ADVERTISEMENT

ಮೈದುಂಬಿದ ಕೀರೆಹೊಳೆ, ಪ್ರವಾಹ ಭೀತಿ

ಎಲ್ಲೆ ಮೀರಿದ ಲಕ್ಷ್ಮಣತೀರ್ಥ, ರಾಜ್ಯ ಹೆದ್ದಾರಿ ದುರಸ್ತಿ ಕಾಮಗಾರಿಗೆ ಮಳೆ ತೊಡಕು

​ಪ್ರಜಾವಾಣಿ ವಾರ್ತೆ
Published 31 ಜುಲೈ 2024, 5:14 IST
Last Updated 31 ಜುಲೈ 2024, 5:14 IST
ಗೋಣಿಕೊಪ್ಪಲಿನಲ್ಲಿ ಕೀರೆಹೊಳೆ ಮೈದುಂಬಿ ಹರಿಯುತ್ತಿದೆ
ಗೋಣಿಕೊಪ್ಪಲಿನಲ್ಲಿ ಕೀರೆಹೊಳೆ ಮೈದುಂಬಿ ಹರಿಯುತ್ತಿದೆ   

ಗೋಣಿಕೊಪ್ಪಲು: ಅಮ್ಮತ್ತಿ ಭಾಗದಲ್ಲಿ ಧಾರಾಕಾರವಾಗಿ ಮಳೆ ಬೀಳುತ್ತಿರುವುದರಿಂದ ಗೋಣಿಕೊಪ್ಪಲು ನಡುವಿನ ಕೀರೆಹೊಳೆ ಮೈದುಂಬಿ ಹರಿಯುತ್ತಿದೆ.

ಹೊಳೆ ದಡದಲ್ಲಿರುವ 2ನೇ ಬಡಾವಣೆಯ ಮನೆಗಳಿಗೆ ನೀರು ನುಗ್ಗಿ ಜನತೆಗೆ ಆತಂಕ ಮೂಡಿಸಿದೆ. ಉಳಿದ ಬಡಾವಣೆಗಳಿಗೂ ಮಳೆ ಮುಂದುವರಿದರೆ ನೀರು ನುಗ್ಗುವ ಸಂಭವವಿದ್ದು, ನದಿ ದಡದ ನಿವಾಸಿಗಳಿಗೆ ಆತಂಕ ಎದುರಾಗಿದೆ.

ಗ್ರಾಮ ಪಂಚಾಯಿತಿ ಅಧ್ಯಕ್ಷ ಕುಲ್ಲಂಡ ಗಣಪತಿ, ಉಪಾಧ್ಯಕ್ಷೆ ಮಂಜುಳಾ , ಪಿಡಿಒ ತಿಮ್ಮಯ್ಯ ಹಾಗೂ ಕಂದಾಯ ಅಧಿಕಾರಿಗಳು ಸ್ಥಳದಲ್ಲಿಯೇ ಮುಕ್ಕಾಂ ಹೂಡಿದ್ದು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ.

ADVERTISEMENT

ಮತ್ತೊಂದು ಕಡೆ ಲಕ್ಷ್ಮಣತೀರ್ಥ ನದಿ ಪ್ರವಾಹ ಎಲ್ಲೆ ಮೀರಿದೆ. ಶ್ರೀಮಂಗಲದಿಂದ ಹಿಡಿದು ನದಿ ಜಿಲ್ಲೆಯನ್ನು ದಾಟುವ ಸುಮಾರು 50 ಕಿಮೀ ದೂರದವರೆಗೂ ಸಮುದ್ರ ನಿರ್ಮಿಸಿದೆ. ನದಿ ಬಯಲಿನ ಗದ್ದೆಗಳು ಜಲಾವೃತಗೊಂಡಿದ್ದು, ಸಾಗರದಂತೆ ಕಂಡು ಬರುತ್ತಿವೆ. ಬರಪೊಳೆ, ಕಕ್ಕಟ್ಟು ಹೊಳೆ, ಕೆಕೆಆರ್ ಹೊಳೆಗಳೆಲ್ಲ ಉಕ್ಕಿ ಹರಿಯುತ್ತಿವೆ. ಕೆಲವು ಕಡೆ ಹಳೆ ನೀರು ಕಾಫಿ, ಅಡಿಕೆ ತೋಟಗಳಿಗೂ ನುಗ್ಗಿದೆ. ನಾಲ್ಕೇರಿ, ಹರಿಹರ, ಬಲ್ಯಮಂಡೂರು, ಕಾನೂರು, ಕೊಟ್ಟಗೇರಿ, ಬಾಳೆಲೆ, ನಿಟ್ಟೂರು, ಜಾಗಲೆ, ಮಲ್ಲೂರು ಭಾಗದ ಗದ್ದೆಗಳು ಜಲಾವೃತಗೊಂಡು ಭತ್ತದ ಕೃಷಿಗೆ ಹಿನ್ನೆಡೆಯಾಗಿದೆ. ಕೆಲವು ಕಡೆ ತಗ್ಗು ಪ್ರದೇಶದ ವಾಸದ ಮನೆಗಳ ಸುತ್ತ ಜಲ ಮೂಡಿದ್ದು ಮನೆ ಭದ್ರತೆ ಬಗ್ಗೆ ಆತಂಕ ಮೂಡಿಸಿದೆ. ನಿಟ್ಟೂರು ಬಳಿಯ ತಟ್ಟೆಕೆರೆ ಗಿರಿಜನ ಹಾಡಿಯಲ್ಲಿ ನಾಗರಹೊಳೆ ಅರಣ್ಯದಂಚಿನ ತೋಡು ಉಕ್ಕಿ ಹರಿಯುತ್ತಿದ್ದು ಅಲ್ಲಿನ ಗುಡಿಸಲಿಗಳಿಗೆ ನೀರು ನುಗ್ಗಿದೆ.

