ADVERTISEMENT

ಶಾಲೆಯ ಅಭಿವೃದ್ದಿಗೆ ಶ್ರಮಿಸುವ ಧಮೇಂದ್ರ

ಸೇವಾ ಮನೋಭಾವನೆಯ ಶಿಕ್ಷಕರಿಗೆ ಪ್ರಶಸ್ತಿಯ ಗರಿ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2020, 16:14 IST
Last Updated 4 ಸೆಪ್ಟೆಂಬರ್ 2020, 16:14 IST
ಕೆ.ಸಿ.ಧಮೇಂದ್ರ
ಕೆ.ಸಿ.ಧಮೇಂದ್ರ   

ನಾಪೋಕ್ಲು: ಸೇವಾ ಮನೋಭಾವನೆಯಿಂದ ಕೆಲಸ ನಿರ್ವಹಿಸುತ್ತಿರುವ ಕೆ.ಪಿ.ಬಾಣೆಯ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕ ಕೆ.ಸಿ.ಧಮೇಂದ್ರ ಈ ಬಾರಿಯ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಬಲಮುರಿ ಗ್ರಾಮದ ಕೊಟ್ಟಕೇರಿಯನ ದಿವಂಗತ ಚೆಂಗಪ್ಪ ನೀಲವ್ವ ದಂಪತಿ ಪುತ್ರ. ಪತ್ನಿಯೂ ಸೇರಿದಂತೆ ಕುಟುಂಬದಲ್ಲಿ ಐವರು ಶಿಕ್ಷಕರು. ಧಮೇಂದ್ರ ಕಾಲೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 1994ರಲ್ಲಿ ಕರ್ತವ್ಯಕ್ಕೆ ಸೇರಿ ವಿವಿಧ ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ. 1998ರಲ್ಲಿ ಕಕ್ಕಬ್ಬೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿ 2007ರಲ್ಲಿ ಕಕ್ಕಬ್ಬೆ ಕ್ಷೇತ್ರ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯನಿರ್ವಹಿಸಿದ್ದಾರೆ.

2011ರಿಂದ ಕೆ.ಪಿ. ಬಾಣೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದು ಯವಕಪಾಡಿಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಪ್ರಭಾರ ಮುಖ್ಯಶಿಕ್ಷಕರಾಗಿ ಸೇವೆ ಸಲ್ಲಿಸಿದ್ದಾರೆ. ಇವರ ಪತ್ನಿ ಎಂ.ಜಿ.ಶಾರದಾ ಕೂಡ ಶಿಕ್ಷಕಿಯಾಗಿದ್ದು 25 ವರ್ಷ ಮರಂದೋಡ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸಿದ್ದು, ಪ್ರಸ್ತುತ ಚೆರಿಯಪರಂಬು ಶಾಲೆಯಲ್ಲಿ ಶಿಕ್ಷಕಿಯಾಗಿದ್ದಾರೆ.

ADVERTISEMENT

ಧಮೇಂದ್ರ ಅವರು ತಾವು ಕರ್ತವ್ಯ ನಿರ್ವಹಿಸಿದ ಶಾಲೆಗಳಲ್ಲಿ ಸೇವಾಮನೋಭಾವನೆಯಿಂದ ದುಡಿದಿದ್ದಾರೆ. ಶಾಲೆಗಳಲ್ಲಿ ಉತ್ತಮ ಕೈತೋಟ ನಿರ್ಮಿಸಿದ್ದಾರೆ. ಶಾಲೆಗೆ ಶುದ್ದ ಕುಡಿಯುವ ನೀರು ಪೂರೈಕೆಗಾಗಿ ವಿದ್ಯಾರ್ಥಿಗಳೊಂದಿಗೆ ತಾವೇ ಪೈಪ್‌ಲೈನ್‌ ಅಳವಡಿಸಿದ್ದಾರೆ. ಈ ವರ್ಷದ ಗಣರಾಜ್ಯೋತ್ಸವ ದಿನದಂದು ಕಕ್ಕಬ್ಬೆ ಕ್ಲಸ್ಟರ್‌ಗೆ ಒಳಪಟ್ಟ ಪ್ರಾಥಮಿಕ ಶಾಲಾ ಗ್ರಾಮೀಣ ಕ್ರೀಡಾಕೂಟವನ್ನು ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಸಹಯೋಗದೊಂದಿಗೆ ಅದ್ದೂರಿಯಾಗಿ ನಡೆಸಿ ಗ್ರಾಮದ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಯವಕಪಾಡಿ ಮತ್ತು ಕೆ.ಪಿ. ಬಾಣೆ ಶಾಲೆಗೆ ₹20 ಸಾವಿರ ಮೌಲ್ಯದ ಕ್ರೀಡಾಸಾಮಗ್ರಿ ಒದಗಿಸಲು ಶ್ರಮಿಸಿದ್ದಾರೆ. ಗ್ರಾಮಪಂಚಾಯಿತಿಯ ನೆರವಿನಿಂದ ₹50 ಸಾವಿರ ವೆಚ್ಚದಲ್ಲಿ ಶಾಲೆಯ ನೆಲವನ್ನು ದುರಸ್ತಿಪಡಿಸಿದ್ದಾರೆ. ದಾನಿಗಳ ಸಹಾಯದಿಂದ ಅಕ್ಷರ ದಾಸೋಹಕ್ಕಾಗಿ ಪಾತ್ರೆ ತೊಳೆಯುವ ಸ್ಥಳ ನಿರ್ಮಿಸಿದ್ದಾರೆ. ಕಪಾಟು, ಗ್ಯಾಸ್ ಸ್ಟೌಗಳನ್ನು ಖರೀದಿಸಿದ್ದಾರೆ.

ಈ ವರ್ಷ ಮಳೆಗಾಲದಲ್ಲಿ ಚೆರಿಯಪರಂಬು ಶಾಲೆಗೆ ಪ್ರವಾಹ ಬಂದಾಗ ಆ ಶಾಲೆಗೆ ತೆಪ್ಪದಲ್ಲಿ ತೆರಳಿ ಆ ಶಾಲೆಯ ಶಿಕ್ಷಕರು ಮತ್ತು ಸ್ವಯಂಸೇವಕರೊಂದಿಗೆ ಶುಚಿತ್ವದಲ್ಲಿ ತೊಡಗಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆ ತೋಟಗಾರಿಕೆ ಶುಚಿತ್ವ ಕರಕುಶಲ ಕಲೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಧಮೇಂದ್ರ ತಮ್ಮ ಚಟುವಟಿಕೆಗಳಿಂದ ಉತ್ತಮ ಶಿಕ್ಷಕ ಎನಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.