ADVERTISEMENT

ಜಾನಪದಕ್ಕೆ ಜೀವ ತುಂಬಿದ ಮಲ್ಲೇಶ್

ಖಾಸಗಿ ಶಿಕ್ಷಣ ಸಂಸ್ಥೆಯ ಶಿಕ್ಷಕ ವೃತ್ತಿ ತ್ಯಜಿಸಿ ಜನಪದ ಹಾಡುಗಾರ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2025, 8:15 IST
Last Updated 8 ಅಕ್ಟೋಬರ್ 2025, 8:15 IST
ಕೀ ಬೋರ್ಡ್‌ ಜತೆಗೆ ಮಲ್ಲೇಶ್  
ಕೀ ಬೋರ್ಡ್‌ ಜತೆಗೆ ಮಲ್ಲೇಶ್     



ಗೋಣಿಕೊಪ್ಪಲು; 'ಒಳಿತು ಮಾಡು ಮನುಸ ನೀ ಇರೋದು ಮೂರು ದಿವಸ', 'ತರವಲ್ಲ ತಗಿ ನಿನ್ನ ತಂಬೂರಿ,' 'ಯಾಕೆ ಬಡಿದಾಡ್ತಿ ತಮ್ಮ' ಮೊದಲಾದ ಜನಪದ ಮತ್ತು ತತ್ವಪದಗಳನ್ನು ಹಾಡುಗಾರ ಮಲ್ಲೇಶ್ ಅವರಿಂದ ಕೇಳುತ್ತಿದ್ದರೆ ಶ್ರೋತ್ರುಗಳು ತಲೆ ದೂಗಿ,  ಮತ್ತೆ ಮತ್ತೆ ಕೇಳಬೇಕು ಎಂಬ ಹಂಬಲ ವ್ಯಕ್ತಪಡಿಸುತ್ತಾರೆ.

'ಒಳಿತುಮಾಡು ಮನುಸ ನೀ ಇರೋದು ಮೂರು ದಿನವಸ ' ಹಾಡನ್ನು ಕೇಳಿದಾಗಂತೂ ಮನುಷ್ಯರ ಹಮ್ಮುಬಿಮ್ಮು ಮಾಯವಾಗಿ, ಇರುವಷ್ಟು ದಿನ ಬದುಕಿನ ಸಾರ್ಥಕತೆ ಕಂಡುಕೊಳ್ಳುವ ಕಡೆಗೆ ಚಿಂತಿಸುವುದಂತೂ ಸಹಜ. ಈ ಹಾಡನ್ನು ಮಲ್ಲೇಶ್ ಅವರ ಶ್ರೀಮಂತ ಕಂಠಸಿರಿ ಮೂಲಕ ಪ್ರೇಕ್ಷಕರು ಮತ್ತೆ ಮತ್ತೆ ಕೇಳಿ ಚಿಂತಿಸುವುದೂ, ಆನಂದಿಸುವುದೂ ಇದೆ.

ಇದೇ ರೀತಿ ಶಿಶುನಾಳ ಶರೀಫರ 'ತರವಲ್ಲ ತಗಿ ನಿನ್ನ ತಂಬೂರಿ' ತತ್ವಪದ,'ಯಾಕೆ ಬಡಿದಾಡ್ತಿ ತಮ್ಮ' ಮತ್ತು 'ಚೆಲ್ಲಿದರೂ ಮಲ್ಲಿಗೆಯ' ಹಾಡುಗಳು ಪ್ರೇಕ್ಷಕರ ಮನ ಸೂರೆಗೊಳ್ಳುತ್ತವೆ. ಕೈಯಲ್ಲಿ ಕಂಜ್ರಹಿಡಿದು ಈ ಜನಪದ ಹಾಡುಗಳನ್ನು ಮಲ್ಲೇಶ್ ಅವರು ಹಾಡುತ್ತಾ ನಿಂತರೆ ಸಮಯ ಜಾರುವುದೇ ತಿಳಿಯುವುದಿಲ್ಲ. ಕೊಡಗಿನ ವಿವಿಧ ರೆಸಾರ್ಟ್ ಗಳಲ್ಲಿ ಹಾಡುವ ಈ ಕಲಾವಿದನ ಹಾಡುಗಳನ್ನು ಕೇಳುವುದಕ್ಕಾಗಿಯೇ ಒಮ್ಮೆ ಬಂದ ಪ್ರವಾಸಿಗರು ಮತ್ತೆ ಮತ್ತೆ ಬರುವ ಹಂಬಲ ವ್ಯಕ್ತಪಡಿಸುತ್ತಾರೆ.

