ADVERTISEMENT

ಕುಶಾಲನಗರ | ಗುತ್ತಿಗೆದಾರರ ವಿರುದ್ಧ ನೌಕರರ ಪ್ರತಿಭಟನೆ

ಹಾರಂಗಿ: ಉದ್ಯಾನ ನಿರ್ವಹಣಾ ಕಾರ್ಯದ ಸಿಬ್ಬಂದಿಗೆ ಸಂಬಳ ವಿಳಂಬ

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2026, 7:54 IST
Last Updated 27 ಫೆಬ್ರುವರಿ 2026, 7:54 IST
ಕುಶಾಲನಗರ ಸಮೀಪದ ಹಾರಂಗಿ ಉದ್ಯಾನ ನಿರ್ವಹಣಾ ಹೊರಗುತ್ತಿಗೆ ಸಿಬ್ಬಂದಿ ಮೂರು ತಿಂಗಳಿಂದ ಸಂಬಳ ನೀಡದ ಗುತ್ತಿಗೆದಾರರ ಕ್ರಮ ಖಂಡಿಸಿ ಗುರುವಾರ ನೀರಾವರಿ ಇಲಾಖೆ ಕಚೇರಿ ಎದುರು ಪ್ರತಿಭಟನೆ ನಡೆಸಿದರು
ಕುಶಾಲನಗರ ಸಮೀಪದ ಹಾರಂಗಿ ಉದ್ಯಾನ ನಿರ್ವಹಣಾ ಹೊರಗುತ್ತಿಗೆ ಸಿಬ್ಬಂದಿ ಮೂರು ತಿಂಗಳಿಂದ ಸಂಬಳ ನೀಡದ ಗುತ್ತಿಗೆದಾರರ ಕ್ರಮ ಖಂಡಿಸಿ ಗುರುವಾರ ನೀರಾವರಿ ಇಲಾಖೆ ಕಚೇರಿ ಎದುರು ಪ್ರತಿಭಟನೆ ನಡೆಸಿದರು   

ಕುಶಾಲನಗರ: ಕೊಡಗು ಜಿಲ್ಲೆಯ ಪ್ರಮುಖ ಹಾರಂಗಿ ಜಲಾಶಯದ ಆವರಣದಲ್ಲಿರುವ ಉದ್ಯಾನದ ನಿರ್ವಹಣೆ ಮಾಡುತ್ತಿರುವ ಗುತ್ತಿಗೆ ಸಿಬ್ಬಂದಿಗೆ ಕಳೆದ 3 ತಿಂಗಳಿಂದ ಸಂಬಳ ನೀಡದೆ ನಿರ್ಲಕ್ಷ್ಯ ವಹಿಸಿರುವ ಗುತ್ತಿಗೆದಾರರ ಕ್ರಮವನ್ನು ಖಂಡಿಸಿ ಗುರುವಾರ ಹಾರಂಗಿ ನೀರಾವರಿ ಕಾರ್ಯಪಾಲಕ ಎಂಜಿನಿಯರ್ ಕಚೇರಿ ಮುಂಭಾಗ ಗುತ್ತಿಗೆ ನೌಕರರು ಪ್ರತಿಭಟನೆ ನಡೆಸಿದರು.

ಜಲಾಶಯದ ಉದ್ಯಾನ ಮತ್ತು ಸಂಗೀತ ಕಾರಂಜಿ ನಿರ್ವಹಣೆ, ಮುಖ್ಯ ದ್ವಾರದಲ್ಲಿ ಟಿಕೆಟ್ ಮಾರಾಟ ಸೇರಿ ಇತರೆ ಕೆಲಸಗಳನ್ನು ನಿರ್ವಹಿಸುವ 20 ಮಂದಿ ಸಿಬ್ಬಂದಿ ಬಡ ಕುಟುಂಬಕ್ಕೆ ಸೇರಿದವರಾಗಿದ್ದಾರೆ. ಇವರಿಗೆ ಸಂಬಳ ನೀಡದೆ ಇಲಾಖಾ ನಿಯಮ ಉಲ್ಲಂಘಿಸಿರುವ ಗುತ್ತಿಗೆದಾರರ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ಇಲಾಖೆ ಅಧಿಕಾರಿಗಳನ್ನು ಒತ್ತಾಯಿಸಿದರು.

ಹಾರಂಗಿ ನೀರಾವರಿ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್ ಐ‌.ಕೆ. ಪುಟ್ಟಸ್ವಾಮಿ ಮಾತನಾಡಿ, ಸಿಬ್ಬಂದಿಗೆ ಸಂಬಳ ನೀಡದೆ ತೊಂದರೆ ಕೊಡಬೇಡಿ ಎಂದು  ಈಗಾಗಲೇ ಗುತ್ತಿಗೆದಾರರಿಗೆ ಸೂಚಿಸಲಾಗಿದೆ. ಜೊತೆಗೆ ನಿಗಮದಿಂದಲೂ ಹಣ ಬಿಡುಗಡೆಗೊಳಿಸಲು ಹಿರಿಯ ಅಧಿಕಾರಿಗಳಿಗೆ ಮನವಿ ಮಾಡಿದ್ದೇನೆ ಎಂದು ತಿಳಿಸಿದರು.

ADVERTISEMENT

ಕೂಡುಮಂಗಳೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಭಾಸ್ಕರ್ ನಾಯಕ್ ಮಾತನಾಡಿ, ಗುತ್ತಿಗೆ ನೌಕರರ ಹಿತಕಾಯಬೇಕು. ಅವರಿಗೆ ಯಾವುದೇ ತೊಂದರೆ ಆಗದಂತೆ ಸರಿಯಾಗಿ ಸಂಬಳ ನೀಡಬೇಕು ಎಂದು ಒತ್ತಾಯಿಸಿದರು.

ಕೂಡುಮಂಗಳೂರು ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಮಣಿ, ಹೊರ ಗುತ್ತಿಗೆ ಸಿಬ್ಬಂದಿ ಅನಂತ, ಪೂರ್ಣೇಶ್, ಹರೀಶ್, ರಾಣಿ, ಅಂಜಲಿ, ವೆಂಕಮ್ಮ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.