ADVERTISEMENT

ಸುಂಟಿಕೊಪ್ಪ | ಗಣೇಶ ವಿಸರ್ಜನೆ: ಸಿಹಿ ವಿತರಿಸಿದ ಮುಸ್ಲಿಮರು

ಬೋಯಿಕೇರಿಯಲ್ಲಿ ಸೌಹಾರ್ದದ ಆಚರಣೆ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2025, 2:49 IST
Last Updated 2 ಸೆಪ್ಟೆಂಬರ್ 2025, 2:49 IST
ಸುಂಟಿಕೊಪ್ಪ ಸಮೀಪದ ಬೋಯಿಕೇರಿ ಸಿದ್ದಿಬುದ್ಧಿ ವಿನಾಯಕ ದೇವಾಲಯದಲ್ಲಿ ಪ್ರತಿಷ್ಠಾಪಿಸಿದ್ದ ಗೌರಿ ಗಣೇಶ ಮೂರ್ತಿಯ ವಿಸರ್ಜನೋತ್ಸವ ಮೆರವಣಿಗೆ ವೇಳೆ ಮುಸ್ಲಿಮರು ಸಿಹಿ ವಿತರಿಸಿ ಸೌಹಾರ್ದ ಮೆರೆದರು
ಸುಂಟಿಕೊಪ್ಪ ಸಮೀಪದ ಬೋಯಿಕೇರಿ ಸಿದ್ದಿಬುದ್ಧಿ ವಿನಾಯಕ ದೇವಾಲಯದಲ್ಲಿ ಪ್ರತಿಷ್ಠಾಪಿಸಿದ್ದ ಗೌರಿ ಗಣೇಶ ಮೂರ್ತಿಯ ವಿಸರ್ಜನೋತ್ಸವ ಮೆರವಣಿಗೆ ವೇಳೆ ಮುಸ್ಲಿಮರು ಸಿಹಿ ವಿತರಿಸಿ ಸೌಹಾರ್ದ ಮೆರೆದರು   

ಸುಂಟಿಕೊಪ್ಪ: ಹೋಬಳಿ ವ್ಯಾಪ್ತಿಯ ಹಲವೆಡೆ ಭಾನುವಾರ ರಾತ್ರಿ ನಡೆದ ಗೌರಿ, ಗಣೇಶಮೂರ್ತಿ ವಿಸರ್ಜನೋತ್ಸವ ಮೆರವಣಿಗೆ ಸೌಹಾರ್ದಕ್ಕೆ ಸಾಕ್ಷಿಯಾಯಿತು.

ಸಮೀಪದ ಬೋಯಿಕೇರಿ ಸಿದ್ಧಿಬುದ್ಧಿ ವಿನಾಯಕ ದೇವಾಲಯದಲ್ಲಿ ಪ್ರತಿಷ್ಠಾಪಿಸಿದ್ದ ಗೌರಿ ಗಣೇಶ ಮೂರ್ತಿಗೆ ಭಾನುವಾರ ಸಂಜೆ ವಿಶೇಷ ಪೂಜೆ ನೆರವೇರಿಸಲಾಯಿತು. ವಿಸರ್ಜನೋತ್ಸವ ಮೆರವಣಿಗೆ ಬೋಯಿಕೇರಿ ಪ್ರಮುಖ ಬೀದಿಗಳಲ್ಲಿ ನಡೆಯಿತು. 

ಸಾಮರಸ್ಯ ಸಾರಿದ ಮುಸ್ಲಿಮರು:

ADVERTISEMENT

ಬೋಯಿಕೇರಿಯಲ್ಲಿ ನಡೆದ ಗಣೇಶೋತ್ಸವದಲ್ಲಿ ‍ಹಿಂದೂ, ಮುಸ್ಲಿಮರು ಪಾಲ್ಗೊಂಡು ಸಾಮರಸ್ಯ ಮೆರೆದರು. ಮೆರವಣಿಗೆಯು ಮುಖ್ಯ ಬೀದಿಯಲ್ಲಿ ಸಾಗಿ ಮಸೀದಿಯ ಮುಂಭಾಗ ಬರುತ್ತಿದ್ದಂತೆ ಮುಸ್ಲಿಮರು ಎಲ್ಲ ಹಿಂದೂಗಳಿಗೆ ನೀರು, ಸಿಹಿತಿಂಡಿ, ಕೇಕ್‌ ಮತ್ತು‌ ಬಾದಾಮಿ ಜ್ಯೂಸ್‌ ವಿತರಿಸಿದರು. ರಾತ್ರಿ ಸ್ಥಳೀಯ ಕೆರೆಯಲ್ಲಿ ಗಣೇಶ ಮೂರ್ತಿಯನ್ನು ವಿಸರ್ಜಿಸಲಾಯಿತು. 

ಗಣೇಶ್, ಸ್ವಾಗತ್, ರಮೇಶ್, ರೆಹಮತ್ ಖಾನ್, ಸಮ್ಮದ್, ಜಲೀಲ್, ಸಿದ್ದೀಕ್, ಬಸೀರ್ ಸೇರಿದಂತೆ ದೇವಾಲಯ ಸಮಿತಿಯ ಪದಾಧಿಕಾರಿಗಳು ಇದ್ದರು.

