ADVERTISEMENT

ನಾಗರಹೊಳೆಯಲ್ಲೀಗ ಹಸಿರ ಸಿರಿ

ಈಚೆಗೆ ಸುರಿದ ಮಳೆಗೆ ಚಿಗುರೊಡೆದ ಹಸಿರು, ಎಲ್ಲೆಲ್ಲೂ ಹಸಿರೇ ಹಸಿರು

ಕೆ.ಎಸ್.ಗಿರೀಶ್
Published 13 ಮೇ 2025, 4:20 IST
Last Updated 13 ಮೇ 2025, 4:20 IST
ನಾಗರಹೊಳೆ ಅರಣ್ಯದಲ್ಲಿ ಬೇಸಿಗೆಯಲ್ಲೀಗ ಎಲ್ಲೆಲ್ಲೂ ಹಸಿರ ರಾಶಿ ಕಂಡು ಬರುತ್ತಿದ್ದು ನೋಡುಗರ ಕಣ್ಮನ ಸೆಳೆಯುತ್ತಿದೆ
ನಾಗರಹೊಳೆ ಅರಣ್ಯದಲ್ಲಿ ಬೇಸಿಗೆಯಲ್ಲೀಗ ಎಲ್ಲೆಲ್ಲೂ ಹಸಿರ ರಾಶಿ ಕಂಡು ಬರುತ್ತಿದ್ದು ನೋಡುಗರ ಕಣ್ಮನ ಸೆಳೆಯುತ್ತಿದೆ   
  • ಒಣಗಿದ ಹುಲ್ಲು ಈಗ ಹಸಿರ ಹುಲ್ಲಾಗಿದೆ

  • ಹಸಿರ ಚಾವಣಿ, ಹಸಿರ ಹಾಸಿಗೆಯಂತಿದೆ ನಾಗರಹೊಳೆ

  • ಪ್ರಯಾಣಿಕರ ಮನಸೂರೆಗೊಳ್ಳುತ್ತಿದೆ ಹಸಿರ ಸೊಬಗು

    ADVERTISEMENT

ಮಡಿಕೇರಿ: ಚಳಿಗಾಲ ಮುಗಿದು ಬೇಸಿಗೆ ಅಡಿ ಇಡುವುದಕ್ಕೆ ಮುನ್ನವೇ ಕಳೆಗುಂದಿದ್ದ ನಾಗರಹೊಳೆ ಅರಣ್ಯ ಈಗ ಜೀವ ಕಳೆಯೊಂದಿಗೆ ಹಸಿರ ಸಿರಿಯಲ್ಲಿ ಕಂಗೊಳಿಸುತ್ತಿದೆ. ಈಗ ನಾಗರಹೊಳೆಯಲ್ಲಿ ಎಲ್ಲಿ ನೋಡಿದರೂ ಕುವೆಂಪು ಅವರ ‘ಹಸುರು’ ಕವನ ಪದೇ ಪದೇ ನೆನಪಾಗುತ್ತದೆ.

ಅವರು ಹೇಳುವಂತೆ, ‘ಹಸುರಾಗಸ; ಹಸುರು ಮುಗಿಲು; ಹಸುರು ಗದ್ದೆಯಾ ಬಯಲು; ಹಸುರಿನ ಮಲೆ; ಹಸುರು ಕಣಿವೆ;ಹಸುರು ಸಂಜೆಯೀ ಬಿಸಿಲೂ!’ ಎಂಬಂತಹ ಹಸಿರುಮಯ ವಾತಾವರಣ ಈ ಕಾಡಿನಲ್ಲಿದೆ.

ಹಾಗೆ ನೋಡಿದರೆ, ಕಳೆದ ವರ್ಷಕ್ಕಿಂತಲೂ ಅಧಿಕ ಹಸಿರು ಈಗ ನಾಗರಹೊಳೆಯಲ್ಲಿದೆ. ಕಳೆದ ವರ್ಷ ಮೇ ಮೊದಲ ವಾರದವರೆಗೂ ಹೆಚ್ಚಿನ ಮಳೆ ಬಂದಿರಲಿಲ್ಲ. ಹಾಗಾಗಿ, ಹಸಿರಿಲ್ಲದ ನಾಗರಹೊಳೆಯಲ್ಲಿ ಕಾಡ್ಗಿಜ್ಜಿನ ಆತಂಕ ಇದ್ದೇ ಇತ್ತು. ಮಳೆಗಾಗಿ ಕಾಡಿನ ಜೀವ ಸಂಕುಲವೆಲ್ಲ ಚಾತಕ ಪಕ್ಷಿಗಳಂತೆ ಕಾದಿದ್ದವು.

