ಮಡಿಕೇರಿ: ರಾಜಾಸೀಟ್‌ನಲ್ಲಿ ಗಾಜಿನ ಸೇತುವೆ (ಗ್ಲಾಸ್ ಬ್ರಿಡ್ಜ್) ನಿರ್ಮಿಸಿ ಸ್ಥಳೀಯರಿಗೆ ತೊಂದರೆ ಕೊಡಬೇಡಿ. ನಿರ್ಮಿಸಲೇಬೇಕು ಎನ್ನುವುದಿದ್ದರೆ ಬೇರೆಡೆ ನಿರ್ಮಿಸಿ ಎಂದು ಬಿಜೆಪಿ ಮುಖಂಡ ಹಾಗೂ ಮಾಜಿ ಸಚಿವ ಎಂ.ಪಿ.ಅಪ್ಪಚ್ಚುರಂಜನ್ ಒತ್ತಾಯಿಸಿದರು.
ರಾಜಾಸೀಟ್ ಈಗಾಗಲೇ ಪ್ರವಾಸಿಗರಿಂದ ತುಂಬಿ ಹೋಗಿದೆ. ಅಲ್ಲಿ ಗಾಜಿನ ಸೇತುವೆ ನಿರ್ಮಿಸಿದರೆ ರಾಜಾಸೀಟ್ ರಸ್ತೆಯಲ್ಲಿ ನಡೆದಾಡುವುದೂ ಕಷ್ಟವಾಗಲಿದೆ. ಮಡಿಕೇರಿ ನಗರದ ಜನತೆಗೆ ತೊಂದರೆ ಕೊಡಬೇಡಿ ಎಂದು ಅವರು ಇಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು.
‘ಒಂದು ವೇಳೆ ನಮ್ಮ ಮನವಿಗೆ, ಸ್ಥಳೀಯರ ಮಾತಿಗೆ ಮನ್ನಣೆ ಕೊಡದೇ ಗಾಜಿನ ಸೇತುವೆ ನಿರ್ಮಿಸಿದ್ದಲ್ಲೇ ಆದಲ್ಲಿ ಪ್ರತಿಭಟನೆ ಮಾತ್ರವಲ್ಲ ಕಾನೂನು ಹೋರಾಟವನ್ನೂ ನಡೆಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.
ರಾಜಾಸೀಟ್ ಸಮೀಪದಲ್ಲೇ ಇರುವ ಇಂದಿರಾ ನಗರದಲ್ಲಿ ಬೆಟ್ಟ ಬಿರುಕು ಬಿಟ್ಟಿರುವ ವಿಚಾರ, ಅಲ್ಲಿನ ನಿವಾಸಿಗಳಿಗೆ ಬೇರೆಡೆ ತೆರಳುವಂತೆ ನೀಡುತ್ತಿರುವ ನೋಟಿಸ್‌ನ ವಿಚಾರ ಶಾಸಕರಿಗೆ ತಿಳಿದಿಲ್ಲವೇ ಎಂದೂ ಪ್ರಶ್ನಿಸಿದರು.
ರಾಜಾಸೀಟ್ ನಿಜವಾಗಿಯೂ ಪ್ರಾಚ್ಯವಸ್ತು ಇಲಾಖೆಗೆ ಸೇರಬೇಕಾದ ಸ್ಥಳ. ಇಲಾಖೆಯವರು ಕೂಡಲೇ ಗಮನ ಹರಿಸಿ, ತಮ್ಮ ಸುಪರ್ದಿಗೆ ತೆಗೆದುಕೊಂಡು, ಪರಿಸರಕ್ಕೆ ಹಾನಿಯಾಗುವ ಹಾಗೂ ಸ್ಮಾರಕಕ್ಕೆ ಧಕ್ಕೆಯಾಗುವ ಕಾಮಗಾರಿಯನ್ನು ತಡೆಯಬೇಕು ಎಂದು ಆಗ್ರಹಿಸಿದರು.
