ನಾಪೋಕ್ಲು ಸಮೀಪದ ಹೊದ್ದೂರು ಗ್ರಾಮದಲ್ಲಿ ಮರವೊಂದು ಮುರಿದು ವಿದ್ಯುತ್ ಕಂಬಗಳು ಮುರಿದಿರುವುದು.
ನಾಪೋಕ್ಲು: ಸತತವಾಗಿ ಸುರಿಯುತ್ತಿರುವ ಮಳೆಯಿಂದ ಭಾಗಮಂಡಲ,ಕೊಟ್ಟಮುಡಿ,ನಾಪೋಕ್ಲು,ಬಲಮುರಿ ಸೇರಿದಂತೆ ಹಲವೆಡೆ ಕಾವೇರಿ ನದಿ ಉಕ್ಕಿ ಹರಿಯುತ್ತಿದೆ. ತಲಕಾವೇರಿ ಹಾಗೂ ಭಾಗಮಂಡಲದಲ್ಲಿ ಗಾಳಿ ಮಳೆ ಜೋರಾಗಿದ್ದು, ಕಾವೇರಿ ನದಿ ತುಂಬಿ ಹರಿಯುತ್ತಿದೆ....
ನಾಪೋಕ್ಲು: ಸತತವಾಗಿ ಸುರಿಯುತ್ತಿರುವ ಮಳೆಯಿಂದ ಭಾಗಮಂಡಲ, ಕೊಟ್ಟಮುಡಿ, ನಾಪೋಕ್ಲು, ಬಲಮುರಿ ಸೇರಿದಂತೆ ಹಲವೆಡೆ ಕಾವೇರಿ ನದಿ ಉಕ್ಕಿ ಹರಿಯುತ್ತಿದೆ. ಬಲಮುರಿಯಲ್ಲಿ ಕಿರುಸೇತುವೆ ಮೇಲೆನೀರು ಉಕ್ಕಿಹರಿಯುತ್ತಿದ್ದು ಸಂಚಾರ ಸ್ಥಗಿತಗೊಂಡಿದೆ.
ತಲಕಾವೇರಿ ಹಾಗೂ ಭಾಗಮಂಡಲದಲ್ಲಿ ಗಾಳಿ ಮಳೆ ಜೋರಾಗಿದ್ದು, ಕಾವೇರಿ ನದಿ ತುಂಬಿ ಹರಿಯುತ್ತಿದೆ. ಭಾಗಮಂಡಲ ತ್ರಿವೇಣಿ ಸಂಗಮ ಭರ್ತಿಯಾಗಿದೆ. ಪಿಂಡಪ್ರದಾನ ಸ್ಥಳ, ಪುಷ್ಪೋದ್ಯಾನ ಎಲ್ಲವೂ ಮುಳುಗಡೆಯಾಗಿದೆ. ಕಳೆದ ಹಲವು ವರ್ಷಗಳ ನಂತರ ಇದೇ ಮೊದಲ ಬಾರಿ ಮೇ ತಿಂಗಳಲ್ಲಿ ತ್ರಿವೇಣಿ ಸಂಗಮ ಭರ್ತಿಯಾಗಿದ್ದು ವಿಶೇಷವಾಗಿದೆ.
ನಾಪೋಕ್ಲು ಹೋಬಳಿ ವ್ಯಾಪ್ತಿಯಲ್ಲಿ ಸುರಿಯುತ್ತಿರುವ ಬಿರುಸಿನ ಗಾಳಿ ಮಳೆಯಿಂದಾಗಿ ಅಲ್ಲಲ್ಲಿ ಮರಗಳು ಬಿದ್ದು ನಷ್ಟ ಸಂಭವಿಸಿದೆ. ಭಾಗಮಂಡಲ ಮಾರ್ಗದ ಬೆಟ್ಟಗೇರಿಯಲ್ಲಿ ಗಾಳಿ ಮಳೆಗೆ ಮರವೊಂದು ಮುರಿದು ವಿದ್ಯುತ್ ಕಂಬಗಳ ಮೇಲೆ ಬಿದ್ದಿದ್ದು ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿದೆ. ಕೆಟೋಳಿರ ಮನೆಗೆ ತೆರಳುವ ರಸ್ತೆಯಲ್ಲಿ ಮರವೊಂದು ಮುರಿದು ರಸ್ತೆಗೆ ಬಿದ್ದಿದ್ದು ಸಂಚಾರ ಸ್ಥಗಿತಗೊಂಡಿದೆ. ಹಳೆ ತಾಲ್ಲೂಕಿನಭಗವತಿ ದೇವಸ್ಥಾನದ ಬಳಿ ಬಾರಿ ಗಾಳಿ ಮಳೆಗೆ ಮರ ಬಿದ್ದು ಸೌದೆ ಕೊಟ್ಟಿಗೆ ಮೇಲೆ ಕಟ್ಟಡಕ್ಕೆ ಹಾನಿಯಾಗಿದೆ.
ಗಾಳಿ ಮಳೆಯಿಂದಾಗಿ ಅಲ್ಲಲ್ಲಿ ಮರಗಳು ಮುರಿದುಬಿದ್ದ ಪರಿಣಾಮ ವಿದ್ಯುತ್ ಕಂಬಗಳು ತುಂಡಾಗಿದ್ದು ಹಲವೆಡೆ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಗ್ರಾಮೀಣ ಪ್ರದೇಶಗಳು ಕತ್ತಲೆಯಲ್ಲಿ ಮುಳುಗಿವೆ. ವಿದ್ಯುತ್ ಪೂರೈಕೆ ಮಾಡಲು ಸಿಬ್ಬಂದಿ ಶ್ರಮಿಸುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.