ADVERTISEMENT

ಲಾರ್ವಾ ಸಮೀಕ್ಷೆ ಕಾರ್ಯ, ಪರಿಶೀಲನೆ

ರೋಗ್ಯ ಇಲಾಖೆಯಿಂದ ಸಾಂಕ್ರಾಮಿಕ ರೋಗ ತಡೆಗೆ ಆರೋಗ್ಯ ಜಾಗೃತಿ

​ಪ್ರಜಾವಾಣಿ ವಾರ್ತೆ
Published 17 ಜೂನ್ 2025, 5:01 IST
Last Updated 17 ಜೂನ್ 2025, 5:01 IST
ಕುಶಾಲನಗರದಲ್ಲಿ ಆರೋಗ್ಯ ಅಧಿಕಾರಿಗಳ ಕಚೇರಿಯಿಂದ ಆರೋಗ್ಯ ನಿರೀಕ್ಷಣಾಧಿಕಾರಿ ವಿಶ್ವಜ್ಞಾ ಮತ್ತಿತರರು ಮನೆಗಳಿಗೆ ಭೇಟಿ ನೀಡಿ ಸಾಂಕ್ರಾಮಿಕ ರೋಗ ತಡೆಗಟ್ಟುವ ಕುರಿತು ಜಾಗೃತಿ ಮೂಡಿಸಿದರು. ಆರೋಗ್ಯ ನಿರೀಕ್ಷಕರಾದ ಚಂದ್ರೇಶ್, ಮುಖೇಶ್, ರಘು ಪಾಲ್ಗೊಂಡಿದ್ದರು
ಕುಶಾಲನಗರದಲ್ಲಿ ಆರೋಗ್ಯ ಅಧಿಕಾರಿಗಳ ಕಚೇರಿಯಿಂದ ಆರೋಗ್ಯ ನಿರೀಕ್ಷಣಾಧಿಕಾರಿ ವಿಶ್ವಜ್ಞಾ ಮತ್ತಿತರರು ಮನೆಗಳಿಗೆ ಭೇಟಿ ನೀಡಿ ಸಾಂಕ್ರಾಮಿಕ ರೋಗ ತಡೆಗಟ್ಟುವ ಕುರಿತು ಜಾಗೃತಿ ಮೂಡಿಸಿದರು. ಆರೋಗ್ಯ ನಿರೀಕ್ಷಕರಾದ ಚಂದ್ರೇಶ್, ಮುಖೇಶ್, ರಘು ಪಾಲ್ಗೊಂಡಿದ್ದರು   

ಕುಶಾಲನಗರ: ಪಟ್ಟಣದ ಕೆಲವು ಬಡಾವಣೆಗಳಲ್ಲಿ ಮಳೆಯ ಸಂದರ್ಭದಲ್ಲಿ ಶಂಕಿತ ಜ್ವರ ಪ್ರಕರಣ ಕಂಡುಬಂದಿದ್ದು, ಜಿಲ್ಲಾ ಸರ್ವೇಕ್ಷಣಾಧಿಕಾರಿ ಕಚೇರಿಯಿಂದ ಸೋಮವಾರ ಜಿಲ್ಲಾ ಆರೋಗ್ಯ ಇಲಾಖೆಯ ಸರ್ವೆ ಕಾರ್ಯ ತಂಡ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಲಾರ್ವಾ ಉತ್ಪತ್ತಿಯಾಗುವ ಸ್ಥಳಗಳ ನೀರಿನ ಮಾದರಿ ಸಂಗ್ರಹಿಸಿತು.

ಜಿಲ್ಲಾ ಆರೋಗ್ಯ ಇಲಾಖೆಯ ಮಂಜುನಾಥ್, ತಾಲ್ಲೂಕು ಆರೋಗ್ಯ ಕಚೇರಿಯ ಆರೋಗ್ಯ ನಿರೀಕ್ಷಣಾಧಿಕಾರಿ ವಿಶ್ವಜ್ಞಾ, ಕೂಡಿಗೆ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಚಂದ್ರೇಶ್, ಮುಖೇಶ್, ರಘು ಮತ್ತು ಆಶಾ ಕಾರ್ಯಕರ್ತೆಯರು ಪಟ್ಟಣದ ವಿವಿಧ ಬಡಾವಣೆಗಳಿಗೆ ಭೇಟಿ ನೀಡಿ ಈಡಿಸ್ ಲಾರ್ವಾ ಸಮೀಕ್ಷೆ ನಡೆಸಿ ಪರಿಶೀಲನೆ ಮಾಡಿದರು.

