ADVERTISEMENT

ಸೋಮವಾರಪೇಟೆ: ಭಾರಿ ಗಾಳಿ, ಮಳೆಗೆ ಜನ ತತ್ತರ

ಸೋಮವಾರಪೇಟೆ ಭಾಗದಲ್ಲಿ ಶಾಂತವಾಗದ ಪುಷ್ಯ ಮಳೆ

​ಪ್ರಜಾವಾಣಿ ವಾರ್ತೆ
Published 23 ಜುಲೈ 2024, 11:15 IST
Last Updated 23 ಜುಲೈ 2024, 11:15 IST
ಸೋಮವಾರಪೇಟೆ ತಾಲ್ಲೂಕಿನ ಕಲ್ಕಂದೂರು ಗ್ರಾಮದಲ್ಲಿ ವಿದ್ಯುತ್ ಮಾರ್ಗದ ಮೇಲೆ ಮರ ಉರುಳಿ, ಕಂಬ ಮುರಿದಿರುವುದು
ಸೋಮವಾರಪೇಟೆ ತಾಲ್ಲೂಕಿನ ಕಲ್ಕಂದೂರು ಗ್ರಾಮದಲ್ಲಿ ವಿದ್ಯುತ್ ಮಾರ್ಗದ ಮೇಲೆ ಮರ ಉರುಳಿ, ಕಂಬ ಮುರಿದಿರುವುದು   

ಸೋಮವಾರಪೇಟೆ: ತಾಲ್ಲೂಕಿನ ಹಲವೆಡೆ ಸೋಮವಾರ ಭಾರಿ ಗಾಳಿಯೊಂದಿಗೆ ಬಿಟ್ಟು, ಬಿಟ್ಟು ಮಳೆ ಸುರಿಯುತ್ತಿದ್ದು, ಜನರು ತತ್ತರಿಸಿದ್ದಾರೆ.

ಕಳೆದ 3 ದಿನಗಳಿಂದಲೂ ಕುಶಾಲನಗರದಿಂದ ಸೋಮವಾರಪೇಟೆ ವ್ಯಾಪ್ತಿಗೆ ವಿದ್ಯುತ್ ಸಂಪರ್ಕ ನೀಡುವ 33 ಕೆ.ವಿ. ವಿದ್ಯುತ್ ಮಾರ್ಗದ ಮೇಲೆ ಬೃಹತ್ ಮರಗಳು ಬೀಳುತ್ತಿರುವುದರಿಂದ ತೀವ್ರ ವಿದ್ಯುತ್ ಸಮಸ್ಯೆ ಎದುರಾಗಿದೆ.

ಗ್ರಾಮೀಣ ಭಾಗಗಳಲ್ಲಿ ಅಲ್ಲಲ್ಲಿ ವಿದ್ಯುತ್ ಮಾರ್ಗದ ಮೇಲೆ ಮರಗಳು ಉರುಳುತ್ತಿರುವುದರಿಂದ, ವಿದ್ಯುತ್ ಕಂಬಗಳು ತುಂಡಾಗಿ ಬೀಳುತ್ತಿವೆ. ಭಾರಿ ಗಾಳಿ, ಮಳೆಯ ನಡುವೆಯೂ ಸೆಸ್ಕ್ ಸಿಬ್ಬಂದಿ ಇನ್ನಿಲ್ಲದಂತೆ ಕೆಲಸ ಮಾಡುವ ಮೂಲಕ ವಿದ್ಯುತ್ ಸಂಪರ್ಕ ಮರು ಜೋಡಣೆಗೆ ಪರಿತಪಿಸುತ್ತಿದ್ದಾರೆ.

