ADVERTISEMENT

ರಾಜ್ಯಪಾಲರ ನಡೆ ಪೂರ್ವಾಗ್ರಹ ಪೀಡಿತ: ಎಚ್.ಎ.ಹಂಸ ಆರೋಪ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2024, 4:04 IST
Last Updated 19 ಆಗಸ್ಟ್ 2024, 4:04 IST
ಹಂಸ
ಹಂಸ   

ಗೋಣಿಕೊಪ್ಪಲು: ‘ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ತರಾತುರಿಯಲ್ಲಿ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರು ಅನುಮತಿ ನೀಡಿರುವುದರ ಹಿಂದೆ ಕೇಂದ್ರ ಸರ್ಕಾರದ ಬಿಜೆಪಿ ನಾಯಕರ ಒತ್ತಡವಿದೆ. ಇದನ್ನು ಕಾಂಗ್ರೆಸ್ ಪಕ್ಷ ಸಮರ್ಥವಾಗಿ ಎದುರಿಸಲಿದೆ’ ಎಂದು ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಎ.ಹಂಸ ಹೇಳಿದರು.

‘ಸಂವಿಧಾನಾತ್ಮಕವಾದ ಹುದ್ದೆಯಲ್ಲಿರುವ ರಾಜ್ಯಪಾಲರು ಪೂರ್ವಾಗ್ರಹ ಪೀಡಿತರಾಗಿದ್ದು, ಬಿಜೆಪಿ ಏಜೆಂಟರಂತೆ ವರ್ತಿಸುತ್ತಿದ್ದಾರೆ. ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ ಗಣಿ ಹಗರಣದ ವಿರುದ್ಧ ತನಿಖೆ ನಡೆಸಬೇಕು ಎಂದು ಲೋಕಾಯುಕ್ತ ಸಂಸ್ಥೆ ರಾಜ್ಯಪಾಲರಿಗೆ ಅನುಮತಿ ಕೇಳಿ 10 ತಿಂಗಳಾದರೂ ರಾಜ್ಯಪಾಲರು ಆ ಬಗ್ಗೆ ಮೌನ ವಹಿಸಿದ್ದಾರೆ. ಮಾಜಿ ಸಚಿವೆ ಶಶಿಕಲಾ ಜೊಲ್ಲೆಯವರ ವಿರುದ್ಧದ ತನಿಖೆಗೆ ಅನುಮತಿ ನೀಡಿ ಎಂದು ಕೋರಿದ್ದ ಕಡತವನ್ನೂ ರಾಜ್ಯಪಾಲರು ಮೂಲೆಗೆ ತಳ್ಳಿದ್ದಾರೆ. ಇದು ಸಾಲದು ಎಂಬಂತೆ ಬಿಜೆಪಿ ಮುಖಂಡ ಮುರುಗೇಶ್ ನಿರಾಣಿಯವರ ತನಿಖೆಗೆ ಸಂಬಂಧಿಸಿದ ಕಡತವೂ ರಾಜ್ಯಪಾಲರ ಕಚೇರಿಯಲ್ಲಿ ಧೂಳು ಹಿಡಿಯುತ್ತಿದೆ. ಈ ಬಗ್ಗೆ ರಾಜ್ಯಪಾಲರು ಏಕೆ ಆಸಕ್ತಿ ತೋರಲಿಲ್ಲವೇಕೆ’ ಎಂದು ಅವರು ಇಲ್ಲಿ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.

‘ಹಿಂದುಳಿದ, ಶೋಷಿತ ವರ್ಗದವರು, ಬಡವರು, ನಿರ್ಗತಿಕರು ಹಾಗೂ ಸಾಮಾಜಿಕ ನ್ಯಾಯದ ತತ್ವ ಸಿದ್ಧಾಂತದ ಮೇಲೆ ರಾಜ್ಯದ ಎಲ್ಲ ಸಮುದಾಯಗಳ ಏಳಿಗೆಗಾಗಿ ಹಗಲಿರುಳು ಶ್ರಮ ವಹಿಸುತ್ತಿರುವ ಸಿದ್ದರಾಮಯ್ಯ ಅವರನ್ನು ರಾಜಕೀಯವಾಗಿ ಹಣಿಯಲು ಆಗದೆ ಹೀಗೆ ಅಧಿಕಾರ ದುರ್ಬಳಕೆ ಮಾಡಿಕೊಂಡು ಅವರ ವಿರುದ್ಧ ಮಾಡುತ್ತಿರುವ ಷಡ್ಯಂತ್ರವನ್ನು ರಾಜ್ಯದ ಜನತೆ ಗಮನಿಸುತ್ತಿದ್ದಾರೆ. ಮುಂದೆ ಜನರೇ ಇವರಿಗೆ ತಕ್ಕ ಪಾಠ ಕಲಿಸುತ್ತಾರೆ’ ಎಂದು ಅವರು ಹೇಳಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.