ADVERTISEMENT

ಕೊಡಗು ಜಿಲ್ಲೆಯಲ್ಲಿ ಮೇ ತಿಂಗಳಿನಲ್ಲಿ ಮೂರೂವರೆಪಟ್ಟು ಅಧಿಕ ಮಳೆ!

ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲಿಯೂ ಹೆಚ್ಚಿನ ವರ್ಷಧಾರೆ

ಕೆ.ಎಸ್.ಗಿರೀಶ್
Published 3 ಜೂನ್ 2025, 7:24 IST
Last Updated 3 ಜೂನ್ 2025, 7:24 IST
ಶನಿವಾರಸಂತೆ ವ್ಯಾಪ್ತಿಯಲ್ಲಿ ಕಾಫಿ ತೋಟದಲ್ಲಿ ಕಾರ್ಮಿಕರು ಕೆಲಸದಲ್ಲಿ ನಿರತರಾಗಿರುವುದು 
ಶನಿವಾರಸಂತೆ ವ್ಯಾಪ್ತಿಯಲ್ಲಿ ಕಾಫಿ ತೋಟದಲ್ಲಿ ಕಾರ್ಮಿಕರು ಕೆಲಸದಲ್ಲಿ ನಿರತರಾಗಿರುವುದು    

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಮೇ ತಿಂಗಳಿನಲ್ಲಿ ಮೂರುವರೆಪಟ್ಟು ಹೆಚ್ಚು ಮಳೆ ಸುರಿದಿದೆ.

ಸಾಮಾನ್ಯವಾಗಿ ಬೇಸಿಗೆ ಬಿಸಿಲಿನಿಂದ ಉಷ್ಣಾಂಶ ಹೆಚ್ಚಿ, ಧಗೆಯಿಂದ ಬಸವಳಿಯುತ್ತಿದ್ದ ಜನರಿಗೆ ಜುಲೈ ತಿಂಗಳಿನ ಮಳೆಗಾಲದ ಅನುಭವ ಮೇ ತಿಂಗಳಿನಲ್ಲೇ ಸಿಕ್ಕಿದೆ. ಎಲ್ಲಾ ತಾಲ್ಲೂಕುಗಳಲ್ಲಿಯೂ ವಾಡಿಕೆಗಿಂತ ಹಲವು ಪಟ್ಟು ಅಧಿಕ ಮಳೆ ಸುರಿದಿದೆ. 15 ವರ್ಷಗಳಲ್ಲಿಯೇ ಮೇ ತಿಂಗಳಿನಲ್ಲಿ ಅತ್ಯಂತ ಹೆಚ್ಚು ಮಳೆಯಾಗಿದೆ.

ಮೇ 13ರವರೆಗೂ ಶೇ 44ರಷ್ಟು ಮಳೆ ಕೊರತೆ ಜಿಲ್ಲೆಯಲ್ಲಿ ಇತ್ತು. ಆದರೆ, ನಂತರ ಸುರಿದ ಧಾರಾಕಾರ ಮಳೆ ಕೊರತೆಯನ್ನು ನೀಗಿಸಿದ್ದು ಮಾತ್ರವಲ್ಲ ಶೇ 340ರಷ್ಟು ಹೆಚ್ಚುವರಿ ಮಳೆ ಬರಲು ಕಾರಣವಾಯಿತು. ಇದರಿಂದ ಅಗತ್ಯಕ್ಕಿಂತ ಅಧಿಕ ಮಳೆ ಮೇ ತಿಂಗಳಿನಲ್ಲೇ ಸುರಿಯಿತು.

ADVERTISEMENT

ಮೇ ತಿಂಗಳಿನಲ್ಲಿ ಮಡಿಕೇರಿ ತಾಲ್ಲೂಕಿನಲ್ಲಿ 14 ಸೆಂ.ಮೀ ಮಳೆಯಾಗಬೇಕಿತ್ತು. ಆದರೆ, ಸುರಿದಿದ್ದು 71 ಸೆಂ.ಮೀ. ಶೇ 407ರಷ್ಟು ಹೆಚ್ಚು ಮಳೆ ಸುರಿದಿದೆ.

ಸೋಮವಾರಪೇಟೆ ತಾಲ್ಲೂಕಿನಲ್ಲಿ 10 ಸೆಂ.ಮೀ ಮಳೆಯಾಗಬೇಕಿತ್ತು. ಬಂದಿದ್ದು 54 ಸೆಂ.ಮೀ. ಶೇ 440ರಷ್ಟು ಹೆಚ್ಚು ವರ್ಷಧಾರೆಯಾಯಿತು.

ವಿರಾಜಪೇಟೆ ತಾಲ್ಲೂಕಿನಲ್ಲಿ 15 ಸೆಂ.ಮೀ ಮಳೆಯಾಗಬೇಕಿತ್ತು. 59 ಸೆಂ.ಮೀ ಸುರಿಯುವ ಮೂಲಕ ಶೇ 286ರಷ್ಟು ಹೆಚ್ಚು ಮಳೆಯಾಯಿತು.

