
ಸುಂಟಿಕೊಪ್ಪ: ‘ಆಧುನಿಕರಣದ ಭರಾಟೆಯಲ್ಲಿ ಜನಪದ ಸಂಸ್ಕೃತಿ ನಶಿಸುತ್ತಿದೆ’ ಎಂದು ಸಾಹಿತಿ ಹೆಂಚೆಟ್ಟಿರ ಪ್ಯಾನ್ಸಿ ಮುತ್ತಣ್ಣ ಅತಂಕ ವ್ಯಕ್ತಪಡಿಸಿದರು.
ಸಮೀಪದ ಚೆಟ್ಟಳ್ಳಿ ಪ್ರೌಢಶಾಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ಕುಶಾಲನಗರ ಘಟಕದ ವತಿಯಿಂದ ನಡೆದ ಜನಪದ ಉತ್ಸವದಲ್ಲಿ ಮುಖ್ಯ ಭಾಷಣಕಾರರಾಗಿ ಅವರು ಮಾತನಾಡಿದರು.
‘ಆಧುನಿಕತೆಯ ಭರಾಟೆಯಲ್ಲಿ ಜನಪದ ಸಂಸ್ಕೃತಿ ಕಳೆದು ಹೋಗುತ್ತಿದೆ. ಅಳುವ ಮಕ್ಕಳನ್ನು ಜೋಗುಳ ಹಾಡಿ ಮಲಗಿಸುವ ಕಾಲ ಹೋಗಿದೆ, ಆ ಜಾಗದಲ್ಲಿ ಮೊಬೈಲ್ ರೀಲ್ಸ್ ಆಕ್ರಮಿಸಿಕೊಂಡಿದೆ’ ಎಂದು ವಿಷಾದ ವ್ಯಕ್ತಪಡಿಸಿದರು.
‘ಕುಂಟೆಬಿಲ್ಲೆ, ಲಗೋರಿ, ಕಣ್ಣಾಮುಚ್ಚಾಲೆ ಆಟ ಈಗಿನ ಮಕ್ಕಳಿಗೆ ಮರೀಚಿಕೆಯಾಗಿದೆ. ವಿವಿಧ ಭಾಷೆ, ಜನಾಂಗಗಳಿಗೆ ಸೇರಿದ ನಾವು ಕನ್ನಡವನ್ನು ಹೆಚ್ಚಾಗಿ ಬಳಸಬೇಕು. ಸಮಾಜದಲ್ಲಿ ಹೆಣ್ಣು ಮಕ್ಕಳು ಎಲ್ಲಾ ಕ್ಷೇತ್ರದಲ್ಲಿ ಸಮಾನರಾಗಿ ಕೆಲಸ ಮಾಡುತ್ತಿದ್ದು, ಜೀವನದಲ್ಲಿ ಸಾಧನೆ ಮಾಡಿ’ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಪೇರಿಯನ ಪಿ ಜಯಾನಂದ ಮಾತನಾಡಿ, ‘ಕನ್ನಡ ಭಾಷೆಯನ್ನು ಮಾತನಾಡುವ ಜೊತೆಗೆ ಕನ್ನಡೇತರರನ್ನು ಕನ್ನಡ ಮಾತನಾಡುವಂತೆ ಪ್ರೇರೆಪಿಸಬೇಕು, ಕಲಿಸಬೇಕು’ ಎಂದು ಹೇಳಿದರು.
ಸಾಹಿತ್ಯ ಪರಿಷತ್ ಕುಶಾಲನಗರ ತಾಲ್ಲೂಕು ಘಟಕದ ಅಧ್ಯಕ್ಷ ಕೆ.ಎಸ್.ನಾಗೇಶ್ ಮಾತನಾಡಿ, ‘ಗ್ರಾಮೀಣ ಭಾಗಗಳಲ್ಲಿ ಕನ್ನಡ ಉಳಿದಿದ್ದು, ನಗರ ಪ್ರದೇಶಗಳಲ್ಲಿ ಕನ್ನಡ ಮಾತನಾಡಿದರೆ ಅವಮಾನ ಎಂಬ ಪರಿಸ್ಥಿತಿ ಇದೆ’ ಎಂದರು.
ಕಸಾಪ ತಾಲ್ಲೂಕು ಸಂಘಟನಾ ಕಾರ್ಯದರ್ಶಿ ದೇವಿಪ್ರಸಾದ್ ಕಾಯರ್‌ಮಾರ್, ಶಾಲಾ ಆಡಳಿತ ಮಂಡಳಿಯ ಸಂಚಾಲಕ ಮುಳ್ಳಂಡ ರತ್ತು ಚಂಗಪ್ಪ ಮತ್ತು ಕಸಾಪ ಸುಂಟಿಕೊಪ್ಪ ಹೋಬಳಿ ಘಟಕದ ಅಧ್ಯಕ್ಷ ಪಿ.ಎಫ್.ಸಬಾಸ್ಟೀನ್ ಮಾತನಾಡಿದರು. ವೇದಿಕೆಯಲ್ಲಿ ನಿರ್ದೇಶಕ ಬಿ.ಸಿ.ದಿನೇಶ್, ಎಂ.ಎನ್.ಕಾಳಪ್ಪ, ಶ್ರೀನಿವಾಸ್, ಖಜಾಂಚಿ ಕೆ.ವಿ.ಉಮೇಶ್, ಶಾಲಾ ಆಡಳಿತ ಮಂಡಳಿ ಖಜಾಂಜಿ ಕಾಳಪ್ಪ, ಸದಸ್ಯೆ ಗೀತಾ ಉಪಸ್ಥಿತರಿದ್ದರು. ಶಾಲಾ ಮಕ್ಕಳು ಗೀತ ಗಾಯನ ಮತ್ತು ನೃತ್ಯ ಪ್ರದರ್ಶಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.