ADVERTISEMENT

ಕೊಡಗು | ರಕ್ತಕ್ಕೆ ಹೆಚ್ಚಿನ ಬೇಡಿಕೆ; ಹೆಚ್ಚಾಗದ ರಕ್ತದಾನಿಗಳ ಸಂಖ್ಯೆ!

ಕೊಡಗು ಜಿಲ್ಲೆಯಲ್ಲಿರುವುದು ಏಕೈಕ ರಕ್ತನಿಧಿ ಕೇಂದ್ರ: ತಿಂಗಳಿಗೆ ಕನಿಷ್ಠ 500 ಯೂನಿಟ್ ರಕ್ತ ಅಗತ್ಯ

ಕೆ.ಎಸ್.ಗಿರೀಶ್
Published 14 ಜೂನ್ 2025, 6:13 IST
Last Updated 14 ಜೂನ್ 2025, 6:13 IST
ಮಡಿಕೇರಿಯ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ ಸೇರಿದ ಬೋಧನಾ ಆಸ್ಪತ್ರೆಯ (ಜಿಲ್ಲಾಸ್ಪತ್ರೆ) ಹಳೆಯ ಕಟ್ಟಡದಲ್ಲಿರುವ ರಕ್ತನಿಧಿ ಕೇಂದ್ರ
ಮಡಿಕೇರಿಯ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ ಸೇರಿದ ಬೋಧನಾ ಆಸ್ಪತ್ರೆಯ (ಜಿಲ್ಲಾಸ್ಪತ್ರೆ) ಹಳೆಯ ಕಟ್ಟಡದಲ್ಲಿರುವ ರಕ್ತನಿಧಿ ಕೇಂದ್ರ   

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ದಿನ ಕಳೆದಂತೆ ನಿರಂತರವಾಗಿ ರಕ್ತಕ್ಕೆ ಬೇಡಿಕೆ ಹೆಚ್ಚುತ್ತಲೇ ಇದೆ. ಆದರೆ, ಅದಕ್ಕೆ ತಕ್ಕಂತೆ ರಕ್ತದಾನಿಗಳ ಸಂಖ್ಯೆ ಹಾಗೂ ರಕ್ತದಾನದ ಶಿಬಿರಗಳ ಸಂಖ್ಯೆ ಏರಿಕೆಯಾಗುತ್ತಿಲ್ಲ. ಇದರಿಂದ ಆಗಿದ್ದಾಗ್ಗೆ ರಕ್ತಕ್ಕೆ ತೀವ್ರತರವಾದ ಕೊರತೆ ಉಂಟಾಗುತ್ತಿದೆ.

ಮಡಿಕೇರಿಯ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ ಸೇರಿದ ಬೋಧನಾ ಆಸ್ಪತ್ರೆಯ (ಜಿಲ್ಲಾಸ್ಪತ್ರೆ) ಹಳೆಯ ಕಟ್ಟಡದಲ್ಲಿರುವ ರಕ್ತನಿಧಿ ಕೇಂದ್ರವೊಂದೇ ಕೊಡಗು ಜಿಲ್ಲೆಯಲ್ಲಿ ಇದೆ. ಇದನ್ನು ಬಿಟ್ಟರೆ ಬೇರೆ ಖಾಸಗಿ ಕೇಂದ್ರಗಳಾಗಲಿ, ಸರ್ಕಾರಿ ಕೇಂದ್ರಗಳಾಗಲಿ ಇಲ್ಲ. ಹಾಗಾಗಿ, ಈ ಕೇಂದ್ರದ ಮೇಲೆ ಒತ್ತಡ ಹೆಚ್ಚಿದೆ.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ರಕ್ತನಿಧಿ ಕೇಂದ್ರದ ಮುಖ್ಯ ವೈದ್ಯಾಧಿಕಾರಿ ಡಾ.ಕೆ.ಪಿ.ಕರುಂಬಯ್ಯ, ‘ಕಳೆದ 2 ವರ್ಷಗಳ ಹಿಂದೆ ತಿಂಗಳಿಗೆ 100ರಿಂದ 150 ಯೂನಿಟ್ ರಕ್ತ ಸಾಕಾಗುತ್ತಿತ್ತು. ಆದರೆ, ಈಗ ತಿಂಗಳಿಗೆ ಕನಿಷ್ಠ ಎಂದರೂ 500 ಯೂನಿಟ್ ರಕ್ತ ಬೇಕಿದೆ. ಆದರೆ, ರಕ್ತದಾನಿಗಳು ಹಾಗೂ ರಕ್ತದಾನದ ಶಿಬಿರಗಳ ಸಂಖ್ಯೆ ಈ ಪ್ರಮಾಣದಲ್ಲಿ ಹೆಚ್ಚಾಗುತ್ತಿಲ್ಲ’ ಎಂದರು.

