ADVERTISEMENT

ರಾಷ್ಟ್ರೀಯ ಹಾಕಿ ತಂಡದ ಬಾಗಿಲು ಬಡಿಯುತ್ತಿರುವ ಸ್ಥಳೀಯ ಕ್ರೀಡಾ ಪ್ರತಿಭೆ.

​ಪ್ರಜಾವಾಣಿ ವಾರ್ತೆ
Published 29 ಜೂನ್ 2018, 12:38 IST
Last Updated 29 ಜೂನ್ 2018, 12:38 IST
ಹಾಕಿ ಪ್ರತಿಭೆ ಮೋಕ್ಷಿತ್
ಹಾಕಿ ಪ್ರತಿಭೆ ಮೋಕ್ಷಿತ್   

ಸೋಮವಾರಪೇಟೆ: ಕ್ರೀಡಾ ಜಿಲ್ಲೆಯಾದ ಕೊಡಗು, ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದ ಕ್ರೀಡಾ ಪ್ರತಿಭೆಗಳನ್ನು ನೀಡಿರುವ ಹೆಮ್ಮೆ ಜಿಲ್ಲೆಯದು. ಅದಕ್ಕೆ ಮತ್ತೊಂದು ಹಾಕಿ ಕ್ಷೇತ್ರಕ್ಕೆ ಕೊಡುಗೆ ಗ್ರಾಮೀಣ ಪ್ರತಿಭೆ ಮೋಕ್ಷಿತ್.


ಸಮೀಪದ ದೊಡ್ಡಮಳ್ತೆ ಗ್ರಾಮದ ಉದಯ ಮತ್ತು ರೇಣು ದಂಪತಿಗಳ ಪುತ್ರನಾದ ಮೋಕ್ಷಿತ್, ಸೇನೆಯ ಎಂಇಜಿ ಕ್ರೀಡಾಶಾಲೆಯಲ್ಲಿ ಇದೀಗ ವ್ಯಾಸಂಗ ಮಾಡುತ್ತಿದ್ದು, ಭೂಪಾಲ್‌ನಲ್ಲಿ ಇತ್ತೀಚೆಗೆ ಜರುಗಿದ ರಾಷ್ಟ್ರೀಯ ಕಿರಿಯರ ಹಾಕಿ ಟೂರ್ನಿಯಲ್ಲಿ ಕಂಚಿನ ಪದಕ ಗಳಿಸಿದ ಕರ್ನಾಟಕದ ತಂಡದ ಪ್ರಮುಖ ಆಟಗಾರನಾಗಿದ್ದರು. ಬಾಲ್ಯದಿಂದಲೇ ಹಾಕಿ ಕ್ರೀಡೆಯತ್ತ ಒಲವು ಬೆಳೆಸಿಕೊಂಡಿದ್ದ ಇವರು, ಇಲ್ಲಿನ ಜ್ಞಾನವಿಕಾಸ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆಯುವ ಸಂದರ್ಭವೇ ಕ್ರೀಡಾ ಪ್ರತಿಭೆಯಾಗಿ ಹೊರ ಹೊಮ್ಮಿದ್ದರು. ಪ್ರೌಢಶಾಲೆಗೆ ಬೆಂಗಳೂರಿನ ಎಂಇಜಿ ಕ್ರೀಡಾ ಶಾಲೆಗೆ ಸೇರ್ಪಡೆಯಾಗಿದ್ದಾರೆ.


ದೊಡ್ಡಮಳ್ತೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಣಕೋಡು ಗ್ರಾಮದ ಸಣ್ಣ ರೈತರಾದ ಉದಯ್ ದಂಪತಿಗಳಿಗೆ ತನ್ನ ಮಗ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಬೇಕೆಂಬುದು ಬಹುದಿನಗಳ ಕನಸಾಗಿತ್ತು. ಅವರ ಆಸೆಗೆ ಡಾಲ್ಫಿನ್ಸ್ ಸ್ಪೋರ್ಟ್ಸ್ ಕ್ಲಬ್‌, ಮಡಿಕೇರಿಯ ಕ್ರೀಡಾ ಹಾಸ್ಟೆಲ್‌ ಕೋಚ್ ಆಗಿರುವ ಬಿ.ಎಲ್.ಮಂಜುನಾಥ್ ಮತ್ತು ಮಾಜಿ ಸೈನಿಕ ಮಹೇಶ್ ಮಾಟ್ನಳ್ಳಿ ಅವರು ಆಸರೆಯಾದರು. ಅವರ ನಿರಂತರ ಪ್ರೋತ್ಸಾಹದಿಂದ ಹತ್ತು ಹಲವು ರಾಜ್ಯ ಮಟ್ಟದ ಹಾಕಿ ಸ್ಪರ್ಧೆಗಳಲ್ಲಿ ಭಾಗವಹಿಸಿದ ಮೋಕ್ಷಿತ್, ನಂತರ ಎಂಇಜಿ ಕ್ರೀಡಾ ಶಾಲೆಯ ಕೋಚ್‌ಗಳಾದ ದೇವದಾಸ್ ಮತ್ತು ಜನಾರ್ಧನ್‌ರವರ ಮಾರ್ಗದರ್ಶನ ಹಾಗೂ ತರಬೇತಿಯಿಂದಾಗಿ ಇದೀಗ ರಾಷ್ಟ್ರಮಟ್ಟದಲ್ಲಿ ಗಮನಸೆಳೆಯುವ ಆಟಗಾರನಾಗಿ ಬೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.

