ADVERTISEMENT

ಫೆ.2ರಂದು ಗೋಣಿಕೊಪ್ಪಲು ಶಾಲಾ ಶತಮಾನೋತ್ಸವ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2025, 3:48 IST
Last Updated 1 ಫೆಬ್ರುವರಿ 2025, 3:48 IST
ಗೋಣಿಕೊಪ್ಪಲು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಸಮಾರಂಭದ ಸಾಂಸ್ಕೃತಿಕ ಸಮಿತಿ
ಗೋಣಿಕೊಪ್ಪಲು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಸಮಾರಂಭದ ಸಾಂಸ್ಕೃತಿಕ ಸಮಿತಿ   

ಗೋಣಿಕೊಪ್ಪಲು: ಇಲ್ಲಿನ ಸರ್ಕಾರಿ ಹಿರಿಯ ಮಾದರಿ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಫೆ.2ರಂದು ನಡೆಯಲಿದ್ದು, ಇದಕ್ಕಾಗಿ ಸಿದ್ಧತೆಗಳು ಭರದಿಂದ ಸಾಗುತ್ತಿವೆ.

ಫೆ.2ರಂದು ಮಧ್ಯಾಹ್ನ 12ಕ್ಕೆ ನಡೆಯುವ ಸಭಾ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಎನ್. ಎಸ್.ಬೋಸ್ ರಾಜ್ ಉದ್ಘಾಟಿಸುವರು. ಶಾಸಕ ಎ.ಎಸ್. ಪೊನ್ನಣ್ಣ ಅಧ್ಯಕ್ಷತೆ ವಹಿಸಲಿದ್ದು, ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ, ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ವಿಧಾನ ಪರಿಷತ್ ಸದಸ್ಯರಾದ ಸುಜಾ ಕುಶಾಲಪ್ಪ, ಎಸ್.ಎಲ್. ಭೋಜೇಗೌಡ, ಧನಂಜಯ ಸರ್ಜಿ, ರಾಜ್ಯ ವನ್ಯಜೀವಿ ಮಂಡಳಿ ಸದಸ್ಯ ಮೇರಿಯಂಡ ಸಂಕೇತ್ ಪೂವಯ್ಯ, ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ, ಗ್ರಾಮ ಪಂಚಾಯಿತಿ ಅಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ ಪಾಲ್ಗೊಳ್ಳಲಿದ್ದಾರೆ.

ಸಂಜೆ ನಡೆಯಲಿರುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಹಾಸ್ಯ ಪ್ರಹಸನ, ಮೂಕಾಭಿನಯ, ಕಿರುನಾಟಕ, ಕಂಸಾಳೆ ನೃತ್ಯ, ದೇಶ ಭಕ್ತಿ ಬಿಂಬಿಸುವ ನೃತ್ಯ, ಜಾನಪದ ನೃತ್ಯ, ಗೀತ ಗಾಯನ, ಹಲವು ಆಕರ್ಷಕ ನೃತ್ಯ ಪ್ರಾಕಾರಗಳು ಕಾರ್ಯಕ್ರಮಕ್ಕೆ ಹೂರಣ ತುಂಬಿಲಿವೆ. ಸರ್ಕಾರಿ ಮಾದರಿ ಪ್ರಾಥಮಿಕ ಹಾಗೂ ಸರ್ಕಾರಿ ಪ್ರೌಢಶಾಲೆಯ 40 ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 360 ವಿದ್ಯಾರ್ಥಿಗಳು ತಮ್ಮ ವಿಭಿನ್ನ ಹಾವಭಾವ, ನಟನೆ ಮೂಲಕ ಪೂರ್ಣಪ್ರಮಾಣದ ಮನರಂಜನೆ ನೀಡಲು ಸಜ್ಜಾಗಿದ್ದಾರೆ.