ವಿವಿಧ ಬಡಾವಣೆಗಳು ಮತ್ತು ಮನೆಗಳಿಗೆ ಭೇಟಿ ನೀಡಿ ಸಾಂಕ್ರಾಮಿಕ ರೋಗ ತಡೆಗಟ್ಟುವ ಕುರಿತು ಜನರಲ್ಲಿ ಜಾಗೃತಿ ಮೂಡಿಸಿದರು.

ADVERTISEMENT

ಇದೇ ವೇಳೆಯಲ್ಲಿ ಸಾರ್ವಜನಿಕರಿಗೆ ಡೆಂಗಿ, ಮಲೇರಿಯಾ, ಚಿಕುನ್ ಗುನ್ಯಾ ಜ್ವರದ ಬಗ್ಗೆ ಹಾಗೂ ಮಳೆಗಾಲದಲ್ಲಿ ಹರಡುವ ಸಾಂಕ್ರಾಮಿಕ ರೋಗಗಳ ಬಗ್ಗೆ ಸೇರಿದಂತೆ ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳ ಕುರಿತು ಆರೋಗ್ಯ ಶಿಕ್ಷಣ ಮಾಹಿತಿ ನೀಡಲಾಯಿತು.

ಮನೆಯ ಅಂಗಳ, ರಸ್ತೆ ಬದಿ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಚರಂಡಿ ಮತ್ತಿತರ ಕಡೆಗಳಲ್ಲಿ ನೀರು ನಿಲ್ಲದಂತೆ ಜಾಗ್ರತೆ ವಹಿಸಬೇಕು. ಮನೆಯ ಹೂವಿನ ಕುಂಡ, ಅಲ್ಲಲ್ಲಿ ಬಿಸಾಕಿರುವ ತೆಂಗಿನ ಚಿಪ್ಪು, ಟೈರ್, ರಸ್ತೆಯ ಗುಂಡಿಗಳು ಸೇರಿದಂತೆ ಯಾವುದೇ ಸ್ಥಳದಲ್ಲಿ ನೀರು ನಿಂತಲ್ಲಿ ಲಾರ್ವಾಗಳು ಉಂಟಾಗಿ ಸೊಳ್ಳೆಗಳು ಉತ್ಪತ್ತಿಯಾಗುತ್ತವೆ. ಆದ್ದರಿಂದ, ಎಲ್ಲೂ ನೀರು ನಿಲ್ಲದಂತೆ ಜಾಗ್ರತೆ ವಹಿಸಬೇಕು ಆರೋಗ್ಯ ಅಧಿಕಾರಿಗಳು ನಿವಾಸಿಗಳಿಗೆ ಮನವರಿಕೆ ಮಾಡಿದರು.

ಪಟ್ಟಣದ ಕೆಲವು ಬಡಾವಣೆಗಳಲ್ಲಿ ಉದ್ಯಾನಗಳು ಸೂಕ್ತ ನಿರ್ವಹಣೆ ಇಲ್ಲದೆ ಗಿಡಗಂಟಿಗಳು ಬೆಳೆದು ನಿಂತಿದೆ. ಪಾರ್ಕ್‌ನಲ್ಲಿ ಮಳೆ ನೀರು ಇದ್ದು, ತೇವಾಂಶ ಇರುವುದರಿಂದ ಸುತ್ತಲಿನ ಪರಿಸರದಲ್ಲಿ ಹೆಚ್ಚು ಸೊಳ್ಳೆಗಳು ಉತ್ಪತ್ತಿಯಾಗುತ್ತಿವೆ ಎಂದು ನಾಗರಿಕರು ದೂರಿದ್ದಾರೆ.ಈ ಹಿನ್ನೆಲೆಯಲ್ಲಿ ಪಟ್ಟಣದ ಉದ್ಯಾನಗಳನ್ನು ಸ್ವಚ್ಛಗೊಳಿಸುವ ಕುರಿತು ಪುರಸಭೆಯ ಆಡಳಿತ ಮಂಡಳಿಯ ಗಮನಕ್ಕೆ ತರಲಾಗುವುದು ಎಂದು ಸ್ಥಳಕ್ಕೆ ಭೇಟಿ ನೀಡಿದ್ದ ಆರೋಗ್ಯ ನಿರೀಕ್ಷಕರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.