ADVERTISEMENT

ಒಂದು ಶಿಬಿರದಲ್ಲಿ ಕನಿಷ್ಠ 50 ಯೂನಿಟ್ ರಕ್ತ ಸಂಗ್ರಹವಾದರೆ ಇಂತಹ ಕನಿಷ್ಠ 10 ಶಿಬಿರಗಳಾದರೂ ತಿಂಗಳಿಗೆ ನಡೆಯಬೇಕು. ಆದರೆ, ಸದ್ಯ ಅಷ್ಟು ಶಿಬಿರಗಳು ಆಯೋಜನೆಗೊಳ್ಳುತ್ತಿಲ್ಲ. ಅದರಲ್ಲೂ 50 ಯೂನಿಟ್‌ನಷ್ಟು ಸಂಗ್ರಹವಾಗುವ ರಕ್ತದ ಶಿಬಿರಗಳ ಸಂಖ್ಯೆ ಬೆರಳೆಣಿಕೆಯಷ್ಟಿದೆ ಎಂದು ಅವರು ಹೇಳುತ್ತಾರೆ.

ಬೇಡಿಕೆ ಹೆಚ್ಚಳ ಏಕೆ?

ಈಗ ಮಡಿಕೇರಿಯಲ್ಲಿರುವ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ ಸೇರಿದ ಬೋಧನಾ ಆಸ್ಪತ್ರೆಗೆ (ಜಿಲ್ಲಾಸ್ಪತ್ರೆ) ಕೇವಲ ಕೊಡಗು ಜಿಲ್ಲೆ ಮಾತ್ರವಲ್ಲ ಪಕ್ಕದ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ಹಾಗೂ ಹುಣಸೂರುಗಳಿಂದಲೂ ರೋಗಿಗಳು ಬರುತ್ತಿದ್ದಾರೆ. ಗರ್ಭಿಣಿಯರೂ ಹೆಚ್ಚಿನ ಸಂಖ್ಯೆಯಲ್ಲಿ ಹೊರ ಜಿಲ್ಲೆಗಳಿಂದ ದಾಖಲಾಗುತ್ತಿದ್ದಾರೆ. ಇದರೊಂದಿಗೆ ಸಿಕ್ಕಲ್‌ಸೆಲ್ ಅನಿಮೀಯಾ, ತಲಸ್ಸೆಮಿಯಾ ಹಾಗೂ ಇನ್ನಿತರ ಕಾಯಿಲೆಗಳಿಂದ ರಕ್ತಹೀನತೆಯಿಂದ ಬಳಲುತ್ತಿರುವ ರೋಗಿಗಳಿಗೂ ನಿಯಮಿತವಾಗಿ ರಕ್ತ ನೀಡಬೇಕಿದೆ. ಹೀಗಾಗಿ, ರಕ್ತಕ್ಕೆ ಬೇಡಿಕೆ ನಿರಂತರವಾಗಿ ಹೆಚ್ಚುತ್ತಿದೆ.