ಆದರೆ, ಈ ವರ್ಷ ಪರಿಸ್ಥಿತಿ ಸಂಪೂರ್ಣ ಭಿನ್ನವಾಗಿದೆ. ಬೇಸಿಗೆಯಲ್ಲಿಯೇ ನಾಗರಹೊಳೆ ಅರಣ್ಯದಲ್ಲಿ ಹೆಚ್ಚಿನ ಮಳೆ ಸುರಿದಿದೆ. ಇದರಿಂದ ಎಲ್ಲೆಲ್ಲೂ ಹಸಿರರಾಶಿಯನ್ನೇ ಅರಣ್ಯ ಹೊದ್ದುಕೊಂಡಂತೆ ಭಾಸವಾಗುತ್ತಿದೆ.

ಮೈಸೂರು ಜಿಲ್ಲೆಯ ಎಚ್.ಡಿ.ಕೋಟೆಯಿಂದ ಮೇಟಿಕುಪ್ಪೆ ಮಾರ್ಗವಾಗಿ ನಾಗರಹೊಳೆ ಅರಣ್ಯದೊಳಗಿಂದ ನಿಟ್ಟೂರು, ಬಾಳೆಲೆಗೆ ಬಂದರೆ ಹಸಿರ ಲೋಕದಲ್ಲಿ ವಿಹರಿಸಿದ ಅನುಭವವಾಗುತ್ತಿದೆ. ಸಾಮಾನ್ಯವಾಗಿ ಬೇಸಿಗೆಯಲ್ಲಿ ಎಲ್ಲವೂ ಒಣಗಿದ ಸ್ಥಿತಿಯಲ್ಲಿರುತ್ತಿದ್ದ ಅರಣ್ಯದಲ್ಲಿ ಈಚೆಗೆ ಸುರಿದ ಮಳೆಯಿಂದ ಚಿಗುರೊಡೆದಿವೆ. ಈ ಮಾರ್ಗದ ಪ್ರಯಾಣಿಕರ ಚಿತ್ತವನ್ನು ಬರಸೆಳೆಯುತ್ತಿವೆ.

ಖಾಸಗಿ ವಾಹನ ಇಲ್ಲದಿದ್ದರೂ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಈ ಹಸಿರ ಅಂದವನ್ನು ಕಣ್ತುಂಬಿಕೊಳ್ಳುವ ಅವಕಾಶ ಇದೆ. ಅರಣ್ಯದ ಇಕ್ಕೆಲಗಳಲ್ಲೂ ಹಸಿರ ಹಾಸಿಗೆ ಹಾಸಿದಂತೆ ಹುಲ್ಲು ಬೆಳೆದಿದೆ. ಜಿಂಕೆಗಳು ಈ ಹುಲ್ಲನ್ನು ಮೆಲ್ಲುತ್ತ ಶಬ್ದ ಮಾಡುತ್ತ ಬರುವ ವಾಹನಗಳನ್ನೊಮ್ಮೆ ಇವು ತಲೆ ಎತ್ತಿ ದಿಟ್ಟಿಸುತ್ತಿವೆ.

ಅಲ್ಲಲ್ಲಿ ಕಾಡಾನೆಗಳ ಹಿಂಡೂ ಗೋಚರಿಸುತ್ತವೆ. ಅಪರೂಪದ ಪಕ್ಷಿಗಳು, ಮಂಗಗಳು, ಜಿಂಕೆ, ಸಾರಂಗಗಳೆಲ್ಲವೂ ಹಸಿರ ಮಧ್ಯದಲ್ಲಿ ಕಣ್ಣಿಗೆ ಬೀಳುತ್ತಿವೆ.