ಗೋಣಿಕೊಪ್ಪಲು, ವಿರಾಜಪೇಟೆ ಮಾರ್ಗದ ಕೊಳತ್ತೋಡು ಬೈಗೋಡುವಿನಲ್ಲಿ ಮನೆಯ ಗೋಡೆ ಕುಸಿದು ಬಿದ್ದಿದೆ. ಹಗಲಿನಲ್ಲಿ ಗೋಡೆ ಕುಸಿದಿದ್ದರಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಎಡೆಬಿಡದೇ ಸುರಿಯುತ್ತಿರುವ ಮಳೆ; ಕಾಮಗಾರಿಗೆ ತೊಡಕು

ಗೋಣಿಕೊಪ್ಪಲು: ಬಿರುನಾಣಿ, ಕುಟ್ಟ, ಶ್ರೀಮಂಗಲ, ಮಂಚಳ್ಳಿ, ಕುರ್ಚಿ ಭಾಗಕ್ಕೆ ಎಡೆಬಿಡದೆ ಮಳೆ ಸುರಿಯುತ್ತಿರುವುದರಿಂದ ಕುಸಿದು ಬಿದ್ದಿರು ಕುಟ್ಟ ಶ್ರೀಮಂಗಲ ನಡುವಿನ ಅಂತರಾಜ್ಯ ಹೆದ್ದಾರಿ ಕಾಮಗಾರಿಗೆ ಹಿನ್ನೆಡೆಯಾಗಿದೆ. ಕೇರಳದ ತೋಲ್ಪಟ್ಟಿ, ಮಾನಂದವಾಡಿ, ವಯನಾಡಿಗೆ ತೆರಳಬೇಕಾದರೆ ಈಗ ಕಾನೂರು, ನಾಲ್ಕೇರಿ ಮಾರ್ಗವಾಗಿ ಕುಟ್ಟ ತಲುಪಿ ಅಲ್ಲಿಂದ ಕೇರಳ ತೆರಳಬೇಕಾಗಿದೆ.

ಅಂತರಾಜ್ಯ ಹೆದ್ದಾರಿಯಾದ್ದರಿಂದ ವಾಹನ ಸಂಚಾರಕ್ಕೆ ಆದಷ್ಟು ಬೇಗನೆ ಅವಕಾಶ ಕಲ್ಪಿಸಿಕೊಡಲು ಶಾಸಕ ಪೊನ್ನಣ್ಣ, ಅಧಿಕಾರಿಗಳಿಗೆ ಕಾಮಗಾರಿ ಚುರುಕುಗೊಳಿಸಲು ಸೂಚಿಸಿದ್ದರು. ಆದರೆ ಮಳೆ ಎಡೆಬಿಡದೆ ಸುರಿಯುತ್ತಿರುವುದರಿಂದ ಕಾಮಗಾರಿ ಕೈಗೊಳ್ಳಲು ಆಗುತ್ತಿಲ್ಲ ಎಂಬುದು ಅಧಿಕಾರಿಗಳ ಅಳಲು.

‘ರಸ್ತೆ ಬದಿಯ ಮರಗಳನ್ನು ಕಡಿದು ರಸ್ತೆ ದುರಸ್ತಿಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಕುಸಿದ ರಸ್ತೆ ಜಾಗಕ್ಕೆ ಮರಳು ತುಂಬಿಸಿ ವಾಹನ ಸಂಚಾರಕ್ಕೆ ಅನುಕೂಲ ಮಾಡಿಕೊಡಲು ಪ್ರಯತ್ನಿಸಲಾಗುತ್ತಿದೆ. ಮಳೆ ಸ್ವಲ್ಪ ಕಡಿಮೆಯಾದ ಕೂಡಲೆ ಕಾಮಗಾರಿ ಕೈಗೊಳ್ಳಲಾಗುವುದು’ ಎಂದು ಲೋಕೋಪಯೋಗಿ ಇಲಾಖೆ ಎಂಜಿನಿಯರ್ ನವೀನ್ ತಿಳಿಸಿದ್ದಾರೆ.

ಗೋಣಿಕೊಪ್ಪಲು ಬಳಿಯ ಶ್ರೀಮಂಗಲ ಕುಟ್ಟ ನಡುವಿನ ರಾಜ್ಯ ಹೆದ್ದಾರಿಯ ದುರಸ್ತಿಗೆ ಮರ ಕಡಿದಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.