ರಕ್ತದಾನ ಶಿಬಿರಕ್ಕೆ ನೋಂದಣಿಯಾದವರೆಲ್ಲ ಅಥವಾ ರಕ್ತ ನೀಡಲು ಬಂದವರೆಲ್ಲರ ರಕ್ತವೂ ಸ್ವೀಕೃತವಾಗುತ್ತಿಲ್ಲ. ವಿವಿಧ ಕಾರಣಗಳಿಗೆ ರಕ್ತವನ್ನು ತಿರಸ್ಕರಿಸಬೇಕಾಗಿದೆ. ಆರೋಗ್ಯಕರ ಜೀವನಶೈಲಿ ಅಳವಡಿಸಿಕೊಳ್ಳದೇ ದುಶ್ಚಟಗಳನ್ನು ಹೊಂದಿರುವುದು ಇದಕ್ಕೆ ಕಾರಣ ಎನಿಸಿದೆ.

ರಕ್ತಸಂಗ್ರಹಗಾರಗಳು ಗೋಣಿಕೊಪ್ಪಲು, ವಿರಾಜಪೇಟೆ, ಕುಶಾಲನಗರ, ಸೋಮವಾರಪೇಟೆ ಸರ್ಕಾರಿ ಆಸ್ಪ‌ತ್ರೆಗಳಲ್ಲಿವೆ. ಇಲ್ಲಿ ರಕ್ತದಾನ ಮಾಡಲು ಸಾಧ್ಯವಿಲ್ಲ. ಕೇವಲ ಮಡಿಕೇರಿಯ ರಕ್ತನಿಧಿ ಕೇಂದ್ರದಿಂದ ತೆಗೆದುಕೊಂಡು ಬಂದ ರಕ್ತವನ್ನು ಮಾತ್ರ ಸಂಗ್ರಹಿಸಿಟ್ಟುಕೊಂಡು, ತುರ್ತು ಸ್ಥಿತಿಯಲ್ಲಿ ಬಳಕೆ ಮಾಡಬಹುದಾಗಿದೆ.

ಬಿಪಿಎಲ್‌ ಪಡಿತರ ಚೀಟಿ ಹೊಂದಿರುವವರಿಗೆ ಉಚಿತವಾಗಿ ನೀಡಿದರೆ, ಎಪಿಎಲ್‌ ಪಡಿತರ ಚೀಟಿ ಹೊಂದಿರುವವರು ₹ 1,100 ಶುಲ್ಕ ಪಾವತಿಸಿ ತೆಗೆದುಕೊಳ್ಳಬೇಕಿದೆ ಎಂದು ಡಾ.ಕರುಂಬಯ್ಯ ಹೇಳುತ್ತಾರೆ.

ಕಳೆದೆರಡು ತಿಂಗಳಿನಲ್ಲಿ ರಕ್ತಕ್ಕೆ ಬರ!

ಕಳೆದ 2 ತಿಂಗಳಿನಲ್ಲಿ ಕೊಡಗು ಜಿಲ್ಲೆಯಲ್ಲಿ ರಕ್ತಕ್ಕೆ ತೀವ್ರತರವಾದ ಕೊರತೆ ಎದುರಾಗಿತ್ತು. ತುರ್ತು ಸ್ಥಿತಿಯಲ್ಲಿ ದಾಖಲಾದ ರೋಗಿಗಳಿಗೆ ರಕ್ತ ನೀಡಲು ರಕ್ತನಿಧಿ ಕೇಂದ್ರದ ಸಿಬ್ಬಂದಿ ಪರದಾಡಿದರು.

ರಕ್ತನಿಧಿ ಕೇಂದ್ರದಲ್ಲಿ ಕನಿಷ್ಠ ಎಂದರೂ 100–150 ಯೂನಿಟ್ ರಕ್ತದ ದಾಸ್ತಾನು ಇರಬೇಕಿದೆ. ಈ ರಕ್ತ ತುತ್ತು ಸ್ಥಿತಿಯಲ್ಲಿ ಬೇಕಾಗುತ್ತದೆ. ಆದರೆ, ಕಳೆದ 2 ತಿಂಗಳುಗಳಲ್ಲಿ ಕೇವಲ 1 ಅಥವಾ 2ಕ್ಕೆ ಇಳಿದಿತ್ತು.