ಬಾಂಗ್ಲಾದೇಶದಿಂದ ಕೊಡಗಿಗೆ ಅಕ್ರಮವಾಗಿ ವಲಸಿಗರು ನುಸುಳಿದ್ದಾರೆ ಎಂಬ ಸುದ್ದಿಗಳು ಇವೆ. ಪೊಲೀಸರು ಕೂಡಲೇ ಶಿಸ್ತು ಕ್ರಮ ಕೈಗೊಂಡು, ದಾಖಲಾತಿಗಳನ್ನು ಪರಿಶೀಲಿಸಿ ಅವರನ್ನು ಪತ್ತೆ ಹಚ್ಚಿ ಹೊರದಬ್ಬಬೇಕು. ಕಾಫಿ ಬೆಳೆಗಾರರೂ ಸಹ ತಮ್ಮಲ್ಲಿ ಕೆಲಸ ಮಾಡುವ ಹೊರರಾಜ್ಯದ ಕಾರ್ಮಿಕರ ದಾಖಲಾತಿಗಳನ್ನು ಪರಿಶೀಲಿಸಿ, ಸಮೀಪದ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು ಎಂದು ಕೋರಿದರು.
ಧರ್ಮಸ್ಥಳದ ಬಗ್ಗೆ ಬಹಳ ಕೀಳು ಮಟ್ಟದ ಮಾತುಗಳು ಸರಿಯಲ್ಲ. ಅದು ಹಿಂದೂಗಳಿಗೆ ಶ್ರದ್ಧಾ ಕೇಂದ್ರ. ಈ ಕೂಡಲೇ ಆಧಾರ ಇಲ್ಲದೇ ಅಪಪ್ರಚಾರ ಮಾಡುವವರನ್ನು ಬಂಧಿಸಬೇಕು ಎಂದು ಒತ್ತಾಯಿಸಿದರು. ‘ಮುಡಾ’ದಲ್ಲಿ ಭೂಪರಿವರ್ತನೆಗೆ ಹೆಚ್ಚು ಹಣ ಪಡೆಯಲಾಗುತ್ತಿದೆ ಎಂಬ ಆರೋಪ ಇದೆ. ಈ ಕುರಿತು ದಾಖಲಾತಿಗಳನ್ನು ಸಂಗ್ರಹಿಸಲಾಗುತ್ತಿದೆ. ಸಿಕ್ಕಿದ ಕೂಡಲೇ ಬಿಡುಗಡೆ ಮಾಡಲಾಗುವುದು ಎಂದರು.
ಜಿಲ್ಲೆಯ ಎಲ್ಲ ರಸ್ತೆಗಳೂ ಗುಂಡಿ ಬಿದ್ದಿವೆ. ಲೋಕಪಯೋಗಿ ಇಲಾಖೆಗೆ ನಿರ್ವಹಣೆಗೆಂದು ಹಣ ಬರುತ್ತದೆ. ಆ ಹಣ ಏನಾಯಿತು ಎಂಬ ಕುರಿತು ಶಾಸಕರು ಗಮನ ಹರಿಸಬೇಕು ಎಂದು ಹೇಳಿದರು. ಕಾಡಾನೆ ದಾಳಿ ನಿರಂತರವಾಗಿದ್ದು, ಹೆಚ್ಚುತ್ತಲೆ ಇದೆ. ಕಂದಕ ರಿಪೇರಿಯನ್ನೂ ಮಾಡಿಲ್ಲ. ಯಾವುದೆ ಕಾಳಜಿ ಇಲ್ಲದೇ ದುರಾಡಳಿತ ನಡೆಸುತ್ತಿರುವ ಸರ್ಕಾರಕ್ಕೆ ಮುಂದುವರಿಯಲು ಅರ್ಹತೆ ಇಲ್ಲ. ಕೂಡಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದರು.
ಮಡಿಕೇರಿ ನಗರಸಭಾ ಅಧ್ಯಕ್ಷೆ ಕಲಾವತಿ, ಮುಖಂಡರಾದ ಕವನ್ ಕಾರ್ಯಪ್ಪ, ಬಿ.ಕೆ.ಜಗದೀಶ್ ಭಾಗವಹಿಸಿದ್ದರು.
