ADVERTISEMENT

ಅಪಾಯದ ಮಟ್ಟದಲ್ಲಿ ಕಾವೇರಿ: ಗುಹ್ಯ, ಕರಡಿಗೋಡು ವ್ಯಾಪ್ತಿಯಲ್ಲಿ ಪ್ರವಾಹದ ಭೀತಿ

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2022, 16:23 IST
Last Updated 7 ಆಗಸ್ಟ್ 2022, 16:23 IST
   

ಸಿದ್ದಾಪುರ: ಕಾವೇರಿ ನದಿ ಮೈದುಂಬಿ ಹರಿಯುತ್ತಿದ್ದು ಗುಹ್ಯ, ಕರಡಿಗೋಡು ವ್ಯಾಪ್ತಿಯಲ್ಲಿ ಪ್ರವಾಹದ ಭೀತಿ ಎದುರಾಗಿದೆ. ಕರಡಿಗೋಡು ಗ್ರಾಮದ ಚಿಕ್ಕನಹಳ್ಳಿಗೆ ತೆರಳುವ ರಸ್ತೆ ಜಲಾವೃತಗೊಂಡಿದ್ದು, ಸಂಪರ್ಕ ಕಡಿತಗೊಂಡಿದೆ.

ನದಿ ತೀರದ ನಿವಾಸಿಗಳ ಮನೆಯ ಬಳಿಯಲ್ಲಿ ಕಾವೇರಿ ಅಪಾಯದ ಮಟ್ಟದಲ್ಲಿ ಹರಿಯುತ್ತಿದೆ. ಗುಹ್ಯ ಗ್ರಾಮದ ಕಕ್ಕಟ್ಟುಕಾಡುವಿಗೆ ತೆರಳುವ ರಸ್ತೆ ಸಂಪರ್ಕ ಕಡಿತಗೊಂಡಿದೆ. ಅಲ್ಲದೇ ಗುಹ್ಯ ಗ್ರಾಮದ ಕೂಡುಗದ್ದೆ ಭಾಗದಲ್ಲಿ ಪ್ರವಾಹದ ಭೀತಿ ಎದುರಾಗಿದೆ.

ಕುಶಾಲನಗರ ತಾಲ್ಲೂಕಿನ ಬೆಟ್ಟದಕಾಡು, ಬರಡಿ ಹಾಗೂ ಕುಂಬಾರಗುಂಡಿ ವ್ಯಾಪ್ತಿಯಲ್ಲಿ ನದಿ ನೀರು ಅಪಾಯದ ಮಟ್ಟದಲ್ಲಿ ಹರಿಯುತ್ತಿದ್ದು, ನದಿ ದಡದ ನಿವಾಸಿಗಳು ಸುರಕ್ಷಿತ ಸ್ಥಳಗಳಿಗೆ ತೆರಳಲು ಕಂದಾಯ ಇಲಾಖೆಯ ಅಧಿಕಾರಿಗಳು ಮನವಿ ಮಾಡಿದ್ದಾರೆ.

ADVERTISEMENT

ಸಿದ್ದಾಪುರದಿಂದ ಕೂಡುಗದ್ದೆ ತೆರಳುವ ರಸ್ತೆಯ ದೇವಿಕಾಡು ಎಸ್ಟೇಟ್ ಬಳಿ ಗಾಳಿಗೆ ಬೃಹತ್ ಮರವೊಂದು ರಸ್ತೆಗೆ ಬಿದ್ದಿದ್ದು, ಸಂಚಾರ ಸ್ಥಗಿತಗೊಂಡಿತ್ತು. ಬಳಿಕ ತೋಟದ ಸಿಬ್ಬಂದಿ ಹಾಗೂ ಗ್ರಾಮಸ್ಥರು ಮರವನ್ನು ತೆರವುಗೊಳಿಸಿ, ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಗಾಳಿಗೆ ಧರೆಗುರುಳಿದ ಕಂಬ: ಗುಹ್ಯ ಗ್ರಾಮದ ಗುಹ್ಯ ಅಗಸ್ತ್ಯೇಶ್ವರ ದೇವಾಲಯದ ಬಳಿ ಗಾಳಿಗೆ ಮರದ ಕೊಂಬೆ ವಿದ್ಯುತ್ ತಂತಿಯ ಮೇಲೆ ಬಿದ್ದ ಪರಿಣಾಮ ಮೂರು ವಿದ್ಯುತ್ ಕಂಬ ತುಂಡಾಗಿದ್ದು, ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಭಾನುವಾರ ಬೆಳಗ್ಗಿನಿಂದಲೇ ಸೆಸ್ಕ್ ಸಿಬ್ಬಂದಿ ಗ್ರಾಮಸ್ಥರ ಸಹಕಾರದೊಂದಿಗೆ ಕಂಬವನ್ನು ಬದಲಾಯಿಸಿದ್ದಾರೆ. ಕರಡಿಗೋಡು ವ್ಯಾಪ್ತಿಯಲ್ಲೂ ಖಾಸಗಿ ತೋಟದ ಒಳಭಾಗದಲ್ಲಿ ಮರದ ಕೊಂಬೆ ಬಿದ್ದು, ತಂತಿ ತುಂಡಾಗಿದ್ದು, ಮಳೆಯನ್ನೂ ಲೆಕ್ಕಿಸದೇ ಸೆಸ್ಕ್ ಸಿಬ್ಬಂದಿ ವಿದ್ಯುತ್ ಮರು ಸಂಪರ್ಕ ಕಲ್ಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.