ADVERTISEMENT


ಶಾಲಾ ಹಂತದಲ್ಲಿ ಅಥ್ಲೆಟಿಕ್ಸ್ ಹಾಗೂ ಹಾಕಿ ಆಟದತ್ತ ಪ್ರಭಾವಿತನಾಗಿದ್ದ ತಾನು, ನಂತರದ ದಿನಗಳಲ್ಲಿ ಹಾಕಿ ಕ್ರೀಡೆಯತ್ತ ಸಾಧನೆ ಮಾಡಲು ಜ್ಞಾನವಿಕಾಸ ಶಾಲೆಯ ಶಿಕ್ಷಕರು, ಪೋಷಕರು ಹಾಗೂ ಡಾಲ್ಫಿನ್ಸ್ ಕ್ರೀಡಾ ಕ್ಲಬ್‌ನ ಸದಸ್ಯರು ಹಾಗೂ ಇಂಡಿಯನ್ ಆರ್ಮಿ ಹಾಕಿ ತಂಡದ ಕೋಚ್‌ಗಳಾದ ದೇವದಾಸ್ ಹಾಗೂ ಜನಾರ್ಧನ್‌ರವರ ನಿರಂತರ ಪ್ರೋತ್ಸಾಹವೇ ಕಾರಣವಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಸಾಧನೆ ಮಾಡುವ ಮೂಲಕ ದೇಶದ ಹಾಕಿ ತಂಡವನ್ನು ಪ್ರತಿನಿಧಿಸುವ ಹಂಬಲವಿದೆ. ಅದಕ್ಕಾಗಿ ಪ್ರತಿನಿತ್ಯ ನಿರಂತರ ಕಠಿಣ ಅಭ್ಯಾಸವನ್ನು ಮಾಡುತ್ತಿದ್ದೇನೆ ಎಂದು ಮೋಕ್ಷಿತ್ ಸ್ಮರಿಸುತ್ತಾರೆ.


ಕ್ರೀಡಾ ಸಾಧನೆಗಳು:
ದೆಹಲಿಯಲ್ಲಿ ಜರುಗಿದ 46ನೇ ನೆಹರೂ ಜೂನಿಯರ್ ಹಾಕಿ ಪಂದ್ಯಾವಳಿಯಲ್ಲಿ ಪ್ರಥಮ
2017ರಲ್ಲಿ ಸಬ್‌ಜೂನಿಯರ್ ಚಾಂಪಿಯನ್‌ಷಿಪ್‌ನಲ್ಲಿ ಭಾಗಿ
2018ರಲ್ಲಿ ಭೂಪಾಲ್‌ನಲ್ಲಿ ಜರುಗಿದ 8ನೇ ರಾಷ್ಟ್ರೀಯ ಕಿರಿಯರ ಹಾಕಿ ಟೂರ್ನಿಯಲ್ಲಿ ಕಂಚಿನ ಪದಕ
ರಾಷ್ಟ್ರಮಟ್ಟದ ಆರ್ಮಿ ರೋಯಿಂಗ್ ಸ್ಪರ್ಧೆಯಲ್ಲಿ ಕಂಚಿನ ಪದಕ
ಪ್ರಾಥಮಿಕ ಶಾಲಾ ಮಟ್ಟದ ಹಾಕಿ ಮತ್ತು ಅಥ್ಲೆಟಿಕ್ಸ್ ಪಂದ್ಯಾವಳಿಯಲ್ಲಿ ಕೊಡಗು ಜಿಲ್ಲೆಯ ಪ್ರತಿನಿಧಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.