ADVERTISEMENT

‘ಯಡವಾರೆ ಅರಣ್ಯದೊಳಗೆ 33 ಕೆ.ವಿ. ವಿದ್ಯುತ್ ಮಾರ್ಗ ಪಟ್ಟಣಕ್ಕೆ ಬಂದಿದ್ದು, ಇದಕ್ಕೆ ಹೊಂದಿಕೊಂಡಂತೆ ಸಾಕಷ್ಟು ಕಾಫಿ ತೋಟಗಳು ಇವೆ. ಇವುಗಳ ಬದಿಯಲ್ಲಿರುವ ಮರಗಳು ಗಾಳಿಗೆ ಬೀಳುತ್ತಿರುವುದರಿಂದ ಸಮಸ್ಯೆಯಾಗಿದೆ. ಮೂರು ದಿನಗಳಿಂದಲೂ ಪ್ರಮುಖ ವಿದ್ಯುತ್ ಮಾರ್ಗವನ್ನು ಸರಿಪಡಿಸುತ್ತಿದ್ದೇವೆ. ಆದರೆ, ಮರಗಳು ಉರುಳುತ್ತಿರುವುದರಿಂದ ಸಮಸ್ಯೆ ಕಾಡುತ್ತಿದೆ. ಸೋಮವಾರ ಬೆಳಗಿನ ಜಾವ ಯಡವಾರ ಅರಣ್ಯ ಪ್ರದೇಶದಲ್ಲಿ ವಿದ್ಯುತ್ ಮಾರ್ಗದ ಮೇಲೆ ಮರ ಉರುಳಿದ್ದು, ಪೂರ್ಣ ಮಾರ್ಗವನ್ನು ಸರಿಪಡಿಸಿ ವಿದ್ಯುತ್ ನೀಡಲು ಸೋಮವಾರ ಸಂಜೆಯಾಗಿದೆ’ ಎಂದು ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ವಿ.ರವಿ ತಿಳಿಸಿದರು. ಭಾರಿ ಗಾಳಿ ಮತ್ತು ಮಳೆಯ ನಡುವೆಯೇ ಸಿಬ್ಬಂದಿ ಕೆಲಸ ಮಾಡುತ್ತಿರುವುದನ್ನು ಸಾರ್ವಜನಿಕರು ಶ್ಲಾಘಿಸಿದ್ದಾರೆ.

ಬೆಳಿಗ್ಗೆಯಿಂದ ಸಂಜೆಯವರೆಗೆ ವಿದ್ಯುತ್ ಇಲ್ಲದಿರುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗಿದೆ. ಸೋಮವಾರ ಇಲ್ಲಿ ಸಂತೆಯ ದಿನವಾಗಿದ್ದು, ಸಾಕಷ್ಟು ಗ್ರಾಮೀಣ ಜನರು ತಮ್ಮ ಕೆಲಸ ಕಾರ್ಯಗಳಿಗೆ ತಾಲ್ಲೂಕು ಕೇಂದ್ರಕ್ಕೆ ಬರುತ್ತೇವೆ. ವಿದ್ಯುತ್ ಇಲ್ಲದಿದ್ದರಿಂದ ಯಾವುದೇ ಕೆಲಸಗಳು ಆಗುತ್ತಿಲ್ಲ ಎಂದು ಶಾಂತಳ್ಳಿಯ ಗಣೇಶ್ ತಿಳಿಸಿದರು.

ಸಮೀಪದ ಕಲ್ಕಂದೂರು ಗ್ರಾಮದಲ್ಲಿ ವಿದ್ಯುತ್ ಮಾರ್ಗದ ಮೇಲೆ ಮರ ಬಿದ್ದು, 4 ವಿದ್ಯುತ್ ಕಂಬಗಳು ಧರೆಗುರುಳಿದವು. ಇದರೊಂದಿಗೆ ತೋಳೂರುಶೆಟ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಡ್ಲಕೊಪ್ಪದಲ್ಲಿ ಎರಡು ವಿದ್ಯುತ ಕಂಬಗಳು ಮುರಿದಿವೆ. ದೊಡ್ಡಮಳ್ತೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಳಿಮಳ್ತೆ ಗ್ರಾಮದಲ್ಲಿ ರಸ್ತೆಗೆ ಮರ ಉರುಳಿದರೆ, ಮತ್ತೊಂದೆಡೆ ವಿದ್ಯುತ್ ಮಾರ್ಗದ ಮೇಲೆ ಮರ ಉರುಳಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.