
ಕೊಡಗು ಮಾನವ ವನ್ಯಜೀವಿ ಸಂಘರ್ಷ ಉಪಶಮನ ಪ್ರತಿಷ್ಠಾನ ನಿಧಿ ವತಿಯಿಂದ ಸುಸ್ಥಿರ ಅಭಿವೃದ್ಧಿ ಚಟುವಟಿಕೆ ಅಂಗವಾಗಿ ಕಾಡಂಚಿನ ಗ್ರಾಮಸ್ಥರಿಗೆ ಸ್ವ ಉದ್ಯೋಗ ಕೈಗೊಳ್ಳಲು ಅರಣ್ಯ ಇಲಾಖೆಯಿಂದ ವಿವಿಧ ಸವಲತ್ತುಗಳನ್ನು
ಮಡಿಕೇರಿ: ಕಾಡನ್ನು ಉಳಿಸಿಕೊಂಡೇ ಅಭಿವೃದ್ಧಿಯತ್ತ ಹೆಜ್ಜೆ ಹಾಗಬೇಕು. ಎರಡರ ನಡುವೆ ಸಮತೋಲನ ಕಾಪಾಡಬೇಕು ಎಂದು ಮುಖ್ಯಮಂತ್ರಿಯ ಕಾನೂನು ಸಲಹೆಗಾರ ಹಾಗೂ ಶಾಸಕ ಎ.ಎಸ್.ಪೊನ್ನಣ್ಣ ಪ್ರತಿಪಾದಿಸಿದರು.
ತಾಲ್ಲೂಕಿನ ಕೊಯನಾಡು ವಲಯ ಅರಣ್ಯ ಕಚೇರಿ ಬಳಿ ನೂತನವಾಗಿ ನಿರ್ಮಿಸಿರುವ ಅಧಿಕಾರಿಗಳ ವಸತಿಗೃಹದ ಉದ್ಘಾಟನೆ ನಡೆಸಿ, ಅರಣ್ಯ ಇಲಾಖೆ ವತಿಯಿಂದ ವಿವಿಧ ಸವಲತ್ತುಗಳನ್ನು ಫಲಾನುಭವಿಗಳಿಗೆ ವಿತರಿಸಿ ಸೋಮವಾರ ಅವರು ಮಾತನಾಡಿದರು.
ಸ್ಥಳೀಯರು ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ಅನ್ಯೋನ್ಯತೆಯಿಂದ ಇರಬೇಕು. ಕಾಡನ್ನು ಉಳಿಸಬೇಕು. ನಾಡಿನ ಜನರು ಸಹ ಅಭಿವೃದ್ಧಿಯತ್ತ ಸಾಗಬೇಕು. ಒಟ್ಟಾರೆ ಸಮತೋಲನದಿಂದ ಎಲ್ಲರೂ ಬದುಕು ಕಟ್ಟಿಕೊಳ್ಳುವಂತಾಗಬೇಕು ಎಂದು ಅವರು ಅಭಿಪ್ರಾಯಪಟ್ಟರು.
ಕೊಡಗು ಮಾನವ ವನ್ಯಜೀವಿ ಸಂಘರ್ಷ ಉಪಶಮನ ಪ್ರತಿಷ್ಠಾನ ನಿಧಿ ವತಿಯಿಂದ ಸುಸ್ಥಿರ ಅಭಿವೃದ್ಧಿ ಚಟುವಟಿಕೆ ಅಂಗವಾಗಿ ಕಾಡಂಚಿನ ಗ್ರಾಮಸ್ಥರಿಗೆ ಸ್ವ ಉದ್ಯೋಗ ಕೈಗೊಳ್ಳಲು ಅರಣ್ಯ ಇಲಾಖೆಯಿಂದ ವಿವಿಧ ಸವಲತ್ತುಗಳ ವಿತರಣೆಯ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಸ್ವಂತ ಶಕ್ತಿಯಿಂದ ಜೀವನ ರೂಪಿಸಿಕೊಳ್ಳಬೇಕು ಎಂಬ ಉದ್ದೇಶದಿಂದ ಜೇನು ಸಾಕಾಣಿಕೆಯ ಪೆಟ್ಟಿಗೆಯನ್ನು 30 ಜನರಿಗೆ ವಿತರಿಸಲಾಗಿದೆ. ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಅನುಕೂಲವಾಗಲು ಡಿಜಿಟಲ್ ಸಾಕ್ಷರತೆ ಸಂಬಂಧ ಲ್ಯಾಪ್‍ಟಾಪ್ ಮತ್ತು ಪ್ರಾಜೆಕ್ಟರ್ ವಿತರಿಸಲಾಗಿದೆ. ಹಾಗೆಯೇ ಮಹಿಳೆಯರ ಸ್ವ ಉದ್ಯೋಗಕ್ಕಾಗಿ 6 ಜನ ಮಹಿಳೆಯರಿಗೆ ಹೊಲಿಗೆ ಯಂತ್ರ ವಿತರಿಸಲಾಗಿದೆ ಎಂದು ಮಾಹಿತಿ ನೀಡಿದರು.
