾನದಲ್ಲಿನ ತೋಟಗಾರಿಕೆ ಇಲಾಖೆಯ ಮಳಿಗೆಯಲ್ಲಿ ಜಿಲ್ಲೆಯ 40ಕ್ಕೂ ಹೆಚ್ಚು ರೈತರು ತಮ್ಮ ವಿಶಿಷ್ಟ ಕೃಷಿ ಹಾಗೂ ತೋಟಗಾರಿಕೆ ಬೆಳೆಗಳನ್ನು ಪ್ರದರ್ಶನಕ್ಕಿರಿಸಿದ್ದಾರೆ.

ಅವುಗಳಲ್ಲಿ ವಿವಿಧ ತಳಿಯ ಭಾರಿ ಗಾತ್ರದ ಬಾಳೆ ಗೊನೆಗಳು ಗಮನ ಸೆಳೆಯುತ್ತಿವೆ. ಚಂದನ್ ಅವರ ಪಚ್ಚಬಾಳೆಯ ಒಂದು ಗೊನೆ ಬರೋಬ್ಬರಿ 80 ಕೆ.ಜಿ ತೂಗುತ್ತದೆ. ಎಂ.ಆರ್.ಕೇಶವ ಫಿಂಗರ್ ಬಾಳೆ ಹಾಗೂ ಕೆಂಪುಬಾಳೆ ಗೊನೆಗಳನ್ನು ಇರಿಸಿದ್ದರೆ, ಚರಣ್‌ಕುಮಾರ್ ಹೂಬಾಳೆ, ಕೆ.ಇಂದಿರಾ ರಮೇಶ್ ಸಾಂಬರ್ ಬಾಳೆ ಹಾಗೂ ಪುಷ್ಪವೇಣಿ ಚೈನೀಸ್ ಬಾಳೆ ತಂದಿರಿಸಿದ್ದಾರೆ. ಇದರ ಜತೆಗೆ ನೇಂದ್ರ ಬಾಳೆಗೊನೆಗಳೂ ಇಲ್ಲಿವೆ.

ADVERTISEMENT

ಸದಾ ಮಳೆ ಹಾಗೂ ಶೀತಮಯ ವಾತಾವರಣದಿಂದ ಕೂಡಿರುವ ಕೊಡಗು ಜಿಲ್ಲೆಯಲ್ಲಿ ಅಪರೂಪ ಎನಿಸಿದ ದ್ರಾಕ್ಷಿ ಹಾಗೂ ಸ್ಟ್ರಾಬೆರಿ ಬೆಳೆಯನ್ನು ಬೆಳೆದ ಮದೆನಾಡಿನ ರೈತರು ಇಲ್ಲಿ ತಮ್ಮ ಉತ್ಪನ್ನಗಳನ್ನು ಇರಿಸಿರುವುದು ಅನೇಕ ಕೃಷಿಕರ ಗಮನ ಸೆಳೆದಿದೆ.

ಮಡಿಕೇರಿ ನಗರದಲ್ಲೇ ಬೆಳೆದಿರುವ ಚಿಪ್ಪಣಬೆಯನ್ನು ಅಶ್ರಫ್‌ ಉನ್ನಿಸಾ, ಯೋಗೇಶ್, ಮೌಲ್ಯಾ ಹಾಗೂ ಇತರರು ಇಲ್ಲಿ ಪ್ರದರ್ಶನಕ್ಕಿರಿಸಿದ್ದಾರೆ. ಕಾಟಕೇರಿಯ ಪೇರಿಯಾನದ ಉಮೇಶ್ ಹಾಗೂ ಹೆಬ್ಬಾಲೆಯ ಬಸವಣ್ಣ ಬೆಳೆದ ತಾಳೆಹಣ್ಣು, ಹೆಬ್ಬಾಲೆಯಲ್ಲಿ ಬೆಳೆದ ಕ್ಯಾರೇಟ್, ಬೀಟ್‌ರೂಟ್, ವಿವಿಧ ಜಾತಿಯ ಸೊಪ್ಪುಗಳು, ಅರಿಸಿನ, ಶುಂಠಿ, ಮರಟೊಮೆಟೊ, ಕಾಡಂಜೂರ, ಲಕ್ಷ್ಮಣಫಲ, ಬೃಹತ್ ಗಾತ್ರದ ಕುಂಬಳಕಾಯಿ, ತೆಂಗಿನಕಾಯಿ, ಸೋರೆಕಾಯಿ, ಎಳನೀರು, ವಿವಿಧ ಜಾತಿಯ ಗೆಡ್ಡೆ ಗೆಣಸುಗಳು ಒಂದೇ ಎರಡೇ... ಈ ಮಳಿಗೆಯನ್ನು ವಿವರವಾಗಿ ವೀಕ್ಷಿಸಲು ಒಂದು ಗಂಟೆಯಾದರೂ ಸಾಲದು ಎನ್ನುತ್ತಾರೆ ಮಡಿಕೇರಿ ನಿವಾಸಿ ವಾಣಿಶ್ರೀ. ಜತೆಗೆ, ಜಿಲ್ಲಾಡಳಿತದ ಈ ಪ್ರಯತ್ನವನ್ನು ಅವರೂ ಸೇರಿದಂತೆ ಹಲವು ಮಂದಿ ಪ್ರವಾಸಿಗರು, ಸ್ಥಳೀಯರು ಶ್ಲಾಘಿಸಿದರು.

ಜತೆಗೆ, ಇಲ್ಲಿರುವ ಜೇನುಪೆಟ್ಟಿಗೆ, ಜೇನು ತೆಗೆಯುವ ಸಾಧನಗಳೂ ನೋಡುಗರನ್ನು ಆಕರ್ಷಿಸುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.