ಗೋಣಿಕೊಪ್ಪಲು: ಮಳೆಗಾಲ ಆರಂಭಗೊಂಡಿದೆ. ಮನೆ ಮೂಲೆಯಲ್ಲಿದ್ದ ಬೆಚ್ಚನೆಯ ಉಡುಪುಗಳು ಹೊರ ಬಂದಿವೆ. ಕೈಯಲ್ಲಿ ಕೊಡೆ, ಕಾಲಿಗೆ ಮಳೆ ಶೂ, ಮೈಗೆ ಸ್ವೆಟರ್ ಹಾಗೂ ತಲೆಯ ಮೇಲೆ ಉಲ್ಲನ್ ಟೊಪ್ಪಿ ಬಂದಿದೆ.
ಈ ನಡುವೆ ಗಿರಿಜನ ಹಾಡಿಗಳ ಗುಡಿಸಿಲಿನ ಚಾವಣಿಗಳು ಕೂಡ ಹೊಸ ಪ್ಲಾಸ್ಟಿಕ್ ಹೊದೆಯಲು ಅಣಿಯಾಗಿವೆ. ಪೊನ್ನಂಪೇಟೆ ತಾಲ್ಲೂಕಿನ ಕುಟ್ಟ ನಾಣಚ್ಚಿ ಗದ್ದೆಹಾಡಿಯ ಗಿರಿಜನರ ಬಹುತೇಕ ಗುಡಿಸಲುಗಳ ಚಾವಣಿ ಕಪ್ಪು ಪ್ಲಾಸ್ಟಿಕ್‌ನಿಂದ ಕೂಡಿದೆ. ಈ ಪ್ಲಾಸ್ಟಿಕ್ ಅನ್ನು ಕೆಲವರು ತಾವೇ ತಂದು ಹೊದಿಸಿಕೊಂಡರೆ ಮತ್ತೆ ಕೆಲವರು ಗ್ರಾಮ ಪಂಚಾಯಿತಿಯಿಂದ ಇಲ್ಲವೆ ಗಿರಿಜನ ಕಲ್ಯಾಣ ಇಲಾಖೆಯಿಂದ ಪಡೆದುಕೊಳ್ಳುತ್ತಾರೆ.
ಗಿರಿಜನ ಹಾಡಿಗಳಲ್ಲಿ ಬಹಳಷ್ಟು ಹಾಡಿಗಳು ಅರಣ್ಯ ಇಲಾಖೆಯ ಜಾಗದಲ್ಲಿವೆ. ಅರಣ್ಯ ಇಲಾಖೆಯವರು ಹಾಡಿಗಳಲ್ಲಿ ಗಿರಿಜನರು ಶಾಶ್ವತ ಮನೆ ನಿರ್ಮಿಸಿಕೊಳ್ಳಲು ಬಿಡುತ್ತಿಲ್ಲ. ಈ ಕಾರಣದಿಂದ ಗಿರಿಜನರ ಮನೆಗಳು ಈಗಲೂ ಕೂಡ ಪ್ಲಾಸ್ಟಿಕ್ ಗುಡಿಸಲು ಮುಕ್ತವಾಗಿಲ್ಲ. ಗಿರಿಜನರು ಕೂಡ ತಮಗೆ ಬೇರೆ ಗತಿಯಿಲ್ಲದೆ ಅರಣ್ಯದೊಳಗಿನ ಜಾಗದಲ್ಲಿಯೇ ವಾಸಿಸುತ್ತಿದ್ದಾರೆ. ಅರಣ್ಯ ಹಕ್ಕು ಕಾಯ್ದೆ ಅನ್ವಯ ತಾವು ವಾಸಿಸುತ್ತಿರುವ ಜಾಗ ತಮ್ಮದಾಗುತ್ತದೆ ಎಂದು ಕಾಯುವುದೇ ಆಗಿದೆ. ಆದರೆ, ಅರಣ್ಯ ಇಲಾಖೆ ಕಾಯ್ದೆಗಳು ವರ್ಷದಿಂದ ವರ್ಷಕ್ಕೆ ಬಿಗಿಯಾಗುತ್ತಾ ಬಂದು ಅರಣ್ಯವಾಸಿ ಗಿರಿಜನರ ಕನಸು ಈಡೇರುವಂತೆ ಕಂಡು ಬರುತ್ತಿಲ್ಲ ಎಂಬುದು ಆದಿವಾಸಿಗಳ ಮಾತು.
ನಾಗರಹೊಳೆ ರಾಷ್ಟ್ರೀಯ ಅರಣ್ಯದ ಅಂಚಿನಲ್ಲಿರುವ ಗದ್ದೆಹಾಡಿಯಲ್ಲಿ 20ಕ್ಕೂ ಹೆಚ್ಚಿನ ಕುಟುಂಬಗಳು ವಾಸಿಸುತ್ತಿವೆ. ಈ ಎಲ್ಲ ಕುಟುಂಬಗಳ ವಾಸ, ಪ್ಲಾಸ್ಟಿಕ್ ಗುಡಿಸಲುಗಳು. ಈ ಹಾಡಿಗೆ ಗ್ರಾಮ ಪಂಚಾಯಿತಿ ಗಿರಿಜನ ಕಲ್ಯಾಣ ಯೊಜನೆ ಅಡಿಯಲ್ಲಿ ಸೋಲಾರ್ ಲೈಟ್ ನೀಡಿದೆ. ಗುಡಿಸಲು ನಡುವಿನ ಕೊರಕಲು ರಸ್ತೆಗೂ ಬೆಳಕಿಗಾಗಿ ಅಲ್ಲಲ್ಲೆ ಕಬ್ಬಿಣದ ಕಂಬ ನೆಟ್ಟು ಸೋಲಾರ್ ಅಳವಡಿಸಿದ್ದಾರೆ. ಆದರೆ, ಇವು ತುಕ್ಕು ಹಿಡಿದು ಹಾಳಾಗಿವೆ. ಬಹುತೇಕ ದೀಪಗಳು ಬೆಳಕು ನೀಡುತ್ತಿಲ್ಲ.
