ADVERTISEMENT

ಸಿದ್ದರಾಮಯ್ಯ ಪರ ನಿಲ್ಲುತ್ತೇವೆ ಎಂದು ಘೋಷಿಸಿದ ನೂರಾರು ಕಾರ್ಯಕರ್ತರು

ನೂರಾರು ಕಾರ್ಯಕರ್ತರಿಂದ ಮಡಿಕೇರಿಯಲ್ಲಿ ಮೆರವಣಿಗೆ, ರಾಜ್ಯಪಾಲರು, ಬಿಜೆಪಿ ವಿರುದ್ಧ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2024, 14:53 IST
Last Updated 19 ಆಗಸ್ಟ್ 2024, 14:53 IST
ಮಡಿಕೇರಿಯ ಜನರಲ್ ತಿಮ್ಮಯ್ಯ ವೃತ್ತದಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿ ಸೋಮವಾರ ರಾಜ್ಯಪಾಲರ ನಡೆಯ ವಿರುದ್ಧ ಪ್ರತಿಭಟನೆ ನಡೆಸಿದರು
ಮಡಿಕೇರಿಯ ಜನರಲ್ ತಿಮ್ಮಯ್ಯ ವೃತ್ತದಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿ ಸೋಮವಾರ ರಾಜ್ಯಪಾಲರ ನಡೆಯ ವಿರುದ್ಧ ಪ್ರತಿಭಟನೆ ನಡೆಸಿದರು   

ಮಡಿಕೇರಿ: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ವಿಚಾರಣೆ ನಡೆಸಲು ಅನುಮತಿ ನೀಡಿರುವ ರಾಜ್ಯಪಾಲರ ಕ್ರಮ ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ನಗರದಲ್ಲಿ ಸೋಮವಾರ ಬೃಹತ್ ಪ್ರತಿಭಟನೆ ನಡೆಸಿದರು.

ಜಿಲ್ಲೆಯ ವಿವಿಧ ಭಾಗಗಳಿಂದ ನೂರಾರು ಸಂಖ್ಯೆಯಲ್ಲಿ ಬಂದಿದ್ದ ಕಾರ್ಯಕರ್ತರು ರಾಜ್ಯಪಾಲರ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಬಿಜೆಪಿ ವಿರುದ್ಧವೂ ಕಿಡಿಕಾರಿದ ಮುಖಂಡರು ತಾವು ‘ಸಿದ್ದರಾಮಯ್ಯ ಪರ ನಿಲ್ಲುತ್ತೇವೆ, ಅವರಿಗೆ ಜೀವ ತುಂಬುತ್ತೇವೆ’ ಎಂದು ಘೋಷಿಸುವ ಮೂಲಕ ಗಮನ ಸೆಳೆದರು.

ಇಲ್ಲಿನ ಜಿಲ್ಲಾ ಕಾಂಗ್ರೆಸ್ ಕಚೇರಿಯಿಂದ ಪಕ್ಷದ ಧ್ವಜಗಳನ್ನಿಡಿದು ಮೆರವಣಿಗೆ ಹೊರಟ ನೂರಾರು ಕಾರ್ಯಕರ್ತರು ಇಂದಿರಾಗಾಂಧಿ ವೃತ್ತ (ಚೌಕಿ)ದ ಮೂಲಕ ಜನರಲ್ ತಿಮ್ಮಯ್ಯ ವೃತ್ತ ತಲುಪಿದರು. ವೃತ್ತದಲ್ಲಿ ಕೆಲಕಾಲ ಕುಳಿತ ಕಾರ್ಯಕರ್ತರು ಬಿಜೆಪಿ ವಿರುದ್ಧ ಕಿಡಿಕಾರಿದರು.