ಈ ಕುರಿತು ಪ್ರತಿಕ್ರಿಯಿಸಿದ ರಕ್ತನಿಧಿ ಕೇಂದ್ರದ ಮುಖ್ಯ ವೈದ್ಯಾಧಿಕಾರಿ ಡಾ.ಕರುಂಬಯ್ಯ, ‘ಈ 2 ತಿಂಗಳ ಸಮಯದಲ್ಲಿ ನಾವೇ ನಿತ್ಯವೂ ರಕ್ತದಾನಿಗಳಿಗೆ ಕರೆ ಮಾಡಿ ಅವರನ್ನು ಕರೆಸಿ ರಕ್ತ ಪಡೆದು ರೋಗಿಗಳಿಗೆ ಕೊಡುತ್ತಿದ್ದೆವು. ರೋಗಿಗಳ ಕಡೆಯವರಿಗೂ ಯಾರಿಂದಲಾದರೂ ರಕ್ತ ಕೊಡಿಸುವಂತೆ ಕೇಳುತ್ತಿದ್ದೆವು. ಈಗ ಪರಿಸ್ಥಿತಿ ಸಂಪೂರ್ಣ ಸುಧಾರಿಸಿಲ್ಲ’ ಎಂದು ಹೇಳಿದರು.

ಹೆಚ್ಚಬೇಕಿದೆ ರಕ್ತದಾನ ಶಿಬಿರ:

ರಕ್ತದಾನಿಗಳು ಕೊಡಗು ಜಿಲ್ಲೆಯಲ್ಲಿ ನಿರಂತರವಾಗಿ ರಕ್ತಕ್ಕೆ ಬೇಡಿಕೆ ಹೆಚ್ಚುತ್ತಿರುವುದರಿಂದ ಸಹಜವಾಗಿಯೇ ರಕ್ತದಾನಿಗಳ ಸಂಖ್ಯೆಯೂ ಹೆಚ್ಚಬೇಕಿದೆ. ಆದರೆ ರಕ್ತದಾನಿಗಳ ಸಂಖ್ಯೆ ಹೆಚ್ಚಾಗದೇ ಇರುವುದರಿಂದ ಆಗಿಂದಾಗ್ಗೆ ರಕ್ತಕ್ಕೆ ಕೊರತೆ ಎದುರಾಗುತ್ತಿದೆ. ಕೊಡಗು ಜಿಲ್ಲೆಯಲ್ಲಿ ನೂರಾರು ಸಂಖ್ಯೆಯಲ್ಲಿ ಸಂಘ ಸಂಸ್ಥೆಗಳಿವೆ. ಆದರೆ ರಕ್ತದಾನ ಶಿಬಿರ ಏರ್ಪಡಿಸುತ್ತಿರುವ ಸಂಘ ಸಂಸ್ಥೆಗಳು ಕೆಲವೇ ಕೆಲವು. ಬಹುಪಾಲು ಸಂಘ ಸಂಸ್ಥೆಗಳು ರಕ್ತದಾನ ಶಿಬಿರ ಆಯೋಜಿಸುವುದರಿಂದ ದೂರ ಉಳಿದಿವೆ. ಮೊದಲಿನಿಂದಲೂ ರಕ್ತದಾನ ಶಿಬಿರ ಆಯೋಜಿಸುವಂತಹ ಸಂಘ ಸಂಸ್ಥೆಗಳೇ ಶಿಬಿರಗಳನ್ನು ಆಯೋಜಿಸುತ್ತಿವೆ. ಜನರಲ್ಲಿ ವಿದ್ಯಾರ್ಥಿಗಳಲ್ಲಿ ರಕ್ತದಾನದ ಮಹತ್ವ ಕುರಿತು ಹಾಗೂ ರಕ್ತದಾನ ಶಿಬಿರದ ಮಹತ್ವ ಕುರಿತು ಸಂಘ ಸಂಸ್ಥೆಗಳು ಜಾಗೃತಿ ಮೂಡಿಸಬೇಕಿದೆ.

ಮಡಿಕೇರಿಯಲ್ಲಿರುವ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ ಸೇರಿದ ಬೋಧನ ಆಸ್ಪತ್ರೆ (ಜಿಲ್ಲಾಸ್ಪತ್ರೆ)ಯಲ್ಲಿರುವ ರಕ್ತನಿಧಿ ಕೇಂದ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.