ಕುಡಿಯುವ ನೀರು: ಕುಡಿಯುವ ನೀರಿಗಾಗಿ ಹಾಡಿಯಲ್ಲಿಯೇ 3 ವರ್ಷಗಳ ಹಿಂದೆ ಗ್ರಾಮ ಪಂಚಾಯಿತಿ ದೊಡ್ಡದೊಂದು ಮೇಲು ತೊಟ್ಟಿ ನಿರ್ಮಿಸಿದೆ. ಆದರೆ, ಅದಕ್ಕೆ ಇತ್ತೀಚೆಗೆ ನೀರಿನ ಸಂಪರ್ಕ ಕಲ್ಪಿಸಲಾಗಿದೆ. ಮಳೆಗಾಲದಲ್ಲಿ ವಿದ್ಯುತ್ ಅಭಾವದಿಂದ ನೀರನ್ನು ಮಾತ್ರ ನಿತ್ಯವೂ ತುಂಬಿಸಲಾಗುತ್ತಿಲ್ಲ. ಹೀಗಾಗಿ, ಹಾಡಿ ಜನತೆ ಗದ್ದೆಯಲ್ಲಿರುವ ಗ್ರಾಮ ಪಂಚಾಯಿತಿಯ ತೆರೆದ ಬಾವಿಯಿಂದ ನೀರು ಬಳಸಿಕೊಳ್ಳುತ್ತಿದ್ದಾರೆ.
ಹಾಡಿ ಜನತೆಗೆ ರಸ್ತೆ, ವಿದ್ಯುತ್, ಬೆಚ್ಚನೆಯ ಸೂರು ಯಾವುದೂ ಲಭಿಸಿಲ್ಲ. ಗಿರಿಜನ ಕಲ್ಯಾಣ ಇಲಾಖೆ ಅಲ್ಲಲ್ಲೆ ಹೆಂಚಿನ ಮನೆ ನಿರ್ಮಿಸಿಕೊಡಲು ಮುಂದಾಗಿದೆ. ಸಿಮೆಂಟ್ ಇಟ್ಟಿಗೆಗಳ ಗೋಡೆ ಅಪೂರ್ಣಗೊಂಡು ಒಂದು ವರ್ಷದಿಂದ ಕಾಮಗಾರಿ ನಿಂತಿದೆ ಎಂಬುದು ಹಾಡಿಜನರ ನೋವು.
ಈ ಬಗ್ಗೆ ಮಾತನಾಡಿದ ಹಾಡಿ ನಿವಾಸಿ ಕುಮಾರ, ‘ಸೋಲಾರ್ ಮತ್ತು ಕುಡಿಯುವ ನೀರಿನ ಸೌಲಭ್ಯ ಒದಗಿಸಿದ್ದಾರೆ. ಆದರೆ ಅದೂ ಕೂಡ ಸಮಪರ್ಕವಾಗಿಲ್ಲ. ರಸ್ತೆಯಿಲ್ಲದೆ ಇರುವುದರಿಂದ ರಾತ್ರಿವೇಳೆ ಓಡಾಡಲು ಕಷ್ಟವಾಗುತ್ತಿದೆ’ ಎಂದು ಅಳಲು ತೋಡಿಕೊಂಡರು.
ಬೇರೆ ಬೇರೆ ಸಂಘ ಸಂಸ್ಥೆಯವರು ಸೋಲಾರ್ ಮೊದಲಾದ ಕೆಲವು ವಸ್ತುಗಳನ್ನು ನೀಡಿದ್ದಾರೆ. ಅವುಗಳನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ. ಸೋಲಾರ್ ದೀಪಗಳು ಮಾತ್ರ ಸರಿಯಾಗಿ ಉರಿಯುತ್ತಿಲ್ಲರಮೇಶ್ ಹಾಡಿ ನಿವಾಸಿ
ಗದ್ದೆಹಾಡಿ ನಿವಾಸಿಗಳಿಗೆ ಕುಡಿಯುವ ನೀರು ಒದಗಿಸಲಾಗಿದೆ. ಆದರೆ ಮಳೆಗಾಲ ಆಗಿರುವುದರಿಂದ ವಿದ್ಯುತ್ ಸಮಸ್ಯೆ ಕಾಡುತ್ತಿದೆ. ಇದಕ್ಕೆ ಪರ್ಯಾಯ ವ್ಯವಸ್ಥೆ ಮಾಡಲಾಗಿದೆ. ಮನೆಗಳ ಕುರಿತು ಗಿರಿಜನ ಕಲ್ಯಾಣ ಇಲಾಖೆಯೊಂದಿಗೆ ಶಾಸಕರು ಮಾತನಾಡಿದ್ದಾರೆತಿಮ್ಮಯ್ಯ ಪಿಡಿಒ ಕೆ.ಬಾಡಗ ಗ್ರಾಮ ಪಂಚಾಯಿತಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.