ADVERTISEMENT

ಮಡಿಕೇರಿ: ಒಗ್ಗಟ್ಟಿಗೆ ಕರೆ ನೀಡಿದ ವಿಶ್ವ ಹಿಂದೂ ಪರಿಷತ್ತಿನ ಸ್ಥಾಪನಾ ದಿನ

ಮಡಿಕೇರಿಯಲ್ಲಿ ನಡೆದ ವಿಶ್ವ ಹಿಂದೂ ಪರಿಷತ್ತಿನ ಧಾರ್ಮಿಕ ಸಭಾ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2024, 5:11 IST
Last Updated 29 ಆಗಸ್ಟ್ 2024, 5:11 IST
ಮಡಿಕೇರಿಯ ಬಾಲಭವನದಲ್ಲಿ ಬುಧವಾರ ನಡೆದ ವಿಶ್ವ ಹಿಂದೂ ಪರಿಷತ್ತಿನ ಸ್ಥಾ‍ಪನಾ ದಿನ ಮತ್ತು ಷಷ್ಠಿಪೂರ್ತಿ ಸಮಾರೋಪ ಸಂಭ್ರಮದ ಪ್ರಯುಕ್ತ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಉಕ್ಕುಡದ ರಾಜರಾಜೇಶ್ವರಿ ದೇವಸ್ಥಾನದ ಧರ್ಮದರ್ಶಿ ಎಚ್.ಎನ್.ಗೋವಿಂದಸ್ವಾಮಿ ಮಾತನಾಡಿದರು. ಕೆ.ಎಸ್.ಗುರುಪ್ರಸಾದ್, ಗೀತಾ ಗಿರೀಶ್, ಜಿ.ರಾಜೇಂದ್ರ, ಚಿ.ನಾ.ಸೋಮೇಶ್, ನರಸಿಂಹ ಭಾಗವಹಿಸಿದ್ದರು
ಮಡಿಕೇರಿಯ ಬಾಲಭವನದಲ್ಲಿ ಬುಧವಾರ ನಡೆದ ವಿಶ್ವ ಹಿಂದೂ ಪರಿಷತ್ತಿನ ಸ್ಥಾ‍ಪನಾ ದಿನ ಮತ್ತು ಷಷ್ಠಿಪೂರ್ತಿ ಸಮಾರೋಪ ಸಂಭ್ರಮದ ಪ್ರಯುಕ್ತ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಉಕ್ಕುಡದ ರಾಜರಾಜೇಶ್ವರಿ ದೇವಸ್ಥಾನದ ಧರ್ಮದರ್ಶಿ ಎಚ್.ಎನ್.ಗೋವಿಂದಸ್ವಾಮಿ ಮಾತನಾಡಿದರು. ಕೆ.ಎಸ್.ಗುರುಪ್ರಸಾದ್, ಗೀತಾ ಗಿರೀಶ್, ಜಿ.ರಾಜೇಂದ್ರ, ಚಿ.ನಾ.ಸೋಮೇಶ್, ನರಸಿಂಹ ಭಾಗವಹಿಸಿದ್ದರು   

ಮಡಿಕೇರಿ: ಇಲ್ಲಿನ ಬಾಲಭವನದಲ್ಲಿ ಬುಧವಾರ ನಡೆದ ವಿಶ್ವ ಹಿಂದೂ ಪರಿಷತ್ತಿನ ಸ್ಥಾ‍ಪನಾ ದಿನದಲ್ಲಿ ಮಾತನಾಡಿದ ಎಲ್ಲರೂ ಹಿಂದೂ ಧರ್ಮಿಯರೆಲ್ಲರು ಬೇಧಭಾವ ಮರೆತು ಒಂದಾಗಬೇಕು ಎಂಬ ಕರೆಯನ್ನು ನೀಡಿದರು.

ವಿಶ್ವ ಹಿಂದೂ ಪರಿಷತ್ತಿನ ಸ್ಥಾ‍ಪನಾ ದಿನ ಮತ್ತು ಷಷ್ಠಿಪೂರ್ತಿ ಸಮಾರೋಪ ಸಂಭ್ರಮದ ಪ್ರಯುಕ್ತ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಎಲ್ಲರೂ ಸಂಘಟನಾತ್ಮಕವಾಗಿ ಒಂದುಗೂಡುವ ಕುರಿತೇ ಮಾತನಾಡಿದರು.

ಉಕ್ಕುಡದ ರಾಜರಾಜೇಶ್ವರಿ ದೇವಸ್ಥಾನದ ಧರ್ಮದರ್ಶಿ ಎಚ್.ಎನ್.ಗೋವಿಂದಸ್ವಾಮಿ ಮಾತನಾಡಿ, ‘ಹಲವು ಸಂಘಟನೆಗಳು ಹಿಂದೂತ್ವದ ರಕ್ಷಣೆಗಾಗಿ ಹೋರಾಡುತ್ತಿವೆ. ಇವುಗಳೊಂದಿಗೆ ಎಲ್ಲ ಹಿಂದೂಗಳೂ ಒಗ್ಗಟ್ಟಾಗಬೇಕು’ ಎಂದು ಹೇಳಿದರು.

ADVERTISEMENT

ಪತ್ರಿಕೋದ್ಯಮಿ ಜಿ.ರಾಜೇಂದ್ರ ಮಾತನಾಡಿ, ‘ಸಂಘಟನಾತ್ಮಕ ಶಾಂತಿಯುತ ಹೋರಾಟದಿಂದ ಮಾತ್ರ ಸನಾತನ ಧರ್ಮ ಉಳಿಯಲು ಸಾಧ್ಯ’ ಎಂದು ಪ್ರತಿಪಾದಿಸಿದರು.

