ಮಡಿಕೇರಿ: ಮಾನವೀಯ ಮೌಲ್ಯಗಳನ್ನು ಮರೆತಿರುವುದು ಅನೇಕ ಸಮಸ್ಯೆಗಳಿಗೆ ಕಾರಣವಾಗಿದೆ ಎಂದು ಕೊಡಗು ವಿಶ್ವವಿದ್ಯಾಲಯದ ವಿಶೇಷ ಅಧಿಕಾರಿ(ಪರೀಕ್ಷಾಂಗ) ಮೇಚಿರ ರವಿಶಂಕರ್ ನಾಣಯ್ಯ ಅಭಿಪ್ರಾಯಪಟ್ಟರು.
ಇಲ್ಲಿ ಭಾನುವಾರ ನಡೆದ ಕೊಡಗು ಪ್ರೆಸ್‌ಕ್ಲಬ್ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಜನರಲ್ಲಿ ಮತ್ತೆ ಮೌಲ್ಯಗಳನ್ನು ಮೂಡಿಸುವಲ್ಲಿ ಪತ್ರಿಕಾ ಮಾಧ್ಯಮದ ಪಾತ್ರ ಮಹತ್ತರವಾಗಿದೆ. ಪೋಷಕರು ಮಕ್ಕಳಿಗೆ ಎಳೆ ವಯಸ್ಸಿನಿಂದಲೇ ಜೀವನದ ಮೌಲ್ಯಗಳನ್ನು ಕಲಿಸಿಕೊಡಬೇಕು ಎಂದರು.
ಮಡಿಕೇರಿ ತಾಲ್ಲೂಕು ಎಸ್‌ಎನ್‌ಡಿಪಿ ಅಧ್ಯಕ್ಷ ಟಿ.ಆರ್.ವಾಸುದೇವ್ ಮಾತನಾಡಿ, ‘ ಪ್ರಭಾವಶಾಲಿ ಬರಹಗಳಿಂದ ಸಮಾಜದ ಅಂಕು-ಡೊಂಕನ್ನು ತಿದ್ದುತ್ತಾ ಸದಾ ಸಮಾಜದ ಪರ ಕೆಲಸ ಮಾಡುವ ಪತ್ರಕರ್ತರ ಸೇವೆ ಶ್ಲಾಘನೀಯ’ ಎಂದು ಹೇಳಿದರು.
ಕೊಡಗು ಪ್ರೆಸ್ ಕ್ಲಬ್ ನೀಡುವ ವಾರ್ಷಿಕ ಪ್ರಶಸ್ತಿಯನ್ನು ಪತ್ರಕರ್ತರಾದ ಆನಂದ್ ಕೊಡಗು, ಎಚ್.ಜೆ.ರಾಕೇಶ್, ಕೆ.ಎಂ.ಇಸ್ಮಾಯಿಲ್ ಕಂಡಕರೆ ಅವರಿಗೆ ಪ್ರದಾನ ಮಾಡಲಾಯಿತು. ತಲಾ ₹ 5 ಸಾವಿರ ಹಾಗೂ ಫಲಕ ನೀಡಲಾಯಿತು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ 2023–24ನೇ ಸಾಲಿನ ಪ್ರಶಸ್ತಿಗಳಿಗೆ ಭಾಜನರಾದ ಕಾಯಪಂಡ ಶಶಿ ಸೋಮಯ್ಯ, ಪಿ.ವಿ.ಅಕ್ಷಯ್, ಯು.ಎಂ.ಜಯಂತಿ, ಇ.ಆರ್.ವಿಶ್ವಕುಮಾರ್, ಮೈಸೂರು ದಿಗಂತ ದತ್ತಿನಿಧಿ ಪ್ರಶಸ್ತಿ ಪಡೆದ ಬಾಚರಣಿಯಂಡ ಅನು ಕಾರ್ಯಪ್ಪ ಅವರನ್ನು ಸನ್ಮಾನಿಸಲಾಯಿತು.
ಕೊಡಗು ಪ್ರೆಸ್‌ಕ್ಲಬ್ ಸೌಹಾರ್ದ ಸಹಕಾರ ಸಂಘದ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ, ಪ್ರೆಸ್‌ಕ್ಲಬ್ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ, ಪದಾಧಿಕಾರಿಗಳಾದ ಆದರ್ಶ್ ಅದ್ಕಲೇಗಾರ್, ನವೀನ್ ಡಿಸೋಜ, ವನಿತಾ ಚಂದ್ರಮೋಹನ್, ತೇಜಸ್ ಪಾಪಯ್ಯ, ಕೆ.ಜೆ.ಶಿವರಾಜ್, ವಿ.ವಿ ಅರುಣ್ ಕುಮಾರ್, ನಿರ್ದೇಶಕರಾದ ಕೆ.ಎಂ.ವಿನೋದ್, ಮಾಗುಲು ಲೋಹಿತ್, ಕೆ.ಎಸ್. ಲೋಕೇಶ್, ಬಿ.ಜಿ.ಮಂಜು, ಕೆ.ಎಂ.ಇಸ್ಮಾಯಿಲ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.