ADVERTISEMENT

ಜನಪದ ಸೊಗಡು:
ನೆಲಮೂಲದ ಜನಪದ ಸೊಗಡಿನ ಹಾಡುಗಾರ ಮಲ್ಲೇಶ್ , ಪಿರಿಯಾಪಟ್ಟಣ ತಾಲ್ಲೂಕಿನ ಕಾವೇರಿ ನದಿ ತೀರದ ಸೂಳೆಕೋಟೆಯವರು. ಕೊಡಗಿನ ಗಡಿಭಾಗದಲ್ಲಿರುವ ಸೂಳೆಕೋಟೆ. ಕೊಡಗಿನ ಕುಶಾಲನಗರ, ಕೂಡಿಗೆ, ಗುಡ್ಡೆಹೊಸೂರು ಅವರ ಕರ್ಮಭೂಮಿಯಾಗಿದೆ. 2014ರಲ್ಲಿ ಕುಶಾಲನಗರ ಬಳಿಯ ಕೂಡಿಗೆಯಲ್ಲಿ ಸ್ಥಾಪನೆಯಾದ ರೆಸಾರ್ಟ್ ಒಂದು ಮಲ್ಲೇಶ್ ಅವರ ಜನಪದ ಗೀತೆಗಳ ಪ್ರತಿಭಾ ಪ್ರದರ್ಶನಕ್ಕೆ ವೇದಿಕೆ ಒದಗಿಸಿತು.

ರೆಸಾರ್ಟ್ನಲ್ಲಿ ಪ್ರವಾಸಿಗರನ್ನು ಸೆಳೆದು ಅವರಿಗೆ ಮನರಂಜನೆ ನೀಡುವುದಕ್ಕಾಗಿ ಪ್ರತಿ ದಿನ ಸಂಜೆ ಸಂಗೀತ ರಸಮಂಜರಿ ಕಾರ್ಯಕ್ರಮ ನೀಡಲಾಗುತ್ತಿತ್ತು. ಹೀಗಾಗಿ ಈ ಕಲಾ ಕೇಂದ್ರಕ್ಕೆ ಜನಪದ ಕಲಾವಿದರಾಗಿ  ನೇಮಕಗೊಂಡಿದ್ದರು. ಅಲ್ಲಿಗೆ ಬಂದ ಪ್ರವಾಸಿಗರಿಗೆ ಮಲ್ಲೇಶ್ ಅವರು ಜನಪದ ಗೀತೆ, ತತ್ವಪದ, ಭಾವಗೀತೆಗಳ ಮೂಲಕ ರಸಮಂಜರಿ ನೀಡುತ್ತಿದ್ದರು.

ಕೋವಿಡ್ ಬದಲಿಸಿದ ಬದುಕು: ಪ್ರೇಕ್ಷಕರ ಅಭಿರುಚಿಯನ್ನು ಕಂಡು ಮತ್ತಷ್ಟು ಪ್ರೇರಣೆ ಹೊಂದಿದ ಮಲ್ಲೆಶ್ ಅವರು 2019ರಲ್ಲಿ ಕೋವಿಡ್ ನಿಂದಾಗಿ ರೆಸಾರ್ಟ್‌ಗಳು ಬಂದ್‌ ಆದಾಗ ತಮ್ಮ ಕಲಾ ಕ್ಷೇತ್ರವನ್ನು ಶಾಲೆ,  ಕಾಲೇಜುಗಳತ್ತ ಬದಲಾಯಿಸಿಕೊಂಡರು.  ಎನ್‌ಎಸ್‌ಎಸ್ ಶಿಬಿರ, ಗ್ರಾಮ ಪಂಚಾಯಿತಿಗಳ ಜಾಗೃತಿ ಅರಿವು ಕಾರ್ಯಕ್ರಮಗಳಲ್ಲಿ ತಾವೇ ಕಟ್ಟಿದ ಪರಿಸರ ಗೀತೆ ‘ಎಲ್ಲಿಹೋದವೋ, ಮಾಯವಾದವೋ, ಗಿಡಮರ, ಪ್ರಾಣಿಪಕ್ಷಿ' ಹಾಗೂ ತಂಬಾಕಿನಿಂದಾಗುವ ಪರಿಸರ ಮತ್ತು ಆರೋಗ್ಯ ಹಾನಿ ಕುರಿತು ಹಾಡುತ್ತಾ ಜನ ಜಾಗೃತಿ ಮೂಡಿಸುತ್ತಿದ್ದರು.

