
ಕುಶಾಲನಗರ: ಇಲ್ಲಿನ ಜನರ ಆರಾಧ್ಯ ದೈವ ಗಣಪತಿ ದೇವಾಲಯದ 105ನೇ ವಾರ್ಷಿಕ ಬ್ರಹ್ಮ ರಥೋತ್ಸವ ಶನಿವಾರ ಸಹಸ್ರಾರು ಭಕ್ತಾದಿಗಳ ಸಮ್ಮುಖದಲ್ಲಿ ಶ್ರದ್ಧಾಭಕ್ತಿಯೊಂದಿಗೆ ವಿಜೃಂಭಣೆಯಿಂದ ಜರುಗಿತು.
ಅಯ್ಯಪ್ಪ ಸ್ವಾಮಿ ವೃತಧಾರಿಗಳ ಜಯಘೋಷ, ಭಕ್ತರ ಉತ್ಸಾಹದ ಮಧ್ಯೆ ಶ್ರೀ ಗಣಪತಿ ದೇವರ ರಥವನ್ನು ಎಳೆದು ಭಕ್ತರು ತಮ್ಮ ಭಕ್ತಿ ಮೆರೆದರು.
ಶ್ರೀ ಮಹಾಗಣಪತಿ ದೇವಾಲಯ ಸೇವಾ ಸಮಿತಿ ವತಿಯಿಂದ ಕಾರ್ತೀಕ ಕೃಷ್ಣ ಪಕ್ಷದಲ್ಲಿ ಸಲ್ಲುವ ಅಭಿಜಿನ್ ಶುಭ ಲಗ್ನದಲ್ಲಿ ಮಧ್ಯಾಹ್ನ 1 ಗಂಟೆಗೆ ಶ್ರೀ ಗಣಪತಿ ವಿಗ್ರಹಕ್ಕೆ ವಿಶೇಷ ಪೂಜೆ ಸಲ್ಲಿಸಲಾಯಿತು. ರಥ ಬಲಿ ಮತ್ತು ಪೂಜೆ ಹಾಗೂ ಮಹಾಮಂಗಳಾರತಿ ಬಳಿಕ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.
ದೇವಾಲಯದಲ್ಲಿ ಸಾಂಪ್ರದಾಯಿಕ ಆಚರಣೆಗಳನ್ನು ನೆರವೇರಿಸಿ, ದೇವರ ಉತ್ಸವ ಮೂರ್ತಿಯನ್ನು ಮಂಗಳವಾದ್ಯಗಳ ಜೊತೆಗೆ ದೇವಾಲಯದಿಂದ ಹೊರತಂದು ಭಕ್ತರ ಜಯಘೋಷಗಳ ಮಧ್ಯೆ ರಥದಲ್ಲಿ ಪ್ರತಿಷ್ಠಾಪಿಸಲಾಯಿತು.
ಪಟ್ಟಣ ಸೇರಿ ಸುತ್ತಮುತ್ತಲಿನ ಗ್ರಾಮಗಳಿಂದ ಆಗಮಿಸಿದ್ದ ಸಹಸ್ರಾರು ಭಕ್ತರು ರಥವನ್ನು ಗಣಪತಿ ದೇವಾಲಯದಿಂದ ರಥ ಬೀದಿ ಮೂಲಕ ಆಂಜನೇಯ ದೇವಸ್ಥಾನದವರೆಗೆ ಎಳೆಯುವ ಮೂಲಕ ಭಕ್ತಿ ಸಮರ್ಪಿಸಿದರು. ಜೈ, ಜೈ ಗಣೇಶ ಎಂದು ಜಯಕಾರ ಹಾಕಿದರು.
ದೇವಾಲಯದ ಪ್ರಧಾನ ಅರ್ಚಕ ಆರ್.ಕೆ.ನಾಗೇಂದ್ರ ಬಾಬು ನೇತೃತ್ವದಲ್ಲಿ ವಿವಿಧ ಪೂಜಾ ಕಾರ್ಯಕ್ರಮ ನೆರವೇರಿಸಲಾಯಿತು. ದೇವಸ್ಥಾನ ಸಮಿತಿ ಅಧ್ಯಕ್ಷ ಎಂ.ಕೆ.ದಿನೇಶ್ ಮತ್ತು ಕಾರ್ಯದರ್ಶಿ ಬಿ.ಕೆ.ಮುತ್ತಣ್ಣ ನೇತೃತ್ವ ವಹಿಸಿದ್ದರು.
ಮೊದಲು ಪಕ್ಕದ ಊರಿಂದ ಬಂದಿದ್ದ ಗೋವುಗಳಿಗೆ ಗೋಪೂಜೆ ನೆರವೇರಿಸಲಾಯಿತು. ಇದೇ ವೇಳೆ ಅಯ್ಯಪ್ಪ ಮಾಲಾಧಾರಿಗಳು ಗಣಪತಿ ದೇವಾಲಯದ ಎದುರು ರಸ್ತೆಯಲ್ಲಿ ಕರ್ಪೂರ ಹಚ್ಚಿ ಪ್ರಾರ್ಥನೆ ಸಲ್ಲಿಸಿದರು. ಮಾಲಾಧಾರಿಗಳ ಭಜನೆ ಗಮನ ಸೆಳೆಯಿತು. ಮತ್ತೊಂದು ಕಡೆ ಭಾರಿ ಸಂಖ್ಯೆಯಲ್ಲಿ ಸೇರಿದ್ದ ಭಕ್ತರು ರಥದ ಮುಂದೆ ಹಣ್ಣುಕಾಯಿ ಮಾಡಿಸಲು ಮುಗಿಬಿದ್ದರು. ಅರ್ಚಕರು ಭಕ್ತರು ತಂದಿದ್ದ ಹಣ್ಣುಕಾಯಿ ಸ್ವೀಕರಿಸಿ, ದೇವರಿಗೆ ಸಮರ್ಪಿಸಿ ಭಕ್ತರಿಗೆ ಹಿಂತಿರುಗಿಸಿದರು. ಹರಕೆ ಹೊತ್ತಿದ್ದ ಭಕ್ತರು ರಥ ಹೊರಡುವ ವೇಳೆ ರಸ್ತೆಯಲ್ಲಿ ಸಾವಿರಾರು ಈಡುಕಾಯಿ ಒಡೆದು ಭಕ್ತಿ ಪ್ರದರ್ಶಿಸಿದರು. ನವದಂಪತಿಗಳು ಹಾಗೂ ಹರಕೆ ಹೊತ್ತ ಅವಿವಾಹಿತರು ರಥಕ್ಕೆ ಹಣ್ಣು, ಜವನ ಎಸೆದು ತಮ್ಮ ಇಷ್ಟಾರ್ಥ ನೆರವೇರಿಸುವಂತೆ ಪ್ರಾರ್ಥನೆ ಸಲ್ಲಿಸಿದರು.
ದೇವಾಲಯ ವ್ಯಾಪ್ತಿಯಲ್ಲಿ ಬಾಳೆಹಣ್ಣು, ಜವನ ಮಾರಾಟ, ಪೈಪೋಟಿಗೆ ಬಿದ್ದಂತೆ ರಥಕ್ಕೆ ಜವನ ಎಸೆಯುವ ದೃಶ್ಯ ಸಾಮಾನ್ಯವಾಗಿತ್ತು. ಮೊದಲಿಗೆ ದೇವಾಲಯದಲ್ಲಿ ಪಂಚಾಮೃತ ಅಭಿಷೇಕ, ಏಕವಾರ, ರುದ್ರಾಭಿಷೇಕ, ಪುಷ್ಪಾಲಂಕಾರ ನಡೆದವು.
ರಥೋತ್ಸವದ ಅಂಗವಾಗಿ ಗಣಪತಿ ದೇವಸ್ಥಾನ ಹಾಗೂ ಪಟ್ಟಣವನ್ನು ವಿದ್ಯುತ್ ದೀಪಾಲಂಕಾರದಿಂದ ಶೃಂಗರಿಸಲಾಗಿತ್ತು. ಪುರಸಭೆಯ ಪೌರಕಾರ್ಮಿಕರು ಪಟ್ಟಣ ಸ್ವಚ್ಛಗೊಳಿಸಿದ್ದರು. ಜಾತ್ರೆಗೆ ಮೈಸೂರು ಹಾಗೂ ಹಾಸನ ಜಿಲ್ಲೆಗಳ ಗಡಿ ಭಾಗದ ಜನರು ಸೇರಿ ಕೊಡಗು ಜಿಲ್ಲೆಯ ಸಾವಿರಾರು ಜನರು ಪಾಲ್ಗೊಂಡಿದ್ದರು. ಜನಜಂಗುಳಿ ಮಧ್ಯೆ ಯುವಜನರು ಸೆಲ್ಫಿ ಕ್ಲಿಕ್ಕಿಸುವ ದೃಶ್ಯ ಸಾಮಾನ್ಯವಾಗಿತ್ತು. ಭಕ್ತರಿಗೆ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ಅನ್ನಸಂತರ್ಪಣೆ ವ್ಯವಸ್ಥೆ ಮಾಡಲಾಗಿತ್ತು.
ರಥೋತ್ಸವಕ್ಕೆ ಡಿವೈಎಸ್ಪಿ ಚಂದ್ರಶೇಖರ್ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು.
ಶಾಸಕ ಭೇಟಿ: ಶಾಸಕ ಡಾ.ಮಂತರ್ ಗೌಡ, ಮಾಜಿ ಸಚಿವ ಎಂ.ಪಿ.ಅಪ್ಪಚ್ಚುರಂಜನ್ ಗಣಪತಿ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. ಆರತಿ ಹಾಗೂ ಪ್ರಸಾದ ಸ್ವೀಕರಿಸಿದರು.
ಸಮಿತಿಯ ಉಪಾಧ್ಯಕ್ಷ ಆರ್.ಬಾಬು, ಕಾರ್ಯದರ್ಶಿ ಬಿ.ಕೆ.ಮುತ್ತಣ್ಣ, ಖಜಾಂಚಿ ಎಸ್.ಕೆ.ಸತೀಶ್, ಸಹ ಕಾರ್ಯದರ್ಶಿ ಕೆ.ಎನ್.ದೇವರಾಜ್, ನಿರ್ದೇಶಕರಾದ ವಿ.ಡಿ. ಪುಂಡಾರೀಕಾಕ್ಷ, ವಿ.ಪಿ.ಶಶಿಧರ್, ಟಿ.ಆರ್.ಶರವಣಕುಮಾರ್, ಎಚ್.ಎಂ.ಚಂದ್ರು, ವಿಶೇಷ ಆಹ್ವಾನಿತರಾದ ಎಚ್.ಎನ್.ರಾಮಚಂದ್ರ, ಡಿ.ಅಪ್ಪಣ, ಡಿ.ಸಿ.ಜಗದೀಶ್, ಕೆ.ಎನ್.ಸುರೇಶ್, ಕೆ.ಸಿ.ನಂಜುಂಡ ಸ್ಚಾಮಿ, ಎಂ.ಮುನಿರಾಜು, ವ್ಯವಸ್ಥಾಪಕ ಎಸ್.ಕೆ.ಶ್ರೀನಿವಾಸ್ ರಾವ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.