ADVERTISEMENT

ಮಡಿಕೇರಿ | ಬಿತ್ತನೆ ಶುಂಠಿ ಆಯ್ಕೆಯಲ್ಲಿ ಇರಲಿ ಎಚ್ಚರ..

ಗೋಣಿಕೊಪ್ಪಲುವಿನ ಐಸಿಎಆರ್- ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳ ಸಲಹೆ

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2026, 7:54 IST
Last Updated 27 ಫೆಬ್ರುವರಿ 2026, 7:54 IST
ರೈತರು ಶುಂಠಿಗೆ ಬೀಜೋಪಚಾರವನ್ನು ಮಾಡುತ್ತಿರುವುದನ್ನು  ಗೋಣಿಕೊಪ್ಪಲುವಿನ ಐ.ಸಿ.ಎ.ಆರ್-ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು ಪರಿಶೀಲಿಸಿದರು.
ರೈತರು ಶುಂಠಿಗೆ ಬೀಜೋಪಚಾರವನ್ನು ಮಾಡುತ್ತಿರುವುದನ್ನು  ಗೋಣಿಕೊಪ್ಪಲುವಿನ ಐ.ಸಿ.ಎ.ಆರ್-ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು ಪರಿಶೀಲಿಸಿದರು.   

ಮಡಿಕೇರಿ: ಬಿತ್ತನೆಗಾಗಿ ಶುಂಠಿಯನ್ನು ಆಯ್ಕೆ ಮಾಡುವಾಗ ಎಚ್ಚರಿಕೆ ವಹಿಸಬೇಕು ಎಂದು ಗೋಣಿಕೊಪ್ಪಲುವಿನ ಐ.ಸಿ.ಎ.ಆರ್-ಕೃಷಿ ವಿಜ್ಞಾನ ಕೇಂದ್ರ ತಿಳಿಸಿದೆ.

ಬಿತ್ತನೆಯ ಶುಂಠಿಯನ್ನು ಸರಿಯಾಗಿ ಬೀಜೋಪಚಾರ ಮಾಡಿ ನಾಟಿ ಮಾಡಿದರೆ, ಮುಂದೆ ಶುಂಠಿ ಬೆಳೆಯುವ ಪ್ರದೇಶದಲ್ಲಿ ಬರುವ ರೋಗಗಳನ್ನು ತಡೆಗಟ್ಟಬಹುದು. ಆದರೆ, ಕೆಲವು ರೈತರು ಶುಂಠಿಗೆ ಬೀಜೋಪಚಾರವನ್ನು ಸರಿಯಾಗಿ ಮಾಡದೆ ಬಿತ್ತನೆ ಮಾಡುವುದರಿಂದ ಮುಂದೆ ಶುಂಠಿ ಬೆಳೆಯುವ ಪ್ರದೇಶದಲ್ಲಿ ರೋಗಗಳು ತೀವ್ರವಾಗಿ ಹರಡುತ್ತವೆ ಎಂದು ಕೇಂದ್ರದ ಸಸ್ಯ ಸಂರಕ್ಷಣಾ ತಜ್ಞ ವಿ.ವೀರೇಂದ್ರ ಕುಮಾರ್ ಎಚ್ಚರಿಸಿದ್ದಾರೆ.

ಈ ವರ್ಷ ಶುಂಠಿ ಬೆಳೆಯುವವರ ಸಂಖ್ಯೆ ಮತ್ತು ಪ್ರದೇಶ ಹೆಚ್ಚಾಗುವ ಸಂಭವವಿದೆ. ಆದರೆ, ವೈಜ್ಞಾನಿಕ ಮಾಹಿತಿಯಿಲ್ಲದೆ ಶುಂಠಿಯನ್ನು ತಂದು ಬೆಳೆಯುತ್ತಿದ್ದು, ನಂತರದ ದಿನಗಳಲ್ಲಿ ರೋಗಗಳು ಹೆಚ್ಚಾಗಿ ಬೆಳೆಯನ್ನು ಕಳೆದುಕೊಳ್ಳುತ್ತಿರುವುದು ಸಾಮಾನ್ಯ ಸಂಗತಿ ಎಂದು ಹೇಳಿದ್ದಾರೆ.

ADVERTISEMENT

ಸಾಮಾನ್ಯವಾಗಿ ರೈತರು ಬಿತ್ತನೆ ಶುಂಠಿಯನ್ನು ಪೂರ್ವಪರ ವಿಚಾರಿಸದೆ ಬೇರೆ ಬೇರೆ ಊರುಗಳಿಗೆ ಹೋಗಿ ತಂದು, ಬಿತ್ತನೆ ಮಾಡುವುದು ಸಾಮಾನ್ಯವಾಗಿದೆ. ಒಂದು ವೇಳೆ ರೋಗ ಪೀಡಿತ ಶುಂಠಿಯನ್ನು ನಾಟಿ ಮಾಡಿದರೆ, ಮುಂದೆ ಬರುವ ಗೆಡ್ಡೆ ಕೊಳೆ ರೋಗ, ಮಹಾಕಾಳಿ ರೋಗವನ್ನು ಹತೋಟಿ ಮಾಡುವುದು ತುಂಬಾ ಕಷ್ಟದ ಕೆಲಸ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ಶುಂಠಿ ಬೀಜವನ್ನು ಶೇಖರಿಸುವ ಮುನ್ನ ಬಿತ್ತನೆ ಬೀಜದ ಬೀಜೋಪಚಾರ:
ಶುಂಠಿ ಬೀಜವನ್ನು ಸಂಗ್ರಹಿಸುವ ಮೊದಲು, 200 ಕೆ.ಜಿ. ಶುಂಠಿ ಬೀಜವನ್ನು ಪ್ರೊಪಿಕೊನಜೋಲ್ 200 ಮಿ.ಲೀ. ಅಥವಾ ಕಾರ್ಬೆಂಡಜಿಮ್ + ಮ್ಯಾಂಕೋಜೆಬ್ 400 ಗ್ರಾಂ ಅಥವಾ 600 ಗ್ರಾಂ ಮ್ಯಾಂಕೋಜೆಬ್ ಮತ್ತು ಕ್ವಿನಾಲ್‌ಫಾಸ್ 400 ಮಿ.ಲೀ.ಯನ್ನು 200 ಲೀಟರ್ ನೀರಿನಲ್ಲಿ ಮಿಶ್ರಣ ಮಾಡಿ 30 ನಿಮಿಷಗಳು ಕಡ್ಡಾಯವಾಗಿ ನೆನೆಯಲು ಬೀಡಬೇಕು. ನಂತರ ಬಿತ್ತನೆಯ ಶುಂಠಿಯನ್ನು ಹೊರ ತೆಗೆದು 15 ನಿಮಿಷಗಳ ಕಾಲ ನೆರಳಿನಲ್ಲಿ ಒಣಗಿಸಿ ಚೆನ್ನಾಗಿ ಗಾಳಿ ಇರುವ ಸ್ಥಳದಲ್ಲಿ ಶೇಖರಿಸಬೇಕು.

ಸಾವಯವ ಪದ್ಧತಿಯಲ್ಲಿ ಶುಂಠಿ ಬೆಳೆಯುವವರು ಪ್ರತೀ ಲೀಟರ್ ನೀರಿಗೆ ಅಥವಾ ಪ್ರತಿ ಕೆ.ಜಿ ಬಿತ್ತನೆ ಬೀಜಕ್ಕೆ ಸುಡೋಮೋನಾಸ್ 10 ಗ್ರಾಂನ್ನು ಮಿಶ್ರಣ ಮಾಡಿ ಅದಕ್ಕೆ ಬಿತ್ತನೆಯ ಶುಂಠಿಯನ್ನು ಅದ್ದಿ 30 ನಿಮಿಷಗಳು ಕಡ್ಡಾಯವಾಗಿ ನೆನೆಯಲು ಬೀಡಬೇಕು. ನಂತರ ಬಿತ್ತನೆಯ ಶುಂಠಿಯನ್ನು ಹೊರ ತೆಗೆದು 30 ನಿಮಿಷಗಳ ಕಾಲ ನೆರಳಿನಲ್ಲಿ ಒಣಗಿಸಿದ ನಂತರ ಬಿತ್ತಬೇಕು.

ಬಿತ್ತನೆಗೆ ಮುನ್ನ ಬಿತ್ತನೆ ಬೀಜದ ಬೀಜೋಪಚಾರ:
ಶುಂಠಿ ಬೀಜವನ್ನು ನಾಟಿ ಮಾಡುವ ಮುನ್ನ ಶುಂಠಿ ಬೀಜವನ್ನು 400 ಗ್ರಾಂ ಮೆಟಾಲಾಕ್ಸಿಲ್ , ಮ್ಯಾಂಕೋಜೆಬ್ 200 ಲೀಟರ್ ನೀರಿನಲ್ಲಿ ಮಿಶ್ರಣ ಮಾಡಿ 30 ನಿಮಿಷಗಳು ಕಡ್ಡಾಯವಾಗಿ ನೆನೆಯಲು ಬೀಡಬೇಕು. ನಂತರ ಬಿತ್ತನೆಯ ಶುಂಠಿಯನ್ನು ಹೊರ ತೆಗೆದು 15 ನಿಮಿಷಗಳ ಕಾಲ ನೆರಳಿನಲ್ಲಿ ಒಣಗಿಸಿ ಚೆನ್ನಾಗಿ ಗಾಳಿ ಇರುವ ಸ್ಥಳದಲ್ಲಿ ಶೇಖರಿಸಿ ಬಿತ್ತನೆ ಮಾಡಬೇಕು.

ಮಾಹಿತಿಗಾಗಿ ಗೋಣಿಕೊಪ್ಪಲು ಐ.ಸಿ.ಎ.ಆರ್-ಕೃಷಿ ವಿಜ್ಞಾನ ಕೇಂದ್ರದ ದೂರವಾಣಿ: 08274-295274 ಸಂಪರ್ಕಿಸಿ.

ರೈತರು ಶುಂಠಿಗೆ ಬೀಜೋಪಚಾರವನ್ನು ಮಾಡುತ್ತಿರುವುದು.

ಶುಂಠಿ ಬಿತ್ತನೆ ಬೀಜ ಆಯ್ಕೆಗೆ ಮುನ್ನೆಚ್ಚರಿಕೆಗಳು

ಆರೋಗ್ಯಕರ ರೋಗ-ಕೀಟ ರಹಿತ ತಾಜಾ ಹಾಗೂ ಬಲಿಷ್ಠ ಶುಂಠಿಯನ್ನು ಮಾತ್ರ ಆಯ್ಕೆ ಮಾಡಬೇಕು ಹುಳುಕು ಕೊಳೆ ಕಪ್ಪು ಕಲೆಗಳು ಇರುವ ಶುಂಠಿಗಳನ್ನು ಬಳಸಬಾರದು ಸರಿಯಾದ ಗಾತ್ರದ ಅಂದರೆ ಕನಿಷ್ಠ 30ರಿಂದ 35 ಗ್ರಾಂ ಗರಿಷ್ಠ 100 ಗ್ರಾಂ ತೂಕದ ಶುಂಠಿಯ ತುಂಡುಗಳನ್ನು ಬಿತ್ತನೆಗೆ ಬಳಸಿ. ಅತಿ ಚಿಕ್ಕ ತುಂಡುಗಳನ್ನು ಬಳಸಬಾರದು ಪ್ರತಿ ಶುಂಠಿ ಬೀಜದಲ್ಲಿ ಕನಿಷ್ಠ 1ರಿಂದ 2 ಗರಿಷ್ಠ 4ರಿಂದ 5 ಆರೋಗ್ಯಕರ ಗೆಣ್ಣುಗಳು ಇರಬೇಕು. ಗೆಣ್ಣುಗಳು ಹಸಿರು ಅಥವಾ ತಾಜಾ ಬಣ್ಣದಲ್ಲಿರಬೇಕು ಶುಂಠಿಯ ಬಣ್ಣ -ಹಳದಿ ಅಥವಾ ಬೆಳ್ಳಗಿನ ಬಣ್ಣದಲ್ಲಿರಬೇಕು. ಒತ್ತಿದಾಗ ಮೃದುವಾಗಿರದೆ ಗಟ್ಟಿಯಾಗಿರಬೇಕು ಹಿಂದಿನ ಬೆಳೆಯಲ್ಲಿ ರೋಗ ಕಾಣಿಸದ ತೋಟದಿಂದ ಬೀಜ ಆಯ್ಕೆ ಮಾಡುವುದು ಉತ್ತಮ ಸ್ಥಳೀಯವಾಗಿ ಉತ್ತಮ ಫಲ ನೀಡುವ ಮತ್ತು ರೋಗ ನಿರೋಧಕ ಶಕ್ತಿ ಇರುವ ತಳಿಗಳನ್ನು ಮಾತ್ರ ಆಯ್ಕೆ ಮಾಡಿಕೊಳ್ಳಬೇಕು ಬಿತ್ತನೆ ಬೀಜದ ರೈಸೋಮ್‌ಗಳನ್ನು ನೆರಳಿನಲ್ಲಿಯೇ ಒಣ ಮತ್ತು ಗಾಳಿಯಾಡುವ ಸ್ಥಳದಲ್ಲಿ ಇಡಬೇಕು. ನೇರವಾಗಿ ಸೂರ್ಯನ ರಶ್ಮಿ ಬೀಳುವ ಜಾಗದಲ್ಲಿ ಇಡಬಾರದು ತುಂಬಾ ಹಳೆಯ ಅಥವಾ ಒಣಗಿದ ರೈಸೋಮ್‌ಗಳನ್ನು ಬಳಸಬಾರದು ಅವಧಿಗೆ ಮುಂಚಿತವಾಗಿ ಕಟಾವಾದ ತಾಕುಗಳ ಶುಂಠಿಯನ್ನು ಬಿತ್ತನೆಗೆ ಬಳಸಬಾರದು. 270 ರಿಂದ 300 ದಿನ ತುಂಬಿದ ಶುಂಠಿ ಬೀಜವನ್ನು ಆಯ್ಕೆ ಮಾಡಿಕೊಳ್ಳಬೇಕು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.