ಕೋವಿಡ್ ಕರಗಿ ಪರಿಸ್ಥಿತಿ ತಿಳಿಯಾದಾಗ ಮಲ್ಲೇಶ್ ಅವರು ಮತ್ತೆ ರೆಸಾರ್ಟ್ ಕಲಾಕೇಂದ್ರದತ್ತ ಮುಖಮಾಡಿದರು. ಇದೀಗ ಕುಶಾಲನಗರ ಬಳಿಯ ಗುಡ್ಡೆಹೊಸೂರಿನ ಕಲಾಕೇಂದ್ರದಲ್ಲಿ ಕಾಯಂ ಕಲಾವಿದರಾಗಿ ಸೇರ್ಪಡೆಗೊಂಡು ಕಲಾ ಪ್ರಿಯರಿಗೆ ಜನಪದ, ಭಾವಗೀತೆ, ತತ್ವಪದ ಹಾಗೂ ಚಿತ್ರಗೀತೆಗಳ ಸವಿ ಉಣಿಸುತ್ತಿದ್ದಾರೆ.

ತ್ಯಜಿಸಿದ ಶಿಕ್ಷಕ ವೃತ್ತಿ: ಪಿಯು ವರೆಗೆ ವ್ಯಾಸಂಗ ಮಾಡಿ ಶಿಕ್ಷಕ ಶಿಕ್ಷಣ ತರಬೇತಿ ಪಡೆದ ಮಲ್ಲೇಶ್ ಅವರು 14 ವರ್ಷ  ಹೊನ್ನಾಪುರದ ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಕರಾಗಿದ್ದರು. ಪೌರಾಣಿಕ ನಾಟಕ ಕಲಿಸುತ್ತಿದ್ದ ತಂದೆ ಜವರಯ್ಯ, ಸೋಬಾನೆ ಹಾಡುಗಳನ್ನು ಹಾಡುತ್ತಿದ್ದ ತಾಯಿ ಜಾನಕಮ್ಮ ಅವರಿಂದ ಹಾಡುವುದನ್ನು ಅಭ್ಯಾಸ ಮಾಡಿಕೊಂಡ ಮಲ್ಲೇಶ್ ಶಿಕ್ಷಕ ವತ್ತಿಯನ್ನು ಬಿಟ್ಟು ಹಾಡುಗಾರನಾದುದು ಅವರ ಕಲಾ ಪ್ರತಿಭೆಗೆ ಸಾಕ್ಷಿಯಾಗಿದೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ವಿವಿಧ ಸಂಘಸಂಸ್ಥೆಗಳು ಆಯೋಜಿಸುವ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಬೆಂಗಳೂರು, ಮೈಸೂರು, ಹಾಸನ ಮೊದಲಾದ ಭಾಗಗಳಲ್ಲಿ ಕಾರ್ಯಕ್ರಮ ನೀಡಿದ್ದಾರೆ. 49 ವಯಸ್ಸಿನ ಮಲ್ಲೇಶ್ ಅವರ  ಪ್ರತಿಭೆ ಮೆಚ್ಚಿದ ವಿವಿಧ ಸಂಘಸಂಸ್ಥೆಗಳು ಹಲವು ಪ್ರಶಸ್ತಿ ನೀಡಿ ಗೌರವಿಸಿವೆ.

ಕುಶಾಲನಗರ ಬಳಿಯ ರೆಸಾರ್ಟ್ ಒಂದರಲ್ಲಿ ಜನಪದ ಹಾಡುಗಳನ್ನು ಹಾಡಿದ ಕಲಾವಿದ ಮಲ್ಲೇಶ್
ಕುಶಾಲನಗರ ಬಳಿಯ ರೆಸಾರ್ಟ್ ಒಂದರಲ್ಲಿ ಜನಪದ ಹಾಡುಗಳನ್ನು ಹಾಡಿದ ಕಲಾವಿದ ಮಲ್ಲೇಶ್
ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಹಾಡುವ ಮಲ್ಲೆಶ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.