ಕುಶಾಲನಗರ ತಾಲ್ಲೂಕಿನಲ್ಲಿ 10 ಸೆಂ.ಮೀ ವರ್ಷಧಾರೆಯಾಗಬೇಕಿತ್ತು. ಆದರೆ, ಬಂದಿದ್ದು 43 ಸೆಂ.ಮೀ. ಮಳೆ. ಶೇ 305ರಷ್ಟು ಹೆಚ್ಚುವರಿಯಾಯಿತು.

ಪೊನ್ನಂಪೇಟೆ ತಾಲ್ಲೂಕಿನಲ್ಲಿ 13 ಸೆಂ.ಮೀ ಮಳೆಯಾಗಬೇಕಿತ್ತು. ಆದರೆ, 58 ಸೆಂ.ಮೀ ಸುರಿದಿದ್ದು, ಶೇ 324ರಷ್ಟು ಹೆಚ್ಚು ಮಳೆಯಾಗಿದೆ.

ಶಾಂತಳ್ಳಿಯಲ್ಲಿ ಅಧಿಕ ಮಳೆ:

ಕೊಡಗು ಜಿಲ್ಲೆಯ ಹೋಬಳಿವಾರು ಮಳೆ ಪ್ರಮಾಣ ಗಮನಿಸಿದರೆ ಅತ್ಯಂತ ಹೆಚ್ಚು ಮಳೆ ಸೋಮವಾರಪೇಟೆ ತಾಲ್ಲೂಕಿನ ಶಾಂತಳ್ಳಿ ಹೋಬಳಿಯಲ್ಲಿ ಸುರಿದಿದೆ. ಶೇ 618ರಷ್ಟು ಹೆಚ್ಚು ಮಳೆ ಮೇ ತಿಂಗಳಿನಲ್ಲಿ ಸುರಿದಿದೆ. ಪೊನ್ನಂಪೇಟೆ ತಾಲ್ಲೂಕಿನ ಹುದಿಕೇರಿಯಲ್ಲಿ ಶೇ 560ಷ್ಟು ಮಳೆಯಾಗಿದೆ. ಸೋಮವಾರಪೇಟೆ ತಾಲ್ಲೂಕಿನಲ್ಲೂ ಶೇ 425ರಷ್ಟು ಹೆಚ್ಚು ಮಳೆಯಾಗಿದೆ. ಆದರೆ, ಸಾಮಾನ್ಯವಾಗಿ ಹೆಚ್ಚು ಮಳೆಯಾಗುತ್ತಿದ್ದ ಭಾಗಮಂಡಲ ಹೋಬಳಿಯಲ್ಲಿ ಮೇ ತಿಂಗಳಿನಲ್ಲಿ ಶೇ 283ರಷ್ಟು ಮಾತ್ರ ಹೆಚ್ಚು ಮಳೆಯಾಗಿದೆ.

ಕೊಡಗು ಜಿಲ್ಲೆಯ ಬಹುಪಾಲು ಎಲ್ಲ ಹೋಬಳಿ ವ್ಯಾಪ್ತಿಗಳಲ್ಲೂ ಜನವರಿಯಿಂದ ಇಲ್ಲಿಯವರೆಗೆ ಸುರಿಯಬೇಕಿದ್ದ ಮಳೆಗಿಂತ ದುಪ್ಪಟ್ಟು ವರ್ಷಧಾರೆಯಾಗಿದೆ. ವಾಡಿಕೆ ಮಳೆಯ ಗುರಿಯನ್ನು ಮೀರಿದೆ. ಪ್ರತಿ ವರ್ಷ ಆರಂಭವಾಗುತ್ತಿದ್ದ ಮಳೆಗಾಲದ ಅವಧಿಗಿಂತಲೂ ಮುಂಚಿತವಾಗಿಯೇ ಈ ಪ್ರಮಾಣದಲ್ಲಿ ವರುಣ ಕೃಪೆ ತೋರಿರುವುದು ಸಹಜವಾಗಿಯೇ ಕೇವಲ ಅಚ್ಚರಿಗೆ ಮಾತ್ರವಲ್ಲ ಆತಂಕಕ್ಕೂ ಕಾರಣವಾಗಿದೆ.

ಮಳೆಯಿಂದ ಬಹುಪಾಲು ಎಲ್ಲ ನದಿ, ತೊರೆಗಳು ತುಂಬಿ ಹರಿಯುತ್ತಿವೆ. ಇನ್ನೂ ಹಲವೆಡೆ ಮಳೆಯಾಗುತ್ತಲೇ ಇದೆ. ಈ ವರ್ಷ ವಾಡಿಕೆಗಿಂತ ಹಲವು ಪಟ್ಟು ಹೆಚ್ಚು ಮಳೆ ಸುರಿಯುವ ಎಲ್ಲ ಲಕ್ಷಣಗಳೂ ಕಂಡುಬರುತ್ತಿವೆ. 2023 ಮತ್ತು 2024ಕ್ಕಿಂತಲೂ ಅಧಿಕ ಮಳೆ 2025ರಲ್ಲಿ ಸುರಿಯುವ ನಿರೀಕ್ಷೆ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.