ADVERTISEMENT

ಸೈಕ್ಲೋನ್ ತಂಡದ ಮುಖ್ಯಸ್ಥ ರಮೇಶ್, ಶಕೀಲ್ ಅಹಮ್ಮದ್ ನೃತ್ಯ ನಿರ್ದೇಶನ ತಂಡವೂ ಸುಮಾರು 16 ನೃತ್ಯ ಕಾರ್ಯಕ್ರಮಗಳಿಗೆ ತರಬೇತಿ ನೀಡುತ್ತಿದ್ದು, ನೃತ್ಯ ನಿರ್ದೇಶಕಿ ಲಿದಿನಾ ಅವರ ಎರಡು ವಿಭಿನ್ನ ನೃತ್ಯ ಸಂಯೋಜನೆ, ಗೋಣಿಕೊಪ್ಪ ಕಾವೇರಿ ಕಾಲೇಜಿನ ಉಮ್ಮತ್ತಾಟ್ ಮತ್ತು ಬೊಳಕಾಟ್ ಪ್ರದರ್ಶನವಿದೆ. ಟಿ.ಎಲ್. ಶ್ರೀನಿವಾಸ್ ನಿರ್ದೇಶನದ ದಾರಿ ಯಾವುದಯ್ಯಾ? ಕಿರು ನಾಟಕ, ಕಾಡು ಬೆಳೆಸಿ ನಾಡು ಉಳಿಸಿ ಮೂಕಾಭಿನಯ, ಲೈನ್ ಮೆನ್ ಡ್ಯಾಡಿ, ಬನ್ನೂರು ಬಿರಿಯಾನಿ, ಉದ್ಯೋಗಸ್ಥ ಮಹಿಳೆ ಹಾಸ್ಯ ಪ್ರಹಸನ, ಕಾಡ್ಯಮಾಡ ನವೀನ್, ಸುಮನ್ ಸಹೋದರರ ಪ್ರಾಯೋಜಕತ್ವದ ವಿಕ್ರಂ ಜಾದೂಗಾರ್ ಅವರ ಜಾದೂ ಪ್ರದರ್ಶನ, 4ನೇ ತರಗತಿ ವಿದ್ಯಾರ್ಥಿಗಳ ಪೋಷಕರ ನೃತ್ಯ, ಹಿರಿಯ ವಿದ್ಯಾರ್ಥಿನಿ, ಗ್ರಾಮ ಪಂಚಾಯಿತಿ ಸದಸ್ಯೆ ಗೀತಾ ತಂಡದ ನೃತ್ಯ, ಹಲವು ಹಿರಿಯ ವಿದ್ಯಾರ್ಥಿಗಳ ಗೀತೆಗಳು ಇನ್ನೂ ಹಲವು ವಿಭಿನ್ನ ಕಾರ್ಯಕ್ರಮ ನೀಡಲು ವೇದಿಕೆ ಸಜ್ಜಾಗಿದೆ.

ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಟಿ.ಎಲ್. ಶ್ರೀನಿವಾಸ್ ಅಧ್ಯಕ್ಷತೆಯಲ್ಲಿ ಫೆ.2ರಂದು ಸಂಜೆ 7ಕ್ಕೆ ನಡೆಯುವ ಕಾರ್ಯಕ್ರಮ ಯಶಸ್ವಿಗೊಳ್ಳಲು ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಎಂ.ಜಿ. ಮೋಹನ್ ಮತ್ತು ಪದಾಧಿಕಾರಿಗಳು, ಕಾರ್ಯಾಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ, ಶಾಲಾ ಮುಖ್ಯ ಶಿಕ್ಷಕ ಎಚ್.ಕೆ.ಕುಮಾರ್, ನೃತ್ಯ ನಿರ್ದೇಶಕರಾದ ರಮೇಶ್, ಶಕೀಲ್ ಅಹಮ್ಮದ್ ಮತ್ತು ತಂಡ, ಲಿದಿನಾ, ಸಮಿತಿಯ ಶಿಕ್ಷಕ ಸದಸ್ಯರಾದ ಇಂದಿರಾ, ಜೋಸ್ಲಿಲಾ, ದಮಯಂತಿ, ಅನಿತಾ, ಗ್ರಾಮ ಪಂಚಾಯಿತಿ ಸದಸ್ಯರಾದ ಚೈತ್ರಾ ಬಿ.ಚೇತನ್, ರತಿ ಅಚ್ಚಪ್ಪ, ಪುಷ್ಪ, ಗೀತಾ, ಮೈಕ್ ಮಣಿ, ವಕೀಲ ಸಂಜೀವ್, ಕಾಡ್ಯಮಾಡ ಸುಮನ್, ವೇದಿಕೆ ಸಮಿತಿ ಸಹಕಾರದೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮ ಸಿದ್ಧತೆ ಭರದಿಂದ ನಡೆಯುತ್ತಿದೆ.

ಈ ಬಗ್ಗೆ ಮಾತನಾಡಿದ ಸಾಂಸ್ಕೃತಿಕ ಸಮಿತಿ ಸಂಚಾಲಕ ಹಾಗೂ ಶಾಲೆಯ ಹಿರಿಯ ವಿದ್ಯಾರ್ಥಿ ಟಿ.ಎಲ್.ಶ್ರೀನಿವಾಸ್ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಲು ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಲಾಗುತ್ತಿದೆ. ಸಾವಿರಾರು ಹಿರಿಯ ವಿದ್ಯಾರ್ಥಿಗಳು ಬರುವ ನಿರೀಕ್ಷೆ ಇದ್ದು, ಅವರೆಲ್ಲರಿಗೂ ಆಸನ ಮತ್ತು ಊಟದ ವ್ಯವಸ್ಥೆ ಮಾಡಲಾಗಿದೆ. ವಸ್ತುಪ್ರದರ್ಶನವನ್ನೂ ಏರ್ಪಡಿಸಲಾಗಿದೆ ಎಂದರು.

ಶಾಲೆ ಕಟ್ಟಡ ಸುಣ್ಣ ಬಣ್ಣದಿಂದ ಕಂಗೊಳಿಸುತ್ತಿದೆ. ರಾತ್ರಿ ವೇಳೆ ಮೂರು ದಿನಗಳ ಕಾಲ ವರ್ಣರಂಜಿತ ವಿದ್ಯುತ್ ದೀಪಗಳ ಸರಮಾಲೆ ಮನ ಸೆಳೆಯಲಿದೆ ಎಂದು ಹೇಳಿದರು.

ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ವೇಷ ತೊಟ್ಟು ತಾಲೀಮು ನಡೆಸುತ್ತಿರುವ ವಿದ್ಯಾರ್ಥಿಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.