ಮಡಿಕೇರಿ: ರಾಜಾಸೀಟ್ ಉದ್ಯಾನದಲ್ಲಿ ತೋಟಗಾರಿಕಾ ಇಲಾಖೆ ಗಾಜಿನ ಸೇತುವೆ (ಗ್ಲಾಸ್ ಬ್ರಿಡ್ಜ್) ನಿರ್ಮಾಣಕ್ಕೆ ನಗರಸಭೆಯ ಗಮನಕ್ಕೆ ತಾರದೇ ಟೆಂಡರ್ ಕರೆದಿರುವುದನ್ನು ವಿರೋಧಿಸಿದ ನಗರಸಭೆಯ ಸದಸ್ಯರು ಮುಂದೆ ಅಲ್ಲಿ ಯಾವುದೇ ಕಾಮಗಾರಿ ಕೈಗೊಳ್ಳುವ ಮುಂಚೆ ನಗರಸಭೆಯ ಗಮನಕ್ಕೆ ತರಬೇಕು ಎನ್ನುವ ನಿರ್ಣಯ ಕೈಗೊಂಡರು.
ರಾಜಾಸೀಟ್‌ನಲ್ಲಿ ಗಾಜಿನ ಸೇತುವೆ ನಿರ್ಮಾಣ ಕುರಿತು ಚರ್ಚಿಸಿ ನಿರ್ಣಯ ಕೈಗೊಳ್ಳುವುದು ಸೇರಿದಂತೆ ಇನ್ನಿತರೆ ವಿಷಯಗಳ ಚರ್ಚೆಗೆಂದು ಕರೆಯಲಾಗಿದ್ದ ತುರ್ತು ಕೌನ್ಸಿಲ್ ಸಭೆ ಯಾವುದೇ ಸ್ಪಷ್ಟ ನಿರ್ಣಯ ಕೈಗೊಳ್ಳುವಲ್ಲಿ ವಿಫಲವಾಯಿತು. ಈ ಯೋಜನೆ ಕುರಿತು ವಿವರವಾದ ಮಾಹಿತಿ ಪಡೆದು, ಮತ್ತೊಮ್ಮೆ ಸಭೆ ಕರೆದು ವಿಸ್ತೃತ ಚರ್ಚೆ ನಡೆಸಲು ಸಭೆ ನಿರ್ಧರಿಸಿತು.
ಸಭೆಯ ಆರಂಭದಲ್ಲೇ ಕಾಂಗ್ರೆಸ್ ಸದಸ್ಯ ಬಿ.ವೈ.ರಾಜೇಶ್ ಹಾಗೂ ನಾಮನಿರ್ದೇಶಿತ ಸದಸ್ಯರು ಸಭೆ ಕರೆದಿರುವುದಕ್ಕೆ ವಿರೋಧ ವ್ಯಕ್ತಪಡಿಸಿದರು. ಗಾಜಿನ ಸೇತುವೆ ಮತ್ತು ಫುಡ್ ಕೋರ್ಟ್ ಸರ್ಕಾರದ ಯೋಜನೆ. ಹಾಗಾಗಿ, ಇದನ್ನು ವಿರೋಧಿಸಲೆಂದೇ ಈ ಸಭೆಯನ್ನು ತರಾತುರಿಯಲ್ಲಿ ಕರೆಯಲಾಗಿದೆ. ಯಾವುದೇ ಕಾರಣಕ್ಕೂ ಸಭೆ ನಡೆಯಲು ಬಿಡುವುದಿಲ್ಲ ಎಂದು ಅಧ್ಯಕ್ಷರ ವೇದಿಕೆಯ ಮುಂಭಾಗ ಬಂದು ಘೋಷಣೆಗಳನ್ನು ಕೂಗಿದರು.
ಇದಕ್ಕೆ ಪ್ರತಿಯಾಗಿ ಬಿಜೆಪಿ ಸದಸ್ಯರು ಸಭೆ ನಡೆಯಲೇಬೇಕು. ನಗರಸಭೆಯ ಗಮನಕ್ಕೆ ತಾರದೇ ಬಹುಕೋಟಿ ಮೊತ್ತದ ಯೋಜನೆಯನ್ನು ಜಾರಿಗೊಳಿಸುವ ಕುರಿತು ಚರ್ಚೆ ನಡೆಯಬೇಕು ಎಂದು ಪಟ್ಟು ಹಿಡಿದರು. ಈ ವೇಳೆ ಉಭಯ ಪಕ್ಷದ ನಾಯಕರ ನಡುವೆ ಮಾತಿನ ಚಕಮಕಿ ನಡೆಯಿತು.
ಅಧ್ಯಕ್ಷೆ ಕಲಾವತಿ ಅವರು ಈ ವಿಷಯಕ್ಕೆ ಸಂಬಂಧಿಸಿದಂತೆ ಅವರವರ ಅಭಿಪ್ರಾಯ ತಿಳಿಸಲು ಎಲ್ಲ ಸದಸ್ಯರಿಗೂ ಅವಕಾಶ ಮಾಡಿಕೊಡಲಾಗುವುದು ಎಂದು ಹೇಳಿದ ಬಳಿಕ ಎಲ್ಲರೂ ಅವರವರ ಆಸನಗಳಿಗೆ ಮರಳಿ ಚರ್ಚೆ ಆರಂಭಿಸಿದರು.
ಸುದೀರ್ಘ ಚರ್ಚೆಯ ಬಳಿಕ ನಗರಸಭೆಯ ಗಮನಕ್ಕೆ ತಾರದೆ ಯೋಜನೆಯ ಅನುಷ್ಠಾನಕ್ಕೆ ಮುಂದಾಗಿರುವುದಕ್ಕೆ ವಿರೋಧವನ್ನು ವ್ಯಕ್ತಪಡಿಸುವ ಮತ್ತು ಅಗತ್ಯ ಮಾಹಿತಿಯನ್ನು ಪಡೆದ ಬಳಿಕ ಮತ್ತೆ ಸಭೆ ನಡೆಸುವ ನಿರ್ಧಾರ ಕೈಗೊಳ್ಳಲಾಯಿತು.
ನಗರಸಭೆಯ ಶಾಲೆಗಳಿಗೆ ಶಕ್ತಿ ತುಂಬಲು ನಿರ್ಧಾರ: ಮಂಜೂರಾಗಿರುವ ಮೌಲಾನಾ ಅಜಾದ್ ಮಾದರಿ ಶಾಲೆಯ ಆರಂಭಕ್ಕೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯು ನಗರಸಭೆಯ ಹಿಂದೂಸ್ಥಾನಿ ಶಾಲೆಯಲ್ಲಿ ಸ್ಥಳಾವಕಾಶ ಕೋರಿರುವ ವಿಚಾರವೂ ಸಭೆಯಲ್ಲಿ ಚರ್ಚೆ ಬಂದಿತು. ಈ ವೇಳೆ ಸದಸ್ಯರಾದ ಅಮಿನ್ ಮೊಹಿಸಿನ್, ಮನ್ಸೂರ್, ಬಷೀರ್, ಯಾಕೂಬ್ ಸ್ಥಳಾವಕಾಶ ನೀಡುವಂತೆ ಹೇಳಿದರು.
ಆದರೆ, ಹಿರಿಯ ಸದಸ್ಯ ಕೆ.ಎಸ್.ರಮೇಶ್ ಅವರು, ಹಿಂದೂಸ್ಥಾನಿ ಶಾಲೆ ಚಿಕ್ಕದು. ಮೌಲಾನಾ ಆಜಾದ್ ಶಾಲೆಯನ್ನು ಬೇರೆ ಬಾಡಿಗೆ ಕಟ್ಟಡದಲ್ಲಿ ನಡೆಸಲಿ. ನಗರಸಭಾ ವ್ಯಾಪ್ತಿಯ ಮೂರೂ ಶಾಲೆಗಳಿಗೆ ಇನ್ನಷ್ಟು ಶಕ್ತಿ ತುಂಬುವ ಕೆಲಸ ಆಗಲಿ ಎಂದು ಸಲಹೆ ನೀಡಿದರು.
ಅಮಿನ್ ಮೊಹಿಸಿನ್ ಮಾತನಾಡಿ, ‘ಶಿಕ್ಷಕರಿಗೆ ಕನಿಷ್ಠ ವೇತನ ನೀಡಲಾಗುತ್ತಿದೆ. ವರ್ಷದಿಂದ ವರ್ಷಕ್ಕೆ ಮಕ್ಕಳ ಸಂಖ್ಯೆ ಕುಸಿಯುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಅಧ್ಯಕ್ಷೆ ಕಲಾವತಿ ಮಾತನಾಡಿ, ‘ಒಂದೇ ಒಂದು ಮಗು ಇದ್ದರೂ ಆ ಶಾಲೆ ನಡೆಯಬೇಕೇ ವಿನಹಾ ಮುಚ್ಚಬಾರದು. ಈಗಾಗಲೇ ಶಾಲೆಗಳಲ್ಲಿ ದುರಸ್ತಿ ಕಾರ್ಯ ಆರಂಭವಾಗಿದೆ. ನಾವು ಶಾಲೆಗಳನ್ನು ಅಭಿವೃದ್ಧಿಪಡಿಸುತ್ತೇವೆ’ ಎಂದರು.
ಮಂಗಳೂರು ರಸ್ತೆಯ ತಡೆಗೋಡೆಯಲ್ಲಿ ಬಿರುಕು ಮೂಡಿರುವ ವಿಚಾರವೂ ಸಭೆಯಲ್ಲಿ ಚರ್ಚೆಗೆ ಬಂದಿತು. ಅಮಿನ್ ಮೊಹಿಸಿನ್ ಅವರು ಅಲ್ಲಿನ ನಿವಾಸಿಗಳಿಗೆ ಮನೆ ಕೊಡಬೇಕು. ಅವರಿಗೆಂದು ನೀಡಿರುವ ಮನೆಯಲ್ಲಿ ಅಕ್ರಮವಾಗಿ ವಾಸ ಇರುವವರನ್ನು ತೆರವು ಮಾಡಬೇಕು’ ಎಂದು ಒತ್ತಾಯಿಸಿದರು.
ಮನ್ಸೂರ್ ಮಾತನಾಡಿ, ‘ತಡೆಗೋಡೆ ಕೆಳಗೆ ವಾಸ ಇರುವವರು ತೀರಾ ದಯನೀಯ ಸ್ಥಿತಿಯಲ್ಲಿದ್ದಾರೆ. ಸಿಲಿಂಡರ್ ಹೊತ್ತುಕೊಂಡು ಹೋಗಲು ಸಾಧ್ಯವೇ ಇಲ್ಲದ ಸ್ಥಿತಿಯಲ್ಲಿದ್ದಾರೆ. ಅವರಿಗೆ ಬೇರೆಡೆ ಮನೆ ಕೊಡಿ’ ಎಂದರು.
ಪೌರಾಯುಕ್ತ ಎಚ್.ಆರ್.ರಮೇಶ್ ಭಾಗವಹಿಸಿದ್ದರು.
ಯಾರು ಏನೆಂದರು..ಬೇರೆಡೆ ಗಾಜಿನ ಸೇತುವೆ ನಿರ್ಮಿಸಿ ಗಾಜಿನ ಸೇತುವೆ ನಿರ್ಮಿಸಲೇ ಬೇಕೇಂದಿದ್ದರೆ ನಗರದ ಬೇರೆ ಪ್ರದೇಶಗಳಲ್ಲಿ ನಿರ್ಮಿಸಿ. ಯಾವುದೇ ಕಾರಣಕ್ಕೂ ರಾಜಾಸೀಟ್‌ನಲ್ಲಿ ಬೇಡ. ಇಂತಹದ್ದೊಂದು ಸೂಕ್ಷ್ಮ ಮತ್ತು ದೊಡ್ಡ ಯೋಜನೆ ತರುವಾಗ ಜಿಲ್ಲಾಧಿಕಾರಿ ನಗರದ ಪ್ರಥಮ ಪ್ರಜೆಗೆ ಮಾಹಿತಿ ಕೊಡದಿರುವುದು ಸರಿಯಲ್ಲ. ಕೆ.ಎಸ್.ರಮೇಶ್ ಬಿಜೆಪಿ ಸದಸ್ಯ
‘ಯೋಜನೆಗೆ ಎಲ್ಲರ ವಿರೋಧ’ ರಾಜಾಸೀಟ್‌ನಲ್ಲಿ ಗಾಜಿನ ಸೇತುವೆ ನಿರ್ಮಾಣಕ್ಕೆ ಬಹುತೇಕ ಮಂದಿಯ ವಿರೋಧ ಇದೆ. ಹಿರಿಯ ನಾಯಕರಾದ ಎಂ.ಸಿ.ನಾಣಯ್ಯ ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಪರಿಸವಾದಿಗಳು ಮಾತ್ರವಲ್ಲ ಸ್ಥಳೀಯರ ಪ್ರಬಲ ವಿರೋಧ ಇದೆ.ಮಹೇಶ್ ಜೈನಿ ನಗರಸಭೆ ಉಪಾಧ್ಯಕ್ಷ.
ಮಾಹಿತಿ ಇಲ್ಲದೇ ಸಭೆ ಕರೆದಿದ್ದು ಏಕೆ? ಸರ್ಕಾರದ ಯೋಜನೆಯನ್ನು ಸರ್ಕಾರದ ಭಾಗವಾದ ನಗರಸಭೆ ವಿರೋಧಿಸುವುದು ಸರಿಯಲ್ಲ. ವಿರೋಧಕ್ಕಾಗಿಯೇ ಈ ಸಭೆ ಕರೆಯಲಾಗಿದೆ. ಹಾಗಾದರೆ ಮಡಿಕೇರಿಯಲ್ಲಿ ಅಭಿವೃದ್ಧಿ ಬೇಡವೇ? ಯೋಜನೆಯ ಬಗ್ಗೆ ಮಾಹಿತಿ ಇಲ್ಲದ ಮೇಲೆ ತುರ್ತು ಸಭೆಯನ್ನು ಕರೆದಿದ್ದಾರೂ ಏಕೆ?ಬಿ.ವೈ.ರಾಜೇಶ್ ಕಾಂಗ್ರೆಸ್ ಸದಸ್ಯ.
‘ಹಿಂದೆಯೂ ಮಾಹಿತಿ ನೀಡಿರಲಿಲ್ಲ’ ಹಿಂದೆ ರಾಜಾಸೀಟ್ ಉದ್ಯಾನದಲ್ಲಿ ಜಿಪ್‌ಲೈನ್‌ನಂತಹ ಸಾಹಸ ಕ್ರೀಡೆಗಳು ಆರಂಭವಾದಾಗಲೂ ನಗರಸಭೆಗೆ ಮಾಹಿತಿ ನೀಡಿರಲಿಲ್ಲ. ಈಗಲೂ ನೀಡಿಲ್ಲ. ಈ ಯೋಜನೆಯ ಪರವಾಗಿ ಒಂದು ಪಕ್ಷ ವಿರೋಧವಾಗಿ ಮತ್ತೊಂದು ಪಕ್ಷ ಇದೆ ಇದು ಸರಿಪ್‌ಲೈನ್ ಸಹ ಬೇಡ. ಈ ಕುರಿತು ದೃಢವಾದ ನಿರ್ಣಯ ಮಾಡಿ.ಅಮಿನ್ ಮೊಹಿಸಿನ್ ಎಸ್‌ಡಿಪಿಐ ಸದಸ್ಯ
ವಾಹನ ನಿಲುಗಡೆ ಸಮಸ್ಯೆ ಗಾಜಿನ ಸೇತುವೆಯಿಂದ ರಾಜಾಸೀಟ್‌ನಲ್ಲಿ ವಾಹನ ನಿಲುಗಡೆ ಸಮಸ್ಯೆ ಉಲ್ಬಣಿಸಲಿದೆ. ಈಗಲೇ ಸ್ಥಳೀಯರು ಅತ್ತ ಹೋಗಲೂ ಆಗುತ್ತಿಲ್ಲ. ಇನ್ನು ಗಾಜಿನ ಸೇತುವೆ ನಿರ್ಮಿಸಿದರೆ ಆ ರಸ್ತೆಯಲ್ಲಿ ನಡೆದಾಡುವುದೂ ಕಷ್ಟವಾಗುತ್ತದೆ.ಉಮೇಶ್ ಸುಬ್ರಮಣಿ ಬಿಜೆಪಿ ಸದಸ್ಯ
ಬೇರೆಡೆ ಗಾಜಿನ ಸೇತುವೆ ನಿರ್ಮಿಸಿ ಗಾಜಿನ ಸೇತುವೆ ನಿರ್ಮಿಸಲೇ ಬೇಕೇಂದಿದ್ದರೆ ನಗರದ ಬೇರೆ ಪ್ರದೇಶಗಳಲ್ಲಿ ನಿರ್ಮಿಸಿ. ಯಾವುದೇ ಕಾರಣಕ್ಕೂ ರಾಜಾಸೀಟ್‌ನಲ್ಲಿ ಬೇಡ. ಇಂತಹದ್ದೊಂದು ಸೂಕ್ಷ್ಮ ಮತ್ತು ದೊಡ್ಡ ಯೋಜನೆ ತರುವಾಗ ಜಿಲ್ಲಾಧಿಕಾರಿ ನಗರದ ಪ್ರಥಮ ಪ್ರಜೆಗೆ ಮಾಹಿತಿ ಕೊಡದಿರುವುದು ಸರಿಯಲ್ಲ.ಕೆ.ಎಸ್.ರಮೇಶ್ ಬಿಜೆಪಿ ಸದಸ್ಯ
‘ನಾಗರಿಕರಿಗೆ ಒಳ್ಳೆಯದಾಗಲಿ ಎಂದು ಸಭೆ’:
ಮಡಿಕೇರಿ ನಗರಸಭೆ ಅಧ್ಯಕ್ಷೆ ಕಲಾವತಿ ಮಾತನಾಡಿ ‘ಮುಂಗಾರಿನ ಅವಧಿಯಲ್ಲಿ ಮಣ್ಣು ಕುಸಿತ ಸೇರಿದಂತೆ ನಾನಾ ಘಟನೆಗಳು ನಡೆದಿವೆ. ರಾಜಾಸೀಟ್ ಉದ್ಯಾನದಲ್ಲಿ ಗಾಜಿನ ಸೇತುವೆ ಬರುವುದರಿಂದ ತೊಂದರೆಯಾಗುವುದು ಬೇಡ. ಎಲ್ಲರಿಗೂ ಒಳ್ಳೆಯದಾಗಲಿ ಎಂಬ ಕಾರಣಕ್ಕೆ ತುರ್ತು ಸಭೆ ಕರೆಯಲಾಗಿದೆ’ ಎಂದು ಅಧ್ಯಕ್ಷೆ ಕಲಾವತಿ ತಿಳಿಸಿದರು.
‘ಗಾಜಿನ ಸೇತುವೆ ಬಂದ ಮೇಲೆ ಅಲ್ಲಿಗೆ ಹೆಚ್ಚಿನ ಪ್ರವಾಸಿಗರು ಬರುತ್ತಾರೆ. ಇದರಿಂದ ನಗರ ರಸ್ತೆಗಳ ಮೇಲೆ ಒತ್ತಡ ಹೆಚ್ಚುತ್ತದೆ. ವಾಹನ ನಿಲುಗಡೆ ಸಮಸ್ಯೆ ಉಲ್ಬಣಿಸುತ್ತದೆ. ಅವರು ಎಸೆಯುವ ತ್ಯಾಜ್ಯವನ್ನು ತೆಗೆಯುವವರು ನಾವು. ಹಾಗಾಗಿ ಈ ಸಭೆ ಕರೆಯಲಾಗಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.