ಭಗವದ್ಗೀತೆಯ ಶ್ಲೋಕಗಳನ್ನು ಉಲ್ಲೇಖಿಸಿ ಮಾತನಾಡಿದ ಅವರು, ಸನಾತನ ಧರ್ಮ ಹಾಗೂ ಕೃಷ್ಣನ ಮೌಲ್ಯಗಳನ್ನು ಇಂದಿನ ತಲೆಮಾರಿಗೆ ‍‍ಪರಿಚಯಿಸುವ ಕೆಲಸ ಮಾಡಬೇಕು ಎಂದರು.

ವಿಶ್ವ ಹಿಂದೂ ಪರಿಷತ್ತಿನ ಕೊಡಗು ಜಿಲ್ಲಾ ಘಟಕದ ಉಪಾಧ್ಯಕ್ಷ ನರಸಿಂಹ ಮಾತನಾಡಿ, ‘ನಮ್ಮ ಹೆಣ್ಣುಮಕ್ಕಳ ಮೇಲೆ ಅನ್ಯಾಯವಾದಾಗ ನಾವೆಲ್ಲರೂ ಸಂಘಟಿತರಾಗಿ ಹೋರಾಡಬೇಕು’ ಎಂದು ಕರೆ ನೀಡಿದರು.

‘ನಾವೆಲ್ಲರೂ ಸಂಘಟಿತರಾಗಬೇಕು. ಸಂಘಟಿತರಾದರೆ ಮಾತ್ರ ನಮ್ಮ ಮುಂದಿನ ತಲೆಮಾರು ಉಳಿಯುತ್ತದೆ’ ಎಂದು ಹೇಳಿದರು.

ಪ‍ರಿಷತ್ತಿನ ಮಡಿಕೇರಿ ನಗರ ಪ್ರಖಂಡದ ಅಧ್ಯಕ್ಷ ಕೆ.ಎಸ್.ಗುರುಪ್ರಸಾದ್ ಮಾತನಾಡಿ, ‘ಎಲ್ಲರೂ ಒಗ್ಗಟ್ಟಾಗಿ ಸಾಗೋಣ’ ಎಂದು ತಿಳಿಸಿದರು.

ಆರ್ಥಿಕ ಸಲಹೆಗಾರರಾದ ಗೀತಾ ಗಿರೀಶ್ ಅವರು, ‘ಪಾಶ್ಚಾತೀಕರಣದಿಂದ ನಮ್ಮ ಸಂಸ್ಕೃತಿಯನ್ನು ಬಿಡುತ್ತಿದ್ದೇವೆ’ ಎಂದು ಕಳವಳ ವ್ಯಕ್ತಪಡಿಸಿದರು.

ಯಾವುದೇ ವಿಚಾರದಲ್ಲಾದರೂ ಸರಿ ವೈಭವಿಕರಣ ಬೇಡ ಸರಳೀಕರಣ ಇರಬೇಕು. ಪ್ಲಾಸ್ಟಿಕ್ ಬಿಟ್ಟು ಪರಿಸರ ಉಳಿಸಬೇಕು. ಗೋಪೂಜೆ, ಅಶ್ವತ್ಥ ವೃಕ್ಷದ ಆರಾಧನೆ, ದೇವರ ನಾಮಸ್ಮರಣೆ ನಿತ್ಯದ ರೂಢಿಯಾಗಬೇಕು ಎಂದು ಹೇಳಿದರು.

ಹಿರಿಯ ಪತ್ರಕರ್ತ ಚಿ.ನಾ.ಸೋಮೇಶ್ ಮಾತನಾಡಿ, ‘ಕೊಡಗಿನಲ್ಲಿ ಶೈಕ್ಷಣಿಕವಾಗಿ, ವೈದ್ಯಕೀಯವಾಗಿ ವಿವಿಧ ಸೇವಾ ಚಟುವಟಿಕೆಗಳನ್ನು ನಿರ್ವಹಿಸಿಕೊಂಡು ಬಂದು 60  ವರ್ಷಗಳನ್ನು ಪೂರೈಸಿರುವ ಸಂಘಟನೆ ಭವಿಷ್ಯದಲ್ಲಿ ಇನ್ನಷ್ಟು ಪ್ರವರ್ಧಮಾನಕ್ಕೆ ಬೆಳೆಯಲಿ’ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಚಿ.ನಾ.ಸೋಮೇಶ್ ಅವರ ‘ಭಗವಂತನ ಬೆಳಕು ಭಾರತ’ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು. ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ರಮೇಶ್ ಸ್ವಾಗತ ಕೋರಿದರೆ, ಸಹ ಕಾರ್ಯದರ್ಶಿ ಸಂತೋಷ್ ಸರ್ವರಿಗೂ ವಂದಿಸಿದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಭಿಕರು
ಎಲ್ಲ ಹಿಂದೂಗಳೂ ಒಗ್ಗಟ್ಟಾಗಬೇಕು ಸನಾತನ ಧರ್ಮ, ಕೃಷ್ಣನ ಮೌಲ್ಯ ಪರಿಚಯಿಸಿ ಸಂಘಟಿತರಾದರೆ ನಮ್ಮ ಮುಂದಿನ ತಲೆಮಾರು ಉಳಿಯಲಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.