ADVERTISEMENT

ಬಳಿಕ, ಜಿಲ್ಲಾಧಿಕಾರಿ ಕಚೇರಿಗೆ ಮೆರವಣಿಗೆ ಮೂಲಕ ಬಂದ ಅವರು ಪ್ರತಿಭಟನೆ ನಡೆಸಿದರು. ಸ್ಥಳಕ್ಕೆ ಬಂದ ಹೆಚ್ಚುವರಿ ಜಿಲ್ಲಾಧಿಕಾರಿ ಐಶ್ವರ್ಯ ಮನವಿ ಪತ್ರ ಸ್ವೀಕರಿಸಿದರು. ನಂತರ, ಪ್ರತಿಭಟನೆಯನ್ನು ಅಂತ್ಯಗೊಳಿಸಲಾಯಿತು.

ಮೆರವಣಿಗೆಯುದ್ದಕ್ಕೂ ಕಾಂಗ್ರೆಸ್ ಬಾವುಟಗಳು ರಾರಾಜಿಸಿದವು. ಮಡಿಕೇರಿಯ ಮುಖ್ಯರಸ್ತೆಯಲ್ಲಿ ವಾಹನ ಸಂಚಾರ ಕೆಲಕಾಲ ಸ್ಥಗಿತಗೊಂಡಿತ್ತು. ರಸ್ತೆಯ ತುಂಬೆಲ್ಲ ಕಾಂಗ್ರೆಸ್ ಕಾರ್ಯಕರ್ತರೆ ಕಂಡು ಬಂದರು. ಜನರಲ್ ತಿಮ್ಮಯ್ಯ ವೃತ್ತದಲ್ಲಿ ಒಂದು ಬದಿಯಲ್ಲಿ ವಾಹನ ಸಂಚಾರಕ್ಕೆ ವ್ಯವಸ್ಥೆ ಮಾಡಿಕೊಡಲಾಗಿತ್ತು.

ಜಿಲ್ಲಾಧಿಕಾರಿ ಕಚೇರಿ ಸಮೀಪವೇ ಶಾಲೆ ಇದ್ದುದ್ದರಿಂದ ಮಕ್ಕಳಿಗೆ ತೊಂದರೆಯಾಗಲಿದೆ ಎಂಬ ಕಾರಣಕ್ಕೆ ಕಾರ್ಯಕರ್ತರು ಯಾವುದೇ ಘೋಷಣೆಗಳನ್ನೂ ಮೊಳಗಿಸದೇ ಮೌನವಾಗಿ ಹೆಜ್ಜೆ ಹಾಕಿದರು.

ಮಡಿಕೇರಿಯ ಪ್ರಮುಖ ರಸ್ತೆಗಳಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಸೋಮವಾರ ರಾಜ್ಯಪಾಲರ ನಡೆಯ ವಿರುದ್ಧ ಪ್ರತಿಭಟನಾ ಜಾಥಾ  ನಡೆಸಿದರು

ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಹಾಗೂ ರಸ್ತೆಯಲ್ಲಿ ರಾಜ್ಯಪಾಲರು ಹಾಗೂ ಬಿಜೆಪಿ ವಿರುದ್ಧ ದಿಕ್ಕಾರದ ಘೋಷಣೆಗಳನ್ನು ಮೊಳಗಿಸಿದರು. ಸಿದ್ದರಾಮಯ್ಯ ಪರ ಘೋಷಣೆಗಳನ್ನು ಕೂಗಿದರು.

ಪ್ರತಿಭಟನಾ ಮೆರವಣಿಗೆಗೆ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್ ಭದ್ರತೆ ಒದಗಿಸಲಾಗಿತ್ತು.

