ಮಡಿಕೇರಿ/ ಉಡುಪಿ: ರಾಜ್ಯದ ವಿವಿಧೆಡೆ ಮಂಗಳವಾರ ಮಳೆಯಾಗಿದೆ. ಮಡಿಕೇರಿ ತಾಲ್ಲೂಕಿನ ನಾಪೋಕ್ಲು ಸುತ್ತಲಿನ ನೆಲಜಿ, ಎಮ್ಮೆಮಾಡು, ಬಲ್ಲಮಾವಟಿ ಗ್ರಾಮಗಳಲ್ಲಿ ಮಂಗಳವಾರ ಮಧ್ಯಾಹ್ನ ಒಂದು ಗಂಟೆ ಕಾಲ ಗುಡುಗು ಸಹಿತ ಸತತ ಮಳೆಯಾಯಿತು. ಮಡಿಕೇರಿ ನಗರದಲ್ಲಿ ಮೋಡ ಕವಿದ ವಾತಾವರಣವಿತ್ತು.
ಉಡುಪಿ ಜಿಲ್ಲೆಯ ವಿವಿಧೆಡೆ ಮಂಗಳವಾರ ಸಂಜೆ ಮಳೆ ಸುರಿದಿದ್ದು, ಬಿಸಿಲ ಬೇಗೆಯಿಂದ ತತ್ತರಿಸಿದ್ದ ಜನರಿಗೆ ಅಲ್ಪ ನೆಮ್ಮದಿ ನೀಡಿತು.
ಕಾರ್ಕಳ, ಹೆಬ್ರಿ, ಬ್ರಹ್ಮಾವರ ಮೊದಲಾದೆಡೆ ಗಾಳಿ ಸಹಿತ ಮಳೆ ಸುರಿಯಿತು. ಬ್ರಹ್ಮಾವರ ತಾಲ್ಲೂಕಿನ ಬಾರ್ಕೂರು, ಹಂದಾಡಿ, ಮಂದಾರ್ತಿ, ಪರಿಸರದಲ್ಲಿ ಅರ್ಧ ಗಂಟೆ ಗಾಳಿ, ಸಿಡಿಲಿನೊಂದಿಗೆ ಬೇಸಿಗೆಯ ಮೊದಲ ಧಾರಾಕಾರ ಮಳೆ ಸುರಿಯಿತು.
ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದ ಹಲವೆಡೆ ಧಾರಾಕಾರ ಮಳೆಯಾಗಿದೆ. ಮೂಡಿಗೆರೆ ತಾಲ್ಲೂಕಿನ ವಿವಿಧೆಡೆ ಮಧ್ಯಾಹ್ನ 2 ಗಂಟೆಗೆ ಪ್ರಾರಂಭವಾದ ಮಳೆ, ಗುಡುಗು ಸಿಡಿಲಿನೊಂದಿಗೆ ಒಂದು ಗಂಟೆಗೂ ಹೆಚ್ಚು ಕಾಲ ಆರ್ಭಟಿಸಿತು. ಕೊಪ್ಪ ಪಟ್ಟಣ ಸೇರಿದಂತೆ ತಾಲ್ಲೂಕಿನ ವಿವಿಧೆಡೆ ಮಳೆಯಾಗಿದೆ. ಶೃಂಗೇರಿ ಪಟ್ಟಣ ಮತ್ತು ಸುತ್ತಮುತ್ತ ಗುಡುಗು, ಸಿಡಿಲು ಮತ್ತು ಆಲಿಕಲ್ಲಿನೊಂದಿಗೆ ಉತ್ತಮವಾಗಿ ಮಳೆ ಸುರಿಯಿತು.
ಹುಬ್ಬಳ್ಳಿ ವರದಿ: ಉತ್ತರ ಕನ್ನಡ, ವಿಜಯನಗರ, ಬೆಳಗಾವಿ, ಧಾರವಾಡ, ಗದಗ ಜಿಲ್ಲೆ ಸೇರಿದಂತೆ ಹಲವೆಡೆ ಮಳೆಯಾಯಿತು.
ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲ್ಲೂಕಿನ ಮಳಲಗಾಂವದಲ್ಲಿ ಮರವೊಂದು ವಿದ್ಯುತ್ ತಂತಿ ಮೇಲೆ ಬಿದ್ದು ನಾಲ್ಕಕ್ಕೂ ಹೆಚ್ಚು ಕಂಬಗಳು ಧರೆಗುರುಳಿದ್ದವು. ಯಲ್ಲಾಪುರ, ಸಿದ್ದಾಪುರ, ದಾಂಡೇಲಿ, ಹಳಿಯಾಳ ಭಾಗದಲ್ಲಿ ಗುಡುಗು ಸಹಿತ ಸಾಧಾರಣ ಮಳೆಯಾಯಿತು.
ವಿಜಯನಗರ ಜಿಲ್ಲೆ ಹೂವಿನಹಡಗಲಿ ತಾಲ್ಲೂಕಿನ ಹಿರೇಹಡಗಲಿ ಸುತ್ತಮುತ್ತಲ ಗ್ರಾಮಗಳಲ್ಲಿ ಮಧ್ಯಾಹ್ನ ಅರ್ಧ ಗಂಟೆ ಗುಡುಗು ಸಹಿತ ಮಳೆಯಾಯಿತು. ಕತ್ತೆಬೆನ್ನೂರು, ಗಿರಿಯಾಪುರ ಮಠ, ದಾಸನಹಳ್ಳಿ, ಬೂದನೂರು ಸುತ್ತಮುತ್ತ ಮಳೆ ಸುರಿಯಿತು.
ಧಾರವಾಡ ಜಿಲ್ಲೆಯ ವಿವಿಧೆಡೆ ಗುಡುಗು, ಮಿಂಚಿನ ಆರ್ಭಟದೊಂದಿಗೆ ಮಳೆಯಾಗಿದ್ದು ಗಾಳಿ ರಭಸಕ್ಕೆ ನಗರದಲ್ಲಿ ಎರಡು ಮರಗಳು ಉರುಳಿ ಬಿದ್ದಿವೆ. ಅಳ್ನಾವರ, ಕುಂದಗೋಳ, ಅಣ್ಣಿಗೇರಿ, ಕಲಘಟಗಿ ಭಾಗದಲ್ಲಿಯೂ ಮಳೆಯಾಗಿದೆ.
ಗದಗ ನಗರ ಸೇರಿ ಜಿಲ್ಲೆಯ ಬೆಟಗೇರಿ, ಲಕ್ಷ್ಮೇಶ್ವರ ಮತ್ತು ವಿವಿಧೆಡೆ ರಭಸದ ಮಳೆ ಸುರಿಯಿತು. ಲಕ್ಷ್ಮೇಶ್ವರದ ಎಪಿಎಂಸಿಗೆ ಮಾರಲು ತಂದಿದ್ದ ಶೇಂಗಾ ಚೀಲಗಳನ್ನು ಮುಚ್ಚಲು ರೈತರು ಪರದಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.