ಬೇಸಿಗೆಯ ಅವಧಿಯಲ್ಲಿ ಮಾತ್ರ ನಾಗರಹೊಳೆ ಅರಣ್ಯದ ಕಳಾಹೀನ ಸ್ಥಿತಿ ಹಾಗೂ ಹಸಿರನ್ನೇ ಹೊದ್ದುಕೊಂಡಂತಹ ಹಸಿರುಮಯ ಸ್ಥಿತಿ ಎರಡನ್ನೂ ಕಾಣಬಹುದಾಗಿದೆ. ಬೇಸಿಗೆ ಬಿಟ್ಟರೆ ಬೇರೆ ಇನ್ನಾವು ಕಾಲದಲ್ಲೂ ಈ ಎರಡೂ ಸ್ಥಿತಿಗಳನ್ನು ಕೆಲವೇ ದಿನಗಳ ಅಂತರದಲ್ಲಿ ಕಾಣಲಾಗದು.

ತಿತಿಮತಿ ಬಳಿಯ ಮಜ್ಜಿಗೆಹಳ್ಳದಿಂದ ಆರಂಭಗೊಳ್ಳುವ ರಾಷ್ಟ್ರೀಯ ಉದ್ಯಾನ ಪಿರಿಯಾಪಟ್ಟಣದ ಅಳ್ಳೂರುವರೆಗಿನ 11 ಕಿಮೀ ದೂರದ ಹೆದ್ದಾರಿ ಬದಿಯಲ್ಲೂ ಹುಲ್ಲು ಹಸಿರೊಡೆದಿದೆ.

ನಾಗರಹೊಳೆ ಅರಣ್ಯದಲ್ಲಿ ಬೇಸಿಗೆಯಲ್ಲೀಗ ಎಲ್ಲೆಲ್ಲೂ ಹಸಿರ ರಾಶಿ ಕಂಡು ಬರುತ್ತಿದ್ದು ನೋಡುಗರ ಕಣ್ಮನ ಸೆಳೆಯುತ್ತಿದೆ
ನಾಗರಹೊಳೆ ಅರಣ್ಯದಲ್ಲಿ ಬೇಸಿಗೆಯಲ್ಲೀಗ ಎಲ್ಲೆಲ್ಲೂ ಹಸಿರ ರಾಶಿ ಕಂಡು ಬರುತ್ತಿದ್ದು ಅರಣ್ಯದೊಳಗಿನ ಕೆರೆಗಳು ತುಂಬುತ್ತಿವೆ
ನಾಗರಹೊಳೆ ಅರಣ್ಯದಲ್ಲಿ ಬೇಸಿಗೆಯಲ್ಲೀಗ ಹಸಿರು ಹುಲ್ಲು ಚಿಗುರೊಡೆದಿದ್ದು ನೋಡುಗರ ಕಣ್ಮನ ಸೆಳೆಯುತ್ತಿದೆ
ನಾಗರಹೊಳೆ ಅರಣ್ಯದಲ್ಲಿ ಬೇಸಿಗೆಯಲ್ಲೀಗ ಎಲ್ಲೆಲ್ಲೂ ಹಸಿರ ರಾಶಿ ಕಂಡು ಬರುತ್ತಿದ್ದು ನೋಡುಗರ ಕಣ್ಮನ ಸೆಳೆಯುತ್ತಿದೆ
ನಾಗರಹೊಳೆ ಅರಣ್ಯದಲ್ಲಿ ಬೇಸಿಗೆಯಲ್ಲೀಗ ಎಲ್ಲೆಲ್ಲೂ ಹಸಿರ ರಾಶಿ ಕಂಡು ಬರುತ್ತಿದ್ದು ನೋಡುಗರ ಕಣ್ಮನ ಸೆಳೆಯುತ್ತಿದೆ
ನಾಗರಹೊಳೆ ಅರಣ್ಯದಲ್ಲಿ ಬೇಸಿಗೆಯಲ್ಲೀಗ ಎಲ್ಲೆಲ್ಲೂ ಹಸಿರ ರಾಶಿ ಕಂಡು ಬರುತ್ತಿದ್ದು ನೋಡುಗರ ಕಣ್ಮನ ಸೆಳೆಯುತ್ತಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.