ಗ್ರಾಮೀಣ ಜನರು ಸರ್ಕಾರದ ಸೌಲಭ್ಯಗಳನ್ನು ಪಡೆದು ಸ್ವ ಉದ್ಯೋಗ ಕೈಗೊಂಡು ಆರ್ಥಿಕವಾಗಿ ಸಬಲರಾಗುವತ್ತ ಗಮನಹರಿಸಬೇಕು ಎಂದು ಸಲಹೆ ನೀಡಿದ ಅವರು, ಸ್ವ ಉದ್ಯೋಗ ಕೈಗೊಳ್ಳುವುದರಿಂದ ಜವಾಬ್ದಾರಿ ಮತ್ತು ಹೊಣೆಗಾರಿಕೆ ಹೆಚ್ಚಾಗಲಿದೆ. ಆ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಸ್ವ ಉದ್ಯೋಗ ಕೈಗೊಂಡು ಪ್ರಗತಿ ಸಾಧಿಸುವತ್ತ ಗಮನಹರಿಸಬೇಕು ಎಂದರು.
ಕೊಡಗು ಜಿಲ್ಲೆಯಲ್ಲಿ ಜಮ್ಮಾಬಾಣೆ ಭೂಮಿಗೆ ಸಂಬಂಧಿಸಿದಂತೆ ತಿದ್ದುಪಡಿ ವಿದೇಯಕಕ್ಕೆ ಅಂಗೀಕಾರ ದೊರೆತಿದ್ದು, ಜಮ್ಮಾ ಹಿಡುವಳಿದಾರರು ಎದುರಿಸುತ್ತಿದ್ದ ಬಹುವರ್ಷಗಳ ಸಮಸ್ಯೆಗೆ ಪರಿಹಾರ ದೊರಕಿದೆ ಎಂದು ಹೇಳಿದರು.
ಪರಿಶಿಷ್ಟರಲ್ಲಿ ಒಳ ಮೀಸಲಾತಿ, ಹಾಗೆಯೇ ದ್ವೇಷ ಭಾಷಣ ನಿಷೇಧ ಸಂಬಂಧ ಕಾಯ್ದೆ ಜಾರಿ, ಹೀಗೆ ಹಲವು ವಿಧೇಯಕ ಮಂಡಿಸಿ ಕಾಯ್ದೆ ಜಾರಿಗೊಳಿಸಲಾಗಿದೆ ಎಂದು ಅವರು ತಿಳಿಸಿದರು.
ಉಪ ಅರಣ್ಯ ಸಂರಕ್ಷಣಾಧಿಕಾರಿ ಅಭಿಷೇಕ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸೆಂದಿಲ್ ಕುಮಾರ್, ವಲಯ ಅರಣ್ಯಾಧಿಕಾರಿ ದೇಚಮ್ಮ, ಸ್ಥಳೀಯರಾದ ಪಿ.ಎಲ್.ಸುರೇಶ್, ಕಾಡುಮನೆ ಪುರುಷೋತ್ತಮ, ಕುಸುಮಾಕರ, ಹರೀಶ್ ನಿರಂಜನ, ಆಶಾ ಭಾಗವಹಿಸಿದ್ದರು.
ಡಿ.ಸಿ. ಸಿಸಿಎಫ್ ಅಂಗಳಕ್ಕೆ
ಕೊಯನಾಡು ಶಾಲೆ ವಿಷಯ ಕೊಯನಾಡು ಶಾಲೆ ನಿರ್ಮಾಣಕ್ಕಾಗಿ ಗುರುತಿಸಲಾಗಿದ್ದ ಸ್ಥಳ ವೀಕ್ಷಿಸಿದ ಶಾಸಕ ಎ.ಎಸ್.ಪೊನ್ನಣ್ಣ ‘ಸದ್ಯ ಶಾಲಾ ಕಟ್ಟಡ ನಿರ್ಮಾಣ ಸಂಬಂಧ ಜಿಲ್ಲಾಧಿಕಾರಿಗಳು ಮತ್ತು ಮುಖ್ಯ ಅರಣ್ಯ ಸಂರಕ್ಷಾಧಿಕಾರಿ ಅವರು ಚರ್ಚಿಸಿ ಅಂತಿಮಗೊಳಿಸಬೇಕಿದೆ. ಜೊತೆಗೆ ಭೂಮಿಯು ಶಾಲಾ ಶಿಕ್ಷಣ ಇಲಾಖೆ ಹೆಸರಿಗೆ ವರ್ಗಾವಣೆಯಾಗಬೇಕಿದೆ’ ಎಂದರು. ಈ ಹಿಂದೆ ಜಾಗವನ್ನು ಗುರುತಿಸಲಾಗಿದ್ದು ಸಮನ್ವಯತೆ ಕೊರತೆಯಿಂದ ಭೂಮಿ ಹಸ್ತಾಂತರವಾಗಿರಲಿಲ್ಲ. ಆದ್ದರಿಂದ ಈ ಜಾಗ ಗುರುತಿಸಲಾಗಿದ್ದು ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದು ಹೇಳಿದರು. ಈಗಾಗಲೇ ಶಾಲಾ ಕಟ್ಟಡ ನಿರ್ಮಾಣಕ್ಕೆ ಸರ್ಕಾರದಿಂದ ₹ 40 ಲಕ್ಷ ಬಿಡುಗಡೆಯಾಗಿದ್ದು ಉಳಿದ ಹಣವನ್ನು ಬಿಡುಗಡೆ ಮಾಡಿಸಲಾಗುವುದು ಎಂದು ಹೇಳಿದರು. ಕೊಯನಾಡು ಭಾಗದಲ್ಲಿ ಹಲವು ಕುಟುಂಬಗಳಿದ್ದು ಇಲ್ಲಿನ ಮಕ್ಕಳು ಬೇರೆಡೆಗೆ ತೆರಳಿ ವಿದ್ಯಾಭ್ಯಾಸ ಮಾಡಬೇಕಿರುವುದು ಕಷ್ಟಸಾಧ್ಯವಾಗಿದೆ. ಆದ್ದರಿಂದ ಸ್ಥಳೀಯರ ಒತ್ತಾಯದಂತೆ ಶಾಲಾ ಕಟ್ಟಡ ನಿರ್ಮಾಣಕ್ಕೆ ಮುಂದಾಗಲಾಗಿದೆ. ಆದಷ್ಟು ಶೀಘ್ರ ಈ ಕಾರ್ಯ ಆಗಲಿದೆ ಎಂದರು. ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಬಸವರಾಜು ಕ್ಷೇತ್ರ ಶಿಕ್ಷಣಾಧಿಕಾರಿ ಮಹೇಶ್ ಮುಖಂಡ ಸೂರಜ್ ಹೊಸೂರು ಭಾಗವಹಿಸಿದ್ದರು. ಕಳೆದ 2 ವರ್ಷದ ಹಿಂದೆ ಮಳೆಗಾಲದ ಅವಧಿಯಲ್ಲಿ ಕೊಯನಾಡು ಶಾಲೆ ಹಿಂಬದಿ ಬರೆಕುಸಿದು ಅಪಾಯಕಾರಿ ವಾತಾವರಣ ನಿರ್ಮಾಣವಾಗಿತ್ತು. ನಂತರ ಶಾಲೆಯನ್ನು ಸ್ಥಗಿತಗೊಳಿಸಿ ಸಂಪಾಜೆಯ ಸರ್ಕಾರಿ ಶಾಲೆಗೆ ಮಕ್ಕಳನ್ನು ಕಳುಹಿಸಿಕೊಡಲಾಗುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.