ಈ ವೇಳೆ ಮಾತನಾಡಿದ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಧರ್ಮಜ ಉತ್ತಪ್ಪ, ‘ರಾಜ್ಯಪಾಲರ ನಿರ್ಧಾರದ ಹಿಂದೆ ಬಿಜೆಪಿಯ ಹುನ್ನಾರ ಅಡಗಿದೆ. ಹೇಗಾದರೂ ಮಾಡಿ ಕಾಂಗ್ರೆಸ್ ಸರ್ಕಾರ ಕಿತ್ತೊಗೆಯಬೇಕು ಎಂಬ ಏಕಮಾತ್ರ ಉದ್ದೇಶದಿಂದ ಯಾರೋ ಖಾಸಗಿ ವ್ಯಕ್ತಿಗಳು ಆಧಾರ ಇಲ್ಲದೇ ನೀಡಿದ ದೂರನ್ನು ಆಧರಿಸಿ ಕ್ರಮ ಕೈಗೊಳ್ಳುವ ಮೂಲಕ ಸಿದ್ದರಾಮಯ್ಯ ಅವರ ಶಕ್ತಿಗುಂದಿಸಲು ಯತ್ನಿಸಲಾಗುತ್ತಿದೆ’ ಎಂದು ಆರೋಪಿಸಿದರು.

ಕಾಂಗ್ರೆಸ್ ಮುಖಂಡ ಟಿ.ಪಿ.ರಮೇಶ್ ಮಾತನಾಡಿ, ‘ಸಿದ್ದರಾಮಯ್ಯ ಸಾಮಾಜಿಕ ನ್ಯಾಯದ ಹರಿಕಾರ. ನರೇಂದ್ರ ಮೋದಿ ಅವರ ವಿರುದ್ಧ ಹೆಚ್ಚು ಸಮರ್ಥವಾಗಿ ಟೀಕಿಸುವ ರಾಜಕಾರಣಿ. ಇವರ ಶಕ್ತಿಗುಂದಿಲು ಬಿಜೆಪಿ ರಾಜ್ಯಪಾಲರ ಕಚೇರಿಯನ್ನು ದುರುಪಯೋಗಪಡಿಸಿಕೊಂಡಿದೆ’ ಎಂದು ದೂರಿದರು.

ಕೆಪಿಸಿಸಿ ಕಾರ್ಯದರ್ಶಿ ಕೆ.ಪಿ.ಚಂದ್ರಕಲಾ ಮಾತನಾಡಿ, ‘ಯಾವುದೇ ಕಾರಣಕ್ಕೂ ಸಿದ್ದರಾಮಯ್ಯ ರಾಜೀನಾಮೆ ನೀಡಬಾರದು’ ಎಂದು ಮನವಿ ಮಾಡಿದರು.‌

ಪಕ್ಷದ ಮುಖಂಡರಾದ ವೀಣಾ ಅಚ್ಚಯ್ಯ, ಕೊಲ್ಯದ ಗಿರೀಶ್, ಟಾಟು ಮೊಣ್ಣಪ್ಪ, ಬಿ.ಎಸ್.ತಮ್ಮಯ್ಯ, ಮುನೀರ್ ಅಹಮ್ಮದ್, ತೆನ್ನಿರಾ ಮೈನಾ, ಕಾನೆಹಿತ್ಲು ಮೊಣ್ಣಪ್ಪ, ಜಾನ್ಸನ್ ಪಿಂಟೋ, ರಾಜೇಶ್ ಯಲ್ಲಪ್ಪ, ಸೂರಜ್ ಹೊಸೂರು ಹಾಗೂ ಪದಾಧಿಕಾರಿಗಳು ಪ್ರತಿಭಟನೆಯಲ್ಲಿ ಭಾಗಹಿಸಿದ್ದರು.

ರಾಜ್ಯಪಾಲರ ನಡೆಯ ವಿರುದ್ಧ ಕಾಂಗ್ರೆಸ್‌ ಕಾರ್ಯಕರ್ತರು ಮಡಿಕೇರಿಯ ಪ್ರಮುಖ ರಸ್ತೆಗಳಲ್ಲಿ ಸೋಮವಾರ ಪ್ರತಿಭಟನಾ ಮೆರವಣಿಗೆ ನಡೆಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.