ಸಮೀಪದ ಎಮ್ಮೆಗುಂಡಿಯ ಬಾಲಕ ಮಿತ್ರ ಮಂಡಳಿಯಿಂದ ಪ್ರತಿಷ್ಠಾಪಿಸಿದ್ದ ಪ್ರಥಮ ವರ್ಷದ ಗೌರಿ, ಗಣೇಶ ಮೂರ್ತಿಯ ವಿಸರ್ಜನೋತ್ಸವ ಶೋಭಾಯಾತ್ರೆ ನಡೆಯಿತು‌.

ಗಣೇಶ್ ಉಪಾಧ್ಯಾಯ ಅವರ ನೇತೃತ್ವದಲ್ಲಿ ವಿಶೇಷ ಪೂಜೆ ನಡೆಯಿತು. ನಂತರ ಜಯಘೋಷಣೆಯೊಂದಿಗೆ ಹೊರಟ ಮೆರವಣಿಗೆ ಪಟ್ಟಣದ ಕಡೆಗೆ ಆಗಮಿಸಿ ಕನ್ನಡ ವೃತ್ತದಿಂದ‌ ವಾಪಸಾಗಿ ಎಮ್ಮೆಗುಂಡಿಯ ಕೆರೆಯಲ್ಲಿ ವಿಸರ್ಜಿಸಲಾಯಿತು. ಮೆರವಣಿಗೆಯುದ್ದಕ್ಕೂ ಡಿಜೆ ಹಾಡಿಗೆ ಯುವಕ, ಯುವತಿಯರು ಕುಣಿದು ಕುಪ್ಪಳಿಸಿದರು.

ಸಮೀಪದ ಹೊರೂರು ಮಠದ ಗಣೇಶೋತ್ಸವ ಸಮಿತಿಯಿಂದ 5 ದಿನಗಳ ಕಾಲ ಪ್ರತಿಷ್ಠಾಪಿಸಿದ್ದ ಗಣೇಶಮೂರ್ತಿ ವಿಸರ್ಜನೋತ್ಸವ ಮೆರವಣಿಗೆ ಭಾನುವಾರ ಸಂಜೆ ನಡೆಯಿತು. ನೂರಾರು ಭಕ್ತರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಹೊರೂರು ಕೆರೆಯಲ್ಲಿ ವಿಸರ್ಜಿಸಲಾಯಿತು.

ಸಮೀಪದ‌ ನಾರ್ಗಾಣೆ ಗ್ರಾಮದ ಶ್ರೀದೇವಿ ಅಣ್ಣಪ್ಪ ಸ್ವಾಮಿ ದೇವಾಲಯದಲ್ಲಿ 5 ದಿನಗಳಿಂದ ಪ್ರತಿಷ್ಠಾಪಿಸಿದ್ದ ಗಣೇಶ ಮೂರ್ತಿಗೆ ಕೊನೆಯ ವಿಶೇಷ ಪೂಜೆ ನಡೆಯಿತು. ವಿಶೇಷ ಅಲಂಕಾರ ಮಾಡಲಾಗಿತ್ತು, ನೆರೆದಿದ್ದ ಭಕ್ತರಿಗೆ ಅನ್ನಸಂತರ್ಪಣೆ ವಿತರಿಸಲಾಯಿತು. ರಾತ್ರಿ ವಿದ್ಯುತ್ ದೀಪಾಲಂಕೃತ ಮಂಟಪದಲ್ಲಿ ಗೌರಿ ಗಣೇಶನ ಉತ್ಸವ ಮೂರ್ತಿಯ ಮೆರವಣಿಗೆಯು ದೇವಾಲಯದಿಂದ ಹೊರಟು ಗದ್ದೆಹಳ್ಳ ಜಂಕ್ಷನ್‌ಗೆ‌ ಬಂದು ಅಲ್ಲಿಂದ ವಾಪಸಾಗಿ ಶ್ರೀದೇವಿ ಕೆರೆಯಲ್ಲಿ ವಿಸರ್ಜಿಸಲಾಯಿತು. ಸುತ್ತಮುತ್ತಲಿನ ನೂರಾರು ಮಂದಿ ಡಿಜೆ ಹಾಡಿಗೆ ಕುಣಿದು ಕುಪ್ಪಳಿಸಿದರು.

ಕೊಡಗರಹಳ್ಳಿಯಲ್ಲೂ ಮುಸ್ಲಿಮರು ಸಿಹಿ, ಜ್ಯೂಸ್ ಹಂಚಿ ಸೌಹಾರ್ದ ಮೆರೆದರು. ಉಪ್ಲುತೋಡು, ಹಾಲೇರಿ, ಕಂಬಿಬಾಣೆಗಳಲ್ಲೂ ಗಣೇಶ ವಿಸರ್ಜನೆ ನಡೆಯಿತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.