ರಾಜಾಸೀಟ್‌ನಲ್ಲಿ ಪ್ರಕೃತಿಗೆ ಪೂರಕ ಕ್ರಮ ಕೈಗೊಳ್ಳಲು ಒತ್ತಾಯ | ಕಾನೂನು ಹೋರಾಟದ ಎಚ್ಚರಿಕೆ ನೀಡಿದ ಮುಖಂಡರು | ಪ್ರತಿಭಟನೆ ನಡೆಸಲು ನಿರ್ಧಾರ
‘ಧ್ವನಿ ಎತ್ತಿದವರು ಎಂ.ಸಿ.ನಾಣಯ್ಯ’
ಮಡಿಕೇರಿ ನಗರಸಭೆಯ ಉಪಾಧ್ಯಕ್ಷ ಮಹೇಶ್ ಜೈನಿ ಮಾತನಾಡಿ ‘ಕಾಂಗ್ರೆಸ್‌ನ ಹಿರಿಯ ನಾಯಕರಾದ ಎಂ.ಸಿ.ನಾಣಯ್ಯ ಅವರೇ ರಾಜಾಸೀಟ್‌ನಲ್ಲಿ ಗಾಜಿನ ಸೇತುವೆ ಮಾಡುವುದು ಬೇಡ ಎಂದು ಮೊದಲಿಗೆ ಧ್ವನಿ ಎತ್ತಿದ್ದಾರೆ’ ಎಂದು ಹೇಳಿದರು. ಆದಾಗ್ಯೂ ನಗರಸಭೆಯನ್ನು ಕತ್ತಲಲ್ಲಿಟ್ಟು ಟೆಂಡರ್ ಕರೆಯಲಾಗಿದೆ. ಈ ಯೋಜನೆ ಕುರಿತು ಚರ್ಚೆಗೆಂದು ಕರೆದಿದ್ದ ತುರ್ತುಸಭೆಯಲ್ಲಿ ಕಾಂಗ್ರೆಸ್ ಸದಸ್ಯರು ಅಧ್ಯಕ್ಷರ ವೇದಿಕೆ ಮುಂಭಾಗ ಏರುಧ್ವನಿಯಲ್ಲಿ ಮಾತನಾಡಿ ಚರ್ಚೆಗೆ ವಿರೋಧ ವ್ಯಕ್ತಪಡಿಸಿದರು’ ಎಂದು ಹೇಳಿದರು.
‘ಹೊಸ ಹೊಸ ಪ್ರವಾಸಿತಾಣಗಳನ್ನು ಬೆಳೆಸಿ’
ಮಡಿಕೇರಿ ನಗರಸಭಾ ಸದಸ್ಯ ಉಮೇಶ್ ಸುಬ್ರಮಣಿ ಮಾತನಾಡಿ ‘ಈಗಾಗಲೇ ಪ್ರವಾಸಿಗರ ಆಕರ್ಷಣೆಯ ಕೇಂದ್ರ ಎನಿಸಿರುವ ರಾಜಾಸೀಟ್‌ನಲ್ಲಿ ಗಾಜಿನ ಸೇತುವೆ (ಗ್ಲಾಸ್ಟ್ ಬ್ರಿಡ್ಜ್) ಬೇಕಾ’ ಎಂದು ಪ್ರಶ್ನಿಸಿದರು. ಬೇರೆ ಕಡೆ ಗಾಜಿನ ಸೇತುವೆ ನಿರ್ಮಿಸಿ ಹೊಸ ಹೊಸ ಪ‍್ರವಾಸಿ ತಾಣಗಳನ್ನು ಬೆಳೆಸಿ. ರಾಜಾಸೀಟ್‌ನಲ್ಲಿ ಪರಿಸರಕ್ಕೆ ಪೂರಕವಾದ ಅಭಿವೃದ್ಧಿ ಕಾರ್ಯಗಳನ್ನು ಮಾಡಿ